ಬೆಂಗಳೂರು: ಪರಿಸರದಲ್ಲಿ ತೀವ್ರ ಬದಲಾವಣೆಗಳಾಗುತ್ತಿವೆ. ಶೇ.68ರಷ್ಟಿದ್ದ ನೀರಿನ ಪ್ರಮಾಣ ದಿನೇ ದಿನೆ ಕುಗ್ಗುತ್ತಿದೆ. ಪರಿಸರ ಸಂರಕ್ಷಣೆ, ಗೋ ರಕ್ಷಣೆ ಮಾಡದೇ ಇದ್ದರೆ ಭವಿಷ್ಯದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್ ಎಚ್ಚರಿಕೆ ನೀಡಿದರು.
ಕಾಮಧೇನು ಹಂಸ ಸೇವಾಟ್ರಸ್ಟ್‌ನಿಂದ ಭಾನುವಾರ ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಾದ್ಯಂತ ಜಾನುವಾರುಗಳಿಗೆ ನೀರಿನ ತೊಟ್ಟಿ ನಿರ್ಮಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತಿ ಮತ್ತು ನಾಗರಿಕತೆಯ ಬೆಳವಣಿಗೆಯಲ್ಲಿ ಜಾನುವಾರುಗಳ ಕೊಡುಗೆ ಅಪಾರವಾಗಿದೆ. ಜಾನುವಾರುಗಳ ಸಂಪತ್ತನ್ನು ಉಳಿಸಿಕೊಳ್ಳುವುದರ ಜತೆಗೆ ಅವುಗಳಿಗೆ ಅಗತ್ಯವಿರುವ ನೀರಿನ ಸೌಲಭ್ಯವೂ ಮಾಡಿಕೊಡಬೇಕು. ನೀರಿನ ಸೌಲಭ್ಯ ಇಲ್ಲದಿದ್ದರೇ ನಾಗರಿಕತೆಯೇ ನಶಿಸಿ ಹೋಗುತ್ತದೆ. ಮಳೆಯ ಪ್ರಮಾಣ ಕಡಿಮೆ ಆಗುವುದರ ಜತೆಗೆ ನೀರಿನ ಅಭಾವ ಹೆಚ್ಚಾಗುತ್ತಿದೆ.
ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿ ಇನ್ನಷ್ಟು ಕಷ್ಟಕರವಾಗಿದೆ. ನೀರಿನ ಸಂರಕ್ಷಣಯೇ ಇದಕ್ಕೆ ಪರಿಹಾರ ಎಂದರು. ಅಮೆರಿಕಾ, ಜಪಾನ್ ಸೇರಿ ಅನೇಕ ರಾಷ್ಟ್ರಗಳಲ್ಲಿ ರೈತರಿಗೆ ಪ್ರೋತ್ಸಾಹದ ಜತೆಗೆ ಆಧುನಿಕ ಕೃಷಿ ಪರಿಕರಗಳನ್ನು ಸರ್ಕಾರದಿಂದಲೇ ನೀಡುವುದರಿಂದ ಅಲ್ಲಿನ ಆಹಾರ ಭದ್ರತೆ ಚೆನ್ನಾಗಿದೆ. ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ 30 ದಶಲಕ್ಷ ಟನ್ ಆಹಾರೋತ್ಪದನೆಯಾಗುತಿತ್ತು. ಈಗ 267 ದಶಲಕ್ಷ ಟನ್ ಆಹಾರೋತ್ಪಾದನೆ ಮಾಡುತ್ತಿದ್ದೇವೆ.
ರೈತರಿಗೆ ಆಧುನಿಕ ಕೃಷಿ ಪರಿಕರಗಳ ಜತೆಗೆ ಸೌಲಭ್ಯವನ್ನು ನೀಡಬೇಕು. ಇದರಿಂದ ದೇಶದ ಆಹಾರ ಭದ್ರತೆಯೂ ಹೆಚ್ಚಾಗುತ್ತದೆ ಮತ್ತು ರೈತರಿಗೆ ಉತ್ತಮ ಆದಾಯವೂ ಸಿಗಲಿದೆ ಎಂದು ಹೇಳಿದರು. ಟ್ರಸ್ಟ್‌ನ ಅಧ್ಯಕ್ಷ ಜಿ.ಜಯರಾಮ್ ಮಾತನಾಡಿ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ರಾಮನಗರದ 13 ಹಳ್ಳಿಗಳಲ್ಲಿ 25 ಸಿಮೆಂಟ್ ತೊಟ್ಟಿಗಳನ್ನು ಉಚಿತವಾಗಿ ನಿರ್ಮಿಸಿದ್ದೇವೆ.
ಸಿಮೆಂಟ್ ಇಟ್ಟಿಗೆ ಬಳಸಿ ತೊಟ್ಟಿಗಳನ್ನು ಕಟ್ಟಿದ್ದು, ದಶಕಗಳ ಕಾಲ ಬಾಳಿಕೆ ಬರುತ್ತದೆ. 3 ಅಡಿ ಅಗಲ ಹಾಗೂ 7 ಅಡಿ ಉದ್ದವಿದೆ. 25 ತೊಟ್ಟಿಗಳ ನಿರ್ಮಾಣಕ್ಕೆ 4 ಲಕ್ಷ ಖರ್ಚಾಗಿದೆ ಎಂದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಕೆ.ವಿ.ರೆಡ್ಡಿ, ಬಿಬಿಎಂಪಿ ಸದಸ್ಯೆ ಲೀಲಾ ಶಿವಕುಮಾರ್, ಜೆಡಿಎಸ್ ಮುಖಂಡ ಆರ್.ರವಿ, ಕೋಲಾರ ಎಪಿಎಂಸಿ ಯಾರ್ಡ್ ಮಾಜಿ ಅಧ್ಯಕ್ಷ ವಿ.ರಾಮು ಮೊದಲಾದವರು ಉಪಸ್ಥಿತರಿದ್ದರು.