ಯೋಗ ತಂತ್ರಗಳಲ್ಲಿ ಅತ್ಯಂತ ಪ್ರಾಚೀನವಾದ ರಾಜಯೋಗವನ್ನು ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಜಗತ್ತಿಗೆ ಉಚಿತವಾಗಿ ಕಲಿಸುತ್ತದೆ. ಇದರ ಕೇಂದ್ರ ರಾಜಸ್ಥಾನದ ಮೌಂಟ್ ಅಬು ಪರ್ವತದಲ್ಲಿದ್ದು, ಪ್ರಪಂಚದಾದ್ಯಂತ ಎಂಟೂವರೆ ಸಾವಿರ ಶಾಖೆಗಳನ್ನು ಹೊಂದಿದೆ. ಮಣಿಪಾಲದಲ್ಲಿಯೂ ಒಂದು ಶಾಖೆ ಇದೆ. ಇವರು ಪ್ರತಿವರುಷ ಮಹಾಶಿವರಾತ್ರಿಯಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಈ ಬಾರಿ ಚಿತ್ರಕಲೆ ಮತ್ತು ಶಿವಲಿಂಗ ರಚನಾ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಏರ್ಪಡಿಸಿದ್ದರು. ಪ್ರದರ್ಶನಾಂಗಣದಲ್ಲಿ ಹಿರಿ-ಕಿರಿಯರು ರಚಿಸಿದ 120ಕ್ಕೂ ಮಿಕ್ಕಿ ಕಲಾಕೃತಿಗಳಿದ್ದವು. ಇವುಗಳಲ್ಲಿ ಈಶ್ವರೀಯ ತತ್ವ ಮತ್ತು ಚಿಂತನೆಗಳಿಗೆ ಅನುಸಾರವಾಗಿ ಜಲವರ್ಣ, ಕ್ರೇಯಾನ್ ಮತ್ತು ಆಯಿಲ್ ಪೇಸ್ಟಲ್‌ಗಳಲ್ಲಿ ಬಹಳ ಅರ್ಥಪೂರ್ಣವಾಗಿ ಅಭಿವ್ಯಕ್ತಿಗೊಳಿಸಿದ್ದರು. ಸುಮಾರು ಇಪ್ಪತ್ತಕ್ಕೂ ಮಿಕ್ಕಿದ ಆವೆ ಮಣ್ಣು ಮತ್ತು ಥರ್ಮಾಕೋಲ್ ಹಾಳೆಯಿಂದ ತಯಾರಿಸಿದ ಶಿವಲಿಂಗ ಮಾದರಿಗಳಿದ್ದವು. ಇವುಗಳನ್ನು ವಿವಿಧ ಬಗೆಯ ಹಣ್ಣಿನ ಬೀಜ, ಧಾನ್ಯ, ವಿವಿಧ ಬಣ್ಣದ ಅಂಗಿ ಗುಂಡಿ, ರುದ್ರಾಕ್ಷಿ ಕಾಯಿ, ಟಿಕಲಿ, ಬಣ್ಣದ ರಿಬ್ಬನ್‌ಗಳು, ಪಿ.ಒ.ಪಿ. ಮತ್ತು ಕೃತಕ ಹೂಗಳೊಂದಿಗೆ ಅಲಂಕರಿಸಿ ಭಕ್ತಿ ಭಾವದೊಂದಿಗೆ ಕೌಶಲ ಮೆರೆದಿದ್ದರು. ಇದರ ಜತೆಗೆ ಸಂಸ್ಥೆಯಿಂದ ಪುಷ್ಪಲಿಂಗ, ಜಲಪ್ರಕಾಶ ಲಿಂಗ, ಹಿಮಲಿಂಗ ದರ್ಶನ, ಆಧ್ಯಾತ್ಮಿಕ ಚಿತ್ರ ಪ್ರದರ್ಶನ, ರಾಜಯೋಗ ಧ್ಯಾನ ಅನುಭೂತಿ, ಸಮೂಹ ನೃತ್ಯ,
ಧ್ಯಾನ ಮತ್ತು ಏಕಾಗ್ರತೆ ಶಕ್ತಿ ಪರೀಕ್ಷಿಸಿಕೊಳ್ಳುವ ಸಾಧನ, ಗ್ಲೂ ಮತ್ತು ಗ್ಲೋ ಆರ್ಟ್ ಖ್ಯಾತಿಯ ವಿನಯ
ಹೆಗಡೆ ಅವರಿಂದ ಗಾಳಿಯಲ್ಲಿ ಚಿತ್ರ ಬರೆಯುವ “”ಕಾಸ್ಮಿಕ್ ಸ್ಪಾಷ್” ಎನ್ನುವ ವಿನೂತನ ಪ್ರಾತ್ಯಕ್ಷಿಕೆಗಳಿದ್ದವು.
ಹೀಗೆ ಮನಸ್ಸಿಗೆ ಮುದ ನೀಡುವ ಸುಂದರ ಹಸಿರು ಪ್ರಕೃತಿಯ ಮಡಿಲಲ್ಲಿ ನೂರಾರು ವೀಕ್ಷಕರಿಗೆ ಆಧ್ಯಾತ್ಮಿಕ ಜ್ಞಾನ ಸಿಂಚನದ ಜತೆಗೆ ಕಲಾ ಸಂಸ್ಕೃತಿಯ ಸವಿಯನ್ನೂ ಉಣಿಸಿದ ಈ ಸಂಸ್ಥೆ ಅಭಿನಂದನೀಯ.
ಕೆ. ದಿನಮಣಿ ಶಾಸ್ತ್ರೀ