Advertisement

ಎಲೆಕ್ಟ್ರಿಕ್‌ ವಾಹನ ನೀತಿ ಸಮರ್ಪಕ ಅನುಷ್ಠಾನಕ್ಕೆ ಒತ್ತು

03:06 PM Dec 02, 2017 | Team Udayavani |

ಬೆಂಗಳೂರು: ಪರಿಸರಸ್ನೇಹಿ ಎಲೆಕ್ಟ್ರಿಕಲ್‌ ವಾಹನಗಳ ಬಳಕೆ ಹಾಗೂ ಉತ್ಪಾದನೆಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ರೂಪಿಸಿರುವ “ಎಲೆಕ್ಟ್ರಿಕಲ್‌ ವೆಹಿಕಲ್‌ ನೀತಿ’ಯ ಸಮರ್ಪಕ ಅನುಷ್ಠಾನ ಕುರಿತು ಸಮಿತಿ ರಚನೆಗೆ ಆದೇಶಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಿಂಗಳಲ್ಲಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

Advertisement

ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ದಲ್ಲಿ ಶುಕ್ರವಾರ “ಎಲೆಕ್ಟ್ರಿಕಲ್‌ ವೆಹಿಕಲ್‌ ಪಾಲಿಸಿ’ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ವಾಹನ ತಯಾರಿಕಾ ಕಂಪನಿಗಳ ಪ್ರಮುಖರು, ಇಂಧನ ಇಲಾಖೆ, ಸಾರಿಗೆ ಇಲಾಖೆ, ಮೂಲ ಸೌಕರ್ಯ ಇಲಾಖೆ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸಿದರು.

ಎಲೆಕ್ಟ್ರಿಕಲ್‌ ವೆಹಿಕಲ್‌ ರಾಜಧಾನಿಯಾಗುವ ನಿಟ್ಟಿನಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ರೂಪುಗೊಂಡಿರುವ ಎಲೆಕ್ಟ್ರಿಕಲ್‌ ವೆಹಿಕಲ್‌ ನೀತಿಯ ಯಶಸ್ವಿ ಜಾರಿಗೆ ಪೂರಕವಾದ ನೀಲನಕ್ಷೆ ಸಿದ್ಧಪಡಿಸಲು ಡಿ.ವಿ.ಪ್ರಸಾದ್‌ ನೇತೃತ್ವದಲ್ಲಿ ಸಮಿತಿ ರಚನೆಗೆ ಮುಖ್ಯಮಂತ್ರಿಗಳು ಆದೇಶಿಸಿದರು. ವರದಿ ಸಿದ್ಧಪಡಿಸುವ ವೇಳೆ ಉದ್ಯಮಿಗಳು, ತಯಾರಕರು, ಸಂಬಂಧಪಟ್ಟವರ ಅಭಿಪ್ರಾಯಗಳನ್ನು ಪಡೆವಂತೆ ಸೂಚಿಸಿದರು.

ಉತ್ಪಾದನೆಗೆ ರಿಯಾಯ್ತಿ: ಇದಕ್ಕೂ ಮುನ್ನ ಕೆಲ ಉದ್ಯಮಿಗಳು ಮಾತನಾಡಿ, ಚೀನಾ, ಸ್ವೀಡನ್‌ನಲ್ಲಿ ಎಲೆಕ್ಟ್ರಿಕಲ್‌ ವಾಹನಗಳ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಸ್ಥಳೀಯರಿಗೆ ಎಲ್ಲ ರೀತಿಯ ಸೌಕರ್ಯ ಕಲ್ಪಿಸಿ ಎಲೆಕ್ಟ್ರಿಕಲ್‌ ವಾಹನ ಬಳಕೆಗೆ ಉತ್ತೇಜಿಸುತ್ತಿವೆ. ಸಮೂಹ ಸಾರಿಗೆಗೂ ಎಲೆಕ್ಟ್ರಿಕಲ್‌ ವಾಹನಗಳನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತಿವೆ.

ಚೀನಾದಲ್ಲಿ 1.73 ಲಕ್ಷ ಎಲೆಕ್ಟ್ರಿಕ್‌ ಬಸ್‌ಗಳು ಬಳಕೆಯಲ್ಲಿವೆ. ಸ್ವೀಡನ್‌ನಲ್ಲಿ ಪ್ರತಿ ವರ್ಷ ಎಲೆಕ್ಟ್ರಿಕಲ್‌ ವಾಹನಗಳ ನೋಂದಣಿ ಏರಿಕೆಯಾಗುತ್ತಿದೆ. ಎಲೆಕ್ಟ್ರಿಕ್‌ ವಾಹನ ತಯಾರಿಕಾ ಕಂಪನಿಗಳು ಉತ್ಪಾದನೆಗೆ ಉತ್ತೇಜಿಸಲು ವಿಶೇಷ ರಿಯಾಯ್ತಿಯನ್ನೂ ನೀಡುತ್ತಿವೆ ಎಂದು ಸಭೆಯಲ್ಲಿ ತಿಳಸಿದರು.

Advertisement

ವೆಹಿಕಲ್‌ ಚಾರ್ಜಿಂಗ್‌ ಸ್ಟೇಷನ್‌: ಇದೇ ವೇಳೆ ಸರ್ಕಾರಿ ಅಧಿಕಾರಿಗಳು ಸಹ ನೀತಿಯ ಕೆಲ ಅಂಶಗಳ ಬಗ್ಗೆ ಪ್ರಸ್ತಾಪಿಸಿ, ರಾಜ್ಯದಲ್ಲಿ ಸದ್ಯ ದ್ವಿಚಕ್ರ, ತ್ರಿಚಕ್ರ ಹಾಗೂ ಲಘು ವಾಹನಗಳು ಬಳಕೆಯಲ್ಲಿವೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೂ ಎಲೆಕ್ಟ್ರಿಕಲ್‌ ಬಸ್‌ಗಳನ್ನು ರಸ್ತೆ ಗಿಳಿಸುವ ಬಗ್ಗೆ ಪ್ರಯತ್ನ ನಡೆಸಿದೆ.

ಎಲೆಕ್ಟ್ರಿಕಲ್‌ ವೆಹಿಕಲ್‌ ನೀತಿ ಮೂಲಕ ಸಾರ್ವಜನಿಕರು ಈ ವಾಹನಗಳ ಬಳಕೆಗೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ಪ್ರಮುಖ ನಗರಗಳಲ್ಲಿ ಜನನಿಬಿಡ ಸ್ಥಳ, ಬಸ್‌, ರೈಲುನಿಲ್ದಾಣಗಳ ಬಳಿ ಬಿಐಎಸ್‌ ದರ್ಜೆಯ ಎಲೆಕ್ಟ್ರಿಕಲ್‌ ವೆಹಿಕಲ್‌ ಚಾರ್ಜಿಂಗ್‌ ಸ್ಟೇಷನ್‌ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಎಲೆಕ್ಟ್ರಿಕಲ್‌ ವೆಹಿಕಲ್‌ ತಯಾರಿಕೆಗೆ ವಿಶೇಷ ವಲಯ ನಿರ್ಮಾಣದ ಜತೆಗೆ ಸಂಶೋಧನೆ ಮತ್ತು ಹೊಸ ತಂತ್ರಜ್ಞಾನ ಪರೀಕ್ಷಾ ವ್ಯವಸ್ಥೆ, ಅಭಿವೃದ್ಧಿಗೆ ಪೂರಕವಾದ ಸ್ಟಾರ್ಟ್‌ಅಪ್‌ಗ್ಳಿಗೆ ಉತ್ತೇಜನ ನೀಡುವುದು. ಐಟಿಪಾರ್ಕ್‌ಗಳು, ಎಸ್‌ಇಜಡ್‌ನ‌ಂತಹ ಪ್ರದೇಶದಲ್ಲಿ ಕಟ್ಟಡಗಳಲ್ಲೇ ವೆಹಿಕಲ್‌ ಚಾರ್ಜಿಂಗ್‌ ಕೇಂದ್ರ ನಿರ್ಮಾಣ ಕಡ್ಡಾಯಗೊಳಿಸುವುದು.

ವಾಹನಗಳ ಉತ್ಪಾದನೆ, ವಹಿವಾಟಿಗೆ ಪೂರಕ ವಾತಾವರಣ ಸೃಷ್ಟಿಸುವ ಅಗತ್ಯವಿದೆ ಎಂದು ಹೇಳಿದರು. ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಮಾತನಾಡಿದರು. ಸಚಿವ ಎಚ್‌.ಎಂ.ರೇವಣ್ಣ ಇತರೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next