Advertisement

ಅನ್ನದ ಅಗುಳಿನಲ್ಲಿ ಅಜ್ಜನ ಮುಖ ಕಂಡಂತಾಗಿ…

12:30 AM Jun 12, 2018 | |

“ನಾನೂ ನಿಮ್ಮೆಲ್ಲರ ಜೊತೆ ಕೂತು ಊಟ ಮಾಡ್ಬೇಕು ಅನ್ನೋದಾದ್ರೆ – ಪುಳಿಯೊಗರೆ, ಚಿತ್ರಾನ್ನ ತರಬೇಡಿ. ಕಡ್ಲೆಬೀಜ, ಚಕ್ಲಿ ಮುರುಕು ತಿನ್ನಬೇಕು ಅನ್ನೋರು, ದಯವಿಟ್ಟು ಹತ್ತು ನಿಮಿಷ ಆಚೆ ಹೋಗಿ ಅಲ್ಲೇ ತಿನ್ಕೊಂಡು ಬನ್ನಿ. ಹಾಗೆ ಮಾಡದೆ ಛೇಂಬರಿನಲ್ಲಿ ಕುಳಿತೇ ಕಟುಂ, ಕರುಂ ಅನ್ನಿಸ್ತಾ ಇದ್ರೆ ನನಗೆ ತಲೆಚಿಟ್ಟು ಹಿಡಿಯುತ್ತೆ. ದಯವಿಟ್ಟು ಅರ್ಥ ಮಾಡ್ಕೊಳ್ಳಿ’ – ಸುಬ್ಬುಕೃಷ್ಣ ನಿಷ್ಠುರವಾಗಿಯೇ ಹೀಗೆ ಹೇಳಿಬಿಟ್ಟ. ಅವನ ಮಾತು ಕೇಳಿದ ಗೆಳೆಯರು ಕ್ಷಣ ಬೆಪ್ಪಾದರು. ಮರುಕ್ಷಣವೇ ಸಾವರಿಸಿಕೊಂಡು- “ಸುಬ್ಬಣ್ಣಾ, ಹೀಗೆಲ್ಲಾ ಕಂಡೀಷನ್ಸ್‌ ಹಾಕಿದ್ರೆ ಹೇಗಪ್ಪಾ? ಮನೇಲಿ ಏನು ಹಾಕಿಕೊಡ್ತಾರೋ, ಅದನ್ನಷ್ಟೇ ಬಾಕ್ಸ್‌ ಅಂತ ತಗೊಂಡರ್ತೀವಿ. ಇಂಥ ತಿಂಡಿಯೇ ಬೇಕು, ಇಂತಿಂಥದು ಬೇಡ ಎಂದೆಲ್ಲಾ ಮನೇಲಿ ಹೇಳಲು ಆಗಲ್ಲ’ ಅಂದರು.  

Advertisement

ಈ ಮಾತಿಗೆ ಉತ್ತರವೆಂಬಂತೆ ಸುಬ್ಬುಕೃಷ್ಣ ಮತ್ತದೇ ಖಂಡತುಂಡ ದನಿಯಲ್ಲಿ ಹೇಳಿಬಿಟ್ಟ: “ಹಾಗಾದ್ರೆ ನನ್ನನ್ನು ಬಿಟ್ಟು ಊಟ ಮಾಡಿ. ನೋ ಪ್ರಾಬ್ಲಿಂ…’  
ಕಾರ್ಪೊರೇಟ್‌ ಕಂಪನಿಯೊಂದರಲ್ಲಿ ಎಂಟು ಜನರಿಂದ ಕೂಡಿದ್ದ ಸೆಕ್ಷನ್‌ ನಮ್ಮದು. ಕಾರ್ಪೊರೇಟ್‌ ಕಂಪನಿ ಅಂದಮೇಲೆ ಕೇಳಬೇಕೆ? ಅಲ್ಲಿ, ಸಿಕ್ಕಾಪಟ್ಟೆ ಕೆಲಸ. ಊಟದ ವೇಳೆಯಲ್ಲಿ, ಬಾಕ್ಸ್‌ನಲ್ಲಿ ತಂದಿದ್ದನ್ನು ಎಲ್ಲರೂ ಷೇರ್‌ ಮಾಡಿಕೊಳ್ಳುತ್ತಿದ್ದೆವು. ವಿಪರೀತ ಕೆಲಸದ ಕಾರಣಕ್ಕೆ, ಬಹುಬೇಗನೆ ಸುಸ್ತಾಗುತ್ತಿತ್ತು. ಹಸಿವಾಗುತ್ತಿತ್ತು. ಹೋಟೆಲಿಗೆ ಹೋದರೆ ಟಾರ್ಗೆಟ್‌ ರೀಚ್‌ ಆಗಲು ಟೈಂ ಸಿಗುವುದಿಲ್ಲ ಅಂದು ಕೊಂಡು ಕಡ್ಲೆಬೀಜ, ಚಕ್ಲಿಮುರುಕಿನ ಪ್ಯಾಕ್‌ಗಳನ್ನು ಎಲ್ಲರೂ ಸ್ಟಾಕ್‌ ಇಟ್ಟುಕೊಂಡಿದ್ದರು. ಕಾಫಿಯ ವೇಳೆಯಲ್ಲಿ ಎಲ್ಲರೂ ಸ್ನ್ಯಾಕ್ಸ್‌ ಅನ್ನೂ ಷೇರ್‌ ಮಾಡಿಕೊಳ್ಳುತ್ತಿದ್ದರು. ಆರು ತಿಂಗಳ ಹಿಂದಷ್ಟೇ ನಮ್ಮ ಸೆಕ್ಷನ್‌ಗೆ ಸೇರಿ, ಎಲ್ಲರಿಗೂ ಕೊÉàಸ್‌ ಆಗಿದ್ದ ಸುಬ್ಬುಕೃಷ್ಣ ಇದ್ದಕ್ಕಿದ್ದಂತೆ- ಪುಳಿಯೊಗರೆ, ಚಿತ್ರಾನ್ನ ತರಬೇಡಿ. ಆಫೀಸಲ್ಲಿ ಕುಳಿತು ಕಡ್ಲೆಬೀಜ, ಚಕ್ಲಿ ಮುರುಕು ತಿನ್ನಬೇಡಿ ಎಂದು ಆರ್ಡರ್‌ ಮಾಡಿಬಿಟ್ಟಿದ್ದ.

ಒಬ್ರು ಹೇಳಿದಂತೆಯೇ ಬದುಕೋಕೆ ಆಗುತ್ತಾ? ಪುಳಿಯೊಗರೆ, ಚಿತ್ರಾನ್ನ ಬಿಟ್ಟು ಬದುಕುವುದಾದ್ರೂ ಹೇಗೆ ಎಂದುಕೊಂಡು ಮೂರು ಜನ ಆ ತಿಂಡಿಗಳನ್ನೇ ತಂದರು. ವಿಷಯ ಗೊತ್ತಾದದ್ದೇ- “ಸಾರಿ ಫ್ರೆಂಡ್ಸ್‌, ನಾನು ಹೊರಗಡೆ ಊಟ ಮಾಡ್ತೇನೆ’ ಎನ್ನುತ್ತಾ ಸುಬ್ಬುಕೃಷ್ಣ  ಹೋಗಿಯೇ ಬಿಟ್ಟ. ಸಂಜೆ ಕಾಫಿಯ ವೇಳೆಯಲ್ಲಿ ಅಭ್ಯಾಸಬಲದಂತೆ ಕಡ್ಲೆಬೀಜದ ಪ್ಯಾಕೆಟ್‌ ತೆಗೆದರೆ, ತಕ್ಷಣವೇ ಮುಖ ಗಂಟಿಕ್ಕಿಕೊಂಡು ಹೊರಗೆ ಹೋಗಿಬಿಟ್ಟ. ನಂತರದ ದಿನಗಳಲ್ಲಿ ಅವನ ವರ್ತನೆ ಮತ್ತೂ ವಿಕೋಪಕ್ಕೆ ಹೋಯಿತು. ಬೆಳಗ್ಗೆ ಬಂದವನೇ- ಯಾರ್ಯಾರು ಏನೇನ್‌ ತಂದಿದೀರ? ಎಂದು ವಿಚಾರಿಸುತ್ತಿದ್ದ. ಯಾರಾದರೂ ಚಿತ್ರಾನ್ನ/ ಪುಳಿಯೊಗರೆ ಅಂದರೆ ಸಾಕು: “ಮಧ್ಯಾಹ್ನ ಊಟಕ್ಕೆ ನಾನು ಆಚೆ ಹೋಗ್ತೀನೆ’ ಎಂದು ನೇರವಾಗಿ ಹೇಳಿಬಿಡುತ್ತಿದ್ದ.

ಇಡೀ ದಿನ ನಾವೆಲ್ಲಾ ಒಟ್ಟಿಗೇ ಕೆಲಸ ಮಾಡುತ್ತಿದ್ದೆವು. ಯಾವುದೇ ಪ್ರಾಜೆಕ್ಟ್ ಅಂದರೂ, ಅದರಲ್ಲಿ ಎಂಟೂ ಜನರ ಶ್ರಮ ಇರುತ್ತಿತ್ತು. ಹಾಗಾಗಿ, ಊಟದ ವೇಳೆಯಲ್ಲಿ, ಕಾಫಿಯ ಸಮಯದಲ್ಲಿ ಅವನು ಜೊತೆಗಿಲ್ಲದಿದ್ದರೆ ಕಸಿವಿಸಿಯಾಗುತ್ತಿತ್ತು. ಕೆಲವರಂತೂ- ನಾವಿಲ್ಲಿ ರುಚಿರುಚಿಯಾದ ಹೋಂ ಫ‌ುಡ್‌ ತಿಂತಾ ಇದೀವಿ. ಸುಬ್ಬು, ಹೋಟೆಲಲ್ಲಿ ಸೋಡಾ ಹಾಕಿರೋ ಊಟ ತಿಂದು ಒದ್ದಾಡ್ತಾ ಇದಾನೇನೋ ಅಂದು “ಅಪರಾಧಿಪ್ರಜ್ಞೆ’ ಹೆಚ್ಚುವಂತೆ ಮಾಡುತ್ತಿದ್ದರು. ಈ ಮಧ್ಯೆಯೇ ಮತ್ತೂಂದಿಬ್ಬರು ಪತ್ತೇದಾರಿಕೆ ನಡೆಸಿ- ಆರು ತಿಂಗಳ ಹಿಂದೆ ನಡೆದ ಬೈಕ್‌ ಆ್ಯಕ್ಸಿಡೆಂಟ್‌ನಲ್ಲಿ ಸುಬ್ಬುಗೆ ಮುಂದಿನ ಹಲ್ಲುಗಳೆಲ್ಲ ಮುರಿದಿವೆಯಂತೆ. ಈಗ ಇರೋದು ಡೂಪ್ಲಿಕೇಟ್‌ ಹಲ್ಲುಗಳಂತೆ. ಗಟ್ಟಿ ಪದಾರ್ಥವನ್ನು ಅಗಿಯೋಕೆ ಅವರಿಂದ ಸಾಧ್ಯವಿಲ್ಲವಂತೆ. ಅದೇ ಕಾರಣಕ್ಕೆ, ಬೇರೆಯವರು ತಿನ್ನೋದನ್ನು ಕಂಡರೂ ಸಹಿಸಿಕೊಳ್ಳಲು ಆಗ್ತಿಲ್ವಂತೆ ಅಂದರು. ಮತ್ತಿಬ್ಬರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ – “ನಾನು ತಿನ್ನದೇ ಇರೋದನ್ನು ಬೇರೆಯವರೂ ತಿನ್ನಬಾರ್ಧು ಎಂಬಂಥ ಮನೋಭಾವ ಕೆಲವರಿಗೆ ಇರುತ್ತೆ. ಬಹುಶಃ ಸುಬ್ಬುಗೆ ಕೂಡ ಇದೇ ಪ್ರಾಬ್ಲಿಂ ಇರಬೇಕು ಅನಿಸುತ್ತೆ’ ಅಂದುಬಿಟ್ಟರು. ಆದರೂ, ಸುಬ್ಬುವನ್ನು ಬಿಟ್ಟು ಕೆಲಸ ಮಾಡುವುದಾಗಲಿ, ಅವನನ್ನು ಬಿಟ್ಟು ಊಟ ಮಾಡುವುದಾಗಲಿ ನಮ್ಮಿಂದ ಸಾಧ್ಯವಿರಲಿಲ್ಲ. ಅಷ್ಟರಮಟ್ಟಿಗೆ ಅವನು ನಮ್ಮೆಲ್ಲರನ್ನೂ ಆವರಿಸಿಕೊಂಡಿದ್ದ.

ಒಂದು ಪ್ರಾಜೆಕ್ಟ್‌ನ ಕಾರಣಕ್ಕೆ, ಸುಬ್ಬುವಿನೊಂದಿಗೆ ಕೋಲ್ಕತ್ತಾಕ್ಕೆ ಹೋಗಬೇಕಾಗಿ ಬಂತು. ಕೋಲ್ಕತ್ತಾದಲ್ಲಿ, ದುರ್ಬೀನು ಹಾಕಿ ಹುಡುಕಿದರೂ ದಕ್ಷಿಣ ಭಾರತದ ತಿಂಡಿಗಳು, ಅದರಲ್ಲೂ ಚಿತ್ರಾನ್ನ, ಪುಳಿಯೊಗರೆ, ಚಕ್ಲಿ ಮುರುಕು, ಕೋಡುಬಳೆಗಳು ಸಿಗುತ್ತಿರಲಿಲ್ಲ. ಇದೇ ಕಾರಣಕ್ಕೋ ಏನೋ; ಸುಬ್ಬು ತುಸು ಹೆಚ್ಚೇ ಕ್ಲೋಸ್‌ ಆಗಿ ಮಾತಾಡತೊಡಗಿದ. ಚಿತ್ರಾನ್ನ-ಪುಳಿಯೊಗರೆ ಅಂದರೆ ಅಷ್ಟೊಂದು ದ್ವೇಷವೇಕೆ ಎಂದು ಕೇಳಲು ಇದೇ ಸಕಾಲ ಅನ್ನಿಸಿತು. ಅದೊಂದು ಭಾನುವಾರ, ಸಂಜೆ ಟೀ ಕುಡಿದು ಹರಟೆಗೆ ಕೂತಿದ್ದಾಗ ಇದ್ದಕ್ಕಿದ್ದಂತೆ ಕೇಳಿಬಿಟ್ಟೆ: “ಸುಬ್ಬು, ತಪ್ಪು ತಿಳ್ಕೊàಬೇಡಿ. ಪುಳಿಯೊಗರೆ-ಚಿತ್ರಾನ್ನ ಅಂದ್ರೆ; ಕುರುಕಲು ತಿಂಡಿ ಅಂದ್ರೆ ಯಾಕ್ರೀ ನಿಮಗೆ ಸಿಟ್ಟು?’

Advertisement

ಅದುವರೆಗೂ ಖುಷ್‌ಖುಷಿಯಾಗಿ ಮಾತಾಡುತ್ತಿದ್ದ ಸುಬ್ಬುವಿನ ಮುಖಭಾವ ದಿಢೀರನೆ ಬದಲಾಯಿತು. ಛೇರನ್ನು ಸ್ವಲ್ಪ ದೂರಕ್ಕೆ ಎಳೆದುಕೊಂಡು, ಬೇರೊಂದು ದಿಕ್ಕಿಗೆ ತಿರುಗಿ ಕುಳಿತು ಅವನು ಮಾತಾಡತೊಡಗಿದ:

“ನಮ್ಮ ಅಪ್ಪ, ಕುಟುಂಬದ ಏಕೈಕ ಸಂತಾನ. ಅವರಿಗೆ ಒಳ್ಳೆಯ ಕೆಲಸವಿತ್ತು. ಹೆತ್ತವರ ಮೇಲೆ ಅಪಾರ ಪ್ರೀತಿಯಿತ್ತು. ಹಾಗಾಗಿ, ಹೆತ್ತವರನ್ನೂ ತಮ್ಮೊಂದಿಗೇ ಉಳಿಸಿಕೊಂಡರು. ನಾನು ಗಮನಿಸಿದಂತೆ, ಅಪ್ಪನೂ- ತಾತನೂ ಫ್ರೆಂಡ್ಸ್‌ ಥರಾ ಇದ್ರು. ಒಬ್ಬರಿಗೊಬ್ಬರು ತಮಾಷೆ ಮಾಡಿಕೊಂಡು, ಸುಳ್‌ಸುಳ್ಳೇ ಸಿಟ್ಟು ಮಾಡಿಕೊಂಡು, ಒಂದರ್ಧ ಗಂಟೆ ಮುನಿಸಿಕೊಂಡು, ಆಮೇಲೆ ಇಬ್ಬರಲ್ಲೊಬ್ಬರು- ಆಯ್ತು ಬಿಡಪ್ಪಾ, ನೀನೇ ಗೆದ್ದೆ. ನೀನು ಹೇಳಿದ್ದೇ ರೈಟ್‌… ಅನ್ನುತ್ತಾ ರಾಜಿಯಾಗಿಬಿಡುತ್ತಿದ್ದರು. ಇಂಥ ಸಂದರ್ಭದಲ್ಲಿ ಅಕಸ್ಮಾತ್‌ ಅಮ್ಮ ಎಂಟ್ರಿ ಕೊಟ್ಟರೆ, ಇದ್ದಕ್ಕಿದ್ದಂತೆ ಅಪ್ಪ-ತಾತನ ಮಾತು ನಿಂತು ಹೋಗುತ್ತಿತ್ತು. ಅಪ್ಪ, ಏನನ್ನೋ ಮರೆತವರಂತೆ ಎದ್ದು ಒಳಮನೆಗೆ ಹೋಗಿಬಿಡುತ್ತಿದ್ದರು. ಅಮ್ಮ, ಇಬ್ಬರನ್ನೂ ಒಮ್ಮೆ ತಿರಸ್ಕಾರದಿಂದ ನೋಡಿ ಏನೋ ಗೊಣಗುತ್ತಿದ್ದಳು.

ಅದೇನು ಕಾರಣವೋ – ಅಮ್ಮ ಪದೇಪದೆ ಚಿತ್ರಾನ್ನ, ಪುಳಿಯೊಗರೆ ಮಾಡುತ್ತಿದ್ದಳು. ಏಕಾದಶಿ, ಷಷ್ಠಿಯ ನೆಪದಲ್ಲಿ ವಾರದಲ್ಲಿ ನಾಲ್ಕು ದಿನ ಆ ತಿಂಡಿಗಳು ಕಡ್ಡಾಯವಾಗಿ ಇರುತ್ತಿದ್ದವು. ಆಫೀಸಿಗೆ ಹೊರಡುವ ಮುನ್ನ- “ಬಾರಪ್ಪಾ ಜೊತೇಲಿ ತಿಂಡಿ ತಿನ್ನೋಣ’ ಎಂದು ಅಪ್ಪ ಕರೆದರೆ- “ಹಸಿವಾಗ್ತಿಲ್ಲ ಮಗಾ. ಆಮೇಲೆ ತಿಂತೀನಿ. ನೀನು ತಿಂದು ಹೋಗು’ ಅನ್ನುತ್ತಾ ವರಾಂಡಕ್ಕೆ ಅಥವಾ ಕೈತೋಟಕ್ಕೆ ಹೋಗಿಬಿಡುತ್ತಿದ್ದರು ತಾತ. ಅಲ್ಲಿ ಅವರಿಗಾಗಿಯೇ ಅಜ್ಜಿ ಕಾದಿರುತ್ತಿದ್ದಳು. ತಾತ-ಅಜ್ಜಿ ಇಬ್ಬರೂ, ಅಪ್ಪನೊಂದಿಗೆ ಮಾತಾಡಿದಷ್ಟು ಖುಷಿಯಿಂದ ಅಮ್ಮನೊಂದಿಗೆ ಮಾತಾಡುವುದನ್ನು ನಾನು ನೋಡಲೇ ಇಲ್ಲ.

ಮತ್ತೂಂದು ಸೂಕ್ಷ್ಮ ಸಂಗತಿಯನ್ನೂ ನಾನು ಗಮನಿಸಿದ್ದೆ: ಅಕಸ್ಮಾತ್‌ ತಾತ-ಅಜ್ಜಿ, ಬಂಧುಗಳ ಮನೆಗೆ ಹೋದರೆ, ಆ ದಿನಗಳಲ್ಲಿ ಪೂರಿ, ಪಲಾವ್‌, ಚೌಚೌ ಬಾತ್‌, ಪೊಂಗಲ್‌, ಬಿಸಿಬೇಳೆ ಬಾತ್‌… ಹೀಗೆ ಅಮ್ಮ ಮಾಡುತ್ತಿದ್ದ ತಿಂಡಿಗಳ ಲಿಸ್ಟು ದಿಢೀರ್‌ ಬದಲಾಗುತ್ತಿತ್ತು. ಅದೊಮ್ಮೆ ಕುತೂಹಲದಿಂದಲೇ ಕೇಳಿಬಿಟ್ಟೆ: “ಅಜ್ಜಿ-ತಾತ ಇರುವಾಗ್ಲೂ ಈ ಥರದ ತಿಂಡೀನೆಲ್ಲ ಮಾಡಾºರೆªàನಮ್ಮ?’ ಈ ಪ್ರಶ್ನೆ ಕೇಳಿ ಅಮ್ಮನಿಗೆ ಸಿಟ್ಟು ಬಂತು. “ಅಹಹಹ, ನನಗೇ ಬುದ್ಧಿ ಹೇಳುವಷ್ಟು ಬೆಳೆದುಬಿಟ್ಯಾ? ಎಲಿÅಗೂ ಬೇಯಿಸಿ ಹಾಕೋದೊಳಗೆ ಹೆಣ ಬಿದ್ದುಹೋಗುತ್ತೆ ನಂಗೆ. ಹೋಗಿ ತೆಪ್ಪಗೆ ಹೋಂ ವರ್ಕ್‌ ಮಾಡ್ಕೊ. ಮೈ ಬಗ್ಗಿಸಿ ಓದು. ಅದು ಬಿಟ್ಟು ಹೀಗೆಲ್ಲಾ ಮಾತಾಡಲು ಬಂದ್ರೆ, ಎಚ್‌.ಎಂ.ಗೆ ಕಂಪ್ಲೆಂಟ್‌ ಮಾಡ್ತೀನಿ’ ಅಂದುಬಿಟ್ಟಳು. ಅಮ್ಮನಿಗೆ ಎದುರು ಮಾತಾಡಿದರೆ, ಜಗಳವೇ ಆಗಿಬಿಡುತ್ತಿತ್ತು. ಹಾಗಾಗಿ, ಅಪ್ಪನೂ ಸೇರಿದಂತೆ, ಯಾರೂ ಅಮ್ಮನ ವಿರುದ್ಧ ಮಾತಾಡುತ್ತಿರಲಿಲ್ಲ.

ಅವತ್ತು ಶನಿವಾರ. ನಾನು ಸ್ಕೂಲಿನಿಂದ ಬರುವುದರೊಳಗೆ ಅಮ್ಮ ಎಲ್ಲಿಗೋ ಹೊರಟು ನಿಂತಿದ್ದಳು. ಹೊರಡುವ ಮುನ್ನ, ಎದುರು ಮನೆಯವರೊಂದಿಗೆ ಗುಟ್ಟು ಎಂಬಂತೆ ಹೇಳುತ್ತಿದ್ದಳು: “ಟೈಂ ಟೈಂಗೆ ಬಿಸಿಬಿಸಿಯಾಗಿ ಮಾಡಿ ಹಾಕ್ತೀನಿ ಕಣ್ರಿ. ನಿನ್ನೆ ಚಿತ್ರಾನ್ನ, ಇವತ್ತು ಮೇಲ್ಕೋಟೆ ಪುಳಿಯೊಗರೆ. ಸಂಜೆ ಟೈಂಗೆ ಚಕ್ಲಿ- ಕೋಡುಬಳೆ. ಆದ್ರೂ ತಿನ್ನಲ್ಲ ಅಂತ ಜಂಭ ಹೊಡೀತಾರೆ. ನಾನೇನು ಮಾಡೋಕಾಗುತ್ತೆ? ತುತ್ತು ಕಲಸಿ ಬಾಯಿಗೆ ಇಡೋಕೆ ಆಗುತ್ತಾ? ಅವರೇನು ಸಣ್ಣ ಮಕ್ಳ? ಬಿದ್ದಿರ್ಲಿ ಬಿಡಿ…’

ತಾತ-ಅಜ್ಜಿಯನ್ನು ಗುರಿಯಿಟ್ಟುಕೊಂಡೇ ಅಮ್ಮ ಈ ಮಾತು ಆಡಿದಂತೆ ತೋರಿತು. ಅವತ್ತು, ಗೆಳೆಯರೊಂದಿಗೆ ಆಟವಾಡುತ್ತಾ ಮೈಮರೆತು, ನಾನೂ ತಿಂಡಿ ತಿಂದಿರಲಿಲ್ಲ. ಮ್ಯಾಗಿ-ಮೊಸರನ್ನಗಳಿದ್ದ ಎರಡು ಬಾಕ್ಸ್‌ ಹಾಗೆಯೇ ಉಳಿದುಹೋಗಿತ್ತು. ಹೇಗಿದ್ದರೂ ಅಮ್ಮನಿಲ್ಲ. ತಾತ-ಅಜ್ಜಿಯೊಂದಿಗೆ ಹರಟೆ ಹೊಡೆಯುತ್ತಾ ತಿಂಡಿ ತಿನ್ನಬೇಕು ಎಂಬ ಲೆಕ್ಕಾಚಾರದೊಂದಿಗೇ ಅವರ ಮುಂದೆ ಕೂತೆ. ಅವರಿಬ್ಬರೂ, ಮಾತಾಡುವುದನ್ನೇ ಮರೆತವರಂತೆ ಒಂದು ಅಗುಳೂ ಉಳಿಯದಂತೆ ನನ್ನ ಬಾಕ್ಸ್‌ಗಳನ್ನು ಖಾಲಿ ಮಾಡಿದರು. ಆಗಲೇ, ಕುತೂಹಲದಿಂದ ಕೇಳಿಬಿಟ್ಟೆ: “ತಾತ, ನೀವಿಬ್ರೂ ಪುಳಿಯೊಗರೇನ, ಚಿತ್ರಾನ್ನವನ್ನ ತಿನ್ನಲ್ವಂತಲ್ಲ ಯಾಕೆ? ಹಸಿವಾಗಲ್ವಾ ನಿಮ್ಗೆ?’

ತಾತ, ನಿಟ್ಟುಸಿರು ಬಿಡುತ್ತಾ ಹೇಳಿತು: “ಹಸಿವಾಗೆ ಇರ್ತದೇನಪ್ಪಾ…. ಆಗುತ್ತೆ. ಏನ್ಮಾಡೋದು ಹೇಳು. ನಮ್ಗೆ ಇಬ್ರಿಗೂ ದವಡೆ ಹಲ್ಲುಗಳಿಲ್ಲ. ವಯಸ್ಸಾಗಿದೆಯಲ್ವ? ಹಾಗಾಗಿ ಬಿದ್ದುಹೋಗಿವೆ. ಹಾಗೂ ಹೀಗೂ ಉಳಿದಿರೋ ಹಲ್ಲುಗಳು ಅಲ್ಲಾಡ್ತಾ ಇವೆ. ಚಿತ್ರಾನ್ನದಲ್ಲಿ, ಪುಳಿಯೊಗರೆಯಲ್ಲಿ ಕಡ್ಲೆಕಾಳು, ಕಡ್ಲೆಬೀಜ ಇರುತ್ತೆ ಅಲ್ವ? ಅದು ಹಲ್ಲಿಗೆ ಸೋಕಿದರೆ ಸಾಕು; ಪ್ರಾಣ ಹೋದಷ್ಟು ನೋವಾಗುತ್ತೆ. ಇದೆಲ್ಲಾ ಗೊತ್ತಿದ್ದೂ ಚಿತ್ರಾನ್ನ ಕೊಟ್ರೆ ನಾವಾದ್ರೂ ಏನ್ಮಾಡೋದಪ್ಪ…’

ಈ ಮಾತುಗಳನ್ನು ಕೇಳುತ್ತಿದ್ದಂತೆಯೇ, ನಮ್ಮ ಮನೆಯೊಳಗಿನ ಒಟ್ಟು ಪರಿಸ್ಥಿತಿಗೆ ಒಂದು ಖಚಿತ ಅರ್ಥ ಸಿಗತೊಡಗಿತು. ಅಮ್ಮನ ಒಳಗಿದ್ದ ಕ್ರೌರ್ಯ, ಅಪ್ಪನ ದೌರ್ಬಲ್ಯ, ತಾತ-ಅಜ್ಜಿಯ ಅಸಹಾಯಕತೆ….ಎಲ್ಲವೂ ನಿಚ್ಚಳವಾಗಿ ಕಾಣತೊಡಗಿತು.       ನಂತರದ ಕೆಲವೇ ದಿನಗಳಲ್ಲಿ, ಅನಾರೋಗ್ಯದ ಕಾರಣದಿಂದ ಅಜ್ಜಿ ತೀರಿಹೋದಳು. ಸಾಯುವ ಮೊದಲು, ತಾತನನ್ನೇ ಆದ್ರìವಾಗಿ ನೋಡುತ್ತಾ, “ನಂಗೇನಾದ್ರೂ ಹೆಚ್ಚುಕಡಿಮೆ ಆದ್ರೆ ಆಮೇಲೆ ಊಟ-ತಿಂಡಿಗೆ ಏನ್ಮಾಡ್ತೀರಿ? ಮನೇಲಿ ಕಷ್ಟ ಆಗುತ್ತೆ ನಿಮ್ಗೆ. ಯಾವಾªದ್ರೂ ಆಶ್ರಮ ಸೇರಿಕೊಳ್ಳಿ’ ಅಂದಿದ್ದಳು. ತಾತ ಹಾಗೆಯೇ ಮಾಡಿದರು. ಅಪ್ಪನನ್ನು ಬಹುಬಗೆಯಲ್ಲಿ ಒತ್ತಾಯಿಸಿ, ನನ್ನನ್ನೂ ಸಮಾಧಾನ ಮಾಡಿ ವೃದ್ಧಾಶ್ರಮಕ್ಕೆ ಹೋಗಿಬಿಟ್ಟರು!

ಉಹುಂ, ಆನಂತರದಲ್ಲಾದರೂ ಅಮ್ಮ ಬದಲಾಗಲಿಲ್ಲ. ಪಶ್ಚಾತ್ತಾಪದ ಮಾತಾಡಲಿಲ್ಲ. ಅಪರಾಧಿ ಭಾವದಿಂದ ಕಂಗಾಲಾಗಲಿಲ್ಲ. ಅವರವರ ಹಣೇಲಿ ಬರೆದಂತೆ ಆಗುತ್ತೆ ಅಷ್ಟೆ ಎಂದು ತೇಲಿಸಿ ಮಾತಾಡಿದಳು. ಬುದ್ಧಿ ಹೇಳಲು ಹೋದರೆ ಭದ್ರಕಾಳಿಯಂತೆ ಜಗಳಕ್ಕೆ ನಿಲ್ಲುತ್ತಾಳೆ ಎಂದು ಗೊತ್ತಿದ್ದರಿಂದ, ನಾನಾಗಲಿ, ಅಪ್ಪನಾಗಲಿ ಅಂಥದೊಂದು ರಿಸ್ಕ್ಗೆ ಕೈ ಹಾಕಲಿಲ್ಲ. 

ಅಜ್ಜ, ಈಗಲೂ ವೃದ್ಧಾಶ್ರಮದಲ್ಲೇ ಇದ್ದಾರೆ. ಅಮ್ಮನಿಗೂ ವಯಸ್ಸಾಗಿದೆ. ಎಷ್ಟೇ ಆಗಲಿ ಅಮ್ಮ ಅಲ್ವೆ? ಅವಳಿಗೂ ಕಡೆಗಾಲದಲ್ಲಿ ಕಷ್ಟ ಬರಲಿ ಅನ್ನೋಕೆ ಮನಸ್ಸು ಒಪ್ಪುತ್ತಿಲ್ಲ. ಆದ್ರೆ- ಚಿತ್ರಾನ್ನ, ಪುಳಿಯೊಗರೆ, ಚಕ್ಲಿ ಮುರುಕು, ಕೋಡುಬಳೆ ಕಂಡಾಗೆಲ್ಲಾ – “ಹಲ್ಲುಗಳೆಲ್ಲಾ ಅಲ್ಲಾಡ್ತಾ ಇವೆ ಕಣೋ, ಒಂದು ಕಾಳು ಸೋಕಿದ್ರೂ ಜೀವ ಹೋದಷ್ಟು ನೋವಾಗುತ್ತೆ’ ಅಂದಿದ್ದ ತಾತನ ಮುಖವೇ ಕಣ್ಮುಂದೆ ಬರುತ್ತೆ. ಅಜ್ಜಿ, ಕೊರಗಿ ಕೊರಗಿಯೇ ಸತ್ತುಹೋದೆನೋ ಅನ್ನಿಸಿ ಸಂಕಟವಾಗುತ್ತೆ. ಮನೆ ತುಂಬಾ ಕಾಸಿದೆ ಸಾರ್‌. ಆದ್ರೆ ಮನಸ್ಸಿಗೆ ನೆಮ್ಮದಿ ಇಲ್ಲ…’
ಸುಬ್ಬುಕೃಷ್ಣ ಬಿಕ್ಕಳಿಸತೊಡಗಿದ….

ಎ.ಆರ್‌. ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next