Advertisement

ಹೊಯ್ಸಳರ ಕಾಲದ ಜನಾರ್ದನ ದೇಗುಲ ಕುಸಿತ

05:22 PM Nov 19, 2021 | Team Udayavani |

ಕಿಕ್ಕೇರಿ: ದೇಗುಲ ಸಂರಕ್ಷಣೆ ಮುಂದಾಗಿದ್ದರೆ ಎಂತಹ ಮಳೆ ಬಂದರೂ ಕಲ್ಲಿನಲ್ಲಿ ನಿರ್ಮಾಣವಾಗಿರುವ ಹೊಯ್ಸಳರ ಕಾಲದ ಜನಾರ್ದನ ದೇವಾಲಯ ಕುಸಿಯುತ್ತಿರಲಿಲ್ಲ. ಇಂತಹ ದೇಗುಲ ಬುಧವಾರ ರಾತ್ರಿ ಕುಸಿಯಲು ಸ್ಥಳೀಯ ಮುಖಂಡರ ಇಚ್ಛಾಶಕ್ತಿ ಕೊರತೆ, ದೇಗುಲ ಸಂರಕ್ಷಿಸದ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಕಿಕ್ಕೇರಿಯ ನೂರಾರು ಗ್ರಾಮಸ್ಥರ ಧ್ವನಿ ಕುಸಿದ ದೇಗುಲ ಬಳಿ ಮಾರ್ದನಿಸಿತು.

Advertisement

ಬೇಸರ: ಹೊಯ್ಸಳರ ಮೂರನೇ ನರಸಿಂಹನ ಕಾಲದಲ್ಲಿ (1260) ಈ ಸುಂದರ ಜನಾರ್ದನ ದೇಗುಲ ನಿರ್ಮಿತವಾಗಿದ್ದು, ಗಿಡಗಂಟಿಗಳು ಹತ್ತಾರು ವರ್ಷದಿಂದ ಬೆಳೆದಿತ್ತು. ನಿರ್ವಹಣೆ ಇರಲಿಲ್ಲ. ದೇಗುಲದ ಬಳಿಯೇ ಅವೈಜ್ಞಾನಿಕವಾಗಿ ಒಳಚರಂಡಿ ನಿರ್ಮಿಸಿದರು.

ದೇಗುಲದ ಜಾಗವನ್ನು ಹಲವರು ಒತ್ತುವರಿ ಮಾಡಿಕೊಂಡರು. ದೇಗುಲದ ಬಳಿಯೇ ತಿಪ್ಪೆ, ಮಣ್ಣು ಸುರಿದರು. ಈ ಕುರಿತು ಎಚ್ಚೆತ್ತುಕೊಂಡಿದ್ದರೆ ರಾಜ ಮಹಾರಾಜರ ಕಾಲದ ದೇಗುಲ ಕುಸಿಯುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ತಿಂಗಳಿನಿಂದ ಎಡಬಿಡದೆ ಸುರಿದ ಮಳೆಗೆ ಪಟ್ಟಣದ ಪ್ರಸಿದ್ಧ ದೇಗುಲ ಬುಧವಾರ ರಾತ್ರಿ ಗೋಪುರ ಸಮೇತ ಕುಸಿದಿದ್ದು, ದೇಗುಲದ ಹೆಸರು ಮಾತ್ರ ಉಳಿಯುವಂತಾಗಿದೆ. ದೇಗುಲ ಜೀರ್ಣಾವಸ್ಥೆಯಲ್ಲಿದ್ದು, ನವೀಕರಣಕ್ಕೆ ಸಾಕಷ್ಟು ಬಾರಿ ಎಚ್ಚರಿಸಿದ್ದರೂ ಎಲ್ಲರ ಮೌನಕ್ಕೆ ದೇಗುಲ ಕುಸಿಯುವಂತಾಗಿದೆ.

ಆಕ್ರೋಶ: ಈ ದೇಗುಲದಲ್ಲಿದ್ದ ಜನಾರ್ದನ ಮೂರ್ತಿ ಅಮೆರಿಕಾದ ನ್ಯೂಯಾರ್ಕ್‌ನ ಮ್ಯೂಸಿಯಂನಲ್ಲಿದೆ ಎನ್ನಲಾಗಿದ್ದು, ಮೂಲಗುಡಿಗೆ ವಾಪಸ್‌ ತರುವ ಯತ್ನಕ್ಕೆ ಮೊದಲೇ ಮುಂದಾಗದ ಜನಪ್ರತಿನಿಧಿಗಳು, ಅಧಿಕಾರಿ ಗಳು ಇಂದು ದೇಗುಲವನ್ನು ಇಲ್ಲದಂತೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

4 ಅಡಿ ಎತ್ತರ: ಮಳೆಗೆ ದೇಗುಲದ ಗೋಪುರದಿಂದ ನೆಲಮಟ್ಟಕ್ಕೆ ಕುಸಿದಿದೆ. ಕುಸಿದ ರಭಸಕ್ಕೆ ದೇಗುಲದ ಮುಂಚಾಚು, ಹಿಂಚಾಚುವಿನಲ್ಲಿದ್ದ ಶಿಲಾಬಾಲಿಕೆ, ದೇವರ ವಿಗ್ರಹಗಳು ಸಂಪೂರ್ಣ ಹಾಳಾಗಿವೆ. ಪ್ರೇಮಕವಿ ಕೆ.ಎಸ್‌.ನರಸಿಂಹಸ್ವಾಮಿ ಹುಟ್ಟಿ ಬೆಳೆದು ಕಾವ್ಯಸ್ಫೂರ್ತಿಯಾದ ಇಲ್ಲಿನ ಸಿರಿಗೆರೆ (ಅಮಾನಿಕೆರೆ)ಯ ತಟದಲ್ಲಿ ಪೂರ್ವಾಭಿಮುಖವಾಗಿ 4ಅಡಿ ಎತ್ತರದ ವೇದಿಕೆಯಲ್ಲಿ ಹೊಯ್ಸಳರ ಸುಂದರ ವಾಸ್ತು ಶೈಲಿಯಲ್ಲಿ ಈ ದೇಗುಲ ನಿರ್ಮಿತವಾಗಿತ್ತು.

Advertisement

ಇದನ್ನೂ ಓದಿ:- ಹೆದ್ದಾರಿ ಎರಡೂ ಬದಿ ಕಣ್ಣಿಗೆ ರಾಚುವ ತ್ಯಾಜ್ಯ

ಪ್ರವೇಶ ದ್ವಾರ ಮಾತ್ರ ಉಳಿದು ದೇಗುಲದ ಚಹರೆಯೇ ಇಲ್ಲದಷ್ಟು ಹಾಳಾಗಿದೆ. ಅಳಿದುಳಿರುವ ವಿಗ್ರಹ, ಮೂರ್ತಿಗಳನ್ನು ಜತನ ಮಾಡಲು ಅಧಿಕಾರಿಗಳು ತುರ್ತು ಮುಂದಾಗದಿದ್ದರೆ ಕಿಡಿಗೇಡಿಗಳ ಮನೆಯ ಚಪ್ಪಡಿಯಾಗುವ ಕಾಲವೂ ದೂರವಾಗಲಾರದು ಎನ್ನುವುದು ಸ್ಥಳೀಕರ ನಿವೇದನೆಯಾಗಿದೆ. ನವರಂಗದಲ್ಲಿನ 4 ಹೊಯ್ಸಳ ಶೈಲಿಯ ದುಂಡಾದ ಚುರುಕಿ ಕಂಬ, ಭುವನೇಶ್ವರಿಯ ಅಷ್ಟದಿಕ್ಪಾಲಕರು, ಸುಖನಾಸಿಯ ಪ್ರವೇಶದ್ವಾರದ ವೈಷ್ಣವ ದ್ವಾರಪಾಲಕರು ಉಳಿದಿದ್ದು, ಸಂರಕ್ಷಣೆಗೆ ತುರ್ತು ಮುಂದಾಗಬೇಕಿದೆ.

 ಗೋಪುರ ನಾಮಾವಶೇಷ

ದೇಗುಲ ವೇದಿಕೆ ಮೇಲೆ 4 ಹಂತದ ಕಪೋತಬಂಧ ಅಧಿಷ್ಠಾನ, ತಳಪಾದಿಯ ಮೇಲೆ ಗರ್ಭಗೃಹ, ಸುಖನಾಸಿ, ನವರಂಗ, ಮುಖಮಂಟಪ, ಅಧಿಷ್ಠಾನದ ಮೇಲೆ ದೇಗುಲ ಭಿತ್ತಿಗೆ ಸೇರಿದಂತೆ ಊಧ್ವìಕಂಪವು 3 ಪಟ್ಟಿಕೆಗಳಿಂದ ಕೂಡಿತ್ತು. ಸುತ್ತಲೂ ಸುಂದರ ಶಿಲಾಬಾಲಿಕೆಯರ, ದೇವಾನುದೇವತೆಗಳ ಮೂರ್ತಿಗಳು ಜೀವತಳಿದಂತೆ ಕಲ್ಲಿನಲ್ಲಿ ಹರಳಿತ್ತು. ದೇಗುಲದಲ್ಲಿದ್ದ 4 ಹಂತದ ಸುಂದರ ಗೋಪುರ ನಾಮಾವಶೇಷವಾದಂತಾಗಿದೆ. ಪ್ರಸ್ತರ, ಗ್ರೀವ, ಶಿಖರ, ಸ್ಥೂಪಿಗಳಿದ್ದು, ದೇಗುಲ ಹೊಂಬಣ್ಣದ ಗ್ರಾನೈಟ್‌ ಶಿಲೆಯಿಂದ ನಿರ್ಮಿತವಾಗಿದ್ದು, ಇಂದು ನೋಡಲು ಅವಶೇಷ ಮಾತ್ರ ಉಳಿದಂತಾಗಿದೆ.

ಶೈವಯತಿಗಳ ಮೂರ್ತಿಗಳು ಭಗ್ನ

ದೇಗುಲ ಹೊರಭಿತ್ತಿಯಲ್ಲಿ ಸುಂದರ ಪಂಜರ ಕೋಷ್ಠ (ಗೂಡಿನಂತಹ ಮಾದರಿ) ಗಳಿದ್ದು ನರಸಿಂಹ, ಗೋಪಾಲಕೃಷ್ಣ, ಮಹಿಷಮರ್ಧಿನಿ, ಕಾಳಿಂಗ ಮರ್ಧನ, ಯೋಗನರಸಿಂಹ, ವಿಷ್ಣು, ಶಿವ, ಗಣೇಶದಂತಹ ಸುಂದರ ಮೂರ್ತಿ, ದೈವಕೋಷ್ಠದಲ್ಲಿ ಶೈವಯತಿಗಳ ಮೂರ್ತಿಗಳು ಭಗ್ನವಾಗಿವೆ. ದೇವರ ವಿಗ್ರಹಗಳು ಚರಂಡಿಯಲ್ಲಿ ಚೆಲ್ಲಾಡಿ ಬಿದ್ದು ಹೊಡೆದು ಹಾಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next