Advertisement

ಕಳೆಗಟ್ಟಲಾರಂಭಿಸಿದ ಶಕ್ತಿ ಕೇಂದ್ರ

10:03 AM Apr 26, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಾದ ಬಳಿಕ ಸಚಿವರು, ಹಿರಿಯ ಅಧಿಕಾರಿಗಳಿಲ್ಲದೆ ಭಣಗುಡುತ್ತಿದ್ದ ಶಕ್ತಿ ಕೇಂದ್ರ ವಿಧಾನಸೌಧ, ಬುಧವಾರದಿಂದ ಮತ್ತೆ ಕಳೆಗಟ್ಟಲಾರಂಭಿಸಿದ್ದು, ಆಡಳಿತ ಯಂತ್ರ ಕ್ರಮೇಣ ಚುರುಕುಗೊಳ್ಳುತ್ತಿರುವಂತೆ ಕಾಣುತ್ತಿದೆ.

Advertisement

ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಮುಖ್ಯಮಂತ್ರಿ ಆದಿಯಾಗಿ ಬಹುತೇಕ ಸಚಿವರು ವಿಧಾನಸೌಧದತ್ತ ಸುಳಿಯಲಿಲ್ಲ. ಪಕ್ಷ ತಮಗೆ ವಹಿಸಿದ ಜವಾಬ್ದಾರಿ ನಿರ್ವಹಣೆ ಜತೆಗೆ ಪಕ್ಷದ ಅಭ್ಯರ್ಥಿಗಳ ಪ್ರಚಾರದಲ್ಲಿ ಸಚಿವರು, ಶಾಸಕರು ನಿರತರಾಗಿದ್ದರು.

ಹಿರಿಯ ಅಧಿಕಾರಿಗಳನ್ನು ನಾನಾ ಕಡೆ ಚುನಾವಣಾ ಕಾರ್ಯಗಳಿಗೆ ನಿಯೋಜಿಸಿದ್ದ ಹಿನ್ನೆಲೆಯಲ್ಲಿ ಅವರ ಹಾಜರಾತಿಯೂ ಕಡಿಮೆ ಇರುತ್ತಿತ್ತು. ದೈನಂದಿನ ಸೇವೆಗಳಿಗೆ ಅಗತ್ಯವಾದ ಅಧಿಕಾರಿ, ನೌಕರ, ಸಿಬ್ಬಂದಿ ಸೇವೆ ಮಾತ್ರ ಅಬಾಧಿತವಾಗಿತ್ತು.

ರಾಜ್ಯದಲ್ಲಿ ಮಂಗಳವಾರ ಎರಡನೇ ಹಂತದ ಮತದಾನ ಮುಗಿಯುತ್ತಿದ್ದಂತೆ ಸಚಿವರು ಶಕ್ತಿಸೌಧದತ್ತ ಮುಖ ಮಾಡಲಾರಂಭಿಸಿದ್ದಾರೆ. ಬುಧವಾರ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವ ಕೃಷ್ಣ ಬೈರೇಗೌಡ ಉನ್ನತ ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿ ನಿರ್ವಹಣೆಗೆ ಹಲವು ಸಲಹೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಬರದ ಭೀಕರತೆ ತೀವ್ರವಾಗುತ್ತಿದ್ದು, ಹಲವೆಡೆ ಕುಡಿಯುವ ನೀರಿಗೆ ಜನ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ಅವರು ಉನ್ನತ ಅಧಿಕಾರಿಗಳೊಂದಿಗೆ ಬುಧವಾರ ಕಚೇರಿಯಲ್ಲಿ ಸಭೆ ನಡೆಸಿ, ಚರ್ಚಿಸಿದರು.

Advertisement

ಕುಡಿಯುವ ನೀರಿನ ಅಭಾವ ತಲೆದೋರದಂತೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಸೂಚನೆ ನೀಡಿದರು. ಆ ಮೂಲಕ ಬರಪೀಡಿತ ಪ್ರದೇಶಗಳು ಸೇರಿದಂತೆ ರಾಜ್ಯಾದ್ಯಂತ ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಜನರಿಗೆ ಸ್ಪಂದಿಸುವ ಪ್ರಯತ್ನಕ್ಕೆ ಚಾಲನೆ ಸಿಕ್ಕಂತಾಗಿದೆ.

ಇನ್ನೊಂದೆಡೆ, ಬೆಂಗಳೂರು ಅಭಿವೃದ್ಧಿ ಸಚಿವರಾದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ರಾಜಧಾನಿಯಲ್ಲಿ ಮಳೆಗಾಲದಲ್ಲಿ ಅನಾಹುತಗಳ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಸಂಬಂಧ ಬಿಬಿಎಂಪಿ, ಪೊಲೀಸ್‌, ಬೆಸ್ಕಾಂ ಇತರ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಪ್ರವಾಹ ತಡೆ, ಮಳೆ ನೀರು ಕಾಲುವೆಗಳ ದುರಸ್ತಿ, ಒತ್ತುವರಿ ತೆರವು, ಕೆರೆಗಳ ಹೂಳು ತೆರವು, ರಸ್ತೆ ಗುಂಡಿ ದುರಸ್ತಿಯಂತಹ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಿದ್ದು, ಅಧಿಕಾರಿಗಳು ಸಮರೋಪಾದಿಯಲ್ಲಿ ಸಿದ್ಧತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ತಾಕೀತು ಮಾಡಿದ್ದು, ಮಳೆಗಾಲದ ಸಿದ್ಧತಾ ಕಾರ್ಯಗಳಿಗೆ ತುಸು ಚುರುಕು ಮುಟ್ಟಿಸಿದಂತಾಗಿದೆ.

ಸಚಿವರು, ಹಿರಿಯ ಅಧಿಕಾರಿಗಳು ಕಚೇರಿಗಳತ್ತ ಆಗಮಿಸಲಾರಂಭಿಸುತ್ತಿದ್ದಂತೆ ಅಧೀನ ಅಧಿಕಾರಿಗಳು, ನೌಕರರು, ಸಿಬ್ಬಂದಿಗಳೂ ಚಟುವಟಿಕೆಯಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಾರಂಭಿಸಿದ್ದಾರೆ. ಹಲವು ವಾರಗಳ ಬಳಿಕ ವಿಧಾನಸೌಧದ ಆವರಣದ ಪಾರ್ಕಿಂಗ್‌ ಸ್ಥಳದಲ್ಲಿ ವಾಹನಗಳ ಸಾಲು ಕಂಡು ಬಂತು. ಪ್ರವೇಶದ್ವಾರಗಳಲ್ಲಿ ಎಂದಿನ ತಪಾಸಣೆ, ಪರಿಶೀಲನೆ ಕ್ರಮೇಣ ಚುರುಕುಗೊಳ್ಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next