Advertisement

ರೈತರ ನಿರೀಕ್ಷೆ ಹುಸಿಯಾಗಿಸಿದ ಮಳೆ

03:22 PM Oct 23, 2018 | Team Udayavani |

ಬಸವಕಲ್ಯಾಣ: ಎರಡು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ತೊಗರಿ ಮತ್ತು ಸೋಯಾಬಿನ್‌ ಬೆಳೆ ಸಂಪೂರ್ಣವಾಗಿ ನೀರಿನಲ್ಲಿ ತೇಲುವಂತಾಗಿತ್ತು. ಜಾನುವಾರುಗಳಿಗೆ ಮತ್ತು ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ ಈ ವರ್ಷ ನಿರೀಕ್ಷೆಗೆ ತಕ್ಕಂತೆ
ಮಳೆ ಬಾರದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಮತ್ತೆ ಬರ ಆವರಿಸಿಕೊಂಡಂತಾಗಿದೆ.

Advertisement

ಪ್ರಸಕ್ತ ಸಾಲಿನಲ್ಲಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಮುಂಗಾರು ಮತ್ತು ಹಿಂಗಾರ ಮಳೆ ಉತ್ತಮ ರೀತಿಯಲ್ಲಿ ಆಗಿಲ್ಲ. ಆರಂಭದಲ್ಲಿ ಒಂದೆರಡು ಮಳೆ ಬಿಟ್ಟರೆ, ಕೊಳವೆಬಾವಿ ಮತ್ತು ಹಳ್ಳದಲ್ಲಿ ನೀರು ಹರಿಯುವಂತೆ ಯಾವುದೇ ಮಳೆ ಬಂದಿಲ್ಲ. 

ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕಡಿಮೆಯಾಗಿದ್ದು, ತಾಲೂಕಿನ ಬಹುತೇಕ ಕೆರೆಗಳು, ಕೊಳವೆ ಬಾವಿ ಮತ್ತು ಬಾವಿಗಳಲ್ಲಿ ನೀರು ಬೇಸಿಗೆ ಆರಂಭಕ್ಕೆ ಮುನ್ನವೇ ಖಾಲಿಯಾಗುವ ಹಂತಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಹಾಗೂ ಕುಡಿಯುವ ನೀರಿನ ಸಮಸ್ಯೆ
ಉಲ್ಬಣವಾಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. 

ರೈತ ನೀರಿಕ್ಷೆ ಇಟ್ಟುಕೊಂಡ ಸೋಯಾಬಿನ್‌ ಮತ್ತು ತೊಗರಿ ಬೆಳೆಯಲ್ಲಿ ಸೋಯಾಬಿನ್‌ ಮಾತ್ರ ರೈತರ ಕೈಗೆ ಬಂದಿದೆ. ಆರ್ಥಿಕವಾಗಿ ಸಬಲರಾಗಿ ಮಾಡುವ ತೊಗರಿ ಬೆಳೆ ನೀರಿನ ತೇವಾಂಶ ಕಡಿಮೆಯಿಂದ ಬಹುತೇಕ ಕಡೆ ನೆಲಕಚ್ಚಿದೆ. ಹೂ ಚೆನ್ನಾಗಿ ಹತ್ತಿವೆ. ಆದರೆ ಒಳಗಡೆ ಕಾಯಿ ಕಟ್ಟಿಲ್ಲ. ಇದರಿಂದ ರೈತನ ನಿರೀಕ್ಷೆ ಹುಸಿಯಾದಂತಾಗಿದೆ. 

ಬೇಸಿಗೆ ಆರಂಭಕ್ಕೆ ಮುನ್ನವೇ ಗೋಕುಳ ಮತ್ತು ಕಿಟ್ಟಾ ಗ್ರಾಮದಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆ ಬಗೆಹರಿಸುವಂತೆ ರವಿವಾರ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಸರಕಾರ ಈಗಾಗಲೇ ಬಸವಕಲ್ಯಾಣ ಕ್ಷೇತ್ರವನ್ನು ಬರ ಪ್ರದೇಶ ಎಂದು ಘೋಷಣೆ ಮಾಡಿದೆ.

Advertisement

ಹೀಗಾಗಿ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಒಂದು ಸಮೀಕ್ಷೆ ಮಾಡಿ ಸರಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ತಹಶೀಲ್ದಾರ್‌ ಜಗನ್ನಾಥರೆಡ್ಡಿ ಮಾಹಿತಿ ನೀಡಿದರು.

ಒಟ್ಟಾರೆ ಮಳೆ ಜೂಜಾಟದಿಂದಾಗಿ ಈ ವರ್ಷವೂ ರೈತರು ಮತ್ತು ಸಾರ್ವಜನಿಕರು ಆತಂಕ ಪಡುವಂತ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರಕಾರ ಶೀಘ್ರವಾಗಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂಬುವುದು ರೈತರ ಆಶಯವಾಗಿದೆ.

ತಾಲೂಕು ಬರ ಪ್ರದೇಶ ಘೋಷಣೆಗೆ ಮಾತ್ರ ಸೀಮಿತವಾಗಬಾರದು. ಬದಲಾಗಿ ತೆಲಂಗಾಣ ಮಾದರಿಯಲ್ಲಿ ಪ್ರತಿ ಎಕರೆಗೆ 10 ಸಾವಿರ ರೂ. ಪರಿಹಾರ ನೀಡಬೇಕು. ಏಕೆಂದರೆ ಹಿಂದೆ ಬರ ಪ್ರದೇಶ ಘೋಷಣೆ ಮಾಡಿದ್ದರು. ಈ ವರೆಗೂ ಕೆಲ ರೈತರಿಗೆ ಪರಿಹಾರ ಬಂದಿಲ್ಲ.
 ಮಲ್ಲಿಕಾರ್ಜುನ ಸ್ವಾಮಿ ರೈತ ಸಂಘದ ಜಿಲ್ಲಾಧ್ಯಕ್ಷ

ಬಸವಕಲ್ಯಾಣ ಕೂಡ ಬರ ಪ್ರದೇಶ ಎಂದು ಸರಕಾರ ಘೋಷಣೆ ಮಾಡಿದೆ. ಹೀಗಾಗಿ ಸರಕಾರದ ಆದೇಶದ ಪ್ರಕಾರ ಸಮೀಕ್ಷೆ ನಡೆಸಿ, ಆದಷ್ಟು ಬೇಗ ವರದಿ ಸಲ್ಲಿಸಲಾಗುವುದು.
 ಜಗನ್ನಾಥರೆಡ್ಡಿ ತಹಶೀಲ್ದಾರ್‌

„ವೀರಾರೆಡ್ಡಿ ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next