Advertisement

ಅಹೋರಾತ್ರಿ ಧರಣಿ ಅಂತ್ಯ

05:03 PM Dec 02, 2018 | |

ಸಾಗರ: ನಗರದ ನೆಹರೂ ನಗರದ 7ನೇ ತಿರುವಿನ ಹೊಸ ಉಪ್ಪಾರ ಕೇರಿ ಸರ್ಕಲ್‌ನಲ್ಲಿ ತೆರವುಗೊಳಿಸಿರುವ ನಾಮಫಲಕವನ್ನು ಪುನರ್‌ ಅಳವಡಿಸುವಂತೆ ಒತ್ತಾಯಿಸಿ ಶುಕ್ರವಾರ ವೀರಮಾರುತಿ ಯುವಕ ಸಂಘ, ನೆಹರೂ ನಗರ ನಾಗರಿಕ ಸಮಿತಿ ಆಶ್ರಯದಲ್ಲಿ ನಗರಸಭೆ ಎದುರು ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಅಂತಿಮವಾಗಿ ಅಧಿಕಾರಿಗಳು, ಶಾಸಕರ ಮಧ್ಯಸ್ಥಿಕೆಯಲ್ಲಿ ತಡರಾತ್ರಿ ಸಮಾಪ್ತಿಗೊಂಡಿದೆ. ಸಾಗರ ಉಪವಿಭಾಗದ ಸಹಾಯಕ ಆಯುಕ್ತರು ಸೂಕ್ತ ಭರವಸೆ ನೀಡಿದ ನಂತರ ಧರಣಿಯನ್ನು ಹಿಂದಕ್ಕೆ ಪಡೆಯಲಾಯಿತು.

Advertisement

ಶುಕ್ರವಾರ ತಡರಾತ್ರಿವರೆಗೂ ನೂರಾರು ಸಂಖ್ಯೆಯಲ್ಲಿ ನಗರಸಭೆ ಎದುರು ಜಮಾವಣೆಗೊಂಡಿದ್ದ ಜನರು ನಾಮಫಲಕ ಅಳವಡಿಸುವವರೆಗೂ ಧರಣಿ ಹಿಂದೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಆಗಮಿಸಿದ ಶಾಸಕ ಎಚ್‌. ಹಾಲಪ್ಪ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದರು. ನಗರಸಭೆ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಎರಡೂ ಕೋಮಿನ ಮುಖಂಡರು ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಜೊತೆಗೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಕ್ತ ಮಾತುಕತೆ ನಡೆಯಿತು.

ಶಾಶ್ವತ ನಾಮಫಲಕ ಅಳವಡಿಕೆ: ಸಭೆಯ ನಂತರ ಮಾತನಾಡಿದ ಎಸಿ ದರ್ಶನ್‌ ಎಚ್‌.ವಿ., ಊರಿನಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡುವುದು ತಾಲೂಕು ಆಡಳಿತದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ನಗರಸಭೆ ಹಾಗೂ ಸರ್ಕಾರಿ ದಾಖಲೆ ಪ್ರಕಾರ ಹೊಸ ಉಪ್ಪಾರ ಕೇರಿ ಮುಖ್ಯ ರಸ್ತೆ ಎಂದು ನಾಮಕರಣ ಮಾಡಲಾಗುತ್ತದೆ. ಈ ನಾಮಫಲಕ ಶಾಶ್ವತವಾಗಿ ಉಳಿಯುವಂತೆ ನಗರಸಭೆ ವತಿಯಿಂದ ಸಿಮೆಂಟ್‌ ಸ್ಟ್ರಕ್ಚರ್‌ ಹಾಕಿ ನಿರ್ಮಾಣ ಮಾಡಲಾಗುತ್ತದೆ. ಹಾಲಿ ವಿವಾದಕ್ಕೀಡಾಗಿರುವ ವೃತ್ತದಲ್ಲಿ ಯಾವುದೇ ನಾಮಫಲಕವನ್ನು ಯಾರೂ ಹಾಕುವಂತಿಲ್ಲ. ನಾಮಫಲಕ ಹಾಕುವ ಸಂದರ್ಭದಲ್ಲಿ ಎರಡೂ ಕೋಮಿನವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತದೆ ಎಂದರು.

ಶಾಸಕ ಎಚ್‌. ಹಾಲಪ್ಪ ಮಾತನಾಡಿ, ಯಾರು ನಾಮಫಲಕವನ್ನು ಕಿತ್ತು ಹಾಕಿದ್ದರೋ ಅವರೇ ನಾಮಫಲಕವನ್ನು ಹಾಕುವಂತೆ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ನಮ್ಮ ಮಾತು, ಜೀವನಪದ್ಧತಿ, ಧರ್ಮ ಹಾಗೂ ಭಾವನೆ ಉಳಿಯಬೇಕು. ಈ ಭೂಮಿ ಇರುವವರೆಗೂ ನಾಮಫಲಕ ಉಳಿಯಬೇಕು. ಈ ನಿಟ್ಟಿನಲ್ಲಿ ಚರ್ಚಿಸಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ನೀವು ತಲೆ ತಗ್ಗಿಸುವಂತೆ ಮಾಡುವುದಿಲ್ಲ.

ನ್ಯಾಯಾಲಯಕ್ಕೆ ಹೋದರೆ ಅನಗತ್ಯ ತಿರುಗಾಟ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸೌಹಾರ್ದಯುತವಾಗಿ ಮಾತುಕತೆ ನಡೆಸಲಾಗಿದೆ. ನಾಗರಿಕರು ಯಾವುದೇ ಕಾರಣಕ್ಕೂ ಪ್ರಚೋದನೆಗೆ ಒಳಗಾಗಬಾರದು. ಎರಡೂ ಕೋಮಿನವರು ಸೇರಿ ಮಾತುಕತೆ ನಡೆಸಿದ್ದೇವೆ. ಊರಿನಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡಲು ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.

Advertisement

ತಹಶೀಲ್ದಾರ್‌ ರಶ್ಮಿ, ಡಿವೈಎಸ್‌ಪಿ ಮಂಜುನಾಥ ಕವರಿ, ನಗರಸಭೆ ಅಧ್ಯಕ್ಷೆ ವೀಣಾ ಪರಮೇಶ್ವರ್‌, ಉಪಾಧ್ಯಕ್ಷೆ ಗ್ರೇಸಿ
ಡಯಾಸ್‌, ಪ್ರಮುಖರಾದ ಅ.ಪು. ನಾರಾಯಣಪ್ಪ, ಟಿ.ಡಿ. ಮೇಘರಾಜ್‌, ಯು. ಎಚ್‌. ರಾಮಪ್ಪ, ಐ.ವಿ. ಹೆಗಡೆ, ಸಂತೋಷ್‌, ಅನೂಪ್‌, ಸೈಯದ್‌ ತಾಹೀರ್‌, ರಶೀದ್‌, ತಶ್ರೀಫ್‌ ಇನ್ನಿತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next