ನಮ್ಮ ಮುದ್ದು ಗಂಧರ್ವ ಕನ್ಯೆ ಹೆಸರು ನಿರ್ಮಲೆ. ಹೆಸರಿಗೆ ತಕ್ಕಂತೆ ಸೌಮ್ಯವಾದ ಸುಂದರ ಹುಡುಗಿ. ಅವಳಿಗೆ ಪ್ರಕೃತಿ ಎಂದರೆ ಬಲು ಪ್ರೀತಿ. ತಾನಿರುವ ಸ್ಥಳಗಳಲ್ಲಿ ಅಕ್ಕರೆಯಿಂದ ನಳ ನಳಿಸುವ ಹೂವಿನ ಗಿಡಗಳನ್ನು, ಬಗೆ ಬಗೆ/ ಹಂಪಲುಗಳನ್ನು ಬೆಳೆಸುತ್ತಾಳೆ. ಅಲ್ಲಿಯ ಹೂ ಹಣ್ಣಿಗೆ ಮನಸೋತ ಬಣ್ಣ ಬಣ್ಣದ ಪಕ್ಷಿಗಳು ಆಗಸದಿಂದ ಇಳಿದು ದಣಿವಾರಿಸಿಕೊಳ್ಳುತ್ತವೆ. ಮುದ್ದಾದ ಹಿಮದಂತೆ ಬೆಳ್ಳಗೆ ಕಂಗೊಳಿಸುವ ಮೊಲ, ಕೋಡಿನ ಸಾರಂಗ, ಪುನುಗು ಬೆಕ್ಕುಗಳೆಲ್ಲ ಪ್ರೀತಿಯಿಂದ ಬಂದು ಆಟವಾಡುತ್ತಿದ್ದವು. ಇದರಿಂದ ಅಲ್ಲಿನ ವನ ದೇವತೆ ಸಂತುಷ್ಟಿಗೊಂಡು ನಿರ್ಮಲೆಯಲ್ಲಿ ಬಹು ಪ್ರೀತಿ ಹೊಂದಿದ್ದಳು.
ಒಂದು ದಿನ ವಿದರ್ಭ ಎಂಬ ಯುವರಾಜ ಕಾಡಿನಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದ. ಹೀಗೆ ಸಾಗುತ್ತಾ, ಅಲ್ಲಿನ ನದಿಯಲ್ಲಿ ದಣಿವಾರಿಸಿಕೊಳ್ಳಲು ಬಂದಾಗ, ಒಂದು ಮೊಸಳೆ ನಿರ್ಮಲೆಯ ಕಾಲು ಹಿಡಿದು ತವಕಿಸುತ್ತಾ ಬರುತ್ತಿದ್ದುದನ್ನು ಕಂಡು ಅದರ ಬಾಯಿಗೆ ತುಂಡು ಗೋಲನ್ನು ಲಂಬವಾಗಿ ಇಟ್ಟು ಅವಳ ಪ್ರಾಣವನ್ನು ಕಾಪಾಡಿದ. ಅವಳ ಸುಂದರ ನೀಳ ಕೇಶರಾಶಿ, ಕಮಲದಂಥ ಕಣ್ಣು, ಹಾಲಿನಂಥ ಮೈಕಾಂತಿಗೆ ಮನಸೋತ. ಅವನ ಸದೃಢ ಮೈಕಟ್ಟು, ವೀರತನಕ್ಕೆ ಮನಸ್ಸು ಸೆಳೆಯಿತು. ಅನುರಾಗ ಮೂಡಲು ಗಾಂಧರ್ವ ವಿವಾಹವಾದರು. ಇತ್ತ ಅಲ್ಲಿ ಅವನ ಆಗಮನದಿಂದ ಕಾಡಿಗೆ ವಿಶೇಷ ಮೆರುಗು ಬಂದಿತ್ತು. ಪಕ್ಷಿಗಳೆಲ್ಲಾ ಇಂಪಾಗಿ ಹಾಡುತ್ತಿದ್ದವು, ಹಣ್ಣೆಲೆಗಳೆಲ್ಲ ಮತ್ತೆ ಚಿಗುರಿದವು, ಪ್ರಾಣಿಗಳು ಜಿಗಿ ಜಿಗಿದು ಅವರ ಮನಗಳನ್ನು ತಣಿಸುತ್ತಿದ್ದರು. ಇಬ್ಬರು ಸಂತಸದಲ್ಲಿ ಮೈಮರೆತರು. ಆದರೆ, ಎಲ್ಲದಕ್ಕೂ ಒಂದು ಕೊನೆ ಎಂಬುದಿರುತ್ತದಲ್ಲ, ಆ ದಿನ ಬಂತು. ವಿದರ್ಭನ ರಾಜ್ಯದ ಸೇನಾಧಿಪತಿಗಳು ತಮ್ಮ ರಾಜನನ್ನು ಹುಡುಕಿಕೊಂಡು ಬಂದರು. ರಾಜ್ಯದಲ್ಲಿ ರಾಜನ ಆಡಳಿತವಿಲ್ಲದೆ ಜನರು ಹಸಿವಿನಿಂದ ಬಳಲುವಂತಾಗಿದೆ. ಸೋಮಾರಿ ಶ್ರೀಮಂತರು ಕಪ್ಪಕಾಣಿಕೆಯನ್ನು ನೀಡುತ್ತಿಲ್ಲ. ಶತ್ರುರಾಜ್ಯದವರು ಯುದ್ಧಕ್ಕೆ ಸಂಚು ರೂಪಿಸುತ್ತಿದ್ದಾರೆ- ಎನ್ನುತ್ತಾ ಹಲವು ಸಂಕಷ್ಟಗಳನ್ನು ಅವರು ವಿವರಿಸಿದರು. ರಾಜನಿಗೆ ತನ್ನ ಕರ್ತವ್ಯ ನೆನಪಾಗಿ ತನ್ನ ರಾಜ್ಯಕ್ಕೆ ಮರಳುವುದಾಗಿ ಹೇಳಿದಾಗ ತುಂಬಾ ದುಃಖೀತಳಾದಳು ನಿರ್ಮಲೆ. ಅವಳನ್ನು ವಿದರ್ಭ ಹಲವಾರು ರೀತಿ ಸಂತೈಸಿ ಮತ್ತೆ ಬರುವುದಾಗಿ ತಿಳಿಸಿ ಹೊರಟುಹೋದ.
ಜನರ ಸಂಕಷ್ಟಗಳಿಗೆ ಪರಿಹಾರ ನೀಡುತ್ತಾ, ಶತ್ರು ಸೈನ್ಯದ ಆಕ್ರಮಣವನ್ನು ತಡೆಗಟ್ಟುವ ಕೆಲಸಗಳು ಸಾಗಿದವು. ಮೊದ ಮೊದಲು ನಿರ್ಮಲೆಯ ನೆನಪು ಬರುತ್ತಿದ್ದರೂ, ಇದೀಗ ರಾಜನಿಗೆ ಬಿಡುವಿಲ್ಲದ ಕೆಲಸದಿಂದ, ಜನರ ಒಡನಾಟದಿಂದ ಅವಳ ಕುಶಲೋಪರಿಯನ್ನು ಮರೆತು ಬಿಟ್ಟ. ಆಗಾಗ್ಗೆ ಪಾರಿವಾಳದ ಮೂಲಕ ಪತ್ರ ಬರೆಯುತ್ತಿದ್ದುದನ್ನು ನಿಲ್ಲಿಸಿದ. ಇತ್ತ ನಿರ್ಮಲೆ, ವಿದರ್ಭನ ಚಿಂತೆಯಲ್ಲಿ ಮಂಕಾದಳು. ಕೃಶವಾಗಿ, ಎಲ್ಲ ಕೆಲಸದಲ್ಲೂ ಆಸಕ್ತಿ ಕಳೆದುಕೊಂಡು ಸಪ್ಪಗೆ ಕುಳಿತು ಬಿಡುತ್ತಿದ್ದಳು. ಅಲ್ಲಿನ ವಾತಾವರಣವು ನಲಿವಿರದೆ ಕಳೆಗುಂದಿರಲು ಅವಳ ದಯನೀಯ ಸ್ಥಿತಿಯನ್ನು ಕಂಡು ವನದೇವತೆ ರಾಜನನ್ನು ಕಂಡು ಬಾ ಎಂದು ಹೇಳಿದಳು. ಅದರಂತೆ ನಿರ್ಮಲೆ, ವಿದರ್ಭನ ರಾಜ್ಯಕ್ಕೆ ಹೋದಾಗ ರಾಜ ತನ್ನ ಪರಿವಾರದೊಂದಿಗೆ ಖುಷಿಯಿಂದ ಭೋಜನ ಸವಿಯುತ್ತಿದ್ದ ದೃಶ್ಯ ಕಂಡು, “ನಾನು ಅಲ್ಲಿ ಅಷ್ಟು ಕಷ್ಟ ಅನುಭವಿಸುತ್ತಿದ್ದರೆ, ನನ್ನನ್ನು ಮರೆತ ವಿದರ್ಭ ಇಲ್ಲಿ ಸಂತಸದಿಂದ ಇರುವನಲ್ಲ’ ಎಂದು ತನ್ನೊಳಗೆ ಕೋಪ ಉಕ್ಕಿಸಿಕೊಂಡಳು. “ತಕ್ಷಣವೇ, ನೀನು ಆವಿಯಾಗು’ ಎಂದು ಶಾಪ ನೀಡಿದಳು. ಕೂಡಲೇ ವಿದರ್ಭ ಮೋಡವಾಗಿ, ಆವಿಯಾದ.
ನಿಮರ್ಲೆಗೆ ಕೋಪದ ಭರದಲ್ಲಿ, ತಾನೆಂಥ ತಪ್ಪೆಸಗಿದೆ ಎಂದು ತಡವಾಗಿ ಗೊತ್ತಾಯಿತು. ಒಂದೇಸಮನೆ ಕಣ್ಣೀರು ಸುರಿಸತೊಡಗಿದಳು. ಆ ಕಣ್ಣೀರು ನದಿಯಾಗಿ ಹರಿದು, ವನದೇವಿಯನ್ನು ಸೇರಿತು. ವನದೇವಿ, ಒಂದು ಎಲೆಯ ಮೇಲೆ “ಚಿಂತಿಸಬೇಡ ನಿರ್ಮಲೆ… ನಿನ್ನ ಕಣ್ಣೀರಿಗೆ ಅವನು ಒಂದು ದಿನ ಕರಗುತ್ತಾನೆ’ ಎಂದು ಸಂದೇಶ ಕಳುಹಿಸಿದಳು. ಅದನ್ನು ಓದಿದ ನಿರ್ಮಲೆಗೆ ಖುಷಿಯಾಯಿತು. ಅಷ್ಟರಲ್ಲಿ ಅಲ್ಲಿಗೆ ಬಂದ ರಾಜ್ಯದ ಜನರು “ನಮ್ಮನ್ನು ಮಕ್ಕಳಂತೆ ಸಲುಹಿದ್ದ ರಾಜನಿಗೆ ಶಾಪ ನೀಡಿದ್ದೀಯಾ?’ ಎಂದು ಕೋಪದಲ್ಲಿ “ನೀನು ಮಾತು ಬರದ ವೃಕ್ಷವಾಗು. ರಾಜನಿಗಾಗಿ ಪ್ರತಿದಿನ ಕಾಯುವಂತಳಾಗು’ ಎಂದು ಶಾಪ ನೀಡಿದರು. ತಕ್ಷಣ ನಿರ್ಮಲೆ ಹಸಿರೆಲೆಯಿಂದ ಕೂಡಿದ ಮಹಾ ವೃಕ್ಷವಾಗಿ ಮಾರ್ಪಟ್ಟಳು. ಅವಳ ಸ್ಥಿತಿಯನ್ನು ಕಂಡ ಮೋಡವಾದ ರಾಜನಿಗೆ ಅಳು ಬಂತು, ಮೋಡ ಕರಗಿ ಮಳೆ ಹನಿಯಾಗಿ ಉದುರಿತು. ಇಬ್ಬರಿಗೂ ತಾವು ಮತ್ತಿನ್ನೆಂದೂ ಒಬ್ಬರನ್ನೊಬ್ಬರು ಸೇರುವುದಿಲ್ಲ ಎಂದು ತಿಳಿದು ರಾಜನನ್ನು ನೆನೆದು ಯಾವಾಗಲೂ ಎಲೆಯ ಮೂಲಕ ಅಳುತ್ತಾಳೆ. ಆ ಕಣ್ಣೀರು ಆವಿಯಾಗಿ ಮತ್ತೆ ಮೋಡ ಸೇರುತ್ತದೆ, ಮತ್ತೆ ರಾಜ ಅತ್ತಾಗ ಕಣ್ಣೀರು ವೃಕ್ಷದ ಮೇಲೆ ಬೀಳುತ್ತದೆ. ಇದೊಂದು ಮುಗಿಯದ ಕಥೆ.
– ಎಡೆಯೂರು ಪಲ್ಲವಿ