ಹೊಸದಿಲ್ಲಿ: ದಿಲ್ಲಿಯಲ್ಲಿ ಐಎಎಸ್ ಅಧಿಕಾರಿಗಳ ಮುಷ್ಕರ ತಡೆಯಲು ಪ್ರಧಾನಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನರೇಂದ್ರ ಮೋದಿಯವರ ಅಧಿಕೃತ ನಿವಾಸದತ್ತ ಆಪ್ ನಡೆಸುತ್ತಿದ್ದ ಪಾದಯಾತ್ರೆಯನ್ನು ಸಂಸತ್ ಭವನದ ಸಮೀಪವೇ ತಡೆದು ನಿಲ್ಲಿಸಲಾಗಿದೆ.
ಹೊಸದಿಲ್ಲಿಯ ಪ್ರಮುಖ ಭಾಗಗಳಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ಐದು ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿತ್ತು. ಹೀಗಾಗಿ ಆಪ್ ಪ್ರತಿಭಟನೆ ಪಾದಯಾತ್ರೆ, ಧರಣಿ ನಾಟಕ ವಿಫಲವಾಗಿದೆ.
ಏನೂ ಹೇಳಲಿಲ್ಲ: ಇದೇ ವೇಳೆ ದಿಲ್ಲಿ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಮುಖ್ಯಮಂತ್ರಿಗಳ ನಿಯೋಗ ಭೇಟಿ ಮಾಡಿತು. “ಪ್ರಧಾನಿ ನಮ್ಮ ಮಾತುಗಳನ್ನು ಆಲಿಸಿದರು. ಆದರೆ ಏನೂ ಹೇಳಲಿಲ್ಲ’ ಎಂದರು ಮಮತಾ. ಕರ್ನಾಟಕದ ಸಿಎಂ ಕುಮಾರಸ್ವಾಮಿ, ಕೇರಳ ಸಿಎಂ ಪಿಣರಾಯಿ ವಿಜಯನ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಜತೆಗಿದ್ದರು.
ಮುಷ್ಕರ ನಡೆಸುತ್ತಿಲ್ಲ: ದಿಲ್ಲಿ ರಾಜ್ಯದ ವ್ಯಾಪ್ತಿಯಲ್ಲಿ ಮುಷ್ಕರ ನಡೆಸುತ್ತಿಲ್ಲ. ಈ ಬಗ್ಗೆ ಆಮ್ ಆದ್ಮಿ ಪಕ್ಷದ ಸರಕಾರದ ಆರೋಪ ಸುಳ್ಳೆಂದು ದಿಲ್ಲಿಯ ಕಂದಾಯ ಕಾರ್ಯದರ್ಶಿ ಮನೀಷಾ ಸಕ್ಸೇನಾ ನೇತೃತ್ವದಲ್ಲಿ ಐಎಎಸ್ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದ್ದಾರೆ. ದಿಲ್ಲಿ ಸಿಎಂಅರವಿಂದ ಕೇಜ್ರಿವಾಲ್ ನಿವಾಸದಲ್ಲಿ ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ನಡೆದ ಬಳಿಕ ಭೀತಿಯ ವಾತಾವರಣ ಉಂಟಾಗಿದೆ ಎಂದಿದ್ದಾರೆ. ಈ ನಡುವೆ ಐಎಎಸ್ ಅಧಿಕಾರಿಗಳ ಭದ್ರತೆಗೆ ಕ್ರಮ ಕೈಗೊಳ್ಳುವುದಾಗಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಕೆಸಿಆರ್ ಮಿಸ್ಸಿಂಗ್
ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ಗೆ ನಾಲ್ವರು ಸಿಎಂಗಳು ಬೆಂಬಲ ವ್ಯಕ್ತಪಡಿಸಿದ್ದರಾದರೂ ಇವರೊಂದಿಗೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಭಾಗವಹಿಸಿರಲಿಲ್ಲ. ದಿಲ್ಲಿಯಲ್ಲೇ ಇದ್ದರೂ ಕೆಸಿಆರ್ ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಲ, ಕೇರಳ ಸಿಎಂಗಳ ಜೊತೆಗೆ ಕಾಣಿಸಿಕೊಂಡಿಲ್ಲ.
2019ರ ಚುನಾವಣೆಗೂ ಮುನ್ನ ವಿರೋಧ ಪಕ್ಷಗಳು ಒಂದಾಗಬೇಕು ಎಂಬ ಕಲ್ಪನೆ ಮೊದಲು ಬಿತ್ತಿದ್ದ ಕೆಸಿಆರ್ ಕರ್ನಾಟಕದಲ್ಲಿ ಎಚ್.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಕಾರ್ಯಕ್ರಮದಲ್ಲೂ ಭಾಗವಹಿಸಿರಲಿಲ್ಲ.