Advertisement

Special Article ಸದೃಢ-ಸ್ವಸ್ಥ ಸಮಾಜಕ್ಕೆ ಮಿಡಿಯುವ ಡಾ|ಆರ್‌.ಎನ್‌.ಸೋನವಾಲ್ಕರ

11:25 PM Nov 01, 2023 | Team Udayavani |

ಚಿಕ್ಕಮಕ್ಕಳ ತಜ್ಞ ಡಾ|ಆರ್‌.ಎನ್‌.ಸೋನವಾಲ್ಕರ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸರಳ, ಸಾತ್ವಿಕ ಮನೋಭಾವದವರಾದ ಅವರು ಆದರ್ಶ ಜೀವನ ನಡೆಸುವ ಮೂಲಕ ಮಾದರಿ ಆಗಿದ್ದಾರೆ. ಸದೃಢ-ಸ್ವಾಸ್ಥ್ಯ ಸಮಾಜಕ್ಕಾಗಿ ಮಿಡಿಯುವ ಹೃದಯ ಶ್ರೀಮಂತಿಕೆ ಹೊಂದಿದ್ದಾರೆ. ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಅವರು ಖ್ಯಾತ ಚಿಕ್ಕಮಕ್ಕಳ ತಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಅವರ ನಿಸ್ವಾರ್ಥ ಸೇವೆ ಜಮಖಂಡಿ ಭಾಗಕ್ಕೆ ಅಭಿಸಿದೆ.

Advertisement

ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ಪ್ರತಿಷ್ಠಿತ ಸೋನವಾಲ್ಕರ ಕುಟುಂಬದ ನಿಂಗಪ್ಪ, ಯಮುನಾದೇವಿ ದಂಪತಿ ಉದರದಲ್ಲಿ 1969ರ ಏಪ್ರಿಲ್‌ 10ರಂದು ಜನಿಸಿದ ಡಾ|ಆರ್‌.ಎನ್‌.ಸೋನವಾಲ್ಕರ ಮೂಡಲಗಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಗೆ 10ನೇ ರ್‍ಯಾಂಕ್‌, ಗೋಕಾಕ ತಾಲೂಕಿಗೆ ಪ್ರಥಮ ರ್‍ಯಾಂಕ್‌ ಪಡೆದಿರುವ ಅವರು, ಆರ್‌ಎಲ್‌ಎಸ್‌ ಕಾಲೇಜಿನಲ್ಲಿ ಪಿಯುಸಿಯನ್ನು ಅತ್ಯುನ್ನತ ಶ್ರೇಣಿಯಲ್ಲಿ ಪಡೆದಿದ್ದಾರೆ. ಮೆರಿಟ್‌ ಆಧಾರದ ಮೇಲೆ ಬೆಳಗಾವಿಯ ಜವಾಹರಲಾಲ ನೆಹರೂ ಮೆಡಿಕಲ್‌ ಕಾಲೇಜಿನಲ್ಲಿ 1987ರಲ್ಲಿ ಎಂಬಿಬಿಎಸ್‌ ಪ್ರವೇಶ ಪಡೆದು ಪೂರೈಸಿದರು. ಎಂಬಿಬಿಎಸ್‌ ಪದವಿ ನಂತರ ಗುಲಬರ್ಗಾದ ಪ್ರತಿಷ್ಠಿತ ಎಂ.ಆರ್‌. ವೈದ್ಯಕೀಯ ಕಾಲೇಜಿನ ಚಿಕ್ಕಮಕ್ಕಳ ವಿಭಾಗದಲ್ಲಿ 1997ರಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಾಗಲಕೋಟೆಯ ಖ್ಯಾತ ಚಿಕ್ಕಮಕ್ಕಳ ತಜ್ಞ ಡಾ|ಆರ್‌.ಟಿ. ಪಾಟೀಲರ ಶಾಂತಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಸೇವೆ ಸಲ್ಲಿಸಿದ ಅವರು, ಜಮಖಂಡಿ ನಗರದಲ್ಲಿ 1998ರಲ್ಲಿ ವೈದ್ಯಕೀಯ ಸೇವೆ ಆರಂಭಿಸಿದರು. ಜಮಖಂಡಿಯಲ್ಲಿ ಶ್ರೀನಿವಾಸ ಆಸ್ಪತ್ರೆ ನಡೆಸುತ್ತಿದ್ದು, ಪ್ರತಿನಿತ್ಯ 300ಕ್ಕೂ ಹೆಚ್ಚು ಚಿಕ್ಕ ಮಕ್ಕಳು, ನವಜಾತ ಶಿಶುಗಳ ಆರೋಗ್ಯ ಪರೀಕ್ಷೆ ನಡೆಸುತ್ತಾರೆ. ಆಸ್ಪತ್ರೆಯಲ್ಲಿ 25 ಜನ ಸಿಬ್ಬಂದಿಗೆ ಉದ್ಯೋಗವಕಾಶ ನೀಡಿದ್ದಾರೆ. ಅವರ ಧರ್ಮಪತ್ನಿ ಡಾ|ರೇಣುಕಾ ಸೋನವಾಲ್ಕರ ಸ್ತ್ರೀರೋಗ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವೃತ್ತಿಯಲ್ಲಿ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿರುವ ಅವರು ಬಡವರಿಗಾಗಿ ಏನಾದರೂ ಸಹಾಯ ಮಾಡಬೇಕೆಂದು ವೈದ್ಯವೃತ್ತಿ ಮೂಲಕ ಸಮಾಜ ಸೇವೆಗೆ ಮುಂದಾಗಿದ್ದಾರೆ. ಸೌಮ್ಯ ಸ್ವಭಾವ, ಮೃದು ಮಾತು, ಹಗಲಿರುಳು ಸೇವೆ ಮಾಡಬೇಕೆಂಬ ತುಡಿತ, ಎಲ್ಲಾ ಚಿಕ್ಕ ಮಕ್ಕಳ ಆರೋಗ್ಯ ಕಾಪಾಡಬೇಕೆಂಬ ಮನೋಭಾವದಿಂದ ಬಡವರ ವೈದ್ಯರೆಂದೇ ಖ್ಯಾತರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿದಿನ ಅತಿ ಹೆಚ್ಚು ರೋಗಿಗಳನ್ನು ಪರೀಕ್ಷಿಸಿ ಉಪಚರಿಸುವ ವೈದ್ಯರು ಇವರಾಗಿದ್ದಾರೆ. “ಮಕ್ಕಳ ಸೇವೆಯೇ ದೇವರ ಸೇವೆ” ಎಂಬ ಭಾವನೆಯಿಂದ ವೃತ್ತಿಯಲ್ಲಿ ತೊಡಗಿದ್ದಾರೆ. ಹಸಿವು, ನೀರಡಿಕೆಯ ಪರಿವೆಯೇ ಇಲ್ಲದೆ ಮಕ್ಕಳಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಡವರ ಮಕ್ಕಳಿಗೆ ಉಚಿತ ಸೇವೆ ನೀಡುವ ಮುಖ್ಯ ಧ್ಯೇಯ ಹೊಂದಿರುವ ಅವರು ಉಚಿತವಾಗಿ ವೈದ್ಯಕೀಯ ಸೇವೆ ನೀಡಿದ್ದಾರೆ.ಸಮಾಜಮುಖಿ ಕೆಲಸಕ್ಕೆ ಸಹಕರಿಸುವ ಸ್ತ್ರೀರೋಗ ತಜ್ಞೆ ಡಾ|ರೇಣುಕಾ ಬಾಳ ಸಂಗಾತಿಯಾಗಿ ಕಾಯಕದಲ್ಲಿ ಸಹಕರಿಸುತ್ತಿದ್ದಾರೆ.

ತಮ್ಮ ವೈದ್ಯಕೀಯ ಸೇವೆ ಸಹಿತ ಬಿಡುವು ಮಾಡಿಕೊಂಡು ಸಂಘ-ಸಂಸ್ಥೆಗಳ ಜತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಮಖಂಡಿ ತಾಲೂಕಿನ ಗ್ರಾಮೀಣ ಪ್ರದೇಶ ಹಾಗೂ ವಿವಿಧ ಶಾಲೆಗಳಲ್ಲಿ ಲಯನ್ಸ್‌, ರೋಟರಿ, ಐಎಂಎ ಹಾಗೂ ಇನ್ನಿತರೆ ಸಂಘ-ಸಂಸ್ಥೆಗಳ ಸಹಯೋಗದಲ್ಲಿ 100ಕ್ಕೂ ಹೆಚ್ಚು ಉಚಿತ ವೈದ್ಯಕೀಯ ಶಿಬಿರಗಳಲ್ಲಿ ಪಾಲ್ಗೊಂಡಿದ್ದಾರೆ. ಜಮಖಂಡಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ನಡೆಯುತ್ತಿದ್ದ ಕಬಡ್ಡಿ, ಕ್ರಿಕೆಟ್‌, ವಾಲಿಬಾಲ್‌, ಕುಸ್ತಿಯಂತಹ ಕ್ರೀಡೆಗಳಿಗೆ ಧನಸಹಾಯ ಮಾಡಿದ್ದಾರೆ. ಹಿಂದೆ ಕೃಷ್ಣಾ ನದಿ ತೀರದ ಜನರು ಭೀಕರ ಪ್ರವಾಹಕ್ಕೆ ನಲುಗಿದಾಗ ಜಂಬಗಿ ಬಿ.ಕೆ. ಗ್ರಾಮದ 50 ಜನ ನೆರೆ ಸಂತ್ರಸ್ತರಿಗೆ ತಮ್ಮ ಔಟ್‌ ಹೌಸ್‌ನಲ್ಲಿ ಆಶ್ರಯ ನೀಡಿ 15 ದಿನಗಳವರೆಗೆ ಊಟೋಪಚಾರ ಸಹಿತ 200 ಜಾನುವಾರುಗಳಿಗೆ ಸ್ಥಳಾವಕಾಶ ಒದಗಿಸಿಕೊಟ್ಟು 15 ದಿನಗಳವರೆಗೆ ಮೇವು, ಹಿಂಡಿ ನೀಡಿದ್ದನ್ನು ಸಂತ್ರಸ್ತರು ಮರೆತಿಲ್ಲ. ನೆರೆ ಸಂತ್ರಸ್ತರಿಗೆ ಉಚಿತ ಆರೋಗ್ಯ ತಪಾಸಣೆ, ಔಷಧೋಪಚಾರ, ಆಹಾರ ಅಷ್ಟೇ ಅಲ್ಲ ಉಚಿತ ಹಾಸಿಗೆ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಹಮಾಲರಿಗೆ, ಆಟೋರಿಕ್ಷಾ ಚಾಲಕರಿಗೆ, ಇತರರಿಗೆ ಮಾಸ್ಕ್, ಸ್ಯಾನಿಟೈಸರ್‌, ಆಹಾರ ಸಾಮಗ್ರಿ ವಿತರಿಸಿದ್ದಾರೆ. ಲಯನ್ಸ್‌ ಸಂಸ್ಥೆ ಸಹಯೋಗದಲ್ಲಿ 1500ಕ್ಕೂ ಹೆಚ್ಚು ಜನರಿಗೆ ಉಚಿತ ನೇತ್ರಶಸ್ತ್ರ ಚಿಕಿತ್ಸೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 17 ವರ್ಷಗಳಿಂದ ಸಸಿ ನೆಡುವ ಕಾರ್ಯಕ್ರಮ ಮೂಲಕ ಸಾವಿರಾರು ಸಸಿಗಳನ್ನು ನೆಟ್ಟಿದ್ದಾರೆ. ವಿವಿಧ ಅನಾಥಾಶ್ರಮ, ಹಸಿದ ಬಡವರಿಗೆ ಆಹಾರ ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ರಸ್ತೆಬದಿ ವ್ಯಾಪಾರಿಗಳಿಗೆ ನೆರಳು ಒದಗಿಸಿದ್ದಾರೆ. 2000ರಲ್ಲಿ ಲಯನ್ಸ್‌ ಸಂಸ್ಥೆ ಸದಸ್ಯರಾಗಿ ಸೇರ್ಪಡೆಯಾಗಿ, 2007ರಲ್ಲಿ ಜಮಖಂಡಿ ಲಯನ್ಸ್‌ ಸಂಸ್ಥೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಲಯನ್ಸ್‌ ಸಂಸ್ಥೆ ಇಂಟರ್‌ ನ್ಯಾಷನಲ್‌ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕರ್ಮಭೂಮಿ ಜಮಖಂಡಿ ಆದರೆ, ಹುಟ್ಟಿ ಬೆಳೆದು ಶಿಕ್ಷಣ ಪೂರೈಸಿದ ಜನ್ಮಭೂಮಿ-ಪುಣ್ಯಭೂಮಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿಂದ 2017ರಲ್ಲಿ ಮೂಡಲಗಿಯಲ್ಲಿ ಶ್ರೀ ಶ್ರೀನಿವಾಸ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಡಿಯಲ್ಲಿ ಸಿ.ಬಿ.ಎಸ್‌.ಇ ಮಾದರಿ ಸುಸಜ್ಜಿತ ಶ್ರೀ ಶ್ರೀನಿವಾಸ ಹೈಸ್ಕೂಲ್‌ ಸ್ಥಾಪಿಸಿದ್ದಾರೆ. ತಮ್ಮ ಹುಟ್ಟೂರು ಸೇರಿದಂತೆ ಮೂಡಲಗಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ಸುಮಾರು 500 ಜನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.ಉತ್ಕೃಷ್ಟ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ರಾಜ್ಯ-ದೇಶಕ್ಕೆ ಸುಸಂಸ್ಕೃತ ನಾಗರಿಕರನ್ನು ನಿರ್ಮಿಸುವ ಯೋಜನೆ ಹೊಂದಿದ್ದಾರೆ.

Advertisement

ವೈದ್ಯಕೀಯ ಪ್ರಕೋಷ್ಠನಗರ ಮಂಡಳ ಸಂಚಾಲಕರಾಗಿ, ಮೂಡಲಗಿಯ ಶ್ರೀನಿವಾಸ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷರಾಗಿ, ಮೂಡಲಗಿಯ ಶ್ರೀ ಶ್ರೀನಿವಾಸ ಹೈಸ್ಕೂಲ್‌, ಎಸ್‌.ಎಂ.ಸಿ.ಯ ಅಧ್ಯಕ್ಷರಾಗಿ, ಮೂಡಲಗಿಯ ಶ್ರೀ ವೇಮನ ಕೋ-ಆಪ್‌ ಕ್ರೆಡಿಟ್‌ ಸೊಸೈಟಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ರಾಜಕೀಯ, ಸಾಮಾಜಿಕ ಸೇವೆಯಲ್ಲಿದ್ದಾರೆ. ಜಮಖಂಡಿ ಮತಕ್ಷೇತ್ರದ ಎಲ್ಲಾ ಗ್ರಾಮಗಳ ಸಮುದಾಯದ ಯುವಕರು, ಹಿರಿಯರು, ಮುಖಂಡರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದಾರೆ. ಭಾರತೀಯ ಜನತಾ ಪಕ್ಷದ ಮುಖಂಡರು, ಯುವಕರು, ಕಾರ್ಯಕರ್ತರೊಂದಿಗೆ ಉತ್ತಮ ಅವಿನಾಭಾವ ಸಂಬಂಧವಿದೆ. ಸರ್ಕಾರದ ಯೋಜನೆಗಳನ್ನು ನೇರವಾಗಿ ಜನರಿಗೆ ತಲುಪಿಸಿ ಅನುಷ್ಠಾನಗೊಳಿಸುವ ಆಶಾಭಾವ ಹೊಂದಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಜಮಖಂಡಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪ ರ್ಧಿಸುವ ಆಕಾಂಕ್ಷಿಯಾಗಿದ್ದರು.

ಸನ್‌ 2012ರಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯರಾಗಿ, ರಾಷ್ಟ್ರೀಯ ಸ್ವಯಸೇವಕ ಸಂಘದ ಜತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. 2018ರಲ್ಲಿ ಪಕ್ಷದ ವೈದ್ಯಕೀಯ ಪ್ರಕೋಷ್ಠದ ಜಮಖಂಡಿ ನಗರ ಮಂಡಲದ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮದಿನ ಪ್ರಯುಕ್ತವಾಗಿ ನಗರಮಂಡಲ ವೈದ್ಯಕೀಯ ಪ್ರಕೋಷ್ಠuದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದರು. ಕೊರೊನಾ 19ರ ಎರಡನೇ ಅಲೆಯ ಸಂಕಷ್ಟದ ಸಮಯದಲ್ಲಿ ಸೇವಾ ಭಾರತಿ ಟ್ರಸ್ಟ್‌ ವತಿಯಿಂದ ಜಮಖಂಡಿಯಲ್ಲಿ ಪಂಡಿತ್‌ ದೀನದಯಾಳ ಉಪಾಧ್ಯಾಯ ಕೋವಿಡ್‌ ಕೇರ್‌ ಸೆಂಟರ್‌ ಪ್ರಭಾರಿಯಾಗಿ ಅಪಾಯಕಾರಿ ಸ್ಥಿತಿಯಲ್ಲಿದ್ದ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಬಡ ವಿದ್ಯಾರ್ಥಿಗಳಿಗೆ ಉಚಿತ ಉದ್ಯೋಗ, ಶಿಕ್ಷಣ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದರು. 2015ನೇ ಸಾಲಿನಲ್ಲಿ ವಲಯ ಚೇರಮನ್‌ರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸದರಿ ಅವ ಧಿಯಲ್ಲಿ ನಾಲ್ಕು ಹೊಸ ಲಯನ್ಸ್‌ ಸಂಸ್ಥೆ, ಮೂರು ಹೊಸ ಲಿಯೋ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಅತ್ಯುತ್ತಮ ರೀಜನ್‌ ಚೇರ್‌ ಪರ್ಸನ್‌ ಪುರಸ್ಕಾರಕ್ಕೆ ಭಾಜನಾಗಿದ್ದಾರೆ. ಸುಮಾರು 105 ಲಯನ್ಸ್‌ ಸಂಸ್ಥೆಗಳನ್ನೊಳಗೊಂಡ 317-ಬಿ ಲಯನ್ಸ್‌ ಸಂಸ್ಥೆ ಜಿಲ್ಲೆಯ ಕ್ಯಾಬಿನೆಟ್‌ ನಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. ಲಯನ್ಸ್‌ ಸಂಸ್ಥೆಯ ರಾಷ್ಟ್ರೀಯ, ಅಂತಾ ರಾಷ್ಟ್ರೀಯ ಮುಖ್ಯಸ್ಥರ ಜತೆ ನಿಕಟವಾದ ಸಂಬಂಧ ಹೊಂದಿ ದ್ದಾರೆ.

ಡಾ| ಸೋನವಾಲ್ಕರ್‌ ಅವರ ಸಾಮಾಜಿಕ ಸೇವೆಗಳನ್ನು ಗುರುತಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ. ಶ್ರೀ ಸಿದ್ಧರಾಮೇಶ್ವರ ಜನಕಲ್ಯಾಣ ಪ್ರತಿಷ್ಠಾನದಿಂದ ಸಿದ್ಧರಾಮಶ್ರೀ ವೈದ್ಯರತ್ನ ಪ್ರಶಸ್ತಿ 2009, ಚಿಮ್ಮಡ ವಿರಕ್ತಮಠ ವತಿಯಿಂದ ಪ್ರಭುಭೂಷಣ ಪ್ರಶಸ್ತಿ 2009, ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ಯಿಂದ ಕರ್ನಾಟಕ ಭೂಷಣ ಪ್ರಶಸ್ತಿ-2010, ಹಳಿಂಗಳಿಯ ಶ್ರೀ ಅಲ್ಲಮಪ್ರಭುಜಿ ಅವರಿಂದ ಪ್ರಭುಜೀ ರಾಜ್ಯ ಪ್ರಶಸ್ತಿ-2017, ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆ ಉತ್ತರ ಕರ್ನಾಟಕದ ಸಾಧಕರಿಗೆ ಕೊಡಮಾಡುವ ಅಚೀವರ್‌ ಆಫ್‌ ಕರ್ನಾಟಕ ಪ್ರಶಸ್ತಿ 2021 ಸಹಿತ ಹತ್ತಾರು ಪ್ರಶಸ್ತಿಗಳು ಲಭಿಸಿವೆ.

-ಮಲ್ಲೇಶ ರಾ. ಆಳಗಿ, ಜಮಖಂಡಿ

Advertisement

Udayavani is now on Telegram. Click here to join our channel and stay updated with the latest news.

Next