ಮೈಸೂರು: “ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನ ಅಥವಾ ಮತ್ತೂಂದು ಸರ್ಕಾ ರದ ರಚನೆಗೆ ರಾಜೀನಾಮೆ ಕೊಟ್ಟಿರುವ 20 ಜನ ಶಾಸಕರಾಗಲಿ, ಬಿಜೆಪಿಯಾಗಲಿ ಕಾರಣ ವಲ್ಲ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ನಾಯಕರೇ ನೇರ ಹೊಣೆಗಾರರು’ ಎಂದು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಅಡಗೂರು ಎಚ್.ವಿಶ್ವನಾಥ್ ದೂರಿದರು.
ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಎಚ್.ವಿಶ್ವನಾಥ್ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ, ಸಿದ್ದರಾಮಯ್ಯ ಹಾಗೂ ಸಾ.ರಾ.ಮಹೇಶ್ ವಿರುದ್ಧ ವಾಗ್ಧಾಳಿ ನಡೆಸಿದರು. “ನಮ್ಮನ್ನು ಅಗೌರವದಿಂದ ನಡೆಸಿಕೊಳ್ಳಲಾಯಿತು. ನಮ್ಮನ್ನು ಲಘುವಾಗಿ ಕಂಡ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರಿಂದಲೇ ಸರ್ಕಾರ ಪತನವಾಗಿದ್ದು. ದೇವೇಗೌಡರ ಕುಟುಂಬಕ್ಕೆ ವಿಷ ಉಣಿಸಿದ್ದು ಸಾ.ರಾ.ಮಹೇಶ್. ಆತ ಕಿವಿಯೂದಿದ್ದನ್ನು ಕೇಳಿ ಕುಮಾರಸ್ವಾಮಿ ಹಾಳಾದರು.
ರಾಜಕೀಯ ಸಂಸ್ಕೃತಿಯೇ ಗೊತ್ತಿಲ್ಲದ ಸಾ.ರಾ.ಮಹೇಶ್, ನಂಬಿಸುವ ಸಲುವಾಗಿ ಸದನದಲ್ಲಿ ನಿಂತು ತಾಯಿ, ಮಕ್ಕಳ ಮೇಲೆ ಆಣೆ ಹಾಕುತ್ತಾನೆ. ಅವನಿಗೇನಾದರೂ ಚರಿತ್ರೆ ಇದೆಯಾ? ಒಬ್ಬ ಮಂತ್ರಿನಾ ನೀನು, ಥೂ ನಿನಗೆ’ ಎಂದು ಜಾಡಿಸಿದರು. “ನಾನು ಸಾ.ರಾ.ಮಹೇಶ್‌ಗೆ ದೇವಸ್ಥಾನಕ್ಕೆ ಕರೆಯಲ್ಲ. ಬೆಂಗಳೂರು ಅಥವಾ ಮೈಸೂರಿನ ಪ್ರಸ್‌ಕ್ಲಬ್‌ಗ ಬಾ, ಚರ್ಚೆ ಮಾಡೋಣ, ಚರ್ಚೆಗೆ ಸಿದ್ಧನಿದ್ದೇನೆ’ ಎಂದು ಸವಾಲು ಹಾಕಿದರು.
ಸಿದ್ದು ರಾಜೀನಾಮೆ ಯಾವಾಗ?: “ಲೋಕಸಭಾ ಚುನಾವಣೆ ಸೋಲಿನ ಹೊಣೆ ಹೊತ್ತು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ನಾನೂ ಹೊರ ಬಂದಿದ್ದೇನೆ. ಆದರೆ, ಸೋಲಿನ ನಂತರವೂ ನೀವಿನ್ನೂ ಅಲ್ಲೇ ಗೂಟ ಹೊಡೆದುಕೊಂಡು ಕುಳಿತಿದ್ದೀರಲ್ಲಾ, ನಿಮಗೇನು ಸ್ವಾಭಿಮಾನ ಇಲ್ಲವಾ?’ ಎಂದು ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದರು.
“ಉಪ ಮುಖ್ಯಮಂತ್ರಿ ಮಾಡಿ ರಾಜಕೀಯವಾಗಿ ಬೆಳೆಸಿದ ಎಚ್.ಡಿ.ದೇವೇಗೌಡರನ್ನು ಸಿದ್ದರಾಮಯ್ಯ ತುಮಕೂರಲ್ಲಿ ಖೆಡ್ಡಾಗೆ ಕೆಡವಿದ್ರು. ನಾನು ಹೆಸರಿಗೆ ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದೆ. ಕೆ.ಆರ್.ನಗರ ಪುರಸಭೆ ಚುನಾವಣೆಯಲ್ಲಿ ನಮ್ಮ ಕೇರಿಯ ಟೀಕೆಟ್‌ನ್ನೇ ನನ್ನಿಂದ ಕೊಡಲಾಗಲಿಲ್ಲ. ಲೋಕಸಭಾ ಚುನಾವಣೆ ಪ್ರಚಾರಕ್ಕೆ ರಾಹುಲ್ ಕೆ.ಆರ್.ನಗರಕ್ಕೆ ಬಂದಾಗ ಸಿದ್ದರಾಮಯ್ಯ ವೇದಿಕೆಯಲ್ಲಿರುತ್ತಾರೆಂಬ ಕಾರಣಕ್ಕೆ ನನ್ನನ್ನು ದೂರ ಇಡಲಾಯಿತು.
ಸಿದ್ದರಾಮಯ್ಯ ಕಾರಣಕ್ಕೆ ನನ್ನನ್ನು ಸಮನ್ವಯ ಸಮಿತಿಯಿಂದ ಹೊರಗಿಡಲಾಯಿತು. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ ನನ್ನ ಅಳಿಯನನ್ನು ಕರೆಸಿ ಕೆಲಸದಿಂದ ವಜಾ ಮಾಡುವುದಾಗಿ ಬೆದರಿಸಿದ್ದಾರೆ. ಮುಖ್ಯಮಂತ್ರಿ ಕಚೇರಿಯಿಂದಲೇ ನನ್ನ ಕುಟುಂಬಕ್ಕೆ ಬ್ಲ್ಯಾಕ್‌ವೆುಲ್ ಮಾಡಿದ್ದಾರೆ’ ಎಂದು ಆರೋಪಿಸಿದರು.