ಅರಸೀಕೆರೆ: ಎತ್ತಿನಹೊಳೆ ಏತನೀರಾವರಿ ಯೋಜನೆ ಅನುಷ್ಠಾನದಿಂದ ತಾಲೂಕಿನ ಬರಡುಭೂಮಿಯ ಕೆರೆಕಟ್ಟೆಗಳಿಗೆ ನೀರು ಹರಿಸಿದರೆ ಅಂತರ್ಜಲ ವೃದ್ಧಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಈ ಯೋಜನೆಯನ್ನು ಅತ್ಯಂತ ಶೀರ್ಘದಲ್ಲಿ ಪೂರೈಸಲು ಸರ್ಕಾರವನ್ನು ಒತ್ತಾಯಿಸಿ ಹೋರಾಟವನ್ನು ನಡೆಸಬೇಕಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.
ನಗರದ ತಾಲೂಕು ಕಚೇರಿ ಆವರಣದ ಸಭಾಂಗಣದಲ್ಲಿ ಅಂತರ್ಜಲ ನಿರ್ದೇಶನಾಲಯ ಮತ್ತು ಹಿರಿಯ ಭೂ ವಿಜ್ಞಾನಿಗಳು ಹಾಗೂ ಜಿಲ್ಲಾ ಅಂತರ್ಜಲ ಕಚೇರಿ ಸಂಯುಕ್ತ ಆಶ್ರಯದಲ್ಲಿ ಅಂತರ್ಜಲ ಸದ್ಬಳಕೆ, ಅತಿ ಬಳಕೆ ನಿಯಂತ್ರಣ, ಅಂತರ್ಜಲವೃದ್ಧಿಸುವ ಹಾಗೂ ಚಿಕ್ಕಮಕ್ಕಳು ತೆರೆದ ಕೊಳವೆ ಬಾವಿಗಳಲ್ಲಿ ಬೀಳದಂತೆ ನಿಯಂತ್ರಿಸುವ ಬಗ್ಗೆ ಏರ್ಪಡಿಸಿದ್ದ ಜನಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನೀರಿನ ಸದ್ಬಳಕೆ: ಎತ್ತಿನಹೊಳೆ ಏತನೀರಾವರಿ ಯೋಜನೆಯ ಅನುಷ್ಠಾನದಿಂದ ಮಾತ್ರ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ಮಳೆಯ ನೀರಿನಲ್ಲಿ 1 ಟಿಎಂಸಿ ನೀರು ನಮಗೆ ಹಾಯಿಸಿದರೆ ತಾಲೂಕಿನ ಎಲ್ಲಾ ಕೆರೆಕಟ್ಟೆಗಳು ತುಂಬುತ್ತವೆ. ಇದರಿಂದ ಅಂತರ್ಜಲ ವೃದ್ಧಿಯಾಗುವ ಜೊತೆಗೆ ಉತ್ತಮ ಮಳೆ ಬೆಳೆಯಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಾವು ಏತ್ತಿನಹೊಳೆ ಯೋಜನೆಯ ಅನುಷ್ಠಾನಕ್ಕಾಗಿ ಪಕ್ಷಾತೀತವಾಗಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಸನ ಸಿವಿಲ್ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ಎಚ್.ಮಂಜುನಾಥ್ ಮಾತನಾಡಿ, ಅಂತರ್ಜಲ ವೃದ್ಧಿಗಾಗಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಭೂಜಲ ಸಂಪತ್ತು ಎಂಬ ಕಿರು ಹೊತ್ತಿಗೆಯನ್ನು ಶಾಸಕರು ಬಿಡುಗಡೆಗೊಳಿಸಿದರು ತಾಪಂ ಇಒ ಎಸ್.ಪಿ.ನಟರಾಜ್, ತಹಶೀಲ್ದಾರ್ ಸಂತೋಷ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಅಂತರ್ಜಲ ಕುಸಿತ: ಜಿಲ್ಲಾ ಅಂತರ್ಜಲ ಕಚೇರಿ ಹಿರಿಯ ಭೂ ವಿಜ್ಞಾನಿ ಎಸ್.ಸುಧಾ ಮಾತನಾಡಿ, ಜೀವಸಂಕುಲಕ್ಕೆ ಅವಶ್ಯಕವಾದ ನೀರಿನ ಕೊರತೆ ಕಾಡುತ್ತಿದೆ. ಉತ್ತಮ ಮಳೆ ಬಾರದೇ ಕೆರೆಕಟ್ಟೆಗಳಲ್ಲಿ ನೀರಿಲ್ಲದ ಪರಿಣಾಮ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಆದ ಕಾರಣ ಮಳೆಯ ನೀರು ಸಂಗ್ರಹಣೆ ಮೂಲಕ ಅಂತರ್ಜಲ ವೃದ್ಧಿಗಾಗಿ ಅನೇಕ ಯೋಜನೆಗಳನ್ನು ಸರ್ಕಾರ ರೂಪಿಸಿ ಜಾರಿಗೆ ತರುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನೀರಿನ ಸದ್ಬಳಕೆ ಹಾಗೂ ನಿಯಂತ್ರಣ, ಅಂತರ್ಜಲ ವೃದ್ಧಿಗಾಗಿ ಕೈಗೊಳ್ಳಬೇಕಾದ ವಿದಿ ವಿಧಾನಗಳ ಬಗ್ಗೆ ಇಂತಹ ಶಿಬಿರಗಳ ಆಯೋಜನೆ ಮೂಲಕ ತಿಳಿಸಲಾಗುತ್ತಿದೆ ಎಂದು ಹೇಳಿದರು.
ಮನುಷ್ಯನ ದುರಾಸೆ ಫಲವಾಗಿ ಪ್ರಾಕೃತಿಕ ಸಂಪತ್ತು ಲೂಟಿಯಾಗಿದ್ದು, ಸಕಾಲಕ್ಕೆ ಮಳೆಯಾಗದೇ ಕೆರೆಕಟ್ಟೆಗಳಲ್ಲಿ ನೀರಿಲ್ಲದೇ ಕೊಳವೆ ಬಾವಿಗಳನ್ನು ಹೆಚ್ಚು ಜನರು ಕೊರೆಸುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿತವಾಗುತ್ತಿದೆ. ಕೊಳವೆಬಾವಿಗಳಲ್ಲಿ ಲಭ್ಯವಾಗುವ ನೀರು ಫ್ಲೋರೈಡ್‌ಯುಕ್ತವಾಗಿದ್ದು, ಸೇವಿಸಲು ಯೋಗ್ಯವಾಗಿಲ್ಲ.
-ಶಿವಲಿಂಗೇಗೌಡ, ಶಾಸಕ