Advertisement

ವಾಲಿಕೊಂಡಿದ್ದ ಕಟ್ಟಡ ನೆಲಸಮ

01:12 AM May 15, 2019 | Lakshmi GovindaRaj |

ಕೆ.ಆರ್‌.ಪುರ: ಅಡಿಪಾಯ ಸಡಿಲಗೊಂಡ ಕಾರಣ ಸೋಮವಾರ ಒಂದು ಬದಿಗೆ ವಾಲಿಕೊಂಡಿದ್ದ, ಹೊರಮಾವು ರೈಲ್ವೆ ಅಂಡರ್‌ ಪಾಸ್‌ ಬಳಿಯ ಮೂರು ಅಂತಸ್ತಿನ ಕಟ್ಟಡವನ್ನು ಬಿಬಿಎಂಪಿ ಸಿಬ್ಬಂದಿ ಮಂಗಳವಾರ ತೆರವುಗೊಳಿಸಿದರು.

Advertisement

ಹೊರಮಾವು ರೈಲ್ವೆ ಅಂಡರ್‌ ಪಾಸ್‌ ಬಳಿಯಿರುವ, ಹುಕುಂಸಿಂಗ್‌ ಎಂಬುವರಿಗೆ ಸೇರಿದ ಮೂರು ಅಂತಸ್ತಿನ ಕಟ್ಟಡದ ಪಕ್ಕದ ನಿವೇಶನದಲ್ಲಿ ಮನೆ ನಿರ್ಮಿಸಲು ಅಡಿಪಾಯ ತೆಗೆಯುವಾಗ ಕಟ್ಟಡದ ಅಡಿಪಾಯ ಸಡಿಲಗೊಂಡು, ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಕೆಲವೇ ಕ್ಷಣಗಳಲ್ಲಿ ಕಟ್ಟಡ ಬಲ ಬದಿಗೆ ವಾಲಿಕೊಂಡಿತ್ತು.

ಹುಕುಂಸಿಂಗ್‌ ಅವರಿಗೆ ಸೇರಿದ ಕಟ್ಟಡದ ಪಕ್ಕದಲ್ಲೇ, ಕುಮಾರೇಶ್‌ ಎಂಬುವರ ಹಳೆಯ ಕಟ್ಟಡವಿತ್ತು. ಇತ್ತೀಚೆಗೆ ಕಟ್ಟಡ ನೆಲಸಮಗೊಳಿಸಿದ್ದ ಕುಮಾರೇಶ್‌, ನೂತನ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಸೋಮವಾರ ಫೌಂಡೇಷನ್‌ಗಾಗಿ ಗುಂಡಿ ತೋಡಿಸುತ್ತಿದ್ದರು.

ಈ ವೇಳೆ ಪಕ್ಕದಲ್ಲಿದ್ದ ಮೂರು ಅಂತಸ್ತಿನ ಕಟ್ಟಡದ ಅಡಿಪಾಯ ಸಡಿಲವಾಗಿ ವಾಲಿಕೊಂಡಿತ್ತು. ಪರಿಣಾಮ ಸ್ಥಳೀಯರು ಆತಂಕಕ್ಕೀಡಾಗಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಮಹದೇವಪುರ ವಲಯ ಬಿಬಿಎಂಪಿ ಅಧಿಕಾರಿಗಳು ಸ್ಥಳದಲ್ಲೆ ಮೊಕ್ಕಾಂ ಹೂಡಿ, ಕಟ್ಟಡ ವಾಲಿಕೊಂಡಿದ್ದ ಭಾಗಕ್ಕೆ ಕ್ರೇನ್‌ ಮೂಲಕ ಆಸರೆ ನೀಡಿದ್ದರು.

ಮುಂಜಾಗ್ರತೆ ಕ್ರಮವಾಗಿ ವಾಲಿದ ಕಟ್ಟಡ ಮತ್ತು ಅಕ್ಕಪಕ್ಕದ ಕಟ್ಟಡಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಕಟ್ಟಡ ನೆಲಸಮಗೊಳಿಸುವ ಕಾರ್ಯ ಆರಂಭಿಸಿ, ಸತತ 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಸಂಜೆ 6 ಗಂಟೆ ಹೊತ್ತಿಗೆ ಕಟ್ಟಡವನ್ನು ಸಂಪೂರ್ಣ ನೆಲಸಮಗೊಳಿಸಿದರು.

Advertisement

ಸುಮಾರು 16 ವರ್ಷಗಳ ಹಿಂದೆ, ಘಟನೆ ನಡೆದ ಪ್ರದೇಶವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದಾಗ, 11/37 ಅಡಿ ಜಾಗದಲ್ಲಿ ರತನ್‌ಲಾಲ್‌ ಎಂಬುವರು ಈ ಕಟ್ಟಡ ನಿರ್ಮಿಸಿದ್ದರು. 2016ರಲ್ಲಿ ಹುಕುಂಸಿಂಗ್‌ ಈ ಕಟ್ಟಡ ಖರೀದಿಸಿದ್ದರು. ನಿರ್ಮಾಣ ಸಂದರ್ಭದಲ್ಲಿ ನಿಯಮದಂತೆ ಭದ್ರ ಅಡಿಪಾಯ ಹಾಕದಿರುವುದೇ ಕಟ್ಟಡ ವಾಲಿಕೊಳ್ಳಲು ಕಾರಣ ಎನ್ನಲಾಗಿದೆ.

ಮಾಲೀಕರಿಗೆ ನೋಟಿಸ್‌: ಕೆಎಂಸಿ ಕಾಯ್ದೆ 308ರ ಪ್ರಕಾರ, ಕಟ್ಟಡ ನಿರ್ಮಿಸುವಾಗ ಪಡೆದ ಮಂಜೂರಾತಿ ನಕ್ಷೆ ಹಾಗೂ ಇತರ ಮೂಲ ದಾಖಲೆಗಳನ್ನು ಒದಗಿಸುವಂತೆ ಕಟ್ಟಡದ ಮಾಲೀಕ ಹುಕುಂಸಿಂಗ್‌ಗೆ ಹಾಗೂ ಪಕ್ಕದ ನಿವೇಶನದಲ್ಲಿ ಮನೆ ಕಟ್ಟಲು ಅಡಿಪಾಯ ತೆಗೆಯುತ್ತಿದ್ದ ಕುಮಾರೇಶ್‌ಗೆ ಬಿಬಿಎಂಪಿ ನೋಟಿಸ್‌ ನೀಡಿದೆ. ಹಾಗೇ, ಕಟ್ಟಡ ತೆರವು ಕಾರ್ಯಚರಣೆಗೆ ತಗುಲಿದ ವೆಚ್ಚವನ್ನು ಭರಿಸುವಂತೆ ಹುಕುಂಸಿಂಗ್‌ಗೆ ಅಧಿಕಾರಿಗಳು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next