Advertisement

ಎಸ್ಕಲೇಟರ್‌ನಿಂದ ಬಿದ್ದ ಮಗು ಚಿಕಿತ್ಸೆ ಫ‌ಲಿಸದೆ ಸಾವು

06:43 AM Jan 29, 2019 | Team Udayavani |

ಬೆಂಗಳೂರು: ಶ್ರೀರಾಮಪುರ ಮೆಟ್ರೋ ನಿಲ್ದಾಣದ ಎಸ್ಕಲೇಟರ್‌ ಮೇಲಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಒಂದೂವರೆ ವರ್ಷದ ಹೆಣ್ಣು ಮಗು ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

Advertisement

ಶ್ರೀರಾಮಪುರದ ಲಕ್ಷ್ಮೀನಾರಾಯಣಪುರ ನಿವಾಸಿ ರಾಮಚಂದ್ರ ಮತ್ತು ವಾಣಿ ದಂಪತಿ ಪುತ್ರಿ ಹಾಸಿನಿ ಮೃತ ಮಗು. ಈ ಸಂಬಂಧ ಮಗುವಿನ ತಾತ ಬಾಲಕೃಷ್ಣ, ಬಿಎಂಆರ್‌ಸಿಎಲ್‌ ಅಧಿಕಾರಿಗಳ ವಿರುದ್ಧ ಸುಬ್ರಹ್ಮಣ್ಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹಾಸಿನಿಯ ತಾತ ಬಾಲಕೃಷ್ಣ ಹಾಗೂ ಅಜ್ಜಿ ಕುಮಾರಿ, ಉತ್ತರಹಳ್ಳಿಯಲ್ಲಿ ವಾಸವಿದ್ದು, ಆಗಾಗ ಶ್ರೀರಾಮಪುರದಲ್ಲಿರುವ ಪುತ್ರಿ ವಾಣಿ ಅವರ ಮನೆಗೆ ಬರುತ್ತಿದ್ದರು. ಈ ವೇಳೆ ಮೊಮ್ಮಗಳು ಹಾಸಿನಿಯನ್ನು ಮನೆಗೆ ಕರೆದುಕೊಂಡು ಹೋಗಿ ಒಂದೆರಡು ದಿನಗಳ ಬಳಿಕ ಮತ್ತೆ ಕರೆತರುತ್ತಿದ್ದರು. ಭಾನುವಾರ ಮಧ್ಯಾಹ್ನ ಕೂಡ ಪುತ್ರಿ ಮನೆಗೆ ಬಂದ ಬಾಲಕೃಷ್ಣ ಅವರು, ರಾತ್ರಿ 8 ಗಂಟೆ ಸುಮಾರಿಗೆ ಮೊಮ್ಮಗಳನ್ನು ಕರೆದುಕೊಂಡು ಉತ್ತರಹಳ್ಳಿಗೆ ಹೊರಟಿದ್ದರು.

ಮೊಮ್ಮಗಳನ್ನು ತಮ್ಮ ಕಂಕುಳಲ್ಲಿ ಎತ್ತಿಕೊಂಡಿದ್ದ ತಾತ, ಶ್ರೀರಾಮಪುರ ಮೆಟ್ರೋ ನಿಲ್ದಾಣಕ್ಕೆ ಬಂದು ಎರಡನೇ ಮಹಡಿಗೆ ಹೋಗಲು ಎಸ್ಕಲೇಟರ್‌ ಹತ್ತಿದ್ದಾರೆ. ಎಸ್ಕಲೇಟರ್‌ ಮುಂದೆ ಸಾಗುತ್ತಿದ್ದ ವೇಳೆ ಬಾಲಕೃಷ್ಣ ಅವರ ಒಂದು ಕಾಲು ಜಾರಿದಂತಾಗಿ ಆಯ ತಪ್ಪಿದ್ದು, ಕಂಕುಳಲ್ಲಿದ್ದ ಮೊಮ್ಮಗಳು ಕೈಯಿಂದ ಜಾರಿ 35 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾಳೆ ಎಂದು ಪೊಲೀಸರು ಹೇಳಿದರು.

ಘಟನೆಯಲ್ಲಿ ಹಾಸಿನಿ ತಲೆಗೆ ಗಂಭೀರವಾದ ಗಾಯವಾಗಿದ್ದರಿಂದ ಕೂಡಲೇ ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ಮಗುವನ್ನು ನಿಮಾನ್ಸ್‌ಗೆ ಕರೆದೊಯುವಂತೆ ಸಲಹೆ ನೀಡಿದ್ದರು. ನಿಮಾನ್ಸ್‌ನಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು.

Advertisement

ರಾತ್ರಿ 9.30ರ ಸುಮಾರಿಗೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಾದ ಹಾಸಿನಿಗೆ ಐಸಿಯುನಲ್ಲಿ ವೆಂಟಿಲೇಟರ್‌ ಮೂಲಕ ಚಿಕಿತ್ಸೆ ನೀಡಲಾಗಿತ್ತು. ಆದರೆ, ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ. ನಂತರ ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿ, ಆಕೆಯ ಪೋಷಕರಿಗೆ ಮೃತ ದೇಹ ಹಸ್ತಾಂತರಿಸಲಾಗಿದೆ ಎಂದು ಸುಬ್ರಹ್ಮಣ್ಯನಗರ ಪೊಲೀಸರು ಹೇಳಿದರು.

ಬಿಎಂಆರ್‌ಸಿಎಲ್‌ನಿಂದ ಆದ ಲೋಪವಲ್ಲ – ಸಿಎಂ: ಎಸ್ಕಲೇಟರ್‌ನಿಂದ ಬಾಲಕಿ ಬಿದ್ದು ಸಾವನ್ನಪ್ಪಿದ ಘಟನೆ ಬೆಂಗಳೂರು ಮೆಟ್ರೋ ನಿಗಮದಿಂದ ಆದ ಲೋಪವಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಆರು ಬೋಗಿ ಮೆಟ್ರೋ ರೈಲುಗಳ ಲೋಕಾರ್ಪಣೆ ವೇಳೆ ಮಾತನಾಡಿದ ಅವರು, ಭಾನುವಾರ ನಡೆದದ್ದು ಒಂದು ಆಕಸ್ಮಿಕ ಘಟನೆ.

ಅದೇ ರೀತಿ, ಈ ಹಿಂದೆ ಯುವಕನೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆಯಲ್ಲೂ ನಿಗಮದ ಲೋಪವಿಲ್ಲ. ಆದಾಗ್ಯೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜತೆಗೆ ಪ್ರಯಾಣಿಕರು ಕೂಡ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಮಕ್ಕಳನ್ನು ಕರೆದೊಯ್ಯುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂದೂ ಸಿಎಂ ಮನವಿ ಮಾಡಿದರು.

ನನ್ನ ಮಗು ಸಾಯಲು ಮೆಟ್ರೋ ಅಧಿಕಾರಿಗಳೇ ಕಾರಣ. ಒಮ್ಮೆ ಶ್ರೀರಾಮಪುರ ಮೆಟ್ರೋ ನಿಲ್ದಾಣಕ್ಕೆ ಹೋಗಿ ನೋಡಿ. ಅಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲ. ಆ ಜಾಗದಲ್ಲಿ ನಾನು ಬಿದ್ದರೂ ಸಾಯುತ್ತಿದೆ. ಬೇರೆಯವರಿಗೆ ಈ ರೀತಿ ಆಗಬಾರದು.
-ವಾಣಿ, ಹಾಸಿನಿ ತಾಯಿ

Advertisement

Udayavani is now on Telegram. Click here to join our channel and stay updated with the latest news.

Next