Advertisement

ಹೆಚ್ಚುವರಿ ಶುಲ್ಕ ದಂಧೆಗೆ ಬಿದ್ದಿಲ್ಲ ಕಡಿವಾಣ

06:15 AM Jul 24, 2018 | Team Udayavani |

ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿ ಕಾಲೇಜಿನ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಶುಲ್ಕದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ, ಕಾಲೇಜು ಆಡಳಿತ ಮಂಡಳಿಗಳು ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ದಂಧೆಗೆ ಇನ್ನೂ ಕಡಿವಾಣ ಬಿದ್ದಿಲ್ಲ.

Advertisement

ಕಾಲೇಜಿನ ನೋಂದಣಿ ಶುಲ್ಕ, ಪರೀಕ್ಷಾ ಶುಲ್ಕ ಮತ್ತು ಕ್ರೀಡಾ ಅಭಿವೃದ್ಧಿ ಶುಲ್ಕಗಳನ್ನು ಆಯಾ ವಿಶ್ವವಿದ್ಯಾಲಯ ನಿಗದಿ ಪಡಿಸುತ್ತದೆ. ಉಳಿದಂತೆ ಅರ್ಜಿ ಶುಲ್ಕ, ಬೋಧನಾ ಶುಲ್ಕ, ಪ್ರವೇಶ ಶುಲ್ಕ, ಪ್ರಯೋಗಾಲಯ ಶುಲ್ಕ, ಗ್ರಂಥಾಲಯ ಶುಲ್ಕ ಸೇರಿ 15 ಬಗೆಯ ಶುಲ್ಕಗಳನ್ನು ಕಾಲೇಜು ಶಿಕ್ಷಣ ಇಲಾಖೆ ನಿಗದಿ ಮಾಡುತ್ತದೆ.

ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಕಾಲೇಜುಗಳಿಗೆ 2017-18ನೇ ಸಾಲಿನಲ್ಲಿ ಕಾಲೇಜು ಶಿಕ್ಷಣ
ಇಲಾಖೆ ನಿಗದಿಪಡಿಸಿರುವ ಶುಲ್ಕವೇ 2018-19ನೇ ಸಾಲಿಗೂ ಅನ್ವಯವಾಗುತ್ತದೆ. ಕಾರಣ, ಪ್ರಸಕ್ತ ಸಾಲಿನಲ್ಲಿ ಶುಲ್ಕ ಪರಿಷ್ಕರಣೆ ಅಥವಾ ಮರು ನಿಗದಿಯಾಗಿಲ್ಲ. ಕಳೆದ ವರ್ಷದ ಶುಲ್ಕ ಪದ್ಧತಿಯನ್ನೇ ಅನುಸರಿಸುವಂತೆ ಎಲ್ಲ ಕಾಲೇಜಿನ ಪ್ರಾಂಶುಪಾಲರಿಗೂ ಇಲಾಖೆ ಈಗಾಗಲೇ ನಿರ್ದೇಶಿಸಿದೆ.

ಇಷ್ಟಾದರೂ, ಅನುದಾನಿತ ಮತ್ತು ಅನುದಾನ ರಹಿತ ಪದವಿ ಕಾಲೇಜಿನ ಆಡಳಿತ ಮಂಡಳಿಗಳು ಬೋಧನಾ ಶುಲ್ಕ ಹಾಗೂ ಕಾಲೇಜು ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಸಾವಿರಾರು ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಡೆಯುತ್ತಿವೆ.

ಬೋಧನಾ ಶುಲ್ಕ 940 ರೂ., ಪ್ರಯೋಗಾಲಯ ಶುಲ್ಕ 260 ರೂ., ಎನ್‌ಎಸ್‌ಎಸ್‌ ಶುಲ್ಕ 50 ರೂ.ಸೇರಿ ಒಟ್ಟು 1920 ರೂ. ಶುಲ್ಕದ ಜತೆಗೆ ವಿವಿಗಳು ನಿಗದಿ ಮಾಡುವ 3 ವಿಧದ ಶುಲ್ಕ ಮಾತ್ರ ಕಾಲೇಜು ಆಡಳಿತ ಮಂಡಳಿ ಪಡೆಯ ಬೇಕು. ಆದರೆ, ಈ ನಿಯಮವನ್ನು ಬಹುತೇಕ ಕಾಲೇಜುಗಳು ಅನುಸರಿಸುತ್ತಿಲ್ಲ.

Advertisement

ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜು ಆಡಳಿತ ಮಂಡಳಿಗಳು ಸರ್ಕಾರ ನಿಗದಿಪಡಿಸಿರುವ ಬೋಧನಾ ಶುಲ್ಕ 940 ರೂ. ಜತೆಗೆ ಹೆಚ್ಚುವರಿಯಾಗಿ 940 ರೂ.ಪಡೆಯಲು ಅವಕಾಶವಿದೆ. ಆದರೆ, ಬೇರ್ಯಾವ ಶುಲ್ಕ ಹೆಚ್ಚುವರಿಯಾಗಿ ಪಡೆಯಲು ಕಾನೂನಿನಡಿ ಅನುಮತಿಯಿಲ್ಲ.ಸರ್ಕಾರಿ ಕಾಲೇಜುಗಳಲ್ಲಿ ಇದು ಕಟ್ಟು ನಿಟ್ಟಾಗಿ ಜಾರಿಯಾಗುತ್ತದೆ. ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳು ತಮ್ಮದೇ ಆದ ಶುಲ್ಕ ನಿಗದಿ ಮಾಡಿಕೊಳ್ಳುತ್ತವೆ. ಕೋರ್ಸ್‌ಗಳು ಮತ್ತು ವಿದ್ಯಾರ್ಥಿಗಳ ಬೇಡಿಕೆಯ ಆಧಾರದಲ್ಲಿ ವರ್ಷದಿಂದ ವರ್ಷಕ್ಕೆ ಶುಲ್ಕ ದುಪ್ಪಟ್ಟಾಗುತ್ತಿರುತ್ತದೆ.

ವಾಣಿಜ್ಯ ವಿಭಾಗದ ಬಿಕಾಂ, ಬಿಬಿಎಂ ಹಾಗೂ ಬಿಬಿಎ ಕೋರ್ಸ್‌ಗಳಿಗೂ ಪ್ರತ್ಯೇಕ ಶುಲ್ಕ ನಿಗದಿ ಮಾಡಲಾಗುತ್ತದೆ. ಬಿ.ಎಸ್ಸಿ, ಬಿಸಿಎ ಇತ್ಯಾದಿ ಕೋರ್ಸ್‌ಗಳಿಗೂ ಪ್ರಯೋಗಾಲಯ ಮತ್ತು ಬೋಧನಾ ಶುಲ್ಕದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತದೆ.

ಸರ್ಕಾರದಿಂದ ಕ್ರಮ ಇಲ್ಲ: ಖಾಸಗಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ನಿಗದಿತ ಶುಲ್ಕಕ್ಕಿಂತಲೂ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಸರ್ಕಾರ ಹಾಗೂ ಕಾಲೇಜು ಶಿಕ್ಷಣ ಇಲಾಖೆಗೆ ಮಾಹಿತಿ ಇದೆ. ಆದರೆ, ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.ಕಾರಣ, ಹೆಚ್ಚುವರಿ ಶುಲ್ಕಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಗಳಿಂದ ಅಥವಾ ವಿದ್ಯಾರ್ಥಿ ಪಾಲಕ,
ಪೋಷಕರಿಂದ ಯಾವುದೇ ದೂರು ಇಲಾಖೆಗೆ ಹೋಗುವುದಿಲ್ಲ. ದೂರು ಬಂದಿಲ್ಲ ಎಂಬ ನೆಪವೊಡ್ಡಿ ಇಲಾಖೆಯಿಂದ ಹೆಚ್ಚುವರಿ ಶುಲ್ಕದ ಪರಿಶೀಲನೆಯೂ ಮಾಡುವುದಿಲ್ಲ ಎಂದು ನೊಂದ ಪಾಲಕರು ಆರೋಪಿಸಿದರು.

ಪ್ರತಿ ಕಾಲೇಜಿನಲ್ಲೂ ಶುಲ್ಕ ನಿಯಂತ್ರಣಕ್ಕೆ ವಿದ್ಯಾರ್ಥಿಗಳು, ಪಾಲಕ, ಪೋಷಕರು, ಶಿಕ್ಷಣ ತಜ್ಞರು ಹಾಗೂ ಉಪನ್ಯಾಸಕರನ್ನು ಒಳಗೊಂಡ ಸಮಿತಿ ರಚನೆ ಮಾಡಬೇಕು. ಶುಲ್ಕ ನಿಯಂತ್ರಣ ಕಾನೂನನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮೇಲೂಸ್ತು ವಾರಿಯೂ ಇದೇ ಸಮಿತಿಗೆ ನೀಡಿದಾಗ ಹೆಚ್ಚುವರಿ ಶುಲ್ಕಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಆಲ್‌ ಇಂಡಿಯಾ ಸ್ಟೂಡೆಂಟ್‌ ಡೆಮಾಕ್ರಟಿಕ್‌ ಆರ್ಗನೈಸೇಷನ್‌ ರಾಷ್ಟ್ರೀಯ ಉಪಾಧ್ಯಕ್ಷ ವಿ.ಎನ್‌.ರಾಜಶೇಖರ್‌ ಮಾಹಿತಿ ನೀಡಿದರು.

ಶುಲ್ಕ ನಿಯಮವೇನು? ಕಾಲೇಜು ಅಭಿವೃದ್ಧಿ ಸಮಿತಿ ಹೆಸರಿನಲ್ಲಿ ವಿದ್ಯಾರ್ಥಿಯಿಂದ ಪ್ರವೇಶ ಸಂದರ್ಭದಲ್ಲಿ 150ರೂ.ನಿಂದ 600 ರೂ.ಗಳ ವರೆಗೂ ವರ್ಷಕ್ಕೊಮ್ಮೆ ಸಂಗ್ರಹಿಸಬಹುದು. ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ ಚಟುವಟಿಕೆ, ಕಾಲೇಜು ಪತ್ರಿಕೆ, ಗಂಥಾಲಯ ಹಾಗೂ ಕಾಲೇಜಿನ ಗುರುತಿನ ಚೀಟಿ ಸಂಬಂಧಿಸಿದ ಶುಲ್ಕ ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಕಾಲೇಜಿನ ಸಮಿತಿ ನಿರ್ಧರಿಸಬೇಕು. ಪ್ರವೇಶ ಶುಲ್ಕ ಮತ್ತು ನೋಂದಣಿ ಶುಲ್ಕ ಪ್ರಥಮ ಪದವಿ ಸೇರುವ ವಿದ್ಯಾರ್ಥಿಗಳಿಗೆ ಮಾತ್ರ ಪಡೆಯಬೇಕು ಎಂಬುದು ಕರ್ನಾಟಕ ಶಿಕ್ಷಣ ಸಂಸ್ಥೆಗಳು(ಕಾಲೇಜು ಶಿಕ್ಷಣ) ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಖಾಸಗಿ ಹಾಗೂ ಅನುದಾನಿತ ಕಾಲೇಜುಗಳು ವಿದ್ಯಾರ್ಥಿಗಳಿಂದ ಬೋಧನಾ ಶುಲ್ಕ 940 ರೂ.ಹೆಚ್ಚುವರಿಯಾಗಿ ಪಡೆಯಬಹುದು.
ಕಾನೂನು ಉಲ್ಲಂಘಿಸಿ ಶುಲ್ಕ ವಸೂಲಿ ಮಾಡುವ ಸಂಬಂಧ ದೂರು ಬಂದರೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ.

– ಪ್ರೊ.ಎಸ್‌.ಮಲ್ಲೇಶ್ವರಪ್ಪ, ಹೆಚ್ಚುವರಿ ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next