Advertisement

Review meeting: ಎಸಿ ನ್ಯಾಯಾಲಯಗಳ ತಕರಾರು ಇತ್ಯರ್ಥಕ್ಕೆ 6 ತಿಂಗಳ ಗಡುವು: ಕೃಷ್ಣ ಬೈರೇಗೌಡ

05:23 AM Oct 10, 2024 | Team Udayavani |

ಬೆಂಗಳೂರು: ಒಂದು ವರ್ಷದಿಂದ ಎಸಿ (ಉಪ ವಿಭಾಗಾಧಿಕಾರಿ) ನ್ಯಾಯಾಲಯ ಗಳಲ್ಲಿ ತಕರಾರು ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುತ್ತಿದ್ದು, ಬಾಕಿ ಪ್ರಕರಣಗಳನ್ನೂ ಮುಂದಿನ 6 ತಿಂಗಳಲ್ಲಿ ವಿಲೇವಾರಿಗೊಳಿಸಿ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಗಡುವು ವಿಧಿಸಿದರು.

Advertisement

ವೀಡಿಯೋ ಕಾನ್ಫರೆನ್ಸ್‌ ಮೂಲಕ ಬುಧವಾರ ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಜತೆ ಎಸಿ ಕೋರ್ಟ್‌ ಗಳಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು. ಕಳೆದ ವರ್ಷ ನಾನು ಕಂದಾಯ ಇಲಾಖೆ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡ ಸಂದರ್ಭದಲ್ಲಿ ಎಸಿ ನ್ಯಾಯಾಲಯಗಳಲ್ಲಿ 73,682 ತಕರಾರು ಪ್ರಕರಣಗಳು ಬಾಕಿ ಇದ್ದವು.

ಈ ಪೈಕಿ 33,207 ಪ್ರಕರಣಗಳನ್ನು ಕೇವಲ 1 ವರ್ಷದ ಅವಧಿಯಲ್ಲಿ ಇತ್ಯರ್ಥಗೊಳಿಸಿರುವುದು ಉತ್ತಮ ಬೆಳವಣಿಗೆ. ಈ ಮೂಲಕ ರೈತರು -ಸಾರ್ವಜನಿಕರು ಅನಗತ್ಯವಾಗಿ ಸರಕಾರಿ ಕಚೇರಿಗಳಿಗೆ ಅಲೆದಾಡುವುದಕ್ಕೆ ಕಡಿವಾಣ ಹಾಕಿರುವುದು, ಹಲವು ರೈತರಿಗೆ ನ್ಯಾಯ ಒದಗಿಸಿ ನೆಮ್ಮದಿ ನೀಡಿರುವುದು ಸಾರ್ಥಕದ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಸಿ ಕೋರ್ಟ್‌ನಲ್ಲಿರುವ ತಕರಾರು ಪ್ರಕರಣಗಳನ್ನು 6 ತಿಂಗಳ ಒಳಗೆ ವಿಲೇವಾರಿಗೊಳಿಸಬೇಕು ಎಂಬುದು ಕಾನೂನು. ಈ ನಿಟ್ಟಿನಲ್ಲಿ ಸಾಗಿಬಂದ ಹಾದಿ ಸಣ್ಣದಿದ್ದು, ಕ್ರಮಿಸಬೇಕಾದ ದೂರ ಇನ್ನೂ ಸಾಕಷ್ಟಿದೆ. ಕನಿಷ್ಠ 40 ಸಾವಿರ ತಕರಾರು ಪ್ರಕರಣಗಳು ಇನ್ನೂ ಬಾಕಿ ಇವೆ. ಮುಂದಿನ 6 ತಿಂಗಳಲ್ಲಿ ಈ ಪ್ರಕರಣಗಳನ್ನೂ ಇತ್ಯರ್ಥಗೊಳಿಸಬೇಕು. ಹಲವು ಅಧಿಕಾರಿಗಳು ಇಲಾಖೆಯಲ್ಲಿ ದಕ್ಷತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವರು ಇನ್ನೂ ಟ್ರ್ಯಾಕ್‌ಗೆ ಬಂದಿಲ್ಲ. ಎಲ್ಲ ಅಧಿಕಾರಿಗಳು ಒಟ್ಟಾಗಿ ಕೈಜೋಡಿಸಿದರೆ ಬಾಕಿ ಪ್ರಕರಣಗಳಿಗೂ ಮುಕ್ತಿ ನೀಡುವುದು, ರೈತರಿಗೆ ನ್ಯಾಯ ಒದಗಿಸುವುದು ಕಷ್ಟದ ಮಾತಲ್ಲ ಎಂದು ಅವರು ತಿಳಿಸಿದರು.

ಕುಂದಾಪುರದಲ್ಲೂ ವಿಶೇಷ ನ್ಯಾಯಾಲಯ
ತಕರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಿ ರೈತರಿಗೆ ಶೀಘ್ರ ನ್ಯಾಯ ಒದಗಿಸುವ ಸಲುವಾಗಿ, ರೆಗ್ಯುಲರ್‌ ಕೋರ್ಟ್‌ಗಳ ಜತೆ ತುಮಕೂರು, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಕುಂದಾಪುರ ಸೇರಿ 11 ಜಿಲ್ಲೆಗಳಲ್ಲಿ 20ಕ್ಕೂ ಅಧಿಕ ವಿಶೇಷ ನ್ಯಾಯಾಲಯಗಳಿಗೆ ಚಾಲನೆ ನೀಡಲಾಗಿದೆ. ಈ ಮೂಲಕ ಪ್ರಕರಣಗಳ ವಿಲೇವಾರಿಗೆ ವೇಗ ನೀಡಲಾಗಿದೆ. – ಕೃಷ್ಣ ಬೈರೇಗೌಡ, ಕಂದಾಯ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next