ಚಿಕ್ಕಬಳ್ಳಾಪುರ: ಈ ಬಾರಿ ನಿಮ್ಮ ಸ್ನೇಹಿತರು, ಕಟುಂಬದ ಸದಸ್ಯರೊಂದಿಗೆ ನಂದಿ ಗಿರಿಧಾಮಕ್ಕೆ ತೆರಳಿ, ಅಲ್ಲಿ ಹೊಸ ವರ್ಷ ಸಂಭ್ರಮಿಸಲು ನೀವೇನಾದರೂ ಯೋಜನೆ ಹಾಕಿಕೊಂಡಿದ್ದರೆ, ನಿಮ್ಮ ಪ್ಲಾನ್ ಬದಲಿಸಿಕೊಳ್ಳಿ. ಏಕೆಂದರೆ, ಡಿ.31ರ ಸಂಜೆಯಿಂದ ಜ.1ರ ಬೆಳಗ್ಗೆವರೆಗೆ ಪ್ರವಾಸಿಗರಿಗೆ ನಂದಿ ಗಿರಿಧಾಮದ ಪ್ರವೇಶ ನಿಷೇಧಿಸಲಾಗಿದೆ.
ಹೊಸ ವರ್ಷಾಚರಣೆ ನೆಪದಲ್ಲಿ ಗಿರಿಧಾಮದಲ್ಲಿ ನಡೆಯಬಹುದಾದ ಕಾನೂನು ಬಾಹಿರ ಹಾಗೂ ಶಾಂತಿ ಕದಡುವ ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ. ಜತೆಗೆ ಹಿಂದೆಲ್ಲಾ ನಂದಿ ಬೆಟ್ಟದ ಭಾಗದಲ್ಲಿ ಡಿ.31 ಹಾಗೂ ಜ.1ರಂದು ಉಂಟಾಗುತ್ತಿದ್ದ ತೀವ್ರ ವಾಹನ ಸಂಚಾರ ದಟ್ಟಣೆ ತಪ್ಪಿಸುವ ಉದ್ದೇಶವೂ ಈ ನಿರ್ಧಾರದ ಹಿಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಪ್ರವೇಶ ನಿಷೇಧ ಯಾವಾಗ?: ಡಿ.31ರಂದು ಸೋಮವಾರ ಸಂಜೆ 4 ಗಂಟೆಯಿಂದ, 2019ರ ಜನವರಿ 1ರ ಮಂಗಳವಾರ ಬೆಳಗ್ಗೆ 8 ಗಂಟೆವರೆಗೆ ನಂದಿ ಬಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಂದಿ ಗಿರಿಧಾಮ ಮಾತ್ರವಲ್ಲದೇ ಟ್ರಕ್ಕಿಂಗ್‌ಗೆ ಹೆಸರಾಗಿರುವ ಜಿಲ್ಲೆಯ ಸ್ಕಂದಗಿರಿ ಹಾಗೂ ಸೆಲ್ಪಿ ಪ್ರಿಯರ ನೆಚ್ಚಿನ ತಾಣವಾಗಿರುವ ಅವುಲು ಬೆಟ್ಟ ಪ್ರವೇಶವನ್ನೂ ನಿರ್ಬಂಧಿಸಲಾಗಿದೆ.
ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ: ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ನಂದಿ ಗಿರಿಧಾನ ಸೇರಿದಂತೆ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳ ಬಳಿ ವಾಹನ ಚಾಲಕರ ಮದ್ಯಪಾನ ತಪಾಸಣೆ (ಡ್ರಂಕ್ ಆ್ಯಂಡ್ ಡ್ರೈವ್) ಕಾರ್ಯಾಚರಣೆ ನಡೆಸಲಾಗುತ್ತದೆ. ಈ ವೇಳೆ ಮದ್ಯ ಸೇವಿಸಿ ವಾಹನ ಚಲನೆ ಮಾಡುತ್ತಿರುವುದು ಖಾತ್ರಿಯಾದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಹಾಗೇ ವ್ಹೀಲಿಂಗ್ ಮಾಡುವವರು, ಅನಗತ್ಯವಾಗಿ ಕರ್ಕಶ ಶಬ್ದ ಮಾಡುವವರು, ಮದ್ಯದ ಬಾಟಲಿ ಒಡೆಯುವ ಕಿಡಿಗೇಡಿಗಳ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಳಾಗುವುದು ಎಂದು ಎಸ್‌ಪಿ ಕಾರ್ತಿಕ್ ರೆಡ್ಡಿ ಎಚ್ಚರಿಸಿದ್ದಾರೆ.
ನೆರವಿಗೆ ಕಂಟ್ರೋಲ್ ರೂಮ್: ಹೊಸ ವರ್ಷದ ಸಂಭ್ರಮಾಚರಣೆಗೆ ಚಿಕ್ಕ ಬಳ್ಳಾಪುರ ಜಿಲ್ಲೆಯ ಪ್ರವಾಸಿ ತಾಣಗಳಿಗೆ ತೆರಳಿದಾಗ ಯಾವುದೇ ರೀತಿಯ ತೊಂದರೆ ಎದುರಾದರೂ ಸಾರ್ವಜನಿಕರು ಹಾಗೂ ಪ್ರವಾಸಿಗರು ತಕ್ಷಣ ನಿಯಂತ್ರಣ ಕೊಠಡಿ; ಮೊ: 94808 02500 ಅಥವ ದೂ: 08156-272211, 272212 ಮತ್ತು “100’ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು.