Advertisement

ಭಾವನಾತ್ಮಕ ವಿಚಾರಗಳೇ ಬಿಜೆಪಿ ಪ್ರಣಾಳಿಕೆ

10:52 PM Apr 09, 2019 | Lakshmi GovindaRaju |

ಕಲಬುರಗಿ: ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಜನರನ್ನು ಕೆರಳಿಸುತ್ತಿದೆ ಎನ್ನುವುದಕ್ಕೆ ಬಿಡುಗಡೆಗೊಳಿಸಿರುವ ಪ್ರಣಾಳಿಕೆಯೇ ಸಾಕ್ಷಿಯಾಗಿವೆ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ, ಶಬರಿಮಲೆ ಮಹಿಳೆಯರ ಪ್ರವೇಶ ವಿಚಾರ, ಕಾಶ್ಮೀರದ 370(ಜೆ) ವಿಧಿ ರದ್ದು ಸೇರಿದಂತೆ ಅನೇಕ ಭಾವನಾತ್ಮಕ ವಿಚಾರಗಳು ಬಿಜೆಪಿ ಪ್ರಣಾಳಿಕೆಯಲ್ಲಿ ಸೇರಿವೆ.

ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ಮತ ಪಡೆಯಲು ಸಾಧ್ಯವಿಲ್ಲ. ರಾಮ ಮಂದಿರ ನಿರ್ಮಾಣ ಬಿಜೆಪಿಯ ಕಾಯಂ ಇಶ್ಯೂ. ರಾಮಮಂದಿರಕ್ಕಾಗಿ ರಥಯಾತ್ರೆ ಮಾಡಿದ ಎಲ್‌.ಕೆ. ಅಡ್ವಾಣಿ ಅವರನ್ನೇ ಮೂಲೆಗುಂಪು ಮಾಡಿದ್ದಾರೆ. ಇನ್ನು ಮುಂದೆಯೂ ಇದೇ ರೀತಿ ಮಾಡಿಕೊಂದು ಹೋದರೆ ಮೋದಿ ಕೂಡ ಮೂಲೆಗುಂಪಾಗುತ್ತಾರೆ ಎಂದರು.

ಕಾಂಗ್ರೆಸ್‌ ಪಕ್ಷದ ನ್ಯಾಯ ಯೋಜನೆಗೆ ಪ್ರತಿ ಯೋಜನೆ ಕೊಡಲಾಗದೇ ಬಿಜೆಪಿ ತತ್ತರಿಸಿದೆ. ಬಿಜೆಪಿಯವರು ರೈತರಿಗೆ ವರ್ಷಕ್ಕೆ ಆರು ಸಾವಿರ ರೂ. ಕೊಡುವುದಾಗಿ ಹೇಳಿದ್ದರೆ, ಕಾಂಗ್ರೆಸ್‌ ಬಡವರಿಗೆ ತಿಂಗಳಿಗೆ ಆರು ಸಾವಿರ ರೂ. ಕೊಡುವುದಾಗಿ ಹೇಳಿದೆ. ಪ್ರಧಾನಿ ಮೋದಿ ಐಟಿ, ಇಡಿ, ಸಿಬಿಐ ಸೇರಿ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಇದಕ್ಕೆ ಕಾಂಗ್ರೆಸ್‌ ಸೇರಿ ಪ್ರತಿಪಕ್ಷಗಳ ನಾಯಕರ ಮನೆಗಳು ಮಾತ್ರ ಕಾಣುತ್ತಿರುವಂತೆ ದಾಳಿ ನಡೆದಿರುವುದು ಸಾಕ್ಷಿಯಾಗಿದೆ. ಬಿಜೆಪಿಯಲ್ಲಿಯೂ ದೊಡ್ಡ ದೊಡ್ಡ ಉದ್ಯಮಿಗಳು, ಹಣವಂತರು ಇದ್ದರೂ ಯಾಕೆ ಐಟಿ ದಾಳಿ ನಡೆಯುತ್ತಿಲ್ಲ? ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ಬಿಜೆಪಿ ಕೆಟ್ಟ ಸಂಸ್ಕೃತಿಗೆ ನಾಂದಿ ಹಾಡಿದೆ ಎಂದು ಟೀಕಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next