Advertisement

ಫ‌ಲಕಗಳ ತೆರವಿಗೆ ಗಡುವು ಅಂತ್ಯ

12:10 PM Aug 31, 2018 | |

ಬೆಂಗಳೂರು: ನಗರದ ಖಾಸಗಿ ಆಸ್ತಿಗಳಲ್ಲಿ ಅಳವಡಿಸಿರುವ ಜಾಹಿರಾತು ಫ‌ಲಕಗಳ ತೆರುವುಗೊಳಿಸಲು ಬಿಬಿಎಂಪಿ ನೀಡಿದ್ದ ಗಡುವು ಶುಕ್ರವಾರಕ್ಕೆ ಅಂತ್ಯಗೊಳ್ಳಲಿದ್ದು, ಸೋಮವಾರದಿಂದ ಫ‌ಲಕಗಳ ತೆರವು ಕಾರ್ಯಾಚರಣೆ ಆರಂಭಿಸಲು ಪಾಲಿಕೆ ಸಜ್ಜಾಗಿದೆ.

Advertisement

ಹೈಕೋರ್ಟ್‌ ಸೂಚನೆ ಮೇರೆಗೆ ಈಗಾಗಲೇ ನಗರದಲ್ಲಿನ ಫ್ಲೆಕ್ಸ್‌, ಬ್ಯಾನರ್‌ ಹಾಗೂ ಬಂಟಿಂಗ್ಸ್‌ ತೆರವುಗೊಳಿಸಿರುವ ಪಾಲಿಕೆ, ಅನಧಿಕೃತ ಜಾಹೀರಾತು ಫ‌ಲಕಗಳನ್ನು ತೆರವುಗೊಳಿಸಲು ಖಾಸಗಿಯವರಿಗೆ ಆ.31ರವರೆಗೆ ಅವಕಾಶ ನೀಡಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಕೆಲ ಏಜೆನ್ಸಿಗಳು ತಾವು ಅಳವಡಿಸಿದ್ದ ಫ‌ಲಕಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಆದರೆ, ಹೆಚ್ಚಿನ ಭಾಗಗಳಲ್ಲಿ ತೆರವಿಗೆ ಏಜೆನ್ಸಿಗಳು ಮುಂದಾಗಿಲ್ಲ.

ನಿಗದಿತ ಅವಧಿಯೊಳಗೆ ಫ‌ಲಕಗಳನ್ನು ತೆರವುಗೊಳಿಸದ ಖಾಸಗಿ ಆಸ್ತಿಗಳಲ್ಲಿರುವ ಫ‌ಲಕಗಳನ್ನು ಪಾಲಿಕೆಯಿಂದಲೇ ತೆರವುಗೊಳಿಸುವ ಕಾರ್ಯ ಆರಂಭವಾಗಲಿದ್ದು, ಅದಕ್ಕೆ ತಗಲುವ ವೆಚ್ಚವನ್ನು ಕಟ್ಟಡ ಮಾಲೀಕರಿಂದಲೇ ಸಂಗ್ರಹಿಸಲಾಗುತ್ತದೆ.

ಪಾಲಿಕೆಯಿಂದ ನಗರದಲ್ಲಿನ ಅನಧಿಕೃತ ಜಾಹೀರಾತು ಫ‌ಲಕಗಳ ಪತ್ತೆಗಾಗಿಯೇ ಅಭಿವೃದ್ಧಿಪಡಿಸಲಾಗಿದ್ದ ವಿಶೇಷ ಆ್ಯಪ್‌ ಮೂಲಕ ಯಾವ ವಾರ್ಡ್‌ನಲ್ಲಿ ಎಷ್ಟು ಅನಧಿಕೃತ ಫ‌ಲಕಗಳಿವೆ ಎಂಬ ಮಾಹಿತಿ ಈಗಾಗಲೇ ಲಭ್ಯವಾಗಿದ್ದು, ಸೋಮವಾರದಿಂದ ಕಾರ್ಯಾಚರಣೆ ಆರಂಭಿಸಲು ಪಾಲಿಕೆ ಸಿದ್ಧತೆ ನಡೆಸಿದೆ.

ಪಾಲಿಕೆಯ ಎಲ್ಲಾ ಸಹಾಯಕ ಕಂದಾಯ ಅಧಿಕಾರಿಗಳು ಈಗಾಗಲೇ ಆ್ಯಪ್‌ಗೆ ತಮ್ಮ ವ್ಯಾಪ್ತಿಗೆ ಬರುವ ಪ್ರತಿಯೊಂದು ಜಾಹೀರಾತು ಫ‌ಲಕಗಳನ್ನು ಹತ್ತಿರದಿಂದ ಫೋಟೋ ತೆಗೆದು ಸ್ಥಳದ ಸಂಪೂರ್ಣ ಮಾಹಿತಿಯೊಂದಿಗೆ ಆ್ಯಪ್‌ಗೆ ಅಪ್‌ಲೋಡ್‌ ಮಾಡಿದ್ದಾರೆ. ಜತೆಗೆ ಫ‌ಲಕವಿರುವ ಖಾಸಗಿ ಕಟ್ಟಡದ ಹತ್ತಿರ ಹೋಗಿ “ಲೊಕೇಷನ್‌’ ಅಪ್‌ಲೋಡ್‌ ಮಾಡಿದ್ದು, ಜಾಗದ ಮಾಲೀಕರ ಹೆಸರು ಹಾಗೂ ಆಸ್ತಿಯ ಪಿಐಡಿ ಸಂಖ್ಯೆಯ ಮಾಹಿತಿ ಪಡೆದಿದ್ದಾರೆ.

Advertisement

ಪಾಲಿಕೆಯಲ್ಲಿ 10 ಸಾವಿರಕ್ಕೂ ಹೆಚ್ಚಿನ ಜಾಹೀರಾತು ಫ‌ಲಕಗಳಿರುವುದು ಈ ಹಿಂದೆ ಪಾಲಿಕೆಯಿಂದ ನಡೆಸಲಾದ ಸಮೀಕ್ಷೆಯಿಂದ ತಿಳಿದುಬಂದಿದ್ದು, ಫ‌ಲಕಗಳ ತೆರವು ಕಾರ್ಯಾಚರಣೆ ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ. ಒಂದು ಜಾಹೀರಾತು ಫ‌ಲಕ ತೆರವುಗೊಳಿಸಲು ಕ್ರೇನ್‌, ಕಟ್ಟರ್‌ ಹಾಗೂ ನಾಲ್ಕೈದು ಸಿಬ್ಬಂದಿಯ ಅಗತ್ಯವಿದೆ. ಆದರೆ, ಪಾಲಿಕೆಯ ಅಗತ್ಯ ಸಿಬ್ಬಂದಿ ಹಾಗೂ ಯಂತ್ರೋಪಕರಣ ಕೊರತೆಯಿರುವ ಕಾರಣ ಫ‌ಲಕಗಳ ತೆರವಿಗೆ ಟೆಂಡರ್‌ ಕರೆಯಲು ಪಾಲಿಕೆ ಚಿಂತನೆ ನಡೆಸಿದೆ. 

ಕ್ರಿಮಿನಲ್‌ ಕೇಸು ದಾಖಲು: ಅನಧಿಕೃತ ಜಾಹೀರಾತು ಫ‌ಲಕಗಳ ತೆರವುಗೊಳಿಸಲು ಪಾಲಿಕೆಯಿಂದ 20 ದಿನಗಳು ಅವಕಾಶ ನೀಡಲಾಗಿತ್ತು. ಜತೆಗೆ ಫ‌ಲಕಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಲು ಸಹ ಅವಕಾಶ ನೀಡಲಾಗಿತ್ತು. ಆದರೆ, ಈವರೆಗೆ ಯಾರು ದಾಖಲೆಗಳ ಸಲ್ಲಿಕೆಗೆ ಮುಂದಾಗಿಲ್ಲ. ಹೀಗಾಗಿ ಅನಧಿಕೃತ ಜಾಹೀರಾತು ಫ‌ಲಕವಿರುವ ಆಸ್ತಿ ಮಾಲೀಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. 

ಅನಧಿಕೃತ ಜಾಹೀರಾತು ಫ‌ಲಕಗಳ ವಿವರ
ವಲಯ                     ಫ‌ಲಕಗಳ ಸಂಖ್ಯೆ    ನೋಟಿಸ್‌ ಸಂಖ್ಯೆ    ದಂಡ-ತೆರಿಗೆ (ಕೋಟಿಗಳಲ್ಲಿ)

-ಯಲಹಂಕ                      536                    197               20.77
-ಮಹದೇವಪುರ               1,327                   981              67.94
-ದಾಸರಹಳ್ಳಿ                      198                     84                3.03
-ಆರ್‌.ಆರ್‌.ನಗರ              186                     164              5.84
-ಬೊಮ್ಮನಹಳ್ಳಿ                   481                     303              29.61
-ದಕ್ಷಿಣ                          2,293                    749              50.39
-ಪಶ್ಚಿಮ                         1,244                    486              30.21
-ಪೂರ್ವ                        3,907                    1,886           92.14
-ಒಟ್ಟು                         10,172                   4,850           299.95

Advertisement

Udayavani is now on Telegram. Click here to join our channel and stay updated with the latest news.

Next