ಬೆಂಗಳೂರು: ರಾಜ್ಯದ 13 ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಸರ್ಕಾರಿ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರ ಸ್ಥಾನಕ್ಕೆ ಲಾಬಿ ಆರಂಭವಾಗಿದ್ದು, ನೇಮಕಾತಿ ಪ್ರಕ್ರಿಯೆ ನಡೆಸಲು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರವೂ ಮುಂದಾಗಿದೆ. ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ಗೆ ನಾಮನಿರ್ದೇಶಿತ ಸ್ಥಾನಗಳಿಗೆ ನೇಮಕಾತಿ ನಡೆಯಲಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೇಮಿಸಿದ್ದ ಸಿಂಡಿಕೇಟ್ ನಾಮನಿರ್ದೇಶಿತ ಸದಸ್ಯರ ನೇಮಕವನ್ನು ಬಳಿಕ ಅಸ್ತಿತ್ವಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರದ್ದುಗೊಳಿಸಿ ಹೊಸ ನೇಮಕಾತಿ ಮಾಡಿತ್ತು. ಸಮ್ಮಿಶ್ರ ಸರ್ಕಾರ ಪತನಕ್ಕೂ ಕೆಲವೇ ದಿನಗಳ ಮೊದಲು ಈ 13 ವಿವಿಗಳಿಗೆ ಸರ್ಕಾರದ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿ ಅದೇಶ ಹೊರಡಿಸಿದ್ದರು.
ಸಿಎಂ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೈತ್ರಿ ಸರ್ಕಾರದ ಆದೇಶ ರದ್ದುಪಡಿಸಲು ಸೂಚಿಸಿದ್ದರು. ಅದರಂತೆ 13 ವಿವಿಗಳ ಸರ್ಕಾರಿ ನಾಮನಿರ್ದೇಶಿತ ಸದಸ್ಯರ ಆಯ್ಕೆ ರದ್ದು ಮಾಡಲಾಗಿದೆ. ಸರ್ಕಾರದ ಆದೇಶ ಬರುವ ವರೆಗೂ ನೇಮಕಾತಿ ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಖಾಲಿಯಿರುವ ಸ್ಥಾನಗಳು: ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ಕೇಂದ್ರ ವಿವಿಯಲ್ಲಿ 6, ಬೆಂಗಳೂರು ಉತ್ತರ ವಿವಿಯಲ್ಲಿ 5, ಮೈಸೂರು ವಿವಿಯಲ್ಲಿ 6, ಮಂಗಳೂರು ವಿವಿಯಲ್ಲಿ 6, ತುಮಕೂರು ವಿವಿಯಲ್ಲಿ 6, ದಾವಣಗೆರೆ ವಿವಿ ಯಲ್ಲಿ 5, ಧಾರವಾಡದ ಕರ್ನಾಟಕ ವಿವಿಯಲ್ಲಿ 6, ಬೆಳಗಾವಿ ರಾಣಿ ಚೆನ್ನಮ್ಮ ವಿವಿಯಲ್ಲಿ 6, ವಿಜಯಪುರ ಅಕ್ಕಮಹಾದೇವಿ ವಿವಿಯಲ್ಲಿ 6, ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವ ವಿವಿಯಲ್ಲಿ 5, ಕಲ ಬುರಗಿಯ ವಿವಿಯಲ್ಲಿ 6, ಶಿವಮೊಗ್ಗ ಕುವೆಂಪು ವಿವಿ ಯಲ್ಲಿ 5 ನಾಮನಿರ್ದೇಶಿತ ಹುದ್ದೆ ಸೇರಿದಂತೆ ಒಟ್ಟು ರಾಜ್ಯದ 13 ವಿಶ್ವವಿದ್ಯಾಲಯಗಳ 74 ಸರ್ಕಾರಿ ನಾಮ ನಿರ್ದೇಶಿತ ಸಿಂಡಿಕೇಟ್ ಸದಸ್ಯರ ಸ್ಥಾನ ಖಾಲಿ ಇದೆ.
ಹುದ್ದೆಗಾಗಿ ಲಾಬಿ: ರಾಜ್ಯದ 13 ವಿವಿಗಳಲ್ಲಿ ಖಾಲಿ ಇರುವ 74 ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರ ಸ್ಥಾನಗಳಿಗೆ ನೇಮಕಾತಿ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗದೇ ಇದ್ದರೂ, ಹುದ್ದೆಗಾಗಿ ಲಾಬಿಯಂತೂ ಪ್ರಾರಂಭವಾಗಿದೆ. ವಿದ್ಯಾರ್ಥಿ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಹಾಗೂ ಆಡಳಿತ ಪಕ್ಷದ ಜತೆಗೆ ಉತ್ತಮ ಸಂಬಂಧ ಹೊಂದಿರುವ ಶೈಕ್ಷಣಿಕ ವಲಯದ ಕೆಲವು ಪ್ರಮುಖರು ಸಿಂಡಿಕೇಟ್ ಸದಸ್ಯರ ಸ್ಥಾನಕ್ಕೆ ಲಾಬಿ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.
ಸಚಿವ ಸಂಪುಟ ರಚನೆಯ ನಂತರ ಉನ್ನತ ಶಿಕ್ಷಣ ಸಚಿವರು ಯಾರಾಗುತ್ತಾರೆ ಎಂಬುದನ್ನು ನೋಡಿಕೊಂಡು, ಸಿಂಡಿಕೇಟ್ ಸದಸ್ಯರ ನೇಮಕ ಪ್ರಕ್ರಿಯೆ ನಡೆಸಲು ಸಿದ್ಧತೆಯೂ ಅಗಿದೆ. ಪ್ರತಿ ವಿಶ್ವವಿದ್ಯಾಲಯದಲ್ಲೂ ಸರ್ಕಾರದ 6 ಹಾಗೂ ರಾಜ್ಯಪಾಲರ 2 ನಾಮನಿರ್ದೇಶಿತ ಸದಸ್ಯರು ಸಿಂಡಿಕೇಟ್‌ನಲ್ಲಿ ಇರುತ್ತಾರೆ. ವಿವಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಬೇಕಾದರೂ ಸಿಂಡಿಕೇಟ್ ಸಭೆ ಕರೆಯಲೇಬೇಕು.
ಸಿಂಡಿಕೇಟ್ ಸಭೆಯ ನಿರ್ಧಾರವೇ ಅಂತಿಮವಾಗಿರುತ್ತದೆ. ಸರ್ಕಾರದ ನಾಮನಿರ್ದೇಶಿತ ಸದಸ್ಯರು ಸಭೆಯಲ್ಲಿ ಪರೋಕ್ಷವಾಗಿ ಸರ್ಕಾರದ ಪರವಾಗಿಯೇ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತಾರೆ. ಸಿಂಡಿಕೇಟ್ ಸದಸ್ಯರು ಶೈಕ್ಷಣಿಕವಾಗಿ ಎಲ್ಲ ರೀತಿಯ ಅರ್ಹತೆ ಹೊಂದಿರಬೇಕು ಎಂಬುದನ್ನು ಸರ್ಕಾರ ಅರ್ಥಮಾಡಿಕೊಂಡು, ನೇಮಕಾತಿ ನಡೆಸಿದರೆ ಉತ್ತಮ ಎಂದು ವಿಶ್ರಾಂತ ಕುಲಪತಿಯೊಬ್ಬರು ಹೇಳುತ್ತಾರೆ.
ಹಿಂದಿನ ಸರ್ಕಾರದ ನೇಮಿಸಿದ್ದ 6 ಸಿಂಡಿಕೇಟ್ ಸದಸ್ಯರ ನೇಮಕಾತಿ ಯನ್ನು ಈ ಸರ್ಕಾರದ ಆದೇಶದಂತೆ ರದ್ದಾಗಿದೆ. ಆದರೆ, ಹೊಸ ನೇಮಕಾತಿ ಯಾಗುವವರೆಗೂ ಈ ಸಂಬಂಧ ಯಾವುದೇ ಪ್ರಕ್ರಿಯೆ ನೀಡಲು ಸಾಧ್ಯವಿಲ್ಲ. ಸರ್ಕಾರದ ಆದೇಶದಂತೆ ನಾವು ಸೇವೆ ಸಲ್ಲಿಸುತ್ತೇವೆ.
-ಪ್ರೊ.ಕೆ.ಆರ್.ವೇಣುಗೋಪಾಲ್, ಕುಲಪತಿ ಬೆಂಗಳೂರು ವಿವಿ
* ರಾಜು ಖಾರ್ವಿ ಕೊಡೇರಿ