Advertisement

ಹುತಾತ್ಮ ಯೋಧರ ಭಾವುಕ ಸ್ಮರಣೆ

07:30 AM Jul 27, 2019 | Suhan S |

ಬೆಂಗಳೂರು: ಯೋಧರ ತ್ಯಾಗ ಬಲಿದಾನ ಸ್ಮರಣೆಯ ಮೂಲಕ ಶುಕ್ರವಾರ ರಾಜಧಾನಿಯ ಹಲವೆಡೆ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು.

Advertisement

ಪಾಕಿಸ್ತಾನದ ವಿರುದ್ಧ ಭಾರತದ ಸೈನಿಕರು ಹೋರಾಟ ನಡೆಸಿ ತಮ್ಮ ತ್ಯಾಗ ಬಲಿದಾನದ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು. ಆ ವೀರ ಯೋಧರಿಗೆ ನಮನ ಸಲ್ಲಿಸಲು ಪ್ರತಿ ವರ್ಷ ಜುಲೈ 26 ಅನ್ನು ಪ್ರತಿ ವರ್ಷ ಕಾರ್ಗಿಲ್ ವಿಜಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಾರಿಯದ್ದು 20ನೇ ಕಾರ್ಗಿಲ್ ವಿಜಯ ದಿವಸ ಸಂಭ್ರಮವಾಗಿದ್ದು, ನಗರದ ವಿವಿಧ ಸೇನಾ ಸ್ಥಳಗಳು, ಶಾಲಾ ಕಾಲೇಜುಗಳು, ಕಚೇರಿಗಳಲ್ಲಿ ಹುತಾತ್ಮ ಯೋಧರು ಹಾಗೂ ಯುದ್ಧದಲ್ಲಿ ಭಾಗವಹಿಸಿದ್ದ ಎಲ್ಲಾ ಸೇನಾನಿಗಳಿಗೂ ನಮನ ಸಲ್ಲಿಸಲಾಯಿತು.

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಗರದ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನದಲ್ಲಿ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉದ್ಯಾನದ ಸೇನಾ ಸ್ಮಾರಕಕ್ಕೆ ಮಾಜಿ ಸೈನಿಕರು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಮಕ್ಕಳು ಪುಪ್ಪ ನಮನ ಸಲ್ಲಿಸಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌, ನಗರ ಪೊಲೀಸ್‌ ಕಮಿಷನರ್‌ ಅಲೋಕ್‌ ಕುರ್ಮಾ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್, ಐಪಿಎಸ್‌ ಅಧಿಕಾರಿ ವಿಜಯ್‌ ಕುಮಾರ್‌ ಸಿಂಗ್‌ ಹಾಗೂ ಎನ್‌ಸಿಸಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ವೇಳೆ ಅಲೋಕ್‌ ಕುಮಾರ್‌ ಮಾತನಾಡಿ, ನಮ್ಮ ಸೈನಿಕರು 20 ವರ್ಷದ ಹಿಂದೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದರು. ಇದರಿಂದಾಗಿ ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯ ಗಳಿಸಿತು. ಈ ಯುದ್ಧದಲ್ಲಿ 500ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದು, ಅವರ ಧೈರ್ಯ, ಸಾಹಸದ ಹೋರಾಟಕ್ಕೆ ಅನಂತ ನಮನಗಳು ಎಂದರು.

Advertisement

ನಿವೃತ್ತ ಅಧಿಕಾರಿ ಕರ್ನಲ್ ರಾಜನ್‌ ಮಾತನಾಡಿ, ಭಾರತದ ಪಾಲಿಗೆ ಜು.26 ಐತಿಹಾಸಿಕ ದಿನ. ಒಟ್ಟು 83 ದಿನಗಳು ನಡೆದ ಯುದ್ಧದಲ್ಲಿ ನಮ್ಮೆಲ್ಲಾ ಸೈನಿಕರು ಎದೆಗುಂದದೆ ಹೋರಾಟ ನಡೆಸಿ ಪಾಕಿಸ್ತಾನಿಗಳನ್ನು ಕಾರ್ಗಿಲ್ ಪ್ರದೇಶದಿಂದ ಓಡಿಸಿದರು. ಇನ್ನು ಈ ಯುದ್ಧದಲ್ಲಿ ಹಲವು ಯೋಧರನ್ನು ನಾವು ಕಳೆದುಕೊಳ್ಳಬೇಕಾಯಿತು. ಇಂದಿಗೂ ಲಕ್ಷಾಂತರ ಯೋಧರು ದೇಶದ ಗಡಿ ಕಾಯುತ್ತಿದ್ದಾರೆ. ಪ್ರತಿಯೊಬ್ಬರೂ ಯೋಧರಿಗೆ ಗೌರವ ಸಲ್ಲಿಸಬೇಕು ಎಂದರು.

ಮಾಜಿ ಸೈನಿಕರು ಹಾಗೂ ಹುತಾತ್ಮಯೋಧರ ಕುಟುಂಬದ ಸದಸ್ಯರು ಕಾರ್ಗಿಲ್ ಯುದ್ಧದ ದಿನಗಳನ್ನು ನೆನಪಿಸಿಕೊಂಡು ಭಾವುಕರಾದರು. ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನೆಯ ರಾಜ್ಯ ಶಾಖೆಯ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಮಿಲಿಟರಿ ಸ್ಮಾರಕಕ್ಕೆ ಗೌರವ ಸೂಚಿಸಿದರು.

ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಗಿರಿನಗರ ಶಾಂತಿನಿಕೇತನ ಫೌಂಡೇಶನ್‌ ಸ್ಕೂಲ್ನ ವಿದ್ಯಾರ್ಥಿಗಳಿಂದ ನಗರದ ಬ್ರಿಗೇಡ್‌ ರಸ್ತೆಯ ‘ದ ಗ್ರೇಟ್ ವಾರ್‌’ ಸ್ಮಾರಕದ ಎದುರು ವಿದ್ಯಾರ್ಥಿಗಳು ದೇಶಕ್ಕಾಗಿ ಹುತಾತ್ಮರಾದವರ ಪ್ರತಿಯೊಂದು ಕ್ಷಣವನ್ನು ನಾಟಕದ ಮೂಲಕ ಪ್ರದರ್ಶಿಸಿದರು. ಈ ಮೂಲಕ 20 ವರ್ಷಗಳ ಹಿಂದೆ ಕಾರ್ಗಿಲ್ ಯುದ್ದದಲ್ಲಿ ಯೋಧರು ಹೋರಾಡಿರುವ ಸನ್ನಿವೇಶವನ್ನು ಪ್ರೇಕ್ಷಕರ ಕಣ್ಣೆದುರು ತಂದುಕೊಟ್ಟು, ಯೋಧರ ದೇಶಪ್ರೇಮದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಬಳಿಕ ಸಹಿ ಸಂಗ್ರಹ, ರಾಷ್ಟ್ರಧ್ವಜ ಹಾಗೂ ಯೋಧರ ಭಾವಚಿತ್ರಗಳಿಗೆ ನಮನಸಲ್ಲಿಸಿ ವಿಜಯೋತ್ಸವದ ಘೋಷಣೆ ಕೂಗಿದರು.

ಈ ವೇಳೆ ಫೌಂಡೇಶನ್‌ನ ಉಪಾಧ್ಯಕ್ಷ ಸುಮಂತ್‌ ನಾರಾಯಣ್‌ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕಾರ್ಗಿಲ್ ವಿಜಯ್‌ ದಿನವನ್ನು ಆಚರಿಸಿಕೊಂಡು ಬರುತ್ತಿದ್ದು, ಈ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಯೋಧರು ಭಾರತದ ಗಡಿ ಕಾಯುತ್ತಿರುವುದರಿಂದಲೇ ದೇಶದೊಳಗೆ ನಾವೆಲ್ಲ ನೆಮ್ಮದಿ ಹಾಗೂ ಭದ್ರತೆಯಿಂದ ಜೀವನ ನಡೆಸಲು ಸಾಧ್ಯವಾಗಿದೆ. ಹೀಗಾಗಿ, ಅವರನ್ನು ಸ್ಮರಿಸುವುದು, ಅವರಿಗೆ ಬೆಂಬಲ ಸೂಚಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇನ್ನು ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ದೊರೆಯಲಿ, ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಫೌಂಡೇಶನ್‌ ವತಿಯಿಂದ ಹಾರೈಸುತ್ತೇವೆ ಎಂದು ತಿಳಿಸಿದರು. ನೂರಾರು ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.

ಪ್ರಮಾಣಕ್ಕೂ ಮುನ್ನ ಹುತಾತ್ಮರಿಗೆ ಸಲಾಂ:

ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮೊದಲು ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನದಲ್ಲಿರುವ ಕಾರ್ಗಿಲ್ ಸ್ಮಾರಕ ಸ್ಥಳಕ್ಕೆ ತೆರಳಿದ ಬಿ.ಎಸ್‌. ಯಡಿಯೂರಪ್ಪ ಅವರು, ಸ್ಮಾರಕಕ್ಕೆ ಪುಪ್ಪ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿ, 20 ವರ್ಷಗಳ ಹಿಂದೆ ಭಾರತೀಯ ಸೇನೆ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಕಾರ್ಗಿಲ್ ಯುದ್ಧ ಜಯಗಳಿಸಿದೆ. ಪ್ರಮಾಣವಚನ ಸ್ವೀಕರಿಸುವ ಮುನ್ನ ವೀರ ಯೋಧರಿಗೆ ನಮನ ಸಲ್ಲಿಸಲು ಬಂದಿದ್ದೇನೆ ಎಂದರು.
ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ:

ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ಕರ್ನಾಟಕ ಚಾಪ್ಲರ್‌ನ ವಿದ್ಯಾರ್ಥಿಗಳು ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ರಾಷ್ಟ್ರೀಯ ಸೇನಾ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಸೈನಿಕರ ತ್ಯಾಗದ ಕುರಿತು ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ಕರ್ನಾಟಕ ಚಾಪ್ಲರ್‌ನ ಅಧ್ಯಕ್ಷರಾದ ಮೇಜರ್‌ ಆರ್‌.ಡಿ.ಭಾರ್ಗವ ಮಾತನಾಡಿದರು.
Advertisement

Udayavani is now on Telegram. Click here to join our channel and stay updated with the latest news.

Next