Advertisement
ವಿದ್ಯಾಭ್ಯಾಸದಿಂದ ದೂರ ಉಳಿವ ಹೆಣ್ಣು ಮಕ್ಕಳನ್ನು ಸರ್ಕಾರಿ ಶಾಲೆಗೆ ಆಕರ್ಷಿಸುವ ಸಲುವಾಗಿ ಸಿಎಂ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ತಕ್ಷಣದ ಬಜೆಟ್‌ನಲ್ಲಿ ಘೋಷಿಸಿದ್ದ ಈ ಯೋಜನೆ ಇದೀಗ ಅನುದಾನದ ಕೊರತೆಯಿಂದ ಹಳ್ಳ ಹಿಡಿದಿದೆ.
Related Articles
Advertisement
ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ದೂರು:ಕೆಲ ಜಿಲ್ಲೆಗಳಲ್ಲಿ ಹೆಣ್ಣುಮಕ್ಕಳಿಗೆ ಪ್ರೋತ್ಸಾಹಧನ ವಿತರಿಸದೇ ಇರುವ ಬಗ್ಗೆ “ಉದಯವಾಣಿ’ 2017ರ ಏ.17ರಂದು ವಿಶೇಷ ವರದಿ ಪ್ರಕಟಿಸಿತ್ತು. ಪರಿಣಾಮ ಲೋಕಾಯಕ್ತ ಪಿ. ವಿಶ್ವನಾಥ ಶೆಟ್ಟಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ಧನ ನೀಡದೇ ಬಾಕಿ ಉಳಿಸಿಕೊಂಡಿರುವ ಸಂಬಂಧ ವರದಿ ನೀಡುವಂತೆ ಸೂಚನೆ ನೀಡಿದ್ದರು. ಲೋಕಾಯುಕ್ತರಿಗೆ ಸಲ್ಲಿಕೆಯಾಗಿರುವ ವರದಿಯಲ್ಲಿ ಕೆಲ ಜಿಲ್ಲೆಗಳಲ್ಲಿ ಅನುದಾನ ಬಿಡುಗಡೆಯಾದರೂ ಹೆಣ್ಣುಮಕ್ಕಳಿಗೆ ನೀಡದೇ ಇರುವ ಸಂಗತಿ ಬೆಳಕಿಗೆ ಬಂದಿದೆ. ಹಣ ಬಳಕೆಯಾಗಿಲ್ಲ: ರಾಜ್ಯದ 26 ಜಿಲ್ಲೆಗಳಿಂದ ಶಿಕ್ಷಣ ಇಲಾಖೆಯು ರಾಜ್ಯ ಲೋಕಾಯುಕ್ತರಿಗೆ ವರದಿ ಸಲ್ಲಿಸಿದೆ. ಹಾವೇರಿ ಜಿಲ್ಲೆಯಲ್ಲಿ 2014-15ನೇ ಸಾಲಿನ ವರೆಗೆ ಸರ್ಕಾರದಿಂದ ಬಿಡುಗಡೆಗೊಂಡ 43,40,250 ರೂ.ಗಳಲ್ಲಿ ನಯಾಪೈಸೆ ಬಳಕೆಯಾಗಿಲ್ಲ. 2015-16ನೇ ಸಾಲಿನಲ್ಲಿ ಬಿಡುಗಡೆಗೊಂಡ 42,55,200 ರೂ.ಗಳನ್ನು ಹೆಣ್ಣುಮಕ್ಕಳಿಗೆ ಹಂಚಿಕೆ ಮಾಡಿಲ್ಲ. ಪರಿಣಾಮ 9 ಸಾವಿರಕ್ಕೂ ಅಧಿಕ ಮಂದಿ 1ನೇ ತರಗತಿಗೆ ದಾಖಲಾಗಿದ್ದ ಹೆಣ್ಣುಮಕ್ಕಳು ಪ್ರೋತ್ಸಾಹಧನದಿಂದ ವಂಚಿತರಾಗಿದ್ದಾರೆ. ಸದ್ಭಳಕೆಯಾಗದ ಅನುದಾನವನ್ನು ಸರ್ಕಾರಕ್ಕೆ ಹಿಂತಿರುಗಿಸುವ ಗೋಜಿಗೂ ಕೆಲವು ಜಿಲ್ಲೆಯ ಅಧಿಕಾರಿಗಳು ಮುಂದಾಗಿಲ್ಲ. ಪ್ರೋತ್ಸಾಹಧನ ನೀಡಿಲ್ಲ: ಬೆಂಗಳೂರು ಉತ್ತರ ತಾಲೂಕಿನಲ್ಲಿ 2014 -15ನೇ ಸಾಲಿನಲ್ಲಿ ಬಿಡುಗಡೆಯಾದ 18,85,950 ರೂ. ಅನುದಾನ ಸದ್ಬಳಕೆ ಮಾಡಿಕೊಂಡಿಲ್ಲ. ಪರಿಣಾಮ ಆ ವರ್ಷ 4191 ವಿದ್ಯಾರ್ಥಿನಿಯರಿಗೆ ಯೋಜನೆ ಲಾಭ ಸಿಕ್ಕಿಲ್ಲ. ಸೋಜಿಗದ ಸಂಗತಿಯೆಂದರೆ ಬಳಕೆಯಾಗದ ಅನುದಾನವನ್ನು 2015-16ನೇ ಸಾಲಿನಲ್ಲಿ ದಾಖಲಾದ ವಿದ್ಯಾರ್ಥಿನಿಯರಿಗೆ ಹಂಚಿಕೆ ಮಾಡಿ ಅಧಿಕಾರಿಗಳು ಜಾಣ್ಮೆ ಮೆರೆದಿದ್ದಾರೆ. ಲೋಕಾಯುಕ್ತರ ನೋಟಿಸ್ ಬಳಿಕ ಎಲ್ಲಾ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ವರದಿಯನ್ನು ಸಲ್ಲಿಸಿದರೂ, ಇದುವರೆಗೂ ಯಾದಗಿರಿ, ಶಿವಮೊಗ್ಗ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಲೋಕಾಯುಕ್ತರಿಗೆ ವರದಿ ಸಲ್ಲಿಕೆಯಾಗಿಲ್ಲ. ಹೀಗಾಗಿ ತಕ್ಷಣ ವರದಿ ನೀಡುವಂತೆ ಲೋಕಾಯುಕ್ತರು ನಾಲ್ಕು ಜಿಲ್ಲೆಗಳ ಜಿಲ್ಲಾ ಶಿಕ್ಷಣ ಆಯುಕ್ತರುಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಉಳಿಕೆ ಅನುದಾನ
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಮತ್ತು ಹಾಜರಾತಿ ಕೊರತೆಯಿಂದ ಹಲವು ಜಿಲ್ಲೆಗಳಲ್ಲಿ ಉಳಿಕೆಯಾಗಿದ ಅನುದಾನವನ್ನು ವಾಪಾಸ್ ಸರ್ಕಾರಕ್ಕೆ ನೀಡಿಲ್ಲ. ಬಳ್ಳಾರಿಯಲ್ಲಿ 3,80,306 ರೂ., ರಾಯಚೂರಿನಲ್ಲಿ 10,44,084 ರೂ., ಬೆಳಗಾವಿಯಲ್ಲಿ 29,410 ರೂ. ಚಿಕ್ಕಮಗಳೂರಿನಲ್ಲಿ 27,703 ರೂ. ಬೆಂ.ಗ್ರಾಮಾಂತರ 1,34,550 ರೂ., ಗದಗದಲ್ಲಿ 2,85,750, ಕೊಡಗಿನಲ್ಲಿ 41,994, ಉಡುಪಿಯಲ್ಲಿ 1,64,073, ರಾಮನಗರದಲ್ಲಿ 2,957 ರೂ. ಮೊದಲಾದ ಜಿಲ್ಲೆಗಳು ಅನುದಾನವನ್ನು ತಮ್ಮಲ್ಲೇ ಉಳಿಸಿಕೊಂಡಿದೆ. ಮಂಡ್ಯ, ವಿಜಯಪುರ, ಮೈಸೂರು, ದಾವಣಗೆರೆ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮೊದಲಾದ ಜಿಲ್ಲೆಗಳು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಹಂಚಿಕೆಯ ನಂತರ ಉಳಿದ ಹಣವನ್ನು ಹಲವು ಜಿಲ್ಲೆಗಳಿಂದ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ ಯೋಜನೆಯ ಉದ್ದೇಶವೇನು?
ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಗೆ ಹೆಣ್ಣು ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಉತ್ತೇಜಿಸಲು ಪ್ರತಿ ದಿನದ ಹಾಜರಾತಿಗೆ 2 ರೂ. ಪ್ರೋತ್ಸಾಹಧನ(ಹೆಣ್ಣು ಮಕ್ಕಳಿಗೆ ಮಾತ್ರ) ನೀಡುವ ಯೋಜನೆಗೆ ರಾಜ್ಯದ ವಿವಿಧ ಭಾಗದಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಶಾಲಾ ಮುಖ್ಯಶಿಕ್ಷಕರ ಮೂಲಕ ವಿದ್ಯಾರ್ಥಿಗಳ ಅಥವಾ ಅವರ ಹೆತ್ತವರ ಖಾತೆಗೆ ನೇರವಾಗಿ ಹಣ ಜಮಾ ಮಾಡಲು ಬೇಕಾದ ವ್ಯವಸ್ಥೆಯನ್ನು ರೂಪಿಸಿದ್ದರು. ಒಂದನೇ ತರಗತಿಗೆ ಹೆಣ್ಮಕ್ಕಳ ಹಾಜರಾತಿ:
ವರ್ಷ ಸಂಖ್ಯೆ
2013 -14 4,19,450
2014-15 4,10,733
2015-16 3,95,597
2016-17 2,34,526
2017-18 2,00000(ಅಂದಾಜು) ಕಳೆದ ಸಾಲಿನ ಹಣ ಇನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಪ್ರಸಕ್ತ ಸಾಲಿನಿಂದ ಒಂದನೇ ತರಗತಿಗೆ ಹೆಣ್ಣುಮಕ್ಕಳ ಹಾಜರಾತಿಗೆ ನೀಡುವ ಎರಡು ರೂಪಾಯಿ ಪ್ರೋತ್ಸಾಹ ಧನ ಯೋಜನೆಯನ್ನು ನಿಲ್ಲಿಸಿದ್ದೇವೆ.
-ಬಿ.ಕೆ.ಬಸವರಾಜು, ನಿರ್ದೇಶಕ ಪ್ರಾಥಮಿಕ ಶಿಕ್ಷಣ ಮುಖ್ಯಶಿಕ್ಷಕರ ಕರ್ತವ್ಯ ಲೋಪ ತೋರಿಸುತ್ತದೆ. ಈಗಾಗಲೇ ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಿಂದ ವರದಿ ಬಂದಿದೆ.ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗೊಂದಿಗೆ ಚರ್ಚಿಸಿ, ಅನುದಾನ ದುರ್ಬಳಕೆ ಸಾಬೀತಾದರೆ ತನಿಖೆಗೆ ಆದೇಶಿಸಲಾಗುವುದು.
– ನ್ಯಾ. ಪಿ.ವಿಶ್ವನಾಥ ಶೆಟ್ಟಿ, ಲೋಕಾಯುಕ್ತ ಅನೇಕರು ಗಂಡುಮಕ್ಕಳನ್ನು ಖಾಸಗಿ ಹಾಗೂ ಹೆಣ್ಣು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಅಸಮಾನತೆ ನಿವಾರಣೆಗೆ ಪ್ರೋತ್ಸಾಹಧನ ಯೋಜನೆ ಅತಿ ಮುಖ್ಯ. ಹೆಣ್ಮಕ್ಕಳಿಗೆ ಶಿಕ್ಷಣ ನೀಡಲು ಇನ್ನಷ್ಟು ಯೋಜನೆಯನ್ನು ಸರ್ಕಾರ ನೀಡಬೇಕೇ ವಿನಃ ಇರುವ ಯೋಜನೆ ರದ್ದು ಮಾಡುವುದು ಸರಿಯಲ್ಲ.
-ಡಾ.ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞ – ಮಂಜುನಾಥ್ ಲಘುಮೇನಳ್ಳಿ/ರಾಜು ಖಾರ್ವಿ ಕೊಡೇರಿ