ಬಾಬ್ರಿ ಮಸೀದಿ ಧ್ವಂಸ ಘಟನೆಗೂ ಮುನ್ನ ನಡೆದಿದ್ದೇ, ರಾಮಜ್ಯೋತಿ ರಥಯಾತ್ರೆ. 1989ರ ಸೆಪ್ಟೆಂಬರ್ 1ರಂದು ಅದು ಶುರುವಾಯಿತು. ಕಾಶಿಯ ವಿದ್ಯುತ್ ಮಂಡಲದ ಜ್ಯೊತಿಷ್ಯಾಚಾರ್ಯರಾದ ಶ್ರೀ ಜನಾರ್ದನ ಶಾಸ್ತ್ರಿ ಕುಂಟೆಯವರು ಯಾತ್ರೆಗೆ ಚಾಲನೆ ನೀಡಿದರು. ಮಥುರಾ, ಕಾಶಿ, ಪ್ರಯಾಗ, ಲಕ್ನೋ, ದಿಲ್ಲಿ, ಜಯಪುರ ಮತ್ತು ಜಬಲ್ಪುರ, ಜಮ್ಮು, ಚಂಡೀಗಢವೂ ಸೇರಿ ದೇಶದ ಎಲ್ಲ ನಗರ ಪಟ್ಟಣ, ಗ್ರಾಮಗಳನ್ನೂ ತಲುಪಿ ಅಯೋಧ್ಯೆಗೆ ಹಿಂದಿರುಗಿತು.
ಶಿಲಾಪೂಜೆಯ ಮುನ್ನುಡಿ: 1989, ವಿಶ್ವ ಹಿಂದೂ ಪರಿಷತ್ತಿಗೆ ರಜತೋತ್ಸವ ಸಂಭ್ರಮ. ಪ್ರಯಾಗದ ತ್ರಿವೇಣಿ ಸಂಗಮದಲ್ಲಿ ವಿಭಾಗೀಯ ಕಾರ್ಯಕರ್ತರ ಸಮಾವೇಶವಿತ್ತು. ರಜತೋತ್ಸವದ ಕಾರ್ಯಕ್ರಮಗಳನ್ನು ಯೋಜಿಸುವುದು ಇದರ ಉದ್ದೇಶವಾಗಿತ್ತು. ಶ್ರೀರಾಮ ಜನ್ಮಭೂಮಿ ಮುಕ್ತಿ ಯಜ್ಞ ಸಮಿತಿಯು ಶ್ರೀರಾಮ ದೇವಾಲಯದ ಶಿಲಾನ್ಯಾಸ ಕಾರ್ಯಕ್ರಮವನ್ನು ದೇವೋತ್ಥಾನ ಏಕಾದಶಿ ಅಂದರೆ 1989ರ ನ. 9ರಂದು ನಡೆಸಲು ನಿಶ್ಚಯಿಸಿತು. ಅಲ್ಲಿ ಸೇರಿದ್ದ ಪೂಜ್ಯ ಸಂತರು ಸಾಧುಗಳು ಈ ಕಾರ್ಯವನ್ನು ರಾಷ್ಟ್ರವ್ಯಾಪಿಯಾಗಿ ಶಿಲಾಪೂಜನದೊಂದಿಗೆ ನಡೆಸಲು ವಿಹಿಂಪಗೆ ನಿರ್ದೇಶನ ನೀಡಿದರು.
ಅಯೋಧ್ಯೆಗೆ ಹೊರಟ ಶಿಲೆಗಳು: ಅಯೋಧ್ಯಾ ಮಂದಿರ ನಿರ್ಮಾಣದ ಕಾರ್ಯದಲ್ಲಿ ಪ್ರತಿಯೊಂದು ಗ್ರಾಮವೂ ಭಾಗಿಯಾಗುವಂತೆ ಎರಡು ಸಾವಿರ ಜನಸಂಖ್ಯೆಗೆ ಒಂದು ರಾಮ ಶಿಲೆಯನ್ನು ಪೂಜಿಸಿ ಅಯೋಧ್ಯೆಗೆ ಕಳಿಸುವ ಯೋಜನೆಯಾಯಿತು. ಒಂದು ಲಕ್ಷ ಜನಸಂಖ್ಯೆಯ ಪ್ರಖಂಡ ಹತ್ತು ಸಾವಿರ ಜನಸಂಖ್ಯೆಯ ಖಂಡ ಮತ್ತು 2 ಸಾವಿರ ಜನಸಂಖ್ಯೆಯ ಉಪಖಂಡ- ಹೀಗೆ ವಿಭಾಗ ಮಾಡಿಕೊಂಡು ಪ್ರಮುಖರನ್ನು ನೇಮಿಸಲಾಯಿತು.
ಕೆಲವೇ ಶ್ರೀಮಂತರು ಹಣ ಹಾಕಿ ದೇವಾಲಯದ ಯೋಜನೆಯನ್ನು ವೈಭವದಿಂದ ಪೂರ್ಣಗೊಳಿಸುವುದು ಸಾಧ್ಯವಿರುವುದಾದರೂ ಪ್ರತಿಯೊಬ್ಬ ಹಿಂದೂವಿಗೂ ಈ ಪುಣ್ಯ ಕಾರ್ಯಕ್ಕಾಗಿ ಕಾಣಿಕೆಯಿತ್ತು. ತಾನೂ ದೇವಾಲಯ ಕಟ್ಟುವಲ್ಲಿ ಭಾಗಿಯಾಗಿದ್ದೇನೆ ಎಂಬ ಧನ್ಯಭಾವ ಪಡೆಯಲು ಅವಕಾಶವಾಗುವಂತೆ ವ್ಯಕ್ತಿಶಃ 1 ರೂಪಾಯಿ 25 ಪೈಸೆ, 5 ರೂಪಾಯಿ, ಹತ್ತು ರೂಪಾಯಿ ಕಾಣಿಕೆ ಸಂಗ್ರಹಿಸುವ ಯೋಜನೆ ಮಾಡಲಾಯಿತು.
ಈಗ ಆ ಶಿಲೆಗಳು ಎಲ್ಲಿವೆ?: ರಾಮಮಂದಿರ ನಿರ್ಮಾಣದ ಕನಸಿಟ್ಟುಕೊಂಡು, ಈಗಾಗಲೇ ಸಹಸ್ರಾರು ಶಿಲೆಗಳು ಅಯೋಧ್ಯೆಯಲ್ಲಿ ಜಮಾಯಿಸಿವೆ. ದೇಶ- ವಿದೇಶಗಳಿಂದ ಸಂಗ್ರಹಿಸಿದ ಈ ಎಲ್ಲ ಶಿಲೆಗಳನ್ನೂ ಸುರಕ್ಷಿತವಾಗಿ ಕಾಪಿಡಲಾಗಿದೆ. ಶಿಲ್ಪಿಗಳು ಕೆಲವು ಶಿಲೆಗಳಿಗೆ ಕೆತ್ತನೆಯ ಸ್ಪರ್ಶ ನೀಡಿ, ಸುಂದರ ಶಿಲಾಕಂಬಗಳನ್ನು ರಚಿಸುವ ಕಾರ್ಯದಲ್ಲಿ ತೊಡಗಿರುವ ದೃಶ್ಯಗಳನ್ನು ಇಲ್ಲಿ ಕಾಣಬಹುದು. ಈ ಶಿಲೆಗಳಿರುವ ತಾಣಕ್ಕೆ ಅಪಾರ ರಕ್ಷಣೆಯನ್ನೂ ಒದಗಿಸಲಾಗಿದೆ.
ಕರ್ನಾಟಕದಲ್ಲಿ ಶಿಲಾಯಾತ್ರೆ: ಮಂದಿರ ನಿರ್ಮಾಣದ ಕಾರ್ಯದಲ್ಲಿ ಕರ್ನಾಟಕದ ಪಾತ್ರ ಕಡಿಮೆಯೇನಿಲ್ಲ. ಶಿಲಾಪೂಜನ ಕಾರ್ಯಕ್ರಮವನ್ನು ಸುವ್ಯವಸ್ಥಿತವಾಗಿ ಮಾಡಲು ಏರ್ಯ ಲಕ್ಷ್ಮೀನಾರಾಯಣ ಆಳ್ವರವರ ಅಧ್ಯಕ್ಷತೆಯಲ್ಲಿ “ಕರ್ನಾಟಕ ಪ್ರಾಂತ ಶ್ರೀರಾಮ ಶಿಲಾ ಪೂಜನ ಸಮಿತಿ’ ರಚನೆಯಾಯಿತು. ಹೊ.ಅ. ನರಸಿಂಹಮೂರ್ತಿ ಅಯ್ಯಂಗಾರ್‌ರವರು ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಅರವಿಂದ ಬಾಬು ಅಳವಣಿ ಅವರು ಕೋಶಾಧಿಕಾರಿಗಳಾಗಿದ್ದರು. 4,500 ಶಿಲಾಪೂಜನ ಉಪಸಮಿತಿಗಳನ್ನು ರಾಜ್ಯಾದ್ಯಂತ ರಚಿಸಲಾಗಿದ್ದರೂ, ಸುಮಾರು 10,500ಕ್ಕೂ ಹೆಚ್ಚು ಕಡೆಗಳಲ್ಲಿ ಶಿಲಾಪೂಜನ ನಡೆಯಿತು.