Advertisement

ಬಿಜೆಪಿಯಲ್ಲಿ ಚುರುಕಾಗುತ್ತಿರುವ ಚುನಾವಣೆ ತಾಲೀಮು

10:25 PM Feb 11, 2023 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿ ಚುನಾವಣ ಉಸ್ತುವಾರಿಯಾಗಿ ನೇಮಕಗೊಂಡಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಫೆ.18ರಂದು ರಾಜ್ಯಕ್ಕೆ ಆಗಮಿಸುವ ಸಾಧ್ಯತೆಯಿದ್ದು, ಅಂದು ಆಯೋಜಿಸಿರುವ ಕ್ಷೇತ್ರ ಚುನಾವಣ ಉಸ್ತುವಾರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆ ಮೂಲಕ ಬಿಜೆಪಿಯ ಚುನಾವಣೆ ತಾಲೀಮು ಇನ್ನಷ್ಟು ಚುರುಕಾಗಲಿದೆ.

Advertisement

ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಅವರನ್ನು ರಾಜ್ಯ ಚುನಾವಣ ಉಸ್ತುವಾರಿಯಾಗಿ ಮನ್‌ ಸುಖ್‌ ಮಾಂಡವೀಯ ಹಾಗೂ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರನ್ನು ಸಹ ಉಸ್ತುವಾರಿಯಾಗಿ ಕೆಲವು ದಿನಗಳ ಹಿಂದಷ್ಟೇ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇಮಿಸಿದ್ದಾರೆ. ಅದೇ ದಿನ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಕ್ಷೇತ್ರವಾರು ಉಸ್ತುವಾರಿಗಳ ನೇಮಕವನ್ನೂ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಮಗ್ರ ಉಸ್ತುವಾರಿಗಳ ಆಗಮನದ ದಿನವೇ ಕ್ಷೇತ್ರವಾರು ಉಸ್ತುವಾರಿಗಳ ಜತೆಗೆ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ ಈ ಸಭೆಗೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಡಲಾಗಿದೆ. 224 ಕ್ಷೇತ್ರಗಳ ಉಸ್ತುವಾರಿಗಳಿಗೂ ಮಾಹಿತಿ ನೀಡಲಾಗಿದ್ದು, ನಿಮಗೆ ವಹಿಸಿದ ಕ್ಷೇತ್ರದ ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಬರುವಂತೆ ಸೂಚಿಸಲಾಗಿದೆ. ಈ ಸಭೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಇರುವ ವಾಸ್ತವ ಚಿತ್ರಣದ ಬಗ್ಗೆ ಒಂದು ಹಂತದ ಮಾಹಿತಿ ಲಭ್ಯವಾಗುವುದರಿಂದ ಮುಂದಿನ ತಂತ್ರಗಾರಿಕೆ ದೃಷ್ಟಿಯಿಂದ ಮಹತ್ವದ್ದಾಗಿದೆ.

ಬಿಜೆಪಿ ಮೂಲಗಳ ಪ್ರಕಾರ ಬೇರೆ ಬೇರೆ ಕ್ಷೇತ್ರಗಳಿಗೆ ನಿಯೋಜಿಸಿರುವ ಉಸ್ತುವಾರಿಗಳ ಪೈಕಿ ಕೆಲವರು ಟಿಕೆಟ್‌ ಆಕಾಂಕ್ಷಿಗಳು ಇದ್ದಾರೆ. ಇವರಲ್ಲಿ ಬಹುತೇಕರು 45 ವರ್ಷದೊಳಗಿ ನವರಾಗಿದ್ದು, ಹಳೆ ಮೈಸೂರು ಹಾಗೂ ಬೆಂಗಳೂರಿನವರಾಗಿದ್ದಾರೆ.

ಸರ್ವೇ ಬಗ್ಗೆಯೂ ಪ್ರಸ್ತಾಪ
ಇದರ ಜತೆಗೆ ಬಿಜೆಪಿ ಕ್ಷೇತ್ರವಾರು ನಡೆಸಿರುವ ಸರ್ವೇ ಬಗ್ಗೆಯೂ ಈ ಸಭೆಯಲ್ಲಿ ಪ್ರಸ್ತಾಪವಾಗಲಿದೆ. ಸರ್ವೇ ವರದಿ ಹಾಗೂ ಉಸ್ತುವಾರಿಗಳು ಸಂಗ್ರಹಿಸಿರುವ ಮೊದಲ ಹಂತದ ಮಾಹಿತಿ ವಿಶ್ಲೇಷಣೆ ಕಾರ್ಯ ಈ ಸಭೆಯ ಬಳಿಕ ನಡೆಯಲಿದೆ. ಬಿಜೆಪಿ ಮೂಲಗಳ ಪ್ರಕಾರ ಹಾಲಿ ಶಾಸಕರು ಇರುವ ಕಡೆಗಳಲ್ಲೂ ಕೆಲವೆಡೆ ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಇವರ ಬಲಾಬಲಗಳ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.

Advertisement

ಕಾರ್ಯಾಲಯ ಸ್ಥಾಪನೆ
ಚುನಾವಣೆ ದೃಷ್ಟಿಯಿಂದ ಬಿಜೆಪಿ ಸಾಮಾಜಿಕ ಜಾಲ ಕಾರ್ಯಚಟುವಟಿಕೆಗಾಗಿ ಈಗಾಗಲೇ ಎರಡು ಕಡೆ ವಾರ್‌ ರೂಂ ಸ್ಥಾಪಿಸಿದೆ. ಅದೇ ರೀತಿ ಸಭೆ ಹಾಗೂ ಇನ್ನಿತರ ಚಟುವಟಿಕೆಗಳಿಗಾಗಿ ಸದ್ಯದಲ್ಲೇ ಮತ್ತೊಂದು ಕಾರ್ಯಾಲಯ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next