Advertisement

ತಾಪಂ ಅಧ್ಯಕ್ಷರ ಗ್ರಾಮದಲ್ಲೇ ಸೌಲಭ್ಯ ಮರೀಚಿಕ

05:30 AM Jan 04, 2019 | Team Udayavani |

ಚಿತ್ತಾಪುರ: ತಾಲೂಕಿನ ರಾಜೋಳಾ ತಾಪಂ, ಭೀಮನಳ್ಳಿ ಗ್ರಾಪಂ ವ್ಯಾಪ್ತಿಯ ರಾಮತೀರ್ಥ ಗ್ರಾಮ ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿದ್ದು, ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ.

Advertisement

ಇದೇ ಗ್ರಾಮದವರಾದ ಜಗದೇವರೆಡ್ಡಿ ಪಾಟೀಲ ತಾಪಂ ಹಾಲಿ ಅಧ್ಯಕ್ಷರಾಗಿದ್ದಾರೆ. ಆದರೆ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎನ್ನುವುದು ಗ್ರಾಮಸ್ಥರ ಅಸಮಾಧಾನವಾಗಿದೆ. ಗ್ರಾಮದ ಮಹಿಳೆಯರು ರಾತ್ರಿ ಅಥವಾ ಬೆಳಗಿನ ಜಾವ ಗ್ರಾಮದ ಸುತ್ತಮುತ್ತಲಿನ ರಸ್ತೆ ಬದಿ, ಹೊಲಗಳನ್ನು ಶೌಚಕ್ಕೆ ಬಳಸುತ್ತಿದ್ದಾರೆ. 

ದೇಶದ ತುಂಬಾ ಸ್ವತ್ಛ ಭಾರತ ಕೂಗು ಕೇಳಿಬರುತ್ತಿದ್ದರೂ, ರಾಮತೀರ್ಥಕ್ಕೆ ಮಾತ್ರ ಅನ್ವಯವಾಗುವ ಯಾವ ಲಕ್ಷಣ ಕಂಡುಬಂದಿಲ್ಲ. ಗ್ರಾಮದಲ್ಲಿ ಇಲ್ಲಿಯವರೆಗೆ ಚರಂಡಿ ನಿರ್ಮಿಸಿಲ್ಲ. ಹೀಗಾಗಿ ಮನೆಗಳ ಬಚ್ಚಲು ನೀರು ರಸ್ತೆಗಳ ಮೇಲೆಯೇ ಹರಿಯುತ್ತಿದೆ. ಇದರಿಂದ ದುರ್ನಾತ ಹಾಗೂ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಎನ್ನುತ್ತಾರೆ ಗ್ರಾಮದ ಮಹಿಳೆ ನಾಗಮ್ಮ ಹಾಗೂ ರಮೇಶ.

ರಾಮತೀರ್ಥ ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿವೆ. ಒಂದೊಂದು ಅಂಗನವಾಡಿ ಕೇಂದ್ರದ ಕಿಟಕಿ, ಬಾಗಿಲು ಹಾಕಲು ಹಾಗೂ ಸುಣ್ಣಬಣ್ಣ ಬಡಿಯಲು ಸೇರಿದಂತೆ ಇತರೆ ಕೆಲಸಕ್ಕೆ ತಲಾ 50 ಸಾವಿರ ರೂ. ಬಿಡುಗಡೆಯಾಗಿದೆ. ಆದರೆ ಇಲ್ಲಿಯ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಮಟ್ಟದ ಸುಣ್ಣ ಹಚ್ಚಿದ್ದಾರೆಯೇ ಹೊರತು ಕಿಟಕಿ, ಬಾಗಿಲು ದುರಸ್ತಿ, ಪರ್ಸಿ ಅಳವಡಿಕೆ ಸೇರಿದಂತೆ ಇತರೆ ಕೆಲಸಗಳನ್ನು ಮಾಡಿಲ್ಲ.

ಗ್ರಾಮದಲ್ಲಿ ಸಿಸಿ ರಸ್ತೆ ಮಾಡಲು ಅನುದಾನ ಬಿಡುಗಡೆಯಾಗಿದೆ. ಆದರೆ ಇಲ್ಲಿ ರಸ್ತೆಯೇ ಆಗಿಲ್ಲ. ಆದರೆ ಬಿಲ್‌ ಮಾತ್ರ ಆಗಿದೆ. ಎಸ್‌ಸಿ ಓಣಿಯಲ್ಲಿ ನಿರ್ಮಾಣವಾಗಿರುವ ಸರ್ಕಾರಿ ರಂಗ ಮಂದಿರ ಕಟ್ಟಡಕ್ಕೆ ಬಾಗಿಲು, ಕಿಟಕಿ, ಪರ್ಸಿ ಹಾಕಲು ತಲಾ 2 ಲಕ್ಷ ರೂ. 2016-17ನೇ ಸಾಲಿನ ವಿಶೇಷ ಅಭಿವೃದ್ಧಿ ಅನುದಾನ (ಎಸ್‌.ಸಿ.ಪಿ) ಯೋಜನೆಯಲ್ಲಿ ಬಿಡುಗಡೆ ಆಗಿದೆ. ಇಲ್ಲಿ ಕಿಟಕಿ, ಬಾಗಿಲು, ಪರ್ಸಿ ಸೇರಿದಂತೆ ಇತರೆ ದುರಸ್ಥಿ ಕೆಲಸಗಳೆ ಆಗಿಲ್ಲ.

Advertisement

ಆದರೆ 2 ಲಕ್ಷ ರೂ. ಬಿಲ್‌ ಗುಳುಂ ಆಗಿದೆ. ಮುಖ್ಯ ರಸ್ತೆಯಿಂದ ಮೋನಪ್ಪ ವಾಡ್‌ರವರ ಮನೆವರೆಗೆ ಸಿಸಿ ರಸ್ತೆ ನಿರ್ಮಾಣ ಮಾಡಲು 3 ಲಕ್ಷ ರೂ. ಬಿಡುಗಡೆ ಆಗಿತ್ತು. ಆದರೆ ಇಲ್ಲಿ ರಸ್ತೆಯನ್ನೇ ಮಾಡಿಲ್ಲ. 2017-18ನೇ ಸಾಲಿನ 3054 ಅನುದಾನದಲ್ಲಿ ಬಿಲ್‌ ಮಾತ್ರ ಆಗಿದೆ. 2017-18ನೇ ಸಾಲಿನ ಒಂದು ಕೋಟಿ ರೂ. ಅನಿರ್ಭಂದಿತ ಅನುದಾನದಲ್ಲಿ ರಾಮತೀರ್ಥ ತಾಂಡಾದ ಕಸನಿಬಾಯಿ ಮನೆಯಿಂದ ರಾಮು ಕಾರ್‌ಬಾರಿ ಮನೆಯವರೆಗೆ 2 ಲಕ್ಷ ರೂ. ವೆಚ್ಚದ ಚಂರಡಿ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ.

ಸರ್ಕಾರಿ ಪ್ರೌಢಶಾಲೆಯಲ್ಲಿ ಎರಡು ಕೋಣೆಗಳ ಶೌಚಾಲಯ ನಿರ್ಮಾಣ ಹಾಗೂ ನೀರಿನ ಸೌಕರ್ಯ ಒದಗಿಸಲು 2016-17ನೇ ಸಾಲಿನ ಒಂದು ಕೋಟಿ ಅನಿರ್ಭಂದಿತ ಯೋಜನೆಯಲ್ಲಿ ಮಾಡಿದ ಕೆಲಸಗಳು ಕಳಪೆ ಮಟ್ಟದಿಂದ ಕೂಡಿವೆ. ಕುಲಕರ್ಣಿ ಅವರ ಮನೆಯಿಂದ ಮಸೀದಿ ವರೆಗೆ ಸಿಸಿ ರಸ್ತೆ ನಿರ್ಮಾಣ 2.50 ಲಕ್ಷ ರೂ. ಹಾಗೂ ಅಯ್ಯಣಗೌಡ ಮನೆಯಿಂದ ನಡುಗಟ್ಟಿವರೆಗೆ ಸಿಸಿ ರಸ್ತೆ ನಿರ್ಮಾಣ ಮಾಡಲು 2.50 ಲಕ್ಷ ರೂ. 2016-17ನೇ ಸಾಲಿನ 3054 ಲೆಕ್ಕ ಶಿರ್ಷಿಕೆಯಲ್ಲಿ ಕೆಲಸ ಮಾಡದೇ ಬಿಲ್‌ ಆಗಿದೆ. ರಾಮತೀರ್ಥ ತಾಂಡಾದಲ್ಲಿ ನರಸಿಂಗ್‌ ಚವ್ಹಾಣ ಮನೆಯಿಂದ ವಿಜಯಕುಮಾರ ಮನೆ ವರೆಗೆ ಸಿಸಿ ರಸ್ತೆಗೆ 2 ಲಕ್ಷ ರೂ. ಹಾಗೂ ಚರಂಡಿ ನಿರ್ಮಾಣಕ್ಕೆ 2 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ.

ಆದರೆ ಇಲ್ಲಿ ಕಳಪೆ ಮಟ್ಟದ ಚರಂಡಿ ಕಾಮಗಾರಿ ಮಾಡಿ ಸಿಸಿ ರಸ್ತೆ ನಿರ್ಮಾಣ ಮಾಡದೇ ಬಿಲ್‌ ಎತ್ತಿದ್ದಾರೆ. 2013-14ನೇ ಸಾಲಿನಲ್ಲಿ ಎಸ್‌ಸಿ ಓಣಿಯಲ್ಲಿ ಕಿರು ನೀರು ಸರಬರಾಜು ಟ್ಯಾಂಕ್‌ ನ್ನು ನಿರ್ಮಾಣ ಮಾಡಿ ಅಲ್ಲಿಂದ ತೆಗೆದುಕೊಂಡು ತಮ್ಮ ಹೊಲದ ಪಕ್ಕದಲ್ಲಿ ಹಾಕಿಕೊಂಡಿದ್ದಾರೆ. ನೀರಿನ ಟ್ಯಾಂಕ್‌ ನಿರ್ಮಾಣ ಮಾಡಿ ಗ್ರಾಪಂಗೆ ಹಸ್ತಾಂತರ ಮಾಡದೇ ಜಾಗದ ಮಾಲೀಕನಿಗೆ ಉದ್ಯೋಗ ನೀಡುತ್ತೇವೆ ಎಂದು ಆಮಿಷವೊಡ್ಡಿ ಬಿಲ್‌ ಮಾಡಿಕೊಂಡಿದ್ದಾರೆ. ಹೀಗೆ ಹತ್ತಾರು ಕೆಲಸಗಳನ್ನು ಸ್ವತಃ ತಾವೇ ಮಾಡುವುದಾಗಿ ಹೇಳಿ ಹೀಗೆಲ್ಲ ಕಳಪೆ ಹಾಗೂ ಕಾಮಗಾರಿ ಮಾಡದೇ ಬಿಲ್‌ ಎತ್ತಿ ತಿಂದಿದ್ದಾರೆ ಎಂದು ಗ್ರಾಪಂ ಸದಸ್ಯ ಅಯ್ಯಪ್ಪ ಪವಾರ್‌ ರಾಮತೀರ್ಥ
ಆರೋಪಿಸಿದ್ದಾರೆ.

ನಮ್ಮ ಓಣ್ಯಾಗ್‌ ರಸ್ತೆ, ಚರಂಡಿ, ಕುಡಿಯುವ ನೀರು, ಸ್ವತ್ಛತೆ, ಶೌಚಾಲಯ, ಕಲ್ಪಿಸಿ ಅಂತಾ ಹೇಳಿ ಹೇಳಿ ಸಾಕಾಗ್ಯಾದ್‌. ತಲ್ಯಾಗಿನ ಕೂದಲು ಬೆಳ್ಳಗಾಗಿ ನಾಲ್ಕು ಮಕ್ಕಳಾಗಿ, ಅವರ ಮದುವೆ ಮಾಡಿಸಿದರೂ ಇಲ್ಲಿಯವರೆಗೆ ನಮ್ಮ ಸಮಸ್ಯೆ ಮಾತ್ರ ಬಗೆಹರಿದಿಲ್ಲ.
 ಬಸವರಾಜ, ಗ್ರಾಮದ ನಿವಾಸಿ

„ಎಂ.ಡಿ ಮಶಾಖ್

Advertisement

Udayavani is now on Telegram. Click here to join our channel and stay updated with the latest news.

Next