Advertisement
ಸಾಮಾನ್ಯ ಶಸ್ತ್ರ ಚಿಕಿತ್ಸಾ ವಿಧಾನಗಳಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ವಿಶ್ವದಾದ್ಯಂತ ಪ್ರತಿ ವರ್ಷ 9.5 ದಶ ಲಕ್ಷಕ್ಕೂ ಹೆಚ್ಚು ಮಂದಿಗೆ ನಡೆಸಲಾಗುತ್ತದೆ. ಭಾರತದಲ್ಲಿ 60 ವರ್ಷ ಮೇಲ್ಪಟ್ಟವರಲ್ಲಿ ಸುಮಾರು ಶೇ.74ರಷ್ಟು ಮಂದಿಗೆ ಕಣ್ಣಿನ ಪೊರೆ ಸಮಸ್ಯೆ ಅಥವಾ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುತ್ತಾರೆ. ಕಣ್ಣಿನ ಪೊರೆಯ ಸಮಸ್ಯೆ ಹೆಚ್ಚಾಗಿ ಮಹಿಳೆಯರನ್ನೇ ಬಾಧಿಸುತ್ತಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
Related Articles
Advertisement
ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯ ಅನಂತರ ರೋಗಿಗಳಿಗೆ ಸಮೀಪದ ದೃಷ್ಟಿಗೆ ಕನ್ನಡಕದ ಅಗತ್ಯವಿರುತ್ತದೆ. ಸಾಂಪ್ರದಾಯಿಕ ಕೃತಕ ಇಂಟ್ರಾಓಕ್ಯುಲರ್ ಮಸೂರಗಳು ಈಗ ಸಾಮಾನ್ಯವಾಗಿ ಅಕ್ರಿಲಿಕ್ ಪಾಲಿಮರ್‌ಗಳಿಂದ ಮಾಡಲ್ಪಡುತ್ತಿವೆ. ಆದರೂ ಮನುಷ್ಯರ ಮಸೂರಗಳಂತೆ ವಿಭಿನ್ನ ದೂರದಲ್ಲಿ ಸ್ಪಷ್ಟ ದೃಷ್ಟಿಗೆ ಅನುವು ಮಾಡಿಕೊಡಲು ಆಕಾರವನ್ನು ಬದಲಾಯಿಸಲು ಇವುಗಳಿಗೆ ಸಾಧ್ಯವಾಗಿಲ್ಲ. ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ಅನಂತರ ದೃಷ್ಟಿಯು ಸಹಜ ಸ್ಥಿತಿಗೆ ಬರಲು ಹಲವು ವಾರಗಳು ಬೇಕಾಗುತ್ತವೆ. ಈ ಅವಧಿಯಲ್ಲಿ ಕಣ್ಣಿನಿಂದ ನಿರ್ದಿಷ್ಟ ದೂರದಲ್ಲಿ ಸ್ಪಷ್ಟವಾದ ಚಿತ್ರವನ್ನು ಆಯ್ಕೆ ಮಾಡಲು ಮತ್ತು ಇನ್ನೊಂದು ಕಣ್ಣಿನಿಂದ ಚಿತ್ರವನ್ನು ದೂರವಾಗಿಸಲು ಮೆದುಳು ಕಲಿಯುತ್ತದೆ.
ಇತಿಹಾಸ: ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಕ್ರಿಸ್ತ ಪೂರ್ವ 600 ರಿಂದ 800ರಲ್ಲಿ ಸುಶ್ರುತ ಎಂಬಾತ ಮಾಡಿದ್ದನು ಎನ್ನಲಾಗುತ್ತದೆ. ಅವನು ಕಣ್ಣಿನ ಪೊರೆಯ ಚಿಕಿತ್ಸೆಯನ್ನು ಮಾಡಿ, ಅದರ ಬಗ್ಗೆ ಬರೆದಿದ್ದಾನೆ ಎಂದು ಪ್ರಾಚೀನ ಭಾರತೀಯ ಶಾಸ್ತ್ರದಲ್ಲಿನ ನೇತ್ರ ಸಾಹಿತ್ಯವು ಹೇಳುತ್ತದೆ.
ನೇತ್ರ ವಿಜ್ಞಾನಿ, ಜೂಲಿಯಸ್ ಹಿರ್ಶ್ ಬರ್ಗ್ ಪ್ರಕಾರ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಯಾರು ಮೊದಲು ನಡೆಸಿದ್ದಾರೆ ಎಂಬುದನ್ನು ಇಲ್ಲಿಯವರೆಗೆ ಖಚಿತಪಡಿಸಲು ಸಾಧ್ಯವಾಗಿಲ್ಲ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯು ಒಂದೇ ಸ್ಥಳದಲ್ಲಿ ಪ್ರಾರಂಭವಾಯಿತು ಮತ್ತು ಪ್ರಪಂಚದಾದ್ಯಂತ ಹರಡಿತು ಎನ್ನುವುದಕ್ಕಿಂತ ಇದು ಸ್ವತಂತ್ರವಾಗಿ ಅನೇಕ ಬಾರಿ ಮತ್ತು ಅನೇಕ ಸ್ಥಳಗಳಲ್ಲಿ ನಡೆದಿದೆ ಎನ್ನಲಾಗುತ್ತದೆ.
ಕಣ್ಣಿನ ಮಸೂರ ಒಂದು ಯಾಂತ್ರಿಕ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಮಸೂರವು ಕಂಪಿಸುವ ದ್ರವ್ಯರಾಶಿಯಾದರೆ ಅದನ್ನು ಆಧರಿಸುವ ಸಣ್ಣ ಸ್ನಾಯುಗಳು ವ್ಯವಸ್ಥೆಯ ಬಿಗಿತವನ್ನು ನಿರ್ಧರಿಸುತ್ತವೆ ಮತ್ತು ಜತೆಯಲ್ಲಿ ಕಂಪಿಸುವ ಜೈವಿಕ ಕಂಪನ ವ್ಯವಸ್ಥೆಯಾಗುತ್ತದೆ. ಈ ವ್ಯವಸ್ಥೆಯ ವಿಶ್ಲೇಷಣೆಯಿಂದ ಇದರ ಗುಣಗಳನ್ನು ತಿಳಿಯಬಹುದು.
-ರಾಮ ಭಟ್, ಕೆನಡಾ