ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಅಗತ್ಯವಿಲ್ಲ. ಒಂದನೇ ತರಗತಿಯಿಂದಲೇ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸುವ ಕಲಿಕಾ ನೀತಿ ಕಡ್ಡಾಯ ಮಾಡಬೇಕು ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಆಗ್ರಹಿಸಿದರು.
ಬಹುಜನ ದಲಿತ ಸಂಘರ್ಷ ಸಮಿತಿಯಿಂದ ನಗರದ ಹೋಟೆಲ್ ಒಂದರಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದುರ್ಬಲಗೊಳಿಸಲ್ಪಟ್ಟ ಸರ್ಕಾರಿ ಶಾಲೆಗಳ ಸಬಲೀಕರಣ- ರಾಜ್ಯ ಸರ್ಕಾರದ ನಡೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು 2007ರಲ್ಲಿ ಕೇಂದ್ರ ಸರ್ಕಾರ ನೀತಿ ತಂದಿದೆ. ಆದರೆ ಕೆಲವು ನ್ಯೂನತೆಗಳಿಂದ ಅದು ಜಾರಿಯಾಗಿಲ್ಲ. ರಾಜ್ಯದಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಒಂದು ಭಾಷೆಯಾಗಿ ಕಲಿಸುತ್ತಿದ್ದಾರೆ. ಅದನ್ನೇ ಕಡ್ಡಾಯ ಮಾಡಬೇಕು ಎಂದು ಹೇಳಿದರು.
ಸರ್ಕಾರಿ ಶಾಲೆಗಳ ಸಮೀಪವಿರುವ ಖಾಸಗಿ ಶಾಲೆಗೆ ಬೀಗ ಹಾಕಬೇಕು. ರಾಜಕಾರಣಿಗಳು, ಸರ್ಕಾರಿ ನೌಕರರು, ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆ, ಕಾಲೇಜಿಗೆ ಸೇರಿಸುವುದು ಕಡ್ಡಾಯ ಎಂಬ ಕಾನೂನು ತರಬೇಕು. ಆಗ ಸರ್ಕಾರಿ ಶಾಲೆ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಮಕ್ಕಳ ಮುಗ್ಧ ಮನಸನ್ನು ಅರಿತು ಪಾಠ ಕಲಿಸುವ ಶಿಕ್ಷಕರ ಅಗತ್ಯವಿದೆ. ಶಿಕ್ಷಕರಿಗೆ ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆ ಹೆಚ್ಚಾಗುತ್ತಿದೆ. ಶಿಕ್ಷಕರನ್ನು ಬೋಧನೆಗೆ ಸೀಮಿತ ಮಾಡಬೇಕು. ಪ್ರಾದೇಶಿಕವಾಗಿ ಮಕ್ಕಳ ಅಗತ್ಯಕ್ಕೆ ತಕ್ಕ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಿದರು.
ಚಿಂತಕ ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ಕನ್ನಡ ಶಾಲೆಯ ವಿಲೀನ ಚಿಂತನೆಯಿಂದ ಕನ್ನಡ ಪ್ರಜ್ಞೆ, ಬೌದ್ಧಿಕತೆ ಹಾಗೂ ಜೀವನ ಕ್ರಮದ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಸರ್ಕಾರ ತನ್ನ ಕಠೊರ ನೀತಿಗಳನ್ನು ಮುಗ್ಧ ಮಕ್ಕಳ ಮೇಲೆ ಪ್ರಯೋಗ ಮಾಡುತ್ತಿದೆ. ಸಾರ್ವಜನಿಕ ರಂಗ ಬಲವಾದಾಗ ಮಾತ್ರ ಸರ್ಕಾರ ಬಗ್ಗುತ್ತದೆ ಹಾಗೂ ಬಂಡವಾಳಶಾಹಿಗಳ ಹಿಡಿತ ತಪ್ಪುತ್ತದೆ ಎಂದರು.
ಇಂಗ್ಲಿಷ್‌ನಲ್ಲಿ ಶಿಕ್ಷಣ ಬೇಡ, ಶಿಕ್ಷಣದಲ್ಲಿ ಇಂಗ್ಲಿಷ್ ಬೇಕು. ಜಾಗತಿಕ ಮಟ್ಟದಲ್ಲಿ ಕನ್ನಡಿಗರು ಬೆಳೆಯಲು ಬೇಕಾದ ಕನ್ನಡ ಭಾಷೆಯ ಬಲವರ್ಧನೆ ಆಗಬೇಕು. ಕಂಪ್ಯೂಟರ್‌ನಲ್ಲಿ ಕನ್ನಡ ಸುಲಭವಾಗಿ ಬಳಸುವಂತೆ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸಿದರು.