Advertisement

ಅಂಗವಿಕಲ ಮಹಿಳೆ ಮನೆಗೇ ಬಂತು ಸೌಲಭ್ಯ

02:13 PM Jun 07, 2019 | Suhan S |

ಗೋಕಾಕ: ಸರಕಾರಿ ಅಧಿಕಾರಿಗಳ ಹೃದಯದಲ್ಲಿ ಮಾನವೀಯತೆ ಇದ್ದರೆ ನಿರ್ಗತಿಕರ ಕಣ್ಣೀರಿಗೆ ಪರಿಹಾರ ನಿಶ್ಚಿತ ಎನ್ನುವ ಹೃದಯ ಮಿಡಿಯುವ ಘಟನೆ ಗುರುವಾರ ನಡೆದಿದೆ.

Advertisement

ನಗರದ ಲಕ್ಷ್ಮೀ ಬಡಾವಣೆಯ ಸಣ್ಣ ಮನೆಯಲ್ಲಿ ಎರಡೂ ಕಾಲು ಇಲ್ಲದ ಅಂಗವಿಕಲ ಮಹಿಳೆ ಮಾಯಕ್ಕ ಅಭಿಜಿತ ಡೋಬಳೆ ತನ್ನ ಅತ್ತೆ ಕಸ್ತೂರಿ ಲಕ್ಷ್ಮಣ ಡೋಬಳೆ ಜೊತೆ ತನ್ನ ಎರಡು ಮಕ್ಕಳ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಈ ಮಹಿಳೆಯ ಪತಿ ಬಿಟ್ಟು ಹೋಗಿದ್ದರಿಂದ ಕುಟುಂಬಕ್ಕೆ ತುತ್ತು ಅನ್ನಕ್ಕೂ ಗತಿಯಿಲ್ಲದಂತಾಗಿತ್ತು. ಅತ್ತೆ ಬೇರೆಯವರ ಮನೆ ಕಸ ಮುಸುರೆ ಮಾಡಿದ ಹಣದಲ್ಲಿಯೇ ಜೀವನ ಸಾಗಿಸುತ್ತಿದ್ದರು. ಈ ಅಂಗವಿಕಲ ಮಹಿಳೆಗೆ ಸರಕಾರದಿಂದ ಸಿಗುವ ಯಾವ ಸೌಲಭ್ಯವೂ ಇರಲಿಲ್ಲ. ಹೀಗಾಗಿ ಈಕೆ ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ಮನವಿ ಸಲ್ಲಿಸಿ ತನ್ನ ದುಃಖ ತೋಡಿಕೊಂಡಿದ್ದಳು.

ಇದಕ್ಕೆ ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿ ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿಗೆ ಕ್ರಮ ಕೈಗೊಳ್ಳಲು ತಿಳಿಸಿದಾಗ ಅವರು ಕೂಡಲೇ ಈ ಅಂಗವಿಕಲ ಮಹಿಳೆಯ ಮನೆಗೆ ಹೋಗಿ ಪರಿಶೀಲನೆ ನಡೆಸಿ ಅವಶ್ಯಕ ಕ್ರಮ ಕೈಗೊಳ್ಳಲು ಬೈಲಹೊಂಗಲ ಉಪವಿಭಾಗಾಧಿಕಾರಿಗೆ ಆದೇಶ ನೀಡಿದ್ದರು.

ಈ ಆದೇಶದನ್ವಯ ಬೈಲಹೊಂಗಲ ಉಪವಿಭಾಗಾಧಿಕಾರಿ ಎಂ.ಪಿ. ಮಾರುತಿ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರ ಜೊತೆ ಭೇಟಿ ನೀಡಿ ಈ ಮಹಿಳೆಗೆ ಅಂಗವಿಕಲ ಮಾಸಾಶನ, ಅತ್ತೆಗೆ ಸಂಧ್ಯಾ ಸುರಕ್ಷಾ ಮಾಸಾಶನ, ಪಡಿತರ ಚೀಟಿ ಸ್ಥಳದಲ್ಲಿಯೇ ಮಂಜೂರು ಮಾಡಿದರಲ್ಲದೇ, ಅಂಗವಿಕಲೆಯ 6 ವರ್ಷದ ಮಗನಿಗೆ ಬಿಸಿಎಂ ವಸತಿ ನಿಲಯದಲ್ಲಿ ಪ್ರವೇಶ ದೊರಕಿಸಿಕೊಟ್ಟರು. ನಗರಸಭೆಯಿಂದ ಮನೆ ನೀಡುವಂತೆ ಸೂಚನೆ ನೀಡಿದರು. ಇದಲ್ಲದೇ ಅಂಗವಿಕಲೆಯ ಪತಿ ಆಗಾಗ ಬಂದು ಕಿರುಕುಳ ನೀಡುತ್ತಿರುವ ಬಗ್ಗೆ ದೂರಿದ್ದರಿಂದ ಅವಶ್ಯ ಕ್ರಮ ಕೈಗೊಳ್ಳುವಂತೆಯೂ ಉಪವಿಭಾಗಾಧಿಕಾರಿ ಕಟ್ಟುನಿಟ್ಟಿನ ಆದೇಶ ನೀಡಿದರು. ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗೋಪಾಲ ವಾಘಮೋಡೆ, ನಗರಸಭೆ ಪೌರಾಯುಕ್ತ ವಿ.ಎಸ್‌.ತಡಸಲೂರ, ತಾಲೂಕಾ ಬಿಸಿಎಂ ಅಧಿಕಾರಿ ಆರ್‌.ಕೆ.ಬಿಸಿರೊಟ್ಟಿ, ಆಹಾರ ಇಲಾಖೆಯ ಉಪತಹಶೀಲದಾರ ಎಂ.ಬಿ.ಚೌಧರಿ, ಕಂದಾಯ ನಿರೀಕ್ಷಕ ಎಸ್‌.ಬಿ. ಕಟ್ಟೀಮನಿ ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next