ಅಮ್ಮ ಎನ್ನುವ ಪದದಲ್ಲೇ ಏನೋ ಒಂದು ಶಕ್ತಿಯಿದೆ. ಅದನ್ನು ಉಚ್ಚರಿಸಿದಾಕ್ಷಣ ನೆಮ್ಮದಿ ಕಾಣುತ್ತದೆ. ಯಾವುದೇ ನೋವನ್ನು ಅನುಭವಿಸುವಾಗಲೂ ಮೊದಲು ಹೊರಡುವ ಪದವೇ ಅಮ್ಮ. ಕರೆದಾಕ್ಷಣ ನೋವಿಗೆ ಹೆಗಲು ಕೊಡುವ ಈ ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.
ನಮ್ಮ ಮೊದಲ ಗುರು ತಾಯಿಯೇ. ಕೆಲವರಿಗೆ ತಾಯಿಯ ಪ್ರೀತಿ ಅರ್ಥವಾಗುವುದೇ ಇಲ್ಲ. ಯಾಕೆಂದರೆ ಅದು ಅರ್ಥವಾಗುವಷ್ಟು ಸರಳವೂ ಅಲ್ಲ, ಅರ್ಥ ಮಾಡಿಕೊಳ್ಳಲಾರದಷ್ಟು ಸಂಕೀರ್ಣವೂ ಅಲ್ಲ. ಒಂದು ರೀತಿಯಲ್ಲಿ ತಾಯಿಯ ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವೂ ಇಲ್ಲ. ಹೂವಿನ ಪರಿಮಳಕ್ಕೆ ಅರ್ಥ ಎಂಬುದಿದೆಯೆ? ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವೆ? ಮುಂಜಾನೆಯ ಬೆಳಗಿಗೆ ಅರ್ಥ ಎಂಬುದಿದೆಯೆ? ಅದನ್ನು ಸುಮ್ಮನೆ ನೋಡುತ್ತ ಅನುಭವಿಸಬೇಕಷ್ಟೆ. ಹಾಗೆಯೇ ತಾಯಿಯ ಪ್ರೀತಿಯೂ. ಸಂಕಟವೆನಿಸಿದಾಗ ಅಮ್ಮನ ಮಡಿಲಲ್ಲಿ ತಲೆಯಿಟ್ಟು ಸುಮ್ಮನೆ ಕುಳಿತುಕೊಳ್ಳುವುದೇ ದಾರಿ.
ಆದರೆ, ಈ ಸೃಷ್ಟಿ ವಿಚಿತ್ರ. ಕೆಲವರಿಗೆ ತಾಯಿ ಇದ್ದರೂ ಇಲ್ಲದ ಹಾಗೆ ಇರುತ್ತಾರೆ. ತಾಯಿ ಪ್ರೀತಿ ತೋರಿಸಿದರೂ ಅದನ್ನು ಒಪ್ಪಿಕೊಳ್ಳುವ ಪರಿಸ್ಥಿತಿ ಅವರಲ್ಲಿ ಇರುವುದಿಲ್ಲ. ತಮ್ಮ ಜೀವನದಲ್ಲಿ ಬೇರೆಯವರನ್ನು ಪ್ರೀತಿಸುವ ಭರದಲ್ಲಿ ತಾಯಿಯ ನೆನಪೇ ಇರುವುದಿಲ್ಲ. ಆದರೂ, ಕೊನೆಗೆ ಕಾಯುವುದು ತಾಯಿಯ ಪ್ರೀತಿಯೇ.
ಜೀವನದಲ್ಲಿ ಯಾವುದೇ ಆಗಿರಬಹುದು ಜೊತೆಗಿದ್ದಾಗ ನಮಗೆ ಅದರ ಬೆಲೆ ಗೊತ್ತಾಗುವುದಿಲ್ಲ. ಅದನ್ನು ಕಳೆದುಕೊಂಡ ಮೇಲೆ ಅದರ ಬೆಲೆ ಎಂಥಾದ್ದು, ಎಷ್ಟು ಮಹತ್ವದ್ದು ಅಂತ ತಿಳಿಯುತ್ತದೆ. ತಾಯಿ ಪ್ರೀತಿಸದೇ ಇದ್ದರೆ ನಮ್ಮ ಸ್ಥಿತಿ ಏನಾಗಬಹುದು, ಊಹಿಸಿಕೊಳ್ಳಿ.
ತಾಯಿ ಜೊತೆಗೆ ಇಲ್ಲದಿದ್ದಾಗ ತಾಯಿ ಬೇಕು ಅಂತ ಅನಿಸುತ್ತದೆ. ಆದರೆ, ಇದ್ದಾಗ ಯಾಕಿದ್ದಾರೆ ಅಂತನೂ ಅನಿಸುತ್ತದೆ. ತಾಯಿ ನಮ್ಮನ್ನು ಬೈಯ್ಯುವುದು ನಾವು ತಪ್ಪು ಮಾಡಿದಾಗ. ಆದರೆ, ಅದನ್ನೇ ನಾವು ತಪ್ಪಾಗಿ ಭಾವಿಸುತ್ತೇವೆ. ಏನೇ ಹೇಳಿ, ತಾಯಿಯ ಋಣ ಅದೆಷ್ಟು ಜನ್ಮ ಹುಟ್ಟಿ ಬಂದರೂ ಕೂಡ ತೀರಿಸಲು ಸಾಧ್ಯವಿಲ್ಲ.
-ರೋಶ್ನಿ
ದ್ವಿತೀಯ ಬಿ.ಕಾಂ.
ಮಿಲಾಗ್ರಿಸ್ ಕಾಲೇಜ್, ಕಲ್ಯಾಣಪುರ