Advertisement

ಬಸವಣ್ಣನಿಂದ ಧರ್ಮ ಸ್ಥಾಪನೆ ಅನ್ನೋದು ಸರಿಯಲ್ಲ

01:08 PM Nov 24, 2017 | Team Udayavani |

ಹುಬ್ಬಳ್ಳಿ: ಮಹಾನುಭಾವಿ ಬಸವಣ್ಣನವರು ತಮ್ಮ ವಚನಗಳಲ್ಲಿ ಎಲ್ಲಿಯೂ ಲಿಂಗಾಯತ ಎಂಬ ಶಬ್ದವನ್ನೇ ಪ್ರಸ್ತಾಪಿಸಿಲ್ಲ. ಅಂಥವರು ಲಿಂಗಾಯತ ಧರ್ಮ ಹೇಗೆ ಸ್ಥಾಪಿಸಿದರು ಎಂಬ ಬಗ್ಗೆ ಯೋಚಿಸಬೇಕಾಗಿದೆ ಎಂದು ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

Advertisement

ಹಳೇಹುಬ್ಬಳ್ಳಿ ಅಕ್ಕಿಪೇಟೆಯ ಹನ್ನೆರಡು ಮಠದಲ್ಲಿ ಗುರುವಾರ ಶ್ರೀ ಸಿದ್ಧವೀರ ಸ್ವಾಮಿಗಳ ಶಿಲಾಮೂರ್ತಿ ಹಾಗೂ ನಂದೀಶ್ವರ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಗಳು, ಬಸವಣ್ಣ ಲಿಂಗಾಯತ ಎಂದು ಹೇಳಿಲ್ಲ. ಆದರೆ ಇತ್ತೀಚೆಗೆ ಕೆಲವರು ಲಿಂಗಾಯತ ಧರ್ಮವನ್ನು ಬಸವಣ್ಣ ಸ್ಥಾಪಿಸಿದರು ಎನ್ನುತ್ತಿರುವುದು ಸೂಕ್ತವಲ್ಲ ಎಂದರು. 

ಮನಸ್ಸಿನಿಂದ ಪೂಜೆ ಮಾಡಿ, ಶಿವಯೋಗ ಮಾಡಿ ಯಾರು ದೇಹದ ಮೇಲೆ ಯಾವಾಗಲೂ ಇಷ್ಟಲಿಂಗ ಧರಿಸುತ್ತಾರೋ ಅವರನ್ನು ವೀರಶೈವ ಎಂದು ಕರೆಯಬೇಕೆಂದು ಸಿದ್ಧಾಂತ ಶಿಖಾಮಣಿ ಹೇಳುತ್ತದೆ. ಇದರರ್ಥ ಲಿಂಗ ಧರಿಸಿದವರೇ ವೀರಶೈವರು. ಪ್ರಾಚೀನ ಗ್ರಂಥದಲ್ಲಿ ಸಹ ಲಿಂಗ ಧರಿಸಿದವರು ಲಿಂಗಾಯತ ಎಂದಿಲ್ಲ.

ಸರಕಾರದ ದಾಖಲಾತಿಯಲ್ಲೂ ಹಿಂದೂ ಲಿಂಗಾಯತ, ವೀರಶೈವ ಎಂದು ನಮೂದಿಸುತ್ತ ಬರಲಾಗಿದೆ. ವೀರಶೈವ ಎಂದರೆ ಲಿಂಗಾಯತ, ಲಿಂಗಾಯತ ಎಂದರೆ ವೀರಶೈವ ಎಂದು ಪಂಚಪೀಠಗಳು ಹೇಳುತ್ತಲೇ ಬಂದಿವೆ ಎಂದು ಹೇಳಿದರು. 

ಸನಾತನ ವೀರಶೈವ ಧರ್ಮ ಅನಾದಿ ಕಾಲದಿಂದಲೂ ಬಂದಿದ್ದು, ಸಮಾಜದ ಸುಧಾರಣೆ, ಧರ್ಮ ಸಂಸ್ಕಾರ ನೀಡಿದೆ. ಹಳೇಹುಬ್ಬಳ್ಳಿಯ ಅಕ್ಕಿಪೇಟೆಯ ಹನ್ನೆರಡು ಮಠವೇ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಇನ್ನು ಸನಾತನ ವೀರಶೈವ ಧರ್ಮವು ಎಷ್ಟು ಪುರಾತನವಾದದ್ದು ಎಂಬುದು ತಿಳಿಯುತ್ತದೆ.

Advertisement

ಮಹಾರಾಷ್ಟ್ರದ ಮಲ್ಲಸ್ವಾಮಿ ಎಂಬ ಸಂತರು ತಮ್ಮ ಪರಮ ಸತ್ಯ ಗ್ರಂಥದಲ್ಲಿ ಶಿವನು ಎಷ್ಟು ಪ್ರಾಚೀನವೋ ವೀರಶೈವ ಧರ್ಮವೂ ಅಷ್ಟೇ ಪ್ರಾಚೀನವಾಗಿದೆ ಎಂದು ಹೇಳಿದ್ದಾರೆ ಎಂದರು. ವೀರಶೈವ ಧರ್ಮದ ಧಾರ್ಮಿಕ ವ್ಯವಸ್ಥೆಯು ಬೇರೆಲ್ಲೂ ಕಾಣಲು ಸಿಗಲ್ಲ. ರಾಷ್ಟ್ರೀಯ ಪಂಚಪೀಠಗಳು ದೂರವಿದ್ದರೂ ಯಾವಾಗಲೂ ಜನರ ಸಮೀಪದಲ್ಲಿರುತ್ತವೆ.

ಪ್ರತಿಯೊಂದು ಗ್ರಾಮದಲ್ಲಿ ಮಠಗಳಿದ್ದು, ಇವು ಪಂಚಪೀಠಗಳ ಶಾಖಾ ಮಠಗಳಾಗಿವೆ. ಅವು ಜನರಿಗೆ ಧರ್ಮ ಪ್ರಚಾರ, ಸಂದೇಶ ನೀಡುತ್ತಿವೆ. ರಂಭಾಪುರೀ ಪೀಠಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ ಎಂದು ತಿಳಿಸಿದರು. ಪಂಚಪೀಠಗಳು ತಂತ್ರಜ್ಞಾನ ಇಲ್ಲದ ಸಂದರ್ಭದಲ್ಲೂ ಪ್ರತಿ ಗ್ರಾಮ, ಮನೆಗೂ ಧರ್ಮ ಪ್ರಚಾರ, ಸಂಸ್ಕಾರ ನೀಡುವ ಕಾರ್ಯ ಮಾಡಿದವು. 

ಪಂಚಾಚಾರ್ಯರ ಆಶೀರ್ವಾದವಿಲ್ಲದೆ ಯಾವ ಮನೆಯಲ್ಲೂ ಒಳ್ಳೆಯ ಕಾರ್ಯಗಳು ಆಗಲು ಸಾಧ್ಯವಿಲ್ಲ. ಯಾವ ಕಾಲಕ್ಕೂ ಲೋಪವಾಗದಂತಿರುವ ಧರ್ಮವೇ ಸನಾತನ ವೀರಶೈವ ಧರ್ಮವಾಗಿದೆ. ಆದ್ದರಿಂದ ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆ ಧರ್ಮ ಸಂಸ್ಥಾರ ನೀಡಿ.

ಧರ್ಮವೇ ಮುಖ್ಯ ಎಂದರು. ಕಲಘಟಗಿ ಹನ್ನೆರಡು ಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಅನಾದಿಕಾಲದಿಂದಲೂ ಬಂದಂತಹ ಪೀಠಗಳ ಬಗ್ಗೆ ಪ್ರಸ್ತುತ ಅವಹೇಳನ ಮಾಡುತ್ತಿರುವುದು ಖೇದಕರ. ಧರ್ಮಕ್ಕೆ ಚ್ಯುತಿ ಬಂದಾಗ ಎಲ್ಲರೂ ಕಂಕಣಬದ್ಧರಾಗಿ ಹೋರಾಡಬೇಕು ಎಂದು ಹೇಳಿದರು. ಮುಂಬಯಿಯ ರಾಮಣ್ಣ ಹೆಬ್ಬಳ್ಳಿ ದಂಪತಿ, ಜಿ.ಎಸ್‌. ಕಲ್ಲಯ್ಯನಮಠ ಮೊದಲಾದವರಿದ್ದರು. 

ಡಾ| ಎನ್‌.ಎ. ಚರಂತಿಮಠ ಸ್ವಾಗತಿಸಿದರು. ಪ್ರೊ| ಜಿ.ಎಚ್‌. ಹನ್ನೆರಡುಮಠ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಷ್ಠಾಪನಾ ಮಹೋತ್ಸವಕ್ಕೂ ಮುನ್ನ ಜಂಗಲಿಪೇಟೆಯ ಬಸವಣ್ಣ ದೇವರ ಗುಡಿಯಿಂದ ಎತ್ತುಗಳು, ಕುಂಭಹೊತ್ತ ಮಹಿಳೆಯರು ಹಾಗೂ ಸಕಲ ವಾದ್ಯಗಳೊಂದಿಗೆ ನಂದಿ ಹಾಗೂ ಶಿಲಾಮೂರ್ತಿ ಹಾಗೂ ಉಭಯ ಶ್ರೀಗಳ ಮೆರವಣಿಗೆಯು ಶ್ರೀಮಠ ತಲುಪಿತು. 

Advertisement

Udayavani is now on Telegram. Click here to join our channel and stay updated with the latest news.

Next