Advertisement
“”ಬೇಸಗೆಯ ಕೊನೆಯಲ್ಲಿ ಬಿರುಬಿಸಿಲಿನ ತಾಪಕ್ಕೆ ನೆಲ ಕಾದು ಕೆಂಪಾಗಿ, ಮಣ್ಣು ಧೂಳಾಗಿರುವಾಗ, ಆಕಾಶದಲ್ಲಿ ಮೋಡ ಮಂದಯಿಸಿ, ತಂಗಾಳಿಯ ತೆರೆಯೊಂದು ದೂರದಿಂದ ಬಂದು ಬಡಿದಾಗ, ಹನಿಹನಿ ಮಳೆ ನೆಲಕ್ಕೆ ಸಿಂಪಡಿಸಿದಾಗ ನೆಲದೊಡಲಿನಿಂದ ಹೊರಹೊಮ್ಮುವ ಕಂಪು-ಮಣ್ಣಿನ ವಾಸನೆ, ಅಂತರಂಗದ ಅತ್ಯಂತ ಕೆಳಪದರುಗಳನ್ನು ತಟ್ಟಿ , ಮೈಯೆಲ್ಲ ನವಿರುಗಟ್ಟಿ , ಎಲ್ಲೆಲ್ಲೋ ಸುತ್ತಾಡಿ ಕೊನೆಗೆ ಮನೆಗೆ ಮರಳಿದಂತೆ ಮನಸ್ಸು ಸುಕ್ಕುಬಿಚ್ಚಿ ನುಣುಪಾಗುತ್ತದೆ. ಅಪೂರ್ವವಾದ ವಿವರಣೆಗೆ ಅಸಾಧ್ಯ ಎನ್ನುವಂಥ ಅನುಭವ ಉಂಟಾಗುತ್ತದೆ. ಈ ವಾಸನೆ ನಮ್ಮ ಜೀವನದ ಮೂಲಭೂತವಾದೊಂದು ಅಂಶಕ್ಕೆ ಸಂಬಂಧಪಟ್ಟುದಿರಬೇಕೆಂದು ಅನಿಸುತ್ತದೆ. ಆಕಾಶದಿಂದ ಇಳಿವ ಮಳೆ, ಸುಟ್ಟ ಹುಡಿಮಣ್ಣು- ಇವುಗಳ ಹಠಾತ್ ಸಂಪರ್ಕದಿಂದ ಸಂಭವಿಸುವ ಈ ಗಂಧಾವತಾರ ಈ ಮರ್ತ್ಯ ಜೀವನದ ಗುಟ್ಟನ್ನೇ ರಟ್ಟುಮಾಡುವ ಒಗಟು ಎನ್ನಿಸುತ್ತದೆ”
ಮಣ್ಣಿನ ವಾಸನೆಯ ತಾತ್ತಿಕತೆಯನ್ನು ಚಿಂತಿಸುವಾಗ ಚಾರ್ವಾಕರ ನೆನಪಾಗಿಯೇ ಆಗುವುದು. ಅಡಿಗರು ಚಾರ್ವಾಕವಾದಿಗಳಲ್ಲದೆ ಇರಬಹುದು. ಆ ಮಾತು ಬೇರೆ. ಚಾರ್ವಾಕರು ಹೇಳುವರು: ದೇಹದಿಂದ ಅತಿರಿಕ್ತವಾದ ಚೈತನ್ಯವೊಂದನ್ನು ಒಪ್ಪಬೇಕಾಗಿಲ್ಲ. ಚೈತನ್ಯವು ದೇಹದಲ್ಲಿಯೇ ಇದೆ. ಹಣ್ಣಿನ ರಸವನ್ನು ಹುಳಿ ಬರಿಸಿ ಭಟ್ಟಿ ಇಳಿಸಿದರೆ ದೊರಕುವ ಮದ್ಯದಲ್ಲಿ , ಮಾದಕತೆಯನ್ನುಂಟುಮಾಡುವ ಶಕ್ತಿ ಇಲ್ಲವೆ? ಅದೆಲ್ಲಿಂದ ಬಂತು? ಎಲ್ಲೋ ಹೊರಗಿನಿಂದ ಬಂತೆ? ಹಣ್ಣಿನ ರಸದಲ್ಲೇ ಈ ಮಾದಕತೆ ಇತ್ತಲ್ಲವೆ? ಸಂಕೀರ್ಣವಾದ ರಾಸಾಯನಿಕ ಪ್ರಕ್ರಿಯೆಗೆ ಒಳಗಾಗುವ ಮೂಲಕ ಅದು ಪ್ರಕಟವಾಯಿತು; ಅಷ್ಟೆ. ಚೈತನ್ಯವೆನ್ನುವುದು, ಹೀಗೆಯೇ. ಅದು ದೇಹದಲ್ಲೇ ಅಂತರ್ಗತವಾಗಿದೆ. ಅದಕ್ಕಾಗಿ ಹೊರಗೆಲ್ಲೋ ಹುಡುಕಬೇಕಿಲ್ಲ. ಆದುದರಿಂದ ದೇಹವೇ ಚೈತನ್ಯ ಎನ್ನಬಹುದು. ಇದು ಚಾರ್ವಾಕರ ನಿಲುವು. ನಮ್ಮ ಕಾವ್ಯಮೀಮಾಂಸೆಯು ಹೇಳುವ ರಸಾನುಭವ ಪ್ರಕ್ರಿಯೆಗೂ ಚಾರ್ವಾಕರ ಈ ವಾದಕ್ಕೂ ಹತ್ತಿರದ ಸಂಬಂಧವೇನೋ ಕಾಣಿಸುತ್ತದೆ! ಅದೇನೇ ಇರಲಿ. ಮಣ್ಣಿನ ವಾಸನೆಯ ಪರಿಕಲ್ಪನೆಯ ಮೂಲಕ ತಮ್ಮ ಕಾವ್ಯ ಮೀಮಾಂಸೆಯನ್ನು ರೂಪಿಸುವ ಕವಿ ಅಡಿಗರು- ಎಲ್ಲ ಅನುಭವಗಳಿಗೂ ದೇಹದ “ಸಾಕ್ಷಿ’ಯನ್ನು ದೇಹದ “ಪ್ರಮಾಣ’ವನ್ನು ಬಯಸುವರು. ತಮ್ಮ ಪ್ರಬಂಧದಲ್ಲಿ ಮಣ್ಣಿನ ಮಹಣ್ತೀವನ್ನು -ದೇಹದ ಮಹತ್ತ Ìವನ್ನು ಪ್ರಸ್ತಾವಿಸುತ್ತ-ಅದನ್ನು ವಾಗರ್ಥಗಳ ಮೂಲಕ ನಡೆಯುವ ಕಾವ್ಯಾನುಭವಕ್ಕೆ ಅನ್ವಯಿಸಿ ಅಡಿಗರು ಹೇಳುವುದು ಹೀಗೆ: “”ಗದ್ಯದಲ್ಲಾಗಲೀ ಪದ್ಯದಲ್ಲಾಗಲೀ ಅದು ಸಾಹಿತ್ಯ ಎನ್ನಿಸಬೇಕಾದರೆ ಅಲ್ಲಿ ಭಾಷೆ; ಕೇವಲ ಮಾಧ್ಯಮ ಅಥವಾ ಮನಸ್ಸಿನಲ್ಲಿರುವುದನ್ನು ಹೊರಕ್ಕೆ ತರುವ ವಾಹನ ಮಾತ್ರವಲ್ಲ; ಅದು ಕಲೆಗಾರನ ವೈಯಕ್ತಿಕ ಅನುಭವದ ಪ್ರತಿರೂಪ, ದೇಹ- ಸಾಹಿತ್ಯದಲ್ಲಿ ಭಾವ (content) ಮತ್ತು ಅದರ ರೂಪ (form) ಅಭಿನ್ನ. ಅದೇ ಸಾಹಿತ್ಯದ ಮೂಲ ಲಕ್ಷಣ. ಸಾಹಿತ್ಯದ ಸೃಷ್ಟಿಕ್ರಿಯೆಯಲ್ಲಿ ಮೊದಲು ಅನುಭವ ಅಥವಾ ಭಾವ, ಅನಂತರ ಅದಕ್ಕೆ ತಕ್ಕಭಾಷೆಯನ್ನು ಪ್ರತಿಮೆಗಳನ್ನು ಹುಡುಕುವುದು- ಈ ರೀತಿ ಒಂದಾದ ಮೇಲೆ ಇನ್ನೊಂದು ಎಂಬ ರೀತಿಯಲ್ಲಿ ಕೆಲಸ ನಡೆಯುವುದಿಲ್ಲ. ಅವು ಏಕಕಾಲಕ್ಕೆ ನಡೆಯುವಂಥವು. ಎಂದರೆ ಸಾಹಿತ್ಯ-ಭಾಷೆಯಲ್ಲೇ ನಡೆಯುವ ಕೆಲಸ”.
Related Articles
Advertisement
ಕನ್ನಡ ಕಾವ್ಯ ಪರಂಪರೆ ಲೌಕಿಕ ಬೇರೆ, ಆಗಮಿಕ ಬೇರೆ ಎಂಬ ತಿಳಿವಳಿಕೆಯಿಂದ ಮೊದಲಾಯಿತು. ಇದು ಜಾಗ್ರತ ಮನಸ್ಸಿನ ಗುಣ. ಎಚ್ಚರದ ಮನಸ್ಸು. ಹಾಗಿದ್ದೂ ವರ್ತಮಾನವನ್ನೂ ಪುರಾಣವನ್ನೂ ಬೆರೆಸಿಯೇ ಪಂಪನ ಕಾವ್ಯ ಶುರುವಾದದ್ದು. ಕಣ್ಣ ಮುಂದಿನ ದೊರೆ ಅರಿಕೇಸರಿಯನ್ನೂ ಪುರಾಣದ ಅರ್ಜುನನ್ನೂ “ತಗುಳಿc’ ನೋಡಿಯೇ- ವಿಕ್ರಮಾರ್ಜುನ ವಿಜಯದ ಹೊಳಹು ಕವಿಗೆ ಹೊಳೆದದ್ದು. ಆದರೂ ಇದು ಲೌಕಿಕವೇ. ಲೌಕಿಕದ ವಿಸ್ತಾರವೇ. ಚಕ್ರವರ್ತಿಗಳು ಇನ್ನೊಂದು ರಾಜ್ಯವನ್ನು ಆಕ್ರಮಿಸುವುದು ಲೌಕಿಕವಾದಂತೆ, ಸ್ವರ್ಗವನ್ನು ಆಕ್ರಮಿಸುವುದೂ ಲೌಕಿಕವೇ ! ಹಾಗೆ ಪುರಾಣ-ವರ್ತಮಾನಗಳನ್ನು ಬೆಸೆಯುವುದೂ ಲೌಕಿಕವೇ. ಈ ಲೌಕಿಕಕ್ಕಿಂತ “ಆಗಮ’ ಬೇರೆಯೇ ಇದೆ ಎಂಬುದು ಪಂಪನ ತಿಳಿವಳಿಕೆ. ಆಮೇಲೆ ಎರಡು ಶತಮಾನ ಕಳೆದು “ವಚನಯುಗ’ ಪ್ರಾರಂಭವಾಯಿತಲ್ಲ, ವಚನ ಯುಗದಲ್ಲಿ ಲೌಕಿಕ-ಆಗಮ ಎರಡೂ ಬೇರೆ ಬೇರೆ ಅಲ್ಲ ಎಂಬ ಸಹಜ ತಿಳಿವಳಿಕೆಯುಂಟಾಯಿತು. ಇದು ಆಸ್ಥಾನದ ತಿಳಿವಳಿಕೆಯಲ್ಲ. ಅನುಭವ ಮಂಟಪದ ತಿಳಿವಳಿಕೆ. ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು-ಎಂದರು ಬಸವಣ್ಣ. ಒಮ್ಮೆ ಇವೆರಡೂ ಒಂದೇ ಎಂಬ ಅಂತಬೋìಧೆ ಉಂಟಾದರೆ ಈ ಅನುಭವವನ್ನು ವ್ಯಕ್ತಪಡಿಸುವ ಭಾಷೆಯೂ ಅಂತರ್ಮುಖಗೊಳ್ಳುವುದು ಅನಿವಾರ್ಯ. ಅಂದರೆ ಭಾಷೆಯು ವರ್ಣನಾತ್ಮಕತೆಯನ್ನು ದಾಟಿ ಉತ್ಕಟವಾಗುವುದು ಅನಿವಾರ್ಯ. ಪ್ರತಿಮಾನಿಷ್ಠವಾಗುವುದು ಅನಿವಾರ್ಯ. ಅಂದರೆ ಭಾಷೆಯು ಭಾವವನ್ನು ಸೂಚಿಸುವ ಲೇಬಲ್ಲಾಗದೆ, ಭಾವವನ್ನು ತಾನೇ ಅನುಭವಿಸಿ ತೋರುವ ಪ್ರತಿಬಿಂಬ-ಪ್ರತಿರೂಪವಾಗುವುದು ಅನಿವಾರ್ಯ. ಶಿಲ್ಪಂ ವೈಪ್ರತಿರೂಪಂ ಎಂದು ವೇದದ ಮಾತು! ಒಮ್ಮೆ ವಚನ ಸಾಹಿತ್ಯದ ಸಕೃದವಲೋಕನದಲ್ಲೇ ಈ ಕೆಲವಂಶಗಳಾದರೂ ಪರಿಚಯವಾಗುವುದು.
ಶಬ್ದದೊಳಗೆ ಅರ್ಥವಿಲ್ಲ ; ನಿಃಶಬ್ದವಿದೆ !ವಚನಕಾರರಲ್ಲಿ ಅಲ್ಲಮನಂಥ ಅನುಭಾವಿಗಳೂ ಇದ್ದುದರಿಂದ, ತಮ್ಮ ಅನುಭವದ ಪೂರ್ವಾವಸ್ಥೆಯನ್ನು ಅವರು ಕಾಣಬಲ್ಲರು. ಅಂದರೆ ಎಲ್ಲವೂ ಒಗ್ಗೂಡಿವೆ; ಬೆಸೆದುಕೊಂಡಿವೆ ಎಂಬ ತಮ್ಮ ಅನುಭವವನ್ನು ಇನ್ನಷ್ಟು ಶೋಧಿಸಿ ಇವು ಯಾವಾಗಲೂ ಬೆರೆತುಕೊಂಡೇ ಇದ್ದವು; ಬೇರ್ಪಡಿಸಲಾಗದಂತೆ ಬೆಸೆದುಕೊಂಡೇ ಇದ್ದವು, ಈ ಅಂಶ ತಮಗೆ ಈಗ ತಿಳಿದು ಬಂತಷ್ಟೇ ಎಂಬ ಶೋಧನೆ! ಇಷ್ಟೇ ಅಲ್ಲ; ಬೇರ್ಪಡಿಸುವುದು ಮತ್ತೆ ಒಗ್ಗೂಡಿದವು ಎಂಬ ಕಾಣೆR ಕೂಡ ನಿಜವಲ್ಲ. ಬೇರ್ಪಟ್ಟ ಮಾತೇ ನಿಜವಲ್ಲ. ಆದುದರಿಂದ ಒಗ್ಗೂಡಿದ ಮಾತೂ ನಿಜವಲ್ಲ. ಅದು ಒಂದೇ ಅಖಂಡವಾಗಿತ್ತು; ಆಗಿಯೇ ಇದೆ; ಎಂಬ ಹೊಳಹನ್ನು ಈ ಅನುಭಾವಿಗಳು ಕಾಣಬಲ್ಲರು. ಈ ಹಂತದಲ್ಲೇ “ಶಬ್ದ ಸೂತಕ’, ಶಬ್ದದ-ಲಜ್ಜೆಯ ನೋಡಾ, ಪದವನರ್ಪಿಸಬಹುದಲ್ಲದೆ ಪದಾರ್ಥವನರ್ಪಿಸಬಹುದೆ?- ಎಂಬೆಲ್ಲ ಮಾತುಗಳೂ ಹುಟ್ಟಿಕೊಂಡವು. ಈ ಹಂತವೆಂದರೆ ಜಾಗ್ರತ ಮನಸ್ಸಿನ ಹಂತದಿಂದ ಅಜಾಗ್ರತ, ಸುಪ್ತ, ಸುಪ್ತಪ್ರಜ್ಞೆಯ ಹಂತಕ್ಕೆ ಬಂದಂತೆ. ಆದುದರಿಂದಲೇ ಅಲ್ಲಮ, ಶಬ್ದದೊಳಗಿನ ನಿಃಶಬ್ದದಂತೆ ಎಂದು ಹೇಳುತ್ತಾನೆ. ಶಬ್ದದೊಳಗಿನ ಅರ್ಥದಂತೆ ಹೇಳುವುದಿಲ್ಲ. ಬರಿಯ ಕವಿಯಾಗಿದ್ದರೆ, ಶಬ್ದದೊಳಗಿನ ಅರ್ಥದಂತೆ ಎಂದು ಹೇಳುತ್ತಿದ್ದ. ಶಿಲೆಯೊಳಗಿನ ಪಾವಕನಂತೆ ಎನ್ನುತ್ತಾನೆ. ಶಿಲೆಯೊಳಗಣ ಮೂರ್ತಿಯಂತೆ ಎಂದು ಹೇಳುವುದಿಲ್ಲ. ಶಿಲೆಯನ್ನು ನೋಡುವಾಗ ಶಿಲೆಯ ಏನೆಲ್ಲ ಸಾಧ್ಯತೆಗಳನ್ನು ನೋಡುವುದಲ್ಲ. ಆ ಸಾಧ್ಯತೆಯ ಚಿತ್ರಗಳೆಲ್ಲವೂ ಶಿಲೆಯೇ ಆಗಿದೆ. ಶಿಲೆಯಿಂದ ಬೇರಲ್ಲ. ಹಾಗೆ ನೋಡುವುದು ಲೌಕಿಕ. ಶಿಲೆಯೊಳಗಣ ಪಾವಕನನ್ನು ನೋಡಿದರೆ ಆ ಮಾತು ಬೇರೆ! ಈ ಅರ್ಥದಲ್ಲೇ ಅಲ್ಲಮನಂಥ ಉದ್ದಾಮ, “ಹಿಂದಣ ಕವಿಗಳೆನ್ನ ತೊತ್ತಿನ ಮಕ್ಕಳು!’ ಎನ್ನುತ್ತಾನೆ. ಮುಂದಣ ಕವಿಗಳೆನ್ನ ಕರುಣೆಯ ಕಂದಗಳು ಎನ್ನುತ್ತಾನೆ. ಬಸವಣ್ಣನವರಾದರೂ ಅಲ್ಲಮನಿಗಿಂತ ತುಸುವೇ ಭಿನ್ನರಾಗಿ ಉದಕದೊಳಗೆ ಬೈತಿಟ್ಟ ಬಯಕೆಯ ಕಿಚ್ಚಿನಂತೆ ಕೂಡಲ ಸಂಗನ ನಿಲುವು ಎನ್ನುತ್ತಾರೆ. ಸಸಿಯೊಳಗಣ ರಸದ ರುಚಿಯಂತೆ ಎನ್ನುತ್ತಾರೆ. ಈ ರುಚಿ ಇಂದ್ರಿಯಾನುಭವಕ್ಕೆ ಇನ್ನೂ ಬಂದಿಲ್ಲ ; ನಿಜ. ಆದರೆ ಇಂದ್ರಿಯಾನುಭವಕ್ಕಿಂತ ಹೆಚ್ಚಿನ, ಆಳದ ಅನುಭವ ಇದಾಗಿದೆ ಎಂದು ಸೂಚಿಸುತ್ತಾರೆ. ಬೇಂದ್ರೆಯವರು “ಉದಕದೊಳಗೆ ಬೈತಿಟ್ಟ ಬಯಕೆಯ ಕಿಚ್ಚಿನಂತೆ ಎನ್ನುವ ಮಾತಿಗೆ ಮಾರು ಹೋಗಿ “ಕಾರ್ಮೋಡದ ತಿಳಿನೀರಲಿ ಕೆಮ್ಮಿಂಚುರಿವಂತೆ’ ಎಂಬ ಅಪೂರ್ವವಾದ ಸಾಲನ್ನು ಸೃಷ್ಟಿಸಿದರು. ಅದಿರಲಿ. ನಾನು ಹೇಳಹೊರಟದ್ದು ಏನೆಂದರೆ- ಅನುಭಾವಿಗಳು ಶಿಲೆಯೊಳಗಣ ಪಾವಕನನ್ನು ನೋಡಬಲ್ಲರು. ಮರದೊಳಗಣ ಮಂದಾಗ್ನಿಯನ್ನು ನೋಡಬಲ್ಲರು. ಉದಕದೊಳಗೆ ಬೈತಿಟ್ಟ ಬಯಕೆಯ ಕಿಚ್ಚನ್ನೂ ನೋಡಬಲ್ಲರು. ಇದನ್ನು ಮುಂದುವರಿಸಿದರೆ- ಆಕಾಶದಿಂದ ಇಳಿವ ಮಳೆ; ಸುಟ್ಟ ಹುಡಿಮಣ್ಣು ಇವುಗಳ ಹಠಾತ್ ಸಂಪರ್ಕದಿಂದ ಸಂಭವಿಸುವ, ಜೀವಾಳದ ಗುಟ್ಟನ್ನು ಕೆದಕುವಂಥ ಮಣ್ಣಿನವಾಸನೆಯನ್ನು- ಮಳೆ; ಮಣ್ಣುಗಳ ಸಂಪರ್ಕವಿಲ್ಲದೆ ಆಘ್ರಾಣಿಸಬಲ್ಲರು! ಇದೀಗ ಸಮಸ್ಯೆ. ಆಧುನಿಕರ ಸಮಸ್ಯೆ. ನಮ್ಮ-ನಿಮ್ಮಂಥವರ ಸಮಸ್ಯೆ. ಕವಿ ಅಡಿಗರಿಗೆ ಎದುರಾದ ಸಮಸ್ಯೆ. ಅನುಭಾವಿಗಳೇನೋ ಬೆಂಕಿಯಂಥವರು! ನಿಜ. ಯಾವುದು ಸಾಚಾ ಯಾವುದು ಖೋಟಾ ಎಂದು ಅವರಿಗೆ ತಿಳಿದುಬರುತ್ತದೆ ಎನ್ನುವುದೂ ನಿಜ. ಆದರೆ, ಭಾಷೆಯನ್ನು ಒಮ್ಮೆ ಪಳಗಿಸಿದ ಮೇಲೆ-ಭಾಷೆಯು ಎಲ್ಲರ ಸೊತ್ತಾದುದರಿಂದ- ತಾವು ನಿಜವಾಗಿ ಅನುಭವಿಸದೇ ಇದ್ದರೂ ಆದರೆ ಅನುಭವಿಸಿದವರಂತೆ, ಅನುಭಾವಿಗಳಂತೆ ದಿರಿಸು ತೊಡುವುದು, ಅನುಭಾವಿಗಳಂತೆ ಮಾತಾಡುವುದು ಸುಲಭ. ಇದು ನಾವು ನಿತ್ಯ ನೋಡುತ್ತಿರುವ ವಿಲಕ್ಷಣ ವಿದ್ಯಮಾನ. ಎಲ್ಲ ಕಾಲದ “ವಿದ್ಯಮಾನ’. ಪ್ರಾಯಃ ಇದಕ್ಕಾಗಿಯೇ “ಆಯುಷ್ಯವು ಹಿರಿದು-ಭಾಷೆಯು ಕಿರಿದು’ ಎಂದು ಅಲ್ಲಮ ಹೇಳಿದರೂ ಈ ಕರುಣೆಯ ಕಂದಗಳು ಕನಿಕರಕ್ಕೂ ಪಾತ್ರರಾಗಬೇಕಾದ ಶೋಚನೀಯ ಸ್ಥಿತಿಯ ಕವಿಕಂದಮ್ಮಗಳಾಗಿರುವ ಸಂಭವವನ್ನೂ ಅಲ್ಲಗಳೆಯಲಾಗುವುದಿಲ್ಲ. ಅಡಿಗರ ಕಟೂಕ್ತಿ, ಲೇವಡಿ, ವ್ಯಂಗ್ಯ, ವಿಡಂಬನೆಗಳೆಲ್ಲ ಇಂಥವರ ಕುರಿತು-ತಮ್ಮ ಸುತ್ತಲಿನ ಇಂಥವರ ಕುರಿತು. ಶರದ್ಗೀತದ ಈ ಸಾಲುಗಳನ್ನು ನೋಡಿ: ಮೋರೆ ಗುರುತಿಲ್ಲದೇ ಚಹರೆ ಪಟ್ಟಿಯ ಕೊಟ್ಟು ಸಾಮುದ್ರಿಕವನೊದರುವುದು
ಸಾಹಸವೆ. ಆದರೂ ಕೂಡ ಕಂಡದ್ದನಾಡಬೇಕೆಂದೆಲ್ಲಿ ಇದೆ ನಿಯಮ?
ನಿಮಗೆ ಕಾಣದ್ದು ಯಾವುದೋ ಅದನ್ನೇ ಕುರಿತು
ಹೇಳುವುದು ಋಷಿ ಕೆಲಸ. ತನಗೆ ಕಾಣದ್ದು ಯಾವುದೋ ಅದನ್ನೇ ಕುರಿತು
ಹಾಡುವುದು ಕವಿ ಕೆಲಸ. ಕಾಣೆ-ಕಣಟ್ಟುಗಳ
ನಡುವೆ ಗೆರೆ ಬಲು ತೆಳುವು. ಆ ಗೆರೆಯ ಮೇಲೆ ನಿಂತೇನೆ ಲೊಚಗುಟ್ಟಿದರೂ
ಮಂಕುಬೂದಿಯನೆರಚಿದಂತೆ.
ಮಾತು ದೂರದ ಮಿಂಚು ತಂತಿಗಳಿರುವ ಹಾಗೆ.
ಒದೆಸಿಕೊಳ್ಳದೆ ಒಳಗು ಮಿಂಚು ಬಲ ತಿಳಿಯದು.
ಆದ ಕಾರಣವೆ ಮಾತಿನಲ್ಲಿದು ಸಾಚ, ಇದು ಮೋಸ ಎನ್ನುವುದು ಬಡಪಾಯಿ ಕಿವಿಗಲ್ಲ ಸುಲಭ
“”ಮಾತು ದೂರದ ಮಿಂಚು ತಂತಿಗಳಿರುವ ಹಾಗೆ, ಒದೆಸಿಕೊಳ್ಳದೆ ಒಳಗು ಮಿಂಚು ಬಲ ತಿಳಿಯದು” ಇದು ಅಡಿಗರ ಸೊಪಜ್ಞವಾದ ಮಾತು. orginal ಮಾತು. ಮಾತಿನ ಶಕ್ತಿಯ ಬಗೆಗೇ ಇರುವ ಮಾತು! ಇದು ಇನ್ನೊಂದು ಆಶ್ಚರ್ಯವೇ ಸೈ. ಮಾತು ತನ್ನ ಬಗೆಗೇ ಮಾತಾಡುವುದು. ತನ್ನರಿವಿನಲ್ಲೇ ಮಾತಾಡುವುದು. ಹಾಗೆ ಮಾತಾಡಿ ಮತ್ತೆ ತನ್ನರಿವನ್ನೇ ತಾನು ಪಡೆಯುವುದು. ಹಾಗೆಂದು ತನ್ನ ಬಗೆಗಿನ ಸೊಕ್ಕಿನ ಮಾತುಗಳಲ್ಲ. ಮತ್ತೇಕೆ ಈ ಮಾತುಗಳೆಂದರೆ, ಮಾತು ಸುಳ್ಳಾಗದಿರಲಿ; ಸುಳ್ಳು ಮಾತುಗಳಿಗೆ- ಸುಳ್ಳು ರಂಜನೀಯವಾಗಿರುವುದರಿಂದ- ಕಿವಿ ಸೋಲದಿರಲಿ ಎಂದು ವಚನಗಳಲ್ಲಿ ಮಾತುಗಳ ಬಗ್ಗೆಯೇ ಮಾತುಗಳೆಷ್ಟಿಲ್ಲ ! ನುಡಿದರೆ ಮುತ್ತಿನ ಹಾರ-ಮಾಣಿಕ್ಯದ ದೀಪ್ತಿ-ಸ್ಫಟಿಕ ಶಲಾಕೆ-ಜ್ಯೋತಿರ್ಲಿಂಗ! “”ದೂರದ ಮಿಂಚು ತಂತಿಗಳಿರುವ ಹಾಗೆ” ಎಂದು ಏಕೆ ಹೇಳುತ್ತಾರೆಂದರೆ ಒದೆಸಿಕೊಳ್ಳುವುದು ಹಠಾತ್ತಾಗಿ ಸಂಭವಿಸುವ ವಿದ್ಯಮಾನ, ಪರಿಚಿತ, ನಿರೀಕ್ಷಿತ, ಹತ್ತಿರದ ವಿದ್ಯಮಾನವಲ್ಲ ಎಂದು ಸೂಚಿಸಲು. “ಶಿಲೆಯೊಳಗಣಪಾವಕ’ ಎಂದಂತೇ ಕೇಳಿಸುತ್ತದೆ. “ಒದೆಸಿಕೊಳ್ಳದೆ ಒಳಗು ಮಿಂಚುಬಲ ತಿಳಿಯದು’ ಎಂಬ ಈ ಸಾಲು! ಕಾವ್ಯಕ್ರಿಯೆಯನ್ನು ಜೀವನ್ಮರಣ ಪ್ರಶ್ನೆಯಾಗಿ ತೆಗೆದುಕೊಂಡ ಅಡಿಗರಂಥ ಕವಿಗಳಿಗೂ ಅನುಭಾವಿಕ ಕವಿಗಳಿಗೂ ಇರುವ ಅಂತರವನ್ನು ನೆನೆಯುತ್ತ ಈ ಲೇಖನವನ್ನು ಮುಗಿಸುವೆ. ಅನುಭಾವಿಗಳು ಅಲ್ಲಮನಂಥವರು. ಜ್ಞಾನಿಗಳು. ಅವರಿಗೆ ಕರ್ಮದ ಹಂಗಿಲ್ಲ. ಆದುದರಿಂದಲೇ ಇಂಥವರು ಶಿಲೆಯಲ್ಲಿ ಮೂರ್ತಿಯನ್ನು ನೋಡುವುದಿಲ್ಲ! ನೋಡುತ್ತಿದ್ದರೆ ಅಲ್ಲೇ ಉಳಿ, ಚಾಣಗಳಿಂದ ಕೆತ್ತನೆಗೆ ತೊಡಗುತ್ತಿದ್ದರು! ಜ್ಞಾನಿಗಳಿಗೆ, ಪ್ರಕೃತಿಯೊಳಗಿನ ಪ್ರಕೃತಿಯನ್ನು ಇವರು ನೋಡಬಲ್ಲರಾಗಿ ಸಂಸ್ಕೃತಿಯ ಹಂಗೂ ಇಲ್ಲ. ಈ ಕರ್ಮಲೋಕದ ಯಾತರ ಹಂಗೂ ಇಲ್ಲ. ಅಡಿಗರಿಗೆ ಕರ್ಮ ಮುಖ್ಯ. ಸಾಧನೆ ಮುಖ್ಯ. ಸಹಿಷ್ಣು ಕತ್ತಲಿನಲ್ಲಿ ಕಾಯುತ್ತ ಕೂರುವ ಬೀಜದ ಕಾಯುವಿಕೆಯೂ ಕರ್ಮವೇ. “”ಅಗೆದುತ್ತ ಗದ್ದೆಗಳ ಕರ್ಮ ಭೂಮಿಯ ವರಣ” ಎಂಬ ಶ್ರದ್ಧೆ ಅಡಿಗರಿಗೆ. “ವರಣ’ ಎಂದರೆ ಆಯ್ಕೆ. ಇನ್ನೊಂದು ಬದಿಯಲ್ಲಿ- ವರಣ ಎಂದರೆ ವರವೂ ಹೌದು. ರಣವೂ ಹೌದು. ಹೀಗಿರುತ್ತ, ಕರ್ಮ ಮಾಡುವುದಕ್ಕೆ ಯೋಗ್ಯವಾದ ದೇಹವೂ ಭೂಮಿಯ ಆಯ್ಕೆಯೇ. ಆದುದರಿಂದ, “ಆತ್ಮ ಹೊಕ್ಕು ತಿಕ್ಕಲು ತಕ್ಕ ಸುಕ್ಕಿರದ ಹೊಸ ತೊಗಲ’ನ್ನು ಹೊದ್ದ ದೇಹವೇ ನಮ್ಮ ಆಯ್ಕೆ! ಈ ದೇಹದ ರಹಸ್ಯವೇ ಇನ್ನೂ ಪೂರ್ತಿಯಾಗಿ ತಿಳಿದುಬಂದಿಲ್ಲ. ವಾಗರ್ಥ ಪ್ರಪಂಚದ ಕಂಗೆಡಿಸುವ ಆಳವಾದರೂ ಮನದಟ್ಟಾಗಿದೆಯೇನು? ತಿಳಿದುಬಂದಿಲ್ಲ ಎನ್ನುವುದೂ ಒಂದು ತಿಳಿವಳಿಕೆಯೇ ಆಗಿ, ಕಾದ ಮಣ್ಣಿನ ಮೇಲೆ ಬಿದ್ದ ಮಳೆಹನಿ; ಹೊಮ್ಮಿಸುವ ಮಣ್ಣಿನ ವಾಸನೆ ಜೀವೋತ್ತೇಜಕವಾಗಿ ಹಬ್ಬುತ್ತಲೇ ಇದೆ! ಲಕ್ಷ್ಮೀಶ ತೋಳ್ಪಾಡಿ