Advertisement

ಆನೆಗಳಿಗೆ ಧೈರ್ಯ ತುಂಬಲು ಕುಶಾಲು ತೋಪು

11:11 PM Sep 13, 2019 | Lakshmi GovindaRaju |

ಮೈಸೂರು: ದಸರಾ ಮಹೋತ್ಸದಲ್ಲಿ ಪಾಲ್ಗೊಳ್ಳಲಿರುವ ಗಜಪಡೆ ಮತ್ತು ಅಶ್ವಪಡೆಗೆ ಈ ಸಾಲಿನ ಮೊದಲ ಸಿಡಿಮದ್ದು ಸಿಡಿಸುವ ತಾಲೀಮನ್ನು ಶುಕ್ರವಾರ ಯಶಸ್ವಿಯಾಗಿ ನಡೆಸಲಾಯಿತು. ಅರಮನೆಯ ವರಾಹ ಗೇಟ್‌ ಬಳಿಯಿರುವ ವಾಹನ ನಿಲುಗಡೆಯ ಸ್ಥಳದಲ್ಲಿ ತಾಲೀಮು ನಡೆಯಿತು.

Advertisement

ಜಂಬೂ ಸವಾರಿ ವೇಳೆ ಹಾಗೂ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತು ವೇಳೆ ವಿಜಯದ ಸಂಕೇತವಾಗಿ 21 ಸುತ್ತು ಕುಶಾಲು ತೋಪು ಸಿಡಿಸುವುದು ಪರಂಪರೆ. ಈ ಹಿನ್ನೆಲೆ ಯಲ್ಲಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಜನ ಸಂದಣಿಯ ನಡುವೆ ಸಾಗಲಿರುವ ಆನೆ ಹಾಗೂ ಕುದುರೆಗಳು ಕುಶಾಲು ತೋಪಿನ ಶಬ್ದಕ್ಕೆ ಹೆದರದಂತೆ ತರಬೇತಿ ನೀಡುವುದಕ್ಕಾಗಿ ಸಿಡಿಮದ್ದಿನ ತಾಲೀಮು ನಡೆಸಲಾಗುತ್ತದೆ.

ತಾಲೀಮಿನ ವೇಳೆ ಎರಡನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಧನಂಜಯ ಹಾಗೂ ಮೂರು ಹೊಸ ಆನೆಗಳಾದ ಈಶ್ವರ, ಲಕ್ಷ್ಮೀ ಹಾಗೂ ಜಯಪ್ರಕಾಶ ಬೆದರಿದವು. ಬಹುತೇಕ ಕುದುರೆಗಳು ಸಿಡಿಮದ್ದಿನ ಶಬ್ದಕ್ಕೆ ವಿಚಲಿತಗೊಂಡವು. ಎಆರ್‌ಎಸ್‌ಐ ಕುಮಾರಸ್ವಾಮಿ ನೇತೃತ್ವದಲ್ಲಿ ಪಿರಂಗಿದಳದ 30 ಮಂದಿ, ಸಿಎಆರ್‌ ಪೊಲೀಸರು 6 ಪಿರಂಗಿಗಳ ಮೂಲಕ ಮೂರು ಸುತ್ತು ಹಾಗೂ ಕೊನೆಯಲ್ಲಿ ಮೂರು ಪಿರಂಗಿಯಲ್ಲಿ ತಲಾ ಒಂದೊಂದರಂತೆ ಒಟ್ಟು 21 ಸಿಡಿಮದ್ದನ್ನು ಸಿಡಿಸುವ ಮೂಲಕ ಗಜಪಡೆ ಹಾಗೂ ಅಶ್ವರೋಹಿ ಪಡೆಗೆ ಶಬ್ದದ ತಾಲೀಮು ನೀಡಿದರು.

ಕಾರ್ಯಾಲಯ ಉದ್ಘಾಟನೆ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನೂತನವಾಗಿ ಆರಂಭಿಸಲಾದ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯವನ್ನು ಉಸ್ತುವಾರಿ ಸಚಿವ ಸೋಮಣ್ಣ ಶುಕ್ರವಾರ ಉದ್ಘಾಟಿಸಿದರು. ಜೊತೆಗೆ, ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮೈಸೂರು ಜಿಲ್ಲಾಡಳಿತದಿಂದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಆಹ್ವಾನ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next