Advertisement

ಸೌಲಭ್ಯ ವಂಚಿತ ಗಡಿಭಾಗ

11:31 AM Aug 15, 2017 | |

ಚಿಂಚೋಳಿ: ತಾಲೂಕಿನ ಗಡಿಭಾಗ ತೆಲಗಾಂಣಕ್ಕೆ ಹೊಂದಿಕೊಂಡಿರುವ ತಾಲೂಕಿನ ಕುಂಚಾವರಂ ವ್ಯಾಪ್ತಿಯಲ್ಲಿ ಬರುವ ಗಡಿ ಗ್ರಾಮಗಳಲ್ಲಿ ವಾಸಿಸುವ ದಲಿತ ಮತ್ತು ಬುಡಕಟ್ಟು ಕುಟುಂಬಗಳು ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿವೆ. ತಾಲೂಕು ಕೇಂದ್ರ ಸ್ಥಾನದಿಂದ 40ಕಿಮೀ ದೂರದಲ್ಲಿ ಕುಂಚಾವರಂ, ವೆಂಕಟಾಪುರ, ಶಾದೀಪುರ ಗ್ರಾಮ ಪಂಚಾಯತ ಕೇಂದ್ರ ಸ್ಥಾನಗಳಿವೆ. ಕುಂಚಾವರಂ ಗಡಿಭಾಗದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಇರುವ ಮರಾಠಿಗರು, ಮಾದಿಗರು, ಕ್ರಿಶ್ಚಿಯನ್‌ರು, ದಾಸರು, ಬುಡಗ ಜಂಗಮರು ಹಾಗೂ ಬುಡಕಟ್ಟು ಜನಾಂಗದವರು ಈ ಭಾಗದಲ್ಲಿ ಅನೇಕ ತಲೆಮಾರಿನಿಂದ ವಾಸಿಸುತ್ತಾ ಬಂದಿದ್ದಾರೆ. ಕೆಲವರು ಕೂಲಿ ಕೆಲಸ ಮತ್ತು ಭಿಕ್ಷೆ ಭೇಡಿ ಸಂಸಾರ ನಡೆಸುವಂತಹ ಬಡ ಕುಟುಂಬಗಳು ಇಲ್ಲಿವೆ. 1993-94ರಲ್ಲಿ ಅ ಧಿಕಾರ ವಿಕೇಂದ್ರಿಕರಣ
ಆದ ನಂತರ ಗ್ರಾಮೀಣ ಜನರಿಗೆ ಸಿಗಬೇಕಾಗಿರುವ ಸೌಲಭ್ಯಗಳಾದ ಗೃಹ ನಿರ್ಮಾಣ, ಸಾಲ-ಸೌಲಭ್ಯ, ಹೈನುಗಾರಿಕೆ, ಪಶುಭಾಗ್ಯ, ಕೃಷಿಹೊಂಡ, ವಿಧವಾ ವೇತನ,ಅಂಗವಿಕಲ, ವೃದ್ಧಾಪ್ಯ, ಸಂಧ್ಯಾ ಸುರಕ್ಷಾ ಯೋಜನೆ ಮತ್ತು ಪರಿಶಿಷ್ಟ ಜಾತಿ ಕಾಲೋನಿಗಳಿಗೆ ಮೂಲ ಸೌಕರ್ಯ ಒದಗಿಸಬೇಕಾಗಿರುವುದು ಸರಕಾರ ಮತ್ತು ಜನಪ್ರತಿನಿಧಿ ಗಳ ಕರ್ತವ್ಯವಾಗಿದೆ. ಇಲ್ಲಿ ಕೆಳವರ್ಗದ ಜನರಿಗೆ ವಾಸಿಸುವುದಕ್ಕೆ ಪಕ್ಕಾ ಮನೆಗಳಿಲ್ಲ. ಇನ್ನು ಕೆಲವು ಕಡೆ ಗುಡಿಸಲು ಮನೆಗಳಲ್ಲಿಯೇ ಜನರು ವಾಸವಾಗಿದ್ದಾರೆ. ಗಡಿಭಾಗದ ತೆಲಗು ಭಾಷೆ ಮನೆ ಮಾತಾಗಿರುವದರಿಂದ ಕೆಲವರಿಗೆ ಕರ್ನಾಟಕ ರಾಜ್ಯ ಸರಕಾರದಿಂದ ಯಾವ ಯೋಜನೆಗಳಿವೆ ಎಂಬುದೇ ಜನರಿಗೆ
ಇನ್ನು ತಿಳಿಯುತ್ತಿಲ್ಲ. ಹೀಗಾಗಿ ದಲಿತ ವರ್ಗ, ದಾಸರ ಬುಡಗ ಜಂಗಮ ಮತ್ತು ಮರಾಠಿಗರು ಸೌಲಭ್ಯ ವಂಚಿತರಾಗಿದ್ದಾರೆ.
ಕುಂಚಾವರಂ ಗಡಿ ಪ್ರದೇಶದಲ್ಲಿ 17 ತಾಂಡಾ, 11 ಗ್ರಾಮಗಳಿವೆ. 30,561ಜನಸಂಖ್ಯೆ ಇದ್ದು, ಒಟ್ಟು 6,842 ಮನೆಗಳಿವೆ. ಕುಂಚಾವರಂ, ಮಗದಂಪೂರ, ಶಿವರಾಮಪೂರ, ಶಿವರೆಡ್ಡಿಪಳ್ಳಿ, ಪೋಚಾವರಂ, ಲಚಮಾಸಾಗರ, ಶಿವರೆಡ್ಡಿಪಲ್ಲಿ, ವಂಟಿಚಿಂತಾ, ಅಂತಾವರಂ, ಲಿಂಗಾನಗರ, ಬೋನಸಪುರ, ಜಿಲವರ್ಷ, ವೆಂಕಟಾಪುರ ಗ್ರಾಮಗಳಲ್ಲಿ ದಲಿತ ವರ್ಗದವರು ಇನ್ನು ಗುಡಿಸಲಲ್ಲೇ ಜೀವನ ಸಾಗಿಸುವಂತಾಗಿದೆ. ಸರಕಾರ ಗ್ರಾಪಂ ವತಿಯಂದ ರಾಜೀವ ಗಾಂಧಿ ವಸತಿ ಯೋಜನೆ, ಬಸವ ವಸತಿ ಯೋಜನೆ ಅಡಿಯಲ್ಲಿ ಮನೆಗಳನ್ನು ಮಂಜೂರಿಗೊಳಿಸುವಂತೆ ಆದೇಶಿಸಿದೆ. ಆದರೆ ಇಲ್ಲಿ ಹಣ ಕೊಟ್ಟವರಿಗೆ ಮನೆ ಮಂಜೂರಾಗುತ್ತದೆ. ಹಣ ಇಲ್ಲದವರನ್ನು
ಯಾರೂ ಕೇಳುವವರೇ ಇಲ್ಲದಂತಾಗಿದೆ. ದಲಿತ, ದಾಸರ, ಬುಡಗ ಜಂಗಮ ಜೀವನಮಟ್ಟ, ಆರ್ಥಿಕ ಸುಧಾರಣೆ ಯಾವಾಗ ಆಗುತ್ತದೆಯೋ ಎಂದು ಕಾಯ್ದು ನೋಡಬೇಕಿದೆ.

Advertisement

ಶಾಮರಾವ ಚಿಂಚೋಳಿ 

Advertisement

Udayavani is now on Telegram. Click here to join our channel and stay updated with the latest news.

Next