Advertisement
ತುಮಕೂರು: ಬಹುತೇಕ ಬಯಲು ಸೀಮೆ ಪ್ರದೇಶವಾಗಿರುವ ಮಧುಗಿರಿಯಲ್ಲಿ ಬರದ ಬರ ಸಿಡಿಲು ಜಾನುವಾರುಗಳ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ. ದನ ಕರುಗಳನ್ನು ಸಾಕಲು ರೈತರು ಪಡಬಾರದ ಪಾಟಲು ಬೀಳುತ್ತಿದ್ದಾರೆ. ಎಲ್ಲಿ ಹೋದರೂ ಮೇವಿಲ್ಲ, ಇರುವ ನೀರು ಈ ಬೇಸಿಗೆ ಎದುರಿಸಲು ಸಾಕಾಗುವುದಿಲ್ಲ. ಮುಂದೇನು ಮಾಡುವುದೇ ಎನ್ನುವುದೇ ರೈತರ ಅಳಲಾಗಿದೆ.
Related Articles
Advertisement
ಕಳೆದ ವರ್ಷ ಭೀಕರ ಬರ ಪರಿಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ಈ ವರ್ಷ ಪೂರ್ವ ಮುಂಗಾರು ಮಳೆ ಆರಂಭವಾದರೂ ಮಳೆ ಬರದ ಹಿನ್ನೆಲೆಯಲ್ಲಿ ಕೆರೆ, ಕಟ್ಟೆ, ಹಳ್ಳ, ಕೊಳ್ಳಗಳಲ್ಲಿ ನೀರಿಲ್ಲದೇ ದನ ಕರುಗಳು ಪರಿತಪಿಸುತ್ತಿವೆ. ಈ ತಾಲೂಕಿನಲ್ಲಿ ಆರಂಭದಲ್ಲಿ ಬಂದ, ಅಲ್ಪ, ಸ್ವಲ್ಪ ಮಳೆಯಿಂದಾಗಿ, ಇಲ್ಲಿಯವರೆಗೆ ದನಕರುಗಳಿಗೆ ಅಷ್ಟು ನೀರಿನ ಸಮಸ್ಯೆ ಕಂಡು ಬರಲಿಲ್ಲ. ಈ ತಾಲೂಕಿನಲ್ಲಿ 63353 ದನ, ಎಮ್ಮೆಗಳಿಗೆ 7 ವಾರಗಳಿಗೆ ಆಗುವಷ್ಟು 2217 ಟನ್ ಮೇವು ಲಭ್ಯವಿದೆ. ತಾಲೂಕಿನ 6 ಕಡೆಗಳಲ್ಲಿ ಮೇವಿನ ಬ್ಯಾಂಕ್ ಪ್ರಾರಂಭ ಮಾಡಲಾಗಿದೆ.
ಕೊಡಿಗೇನಹಳ್ಳಿ ಪೊಲೀಸ್ ಮೈದಾನ, ಬಡವನಹಳ್ಳಿ ತೋಟಗಾರಿಕಾ ಫಾರಂ, ಮಿಡಿಗೇಶಿ ವಾಲೀಕಿ ಭವನ, ಪುರವರ ದೊಡ್ಡ ಹೊಸಹಳ್ಳಿ ಹುಣಸೇತೋಟ, ಕಸಬಾ ಎಪಿಎಮ್‌ಸಿ ಯಾರ್ಡ್, ಐಡಿಹಳ್ಳಿಯಲ್ಲಿ ಮೇವು ಬ್ಯಾಂಕ್ ಆರಂಭ ಮಾಡಲಾಗಿದೆ. ಇಲ್ಲಿಯ ಜಾನುವಾರುಗಳಿಗೆ ಅನುಗುಣವಾಗಿ ಮೇವು ಬ್ಯಾಂಕ್ ಇನ್ನು ಇದ್ದು ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು ಎನ್ನವುದು ಇಲ್ಲಿನ ರೈತರ ಒತ್ತಾಯವಾಗಿದೆ.
ಜಾನುವಾರಿಗೆ ಮೇವಿನ ಭೀಕರತೆ ಹೆಚ್ಚಲಿದೆ: ತಾಲೂಕಿನಲ್ಲಿ ಈ ವರ್ಷ ಆರಂಭದಲ್ಲಿ ಮಳೆ ಬಂದಿತು. ಆದ್ದರಿಂದ ಈ ತಾಲೂಕಿನಲ್ಲಿ ಅಲ್ಲಲ್ಲಿ ನೀರು ನಿಂತ ಪರಿಣಾಮ ಜನ, ಜಾನುವಾರುಗಳಿಗೆ ಈವರೆಗೆ ನೀರಿನ ಸಮಸ್ಯೆ ಕಂಡಿಲ್ಲ. ಆದರೆ, ದಿನೇ ದಿನೆ ಬಿಸಿಲಿನ ಬೇಗೆ ತೀವ್ರವಾಗುತ್ತಿದೆ. ಮುಂದೆ ಜಾನುವಾರುಗಳಿಗೆ ಸಂಕಷ್ಟ ಎದುರಾಗಲಿದೆ. ಮಳೆ ಇಲ್ಲದೇ ಯಾವ ರೈತರು ಬಣವೆಗಳನ್ನು ಒಟ್ಟಿ ಹುಲ್ಲು ಶೇಖರಣೆ ಮಾಡಿಕೊಂಡಿಲ್ಲ. ಅಲ್ಲಲ್ಲಿ ಅಲ್ಪ, ಸ್ವಲ್ಪ ಇದ್ದ ಮೇವನ್ನು ಮೇವರೆಗೆ ಕೆಲ ಹೋಬಳಿಗಳ ರೈತರು ಜಾನುವಾರುಗಳ ನಿಗಾ ವಹಿಸಿದ್ದರು. ಆದರೆ, ಜೂನ್ ಆರಂಭಕ್ಕೆ ಜಾನುವಾರುಗಳಿಗೆ ಮೇವಿನ ಸಮಸ್ಯೆ ಇನ್ನೂ ತೀವ್ರಗೊಳ್ಳಲಿದೆ. ಇಲಾಖೆ ಅಧಿಕಾರಿಗಳು ಹೇಳುವಂತೆ ಮುಂದಿನ 7 ವಾರಗಳ ವರೆಗೆ ಮಧುಗಿರಿ ತಾಲೂಕಿನಲ್ಲಿ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ, ಆದರೆ ಮೇ ನಂತರ ಇಲ್ಲಿಯೂ ಜಾನುವಾರುಗಳಿಗೆ ನೀರು ಮತ್ತು ಮೇವಿನ ಸಮಸ್ಯೆ ತೀವ್ರಗೊಳ್ಳುವ ಲಕ್ಷಣಗಳಿವೆ.
ನೀರಿಗೆ ತೊಟ್ಟಿ ನಿರ್ಮಾಣ: ತಾಲೂಕಿನಲ್ಲಿ ಮಳೆ ಬಾರದೆ ಭೀಕರ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಜನುವಾರುಗಳಿಗೆ ಎಲ್ಲಿಯೂ ಕುಡಿಯುವ ನೀರು ಸಿಗದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜನ ವಸತಿ ಪ್ರದೇಶದಲ್ಲಿ ಜಾನುವಾರುಗಳಿಗಾಗಿ ಕುಡಿಯವ ನೀರಿನ ತೊಟ್ಟಿಗಳನ್ನು ಮಾಡಲಾಗಿದೆ. ಒಟ್ಟಾರೆಯಾಗಿ ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಲ್ಲಿ ಸಮರ್ಪಕವಾಗಿ ಮಳೆ ಬರುತ್ತಿರಲಿಲ್ಲ. ಬರಗಾಲ ಮುಂದುವರಿದೇಯಿತ್ತು. ಆದರೆ, ಈ ವರ್ಷ ತೀವ್ರರೀತಿಯ ಬರಗಾಲ ಎದುರಾಗಿದೆ.
ಕುಡಿಯುವ ನೀರಿಗೂ ತಾತ್ವಾರ: ಮಧುಗಿರಿ ತಾಲೂಕಿನಲ್ಲಿ ಈವರೆಗೆ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಕಂಡು ಬಂದಿರಲಿಲ್ಲ. ಈ ಬಾರಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಹಿಂದೆ ಕೆರೆಗಳಲ್ಲಿ ಮಳೆ ನೀರು ನಿಂತು ಅಂತರ್ಜಲ ಹೆಚ್ಚಿಸಿದ ಪರಿಣಾಮ ಈವರೆಗೆ ಕುಡಿಯುವ ನಿರಿನ ಸಮಸ್ಯೆ ಕಂಡು ಬಂದಿರಲಿಲ್ಲ. ತಾಲೂಕಿನಲ್ಲಿ ಈ ವರ್ಷ ಹೊಸದಾಗಿ 100 ಹೊಸದಾಗಿ ಕೊಳವೆ ಬಾವಿಗಳನ್ನು ಕೊರಸಲಾಗಿದ್ದು, ಆದರೆ ಅದರಲ್ಲಿ 65 ಸಫಲಾವಗಿ 35 ಕೊಳವೆಬಾವಿಗಳು ವಿಫಲಗೊಂಡಿವೆ. ತಾಲೂಕಿನಲ್ಲ 216 ಶುದ್ಧ ಕುಡಿಯುವ ನೀರಿನ ಘಟಕ ಆಳವಡಿಸಬೇಕಾಗಿದ್ದು, ಈ ವರೆಗೆ 213 ಘಟಕಗಳನ್ನು ಆಳವಡಿಸಲಾಗಿದೆ. 211 ಘಟಕಗಳು ಕಾರ್ಯ ಆರಂಭಗೊಂಡಿವೆ. 2 ಘಟಕಗಳು ಇನ್ನು ಕಾರ್ಯಾರಂಭ ಮಾಡಬೇಕಾಗಿದೆ. ಮುಂದೆ ಇನ್ನು 50 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಸಾಧ್ಯತೆಗಳು ಇದ್ದು, ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಕ್ರಿಯಾಯೋಜನೆ ತಯಾರಿಸಲಾಗಿದೆ.
ಮಧುಗಿರಿ ಪಟ್ಟಣದಲ್ಲಿಯೂ ಕುಡಿಯುವ ನೀರಿಗೆ ತೀವ್ರ ಹಾಹಕಾರ ಉಂಟಾಗಿದೆ. ಪುರಸಭೆಯ 23 ವಾರ್ಡ್‌ಗಳ ಪೈಕಿ 2 ವಾರ್ಡ್‌ಗಳಿಗೆ 3 ದಿನಕ್ಕೆಮ್ಮೆ, ಇನ್ನ 21 ವಾರ್ಡ್‌ಗಳಿಗೆ ವಾರಕ್ಕೆ ಒಮ್ಮೆ ನೀರು ಸರಬರಾಜು ಮಾಡುತ್ತಿದ್ದಾರೆ. ಹೆಚ್ಚು ನೀರಿನ ಸಮಸ್ಯೆ ಇರುವ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಂಡು ಬರುವ ಲಕ್ಷಣಗಳಿವೆ.
ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ:
ಮಧುಗಿರಿ ತಾಲೂಕಿನ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈ ಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರು ಹತಾಶರಾಗಿಗಬೇಡಿ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮ ಗಳನ್ನು ಕೈಗೊಂಡಿದ್ದು, ಜಾನುವಾರುಗಳಿಗೆ ಮೇವನ್ನು ಪ್ರತಿ ರೈತರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದು, ಮೇವು ವಿತರಣೆಯಲ್ಲಿ ಮಧುಗಿರಿ ಮಾದರಿ ಕ್ಷೇತ್ರವಾಗಿದೆ. ಹಾಗೆಯೇ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದ್ದಾರೆ.
● ಚಿ.ನಿ. ಪುರುಷೋತ್ತಮ್