Advertisement

ನಾನು ಬಿಜೆಪಿ ಸೇರುತ್ತೇನೆ ಎನ್ನುವುದು ಹಾಸ್ಯಾಸ್ಪದ : ಡಾ.ಜಿ.ಪರಮೇಶ್ವರ್

07:00 PM Jun 06, 2022 | Team Udayavani |

ಕೊರಟಗೆರೆ: ಕಾಂಗ್ರೆಸ್ ಪಕ್ಷದ ಸಿದ್ದಾಂತ, ಮೌಲ್ಯ, ಹೋರಾಟಗಾರರ ಪ್ರಭಾವವನ್ನು ತಂದೆ ಮೂಲಕ ಬಾಲ್ಯದಿಂದ ಮೈಗೂಡಿಸಿಕೊಂಡಿರುವ ನನ್ನನ್ನು ”ಬಿಜೆಪಿ ಸೇರುತ್ತಾನೆ” ಎಂದು ಹರಡಿಸುದನ್ನು ನೋಡಿದರೆ ಹಾಸ್ಯಾಸ್ಪದ ಅನಿಸುವುದಿಲ್ಲವೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

Advertisement

ಪಟ್ಟಣದ ಹನುಮಂತಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ನೂತನವಾಗಿ ನಿರ್ಮಾಣ ಮಾಡುವ ಕಾಂಗ್ರೆಸ್ ಭವನಕ್ಕೆ ಅಡಿಗಲ್ಲು ಹಾಕಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಪಕ್ಷವು ಜನರನ್ನು ಒಂದುಗೂಡಿಸುವುದಕ್ಕೆ, ಭಾರತೀಯರಲ್ಲಿ ಸಮಾನತೆ ಮೂಡಿವುದಕ್ಕೆ, ಬಡತನ ಹೋಗಲಾಡಿಸಲು, ರೈತರಿಗೆ ನೀರಾವರಿ ತರಲು, ಸಾಕಷ್ಟು ಶ್ರಮವಹಿಸಿದೆ ದೇಶದ ಹಿತಕ್ಕಾಗಿ ಇಂದಿರಾಗಾಂಧಿ, ರಾಜೀವ್‌ಗಾಂಧಿ ಪ್ರಾಣ ಬಲಿದಾನ ಮಾಡಿದ್ದಾರೆ. ಆದರೆ ಬಿಜೆಪಿ ಪಕ್ಷ ದೇಶದಲ್ಲಿ ಜಾತಿ ಧರ್ಮ ವಿಷಬೀಜ ಬಿತ್ತುತ್ತಿದೆ, ರಾಜ್ಯದ ಬಿಜೆಪಿ ಸರ್ಕಾರ ಇತಿಹಾಸ ತಿರುಚಿ ನೂತನ ಪಠ್ಯಪುಸ್ತಕವನ್ನು ಶಾಲಾ ಮಕ್ಕಳಿಗೆ ಒದಗಿಸುವ ಹುನ್ನಾರ ಮಾಡಿದೆ, ಅದರಲ್ಲಿ ನಮ್ಮ ಸಂವಿಧಾನ ಶಿಲ್ಪಿ ಅಂಬೇಡ್ಕರ್, ಅಣ್ಣ ಬಸವಣ್ಣ, ರಾಷ್ಟಕವಿ ಕುವೆಂಪು ರವರುಗಳ ಜೀವನ ಚರಿತ್ರೆ ತಿರುಚಲಾಗಿದೆ ಎನ್ನುವ ಆಪಾದನೆ ಇದ್ದರೂ ಕೆಲವರ ಒತ್ತಡಕ್ಕೆ ಸರ್ಕಾರ ಮಣಿಯುತ್ತಿದೆ ಎಂದರು.

ರಾಜ್ಯ ಗುತ್ತಿಗೆದಾರರ ಸಂಘದ ಅದ್ಯಕ್ಷ ಸರ್ಕಾರ ಮೇಲೆ ೪೦% ಕಮಿಷನ್ ಆರೋಪ ಮಾಡುತ್ತಾರೆ ಸರ್ಕಾರದ ಅದಕ್ಕೆ ಸ್ಪಷ್ಟನೆ ಇಲ್ಲ, ಜನರ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು ಸಾಮಾನ್ಯ, ಬಡ ವರ್ಗದ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ, ರೈತರಿಗೆ ಕೃಷಿ ವೆಚ್ಚ ದುಬಾರಿ ಮಾಡಿರುವ ರಾಜ್ಯ ಬಿಜೆಪಿ ಸರ್ಕಾರ ದೇಶದಲ್ಲಿಯೇ ನಂ ೧ ಭ್ರಷ್ಟಾಚಾರದ ಸರ್ಕಾರವಾಗಿದೆ. ಇದಕ್ಕಾಗಿ ರಾಜ್ಯದಲ್ಲಿ, ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಿದೆ ಎಂದರು.

ಕೊರಟಗೆರೆ ವಿದಾನಸಭಾ ಕ್ಷೇತ್ರಕ್ಕೆ ಸ್ವಂತ ಕಾಂಗ್ರೆಸ್ ಭವನನ್ನು ನಿರ್ಮಿಸಲು ಇಂದು ಅಡಿಗಲ್ಲು ಹಾಕಲಾಗಿದೆ, ನಿರ್ಮಾಣಕ್ಕೆ 8 ಗುಂಟೆ ಭೂಮಿಯನ್ನು ಪಟ್ಟಣದ ಉದ್ಯಮಿ ಹೆಚ್.ಮಹದೇವ್ ಪಕ್ಷಕ್ಕೆ ದಾನವಾಗಿ ನೀಡಿದ್ದಾರೆ, ಅವರಿಗೆ ಪಕ್ಷದ ವತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಈ ಕಟ್ಟಡ ನಿರ್ಮಾಣಕ್ಕೆ ಪ್ರತಿಯೊಬ್ಬ ಕಾರ್ಯಕರ್ತ ಮುಖಂಡ ಸಾರ್ವಜನಿಕರಿಂದ 1 ರೂ ನಿಂದ ಅವರ ಶಕ್ತಿ ಅನುಸಾರ ದೇಣಿಗೆ ಪಡೆಯಲಾಗುತ್ತಿದೆ, ಭವನ ಒಬ್ಬರಿಗೆ ಸೀಮಿತವಾಗದೆ ಪಕ್ಷದ ಕಾರ್ಯಕರ್ತರಿಗೆ ಸೀಮಿತವಾಗಬೇಕು. ಭವನದ ಉದ್ಘಾಟನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಲವು ರಾಜ್ಯ ನಾಯಕರನ್ನು ಆಹ್ವಾನಿಸಲಾಗುವುದು ಎಂದರು.

Advertisement

ಕಾರ್ಯಕ್ರಮದಲ್ಲಿ ಕೆಪಿಸಿಸಿ ವಕ್ತಾರ ನಿಕಿತ್‌ರಾಜ್, ಮಾಜಿ ವಿಧಾನಸಭಾ ಸದಸ್ಯ ವೇಣುಗೋಪಾಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಷಪ್ಪ, ಕೆಪಿಸಿಸಿ ಕಾರ್ಯದರ್ಶಿಗಳಾದ ಮುರಳಿದರ ಹಾಲಪ್ಪ, ಬಿ.ಎಸ್.ದಿನೇಶ್, ನಾಗಲಕ್ಷ್ಮೀ , ಬ್ಲಾಕ್ ಕಾಂಗ್ರಸ್ ಅಧ್ಯಕ್ಷರುಗಳಾದ ಕೋಡ್ಲಹಳ್ಳಿ ಅಶ್ವಥನಾರಾಯಣ, ಅರಕೆರೆಶಂಕರ್, ಮಹಿಳಾ ಅಧ್ಯಕ್ಷರುಗಳಾದ ಜಯಮ್ಮ ಶೈಲಜ, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್‌ಕುಮಾರ್ ಮಾಜಿ ತುಮ ಕೂರು ನಗರಸಭಾ ಅಧ್ಯಕ್ಷ ವಾಲೆ ಚಂದ್ರಯ್ಯ, ಮಾಜಿ ಜಿ.ಪಂ ಸದಸ್ಯರಾದ ಪ್ರಸನ್ನಕುಮಾರ್, ಕೆಂಚಮಾರಯ್ಯ, ತುಮುಲ್ ನಿರ್ದೇಶಕರುಗಳಾದ ಈಶ್ವರಪ್ಪ, ಕೊಂಡವಾಡಿ ಚಂದ್ರಶೇಖರ್, ಪ.ಪಂ ಸದಸ್ಯರುಗಳಾದ ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ನಾಗರಾಜು, ನಂದೀಶ್, ಮಾಜಿ ಅದ್ಯಕ್ಷ ಸೈಯದ್ ಸೈಪುಲ್ಲಾ, ಮಾಜಿ ಉಪಾಧ್ಯಕ್ಷ ಕೆ.ವಿ.ಮುಂಜುನಾಥ ಸೇರಿದಂತೆ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next