Advertisement

ಸಂಕಷ್ಟದ ಪರಿಸ್ಥಿತಿಯಿಂದ ಅಪರಾಧಿಗಳ ಹುಟ್ಟು

12:50 AM Dec 19, 2019 | Lakshmi GovindaRaj |

ಬೆಂಗಳೂರು: ಮನುಷ್ಯ ಹುಟ್ಟಿನಿಂದಲೇ ಅಪರಾಧಿಯಾಗಿ ಹುಟ್ಟುವುದಿಲ್ಲ. ಪರಿಸ್ಥಿತಿ ಅವರನ್ನು ಅಪರಾಧಿಯನ್ನಾಗಿ ಮಾಡಿಸುತ್ತದೆ ಎಂದು ಲೇಖಕ ಹಾಗೂ ನಿವೃತ್ತ ಡಿಜಿಪಿ ಡಿ.ವಿ.ಗುರುಪ್ರಸಾದ್‌ ಅಭಿಪ್ರಾಯಪಟ್ಟರು. ಬುಧವಾರ ಎಂ.ಜಿ.ರಸ್ತೆಯ ಹಿಗ್ಗಿನ್‌ ಬೋಥಮ್‌ ಪುಸ್ತಕ ಮಳಿಗೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಪ್ರತಿಭಾ ನಂದಕುಮಾರ್‌ ಅವರ “ದಿ ಗ್ಯಾಂಗ್‌ಸ್ಟರ್ ಗೀತ’ ( ಇದು ಅಗ್ನಿ ಶ್ರೀಧರ್‌ ಅವರ ಕನ್ನಡದ “ಎದೆಗಾರಿಕೆ’ ಕೃತಿಯ ಅನುವಾದ) ಆಂಗ್ಲ ಕಾದಂಬರಿಯನ್ನು ಬಿಡುಗಡೆ ಗೊಳಿಸಿದರು.

Advertisement

ಯಾರು ಕೂಡ ಹುಟ್ಟುತ್ತಲೇ ಅಪರಾಧಿಯಾಗಿರುವುದಿಲ್ಲ. ಸಂದರ್ಭ ಅವರನ್ನು ಅಪರಾಧಿಯನ್ನಾಗಿಸಿ ಬಿಡುತ್ತದೆ. ನನ್ನ ಸುಮಾರು 37 ವರ್ಷಗಳ ಪೊಲೀಸ್‌ ಅಧಿಕಾರ ಅವಧಿಯ ದಿನಗಳಲ್ಲಿ ಹಲವು ಅಪರಾಧಿಗಳನ್ನು ನೋಡಿದ್ದೇನೆ ಎಂದು ಹೇಳಿದರು. ಅಗ್ನಿ ಶ್ರೀಧರ್‌ ಅವರು ಕನ್ನಡದಲ್ಲಿ ಬರೆದಿರುವ ಎದೆಗಾರಿಕೆ ಕೃತಿಯನ್ನು ಓದಿದ್ದೇನೆ. ಅದರಲ್ಲಿ ಬರುವಂತಹ ಸೋನು ಪಾತ್ರ ನನ್ನ ಮನಸಿಗೆ ಹಿಡಿಸಿತು. ಇಡೀ ಕೃತಿ ಭೂಗತ ಲೋಕದ ಹೊಸ ಬಗೆಯ ಅನುಭವವನ್ನು ಕಟ್ಟಿಕೊಡುತ್ತದೆ ಎಂದರು.

ಸುಲಭದ ಕೆಲಸವಲ್ಲ: ಕೇರಳ ಮೂಲದ ಆಂಗ್ಲ ಭಾಷೆಯ ಕಾದಂಬರಿಗಾರ್ತಿ ಅನಿತಾ ನಾಯರ್‌ ಮಾತನಾಡಿ, ಕೃತಿಯನ್ನು ಒಂದು ಭಾಷೆಯಿಂದ ಮತ್ತೂಂದು ಭಾಷೆಗೆ ಅನುವಾದ ಮಾಡುವುದು ಸುಲಭದ ಕೆಲಸಲ್ಲ. ಮೂಲ ಕೃತಿಗೆ ಮತ್ತು ಅಲ್ಲಿ ಬರುವ ಪಾತ್ರಗಳಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗದ ರೀತಿಯಲ್ಲಿ ಲೇಖಕಿ ಪ್ರತಿಭಾ ನಂದಕುಮಾರ್‌ ಅವರು ಅನುವಾದ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಅನುವಾದದ ಭಾಷೆ ಕೂಡ ಕ್ಲಿಷ್ಟವಾಗಿಲ್ಲ. ಸರಳ ರೀತಿಯಲ್ಲಿ ಕೃತಿ ಓದಿಸಿಕೊಂಡು ಹೋಗುತ್ತದೆ.

ಭೂಗತ ಲೋಕದ ಹಲವು ರೂಪಗಳನ್ನು “ದಿ ಗ್ಯಾಂಗ್‌ಸ್ಟರ್ ಗೀತ’ ಕೃತಿ ಕಟ್ಟಿಕೊಡುತ್ತದೆ ಎಂದು ಹೇಳಿದರು. ಅಗ್ನಿ ಶ್ರೀಧರ್‌ ಮಾತನಾಡಿ, ನಾನು ಸಾಹಿತ್ಯ ಮತ್ತು ಕಲೆಯ ಬಗ್ಗೆ ಹೆಚ್ಚು ಆಸಕ್ತಿಯುಳ್ಳವನ್ನಾಗಿದ್ದೆ. ಐ.ಎ.ಎಸ್‌. ಪರೀಕ್ಷೆ ಬರೆಯಬೇಕೆಂದು ಸಿದ್ಧಗೊಳ್ಳುತ್ತಿದ್ದೆ. ಆದರೆ ಒಂದೇ ಒಂದು ಸನ್ನಿವೇಶ ನನ್ನನ್ನು ಭೂಗತ ಲೋಕದಲ್ಲಿರುವಂತೆ ಮಾಡಿತು ಎಂದರು. ಈ ವೇಳೆ ಲೇಖಕಿ ಪ್ರತಿಭಾನಂದಕುಮಾರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next