ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ನಿರ್ಣಾಯಕ ಪಾತ್ರ ನಿರ್ವಹಿಸುತ್ತದೆ. ಮತದಾನ ದೇಶದ ನಾಗರಿಕರಿಗೆ ಸಂವಿಧಾನ ಕೊಟ್ಟಿರುವ ಪ್ರಬಲ ಅಸ್ತ್ರ. ಮತ ಚಲಾಯಿಸುವುದು ಪ್ರತಿಯೊಬ್ಬ ಅರ್ಹ ಮತದಾರನ ಸಾಂವಿಧಾನಿಕ ಕರ್ತವ್ಯ ಹಾಗೂ ಜವಾಬ್ದಾರಿ.
ಅದೇ ರೀತಿ ಓಟಿನ ಗೌಪ್ಯತೆ ಮತ್ತು ಪಾವಿತ್ರತೆ ಕಾಪಾಡುವುದು ಮತದಾರನ ನೈತಿಕ ಹಾಗೂ ಕಾನೂನಾತ್ಮಕ ಜವಾಬ್ದಾರಿ. ಓಟು ಹಾಕುವ ವಿಚಾರದಲ್ಲಿ ಯಾರೊಬ್ಬರೂ ಯಾರನ್ನೂ ಆಮಿಷಕ್ಕೊಳಪಡಿಸುವಂತಿಲ್ಲ. ಬೆದರಿಕೆ, ಒತ್ತಡ ಹೇರುವಂತಿಲ್ಲ. ಹಾಗೇನಾದರೂ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ.
ವಿಶೇಷವಾಗಿ ದುರ್ಬಲರು, ಅಸಹಾಯಕರು, ಅಮಾಯಕರು, ಮುಗ್ಧರು, ಎಸ್ಸಿ-ಎಸ್ಟಿ ವರ್ಗದ ಜನರು, ಆದಿವಾಸಿ, ಬುಡಕಟ್ಟು ಜನಾಂಗದವರನ್ನು ಮತ ಹಾಕುವ ವಿಚಾರದಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಅವರ ಪ್ರತಿನಿಧಿಗಳು, ಬಲಾಡ್ಯರು, ಮಧ್ಯವರ್ತಿಗಳು ಇದೇ ಪಕ್ಷದ ಇಂತಹದ್ದೇ ಅಭ್ಯರ್ಥಿಗೆ ಮತ ಹಾಕಬೇಕು,
ಇಲ್ಲವೇ ಮತದಾನದಿಂದ ದೂರ ಉಳಿಯಬೇಕು ಅಥವಾ ಕಾನೂನು ಉಲ್ಲಂ ಸಿ ಮತ ಚಲಾಯಿಸಬೇಕು ಎಂದು ಒತ್ತಡ ತಂದರೆ, ಅದು ಶಿಕ್ಷಾರ್ಹ ಅಪರಾಧ. ಇಂತಹ ಕೃತ್ಯದಲ್ಲಿ ಭಾಗಿಯಾದವರಿಗೆ 6 ತಿಂಗಳಿಂದ 5 ವರ್ಷ ವಿಸ್ತರಿಸಬಹುದಾದ ದಂಡ ಸಹಿತ ಕಠಿಣ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಹಾಗಾಗಿ, ಯಾವುದೇ ಅಮಿಷ, ಒತ್ತಡಗಳಿಗೆ ಒಳಗಾಗದೇ ನಿರ್ಭೀತವಾಗಿ ಮತ ಚಲಾಯಿಸಲು ಚುನಾವಣಾ ಆಯೋಗ ಎಲ್ಲ ರೀತಿಯ ಕಾನೂನು ಹಾಗೂ ರಕ್ಷಣೆಯ ನೆರವು ನೀಡುತ್ತದೆ. ಅದಕ್ಕಾಗಿ ಇಂತಹ ವರ್ಗದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳ ಮೇಲೆ ವಿಶೇಷ ನಿಗಾ ಇಡಲಾಗುತ್ತದೆ. ಅಂತಹ ಕಡೆ ವಿಶೇಷ ವಿಚಕ್ಷಣಾ ತಂಡಗಳನ್ನು ನೇಮಕ ಮಾಡಲಾಗುತ್ತದೆ. ಅವರಲ್ಲಿ ವಿಶ್ವಾಸ ತುಂಬಲು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಮತದಾನದ ದಿನ ದುರ್ಬಲರು, ದಲಿತ ಮತದಾರರು ಹೆಚ್ಚಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ವಿಶೇಷ ತಂಡಗಳನ್ನು ರಚಿಸಿ ಅವರನ್ನು ಮತಗಟ್ಟೆಗೆ ಕರೆ ತರಲು ಆಯೋಗವೇ ವ್ಯವಸ್ಥೆ ಮಾಡುತ್ತದೆ. ಅಲ್ಲದೇ ಅಂತಹ ಕಡೆ ಹೆಚ್ಚುವರಿ ಭದ್ರತಾ ತುಕುಡಿಗಳನ್ನು ನಿಯೋಜಿಸಲಾಗುತ್ತದೆ. ಪ್ರತಿಯೊಬ್ಬರು ಮುಕ್ತ ವಾತಾವರಣದಲ್ಲಿ ಸ್ವಂತ ವಿವೇಕದಿಂದ ಮತ ಚಲಾಯಿಸಬೇಕು ಅನ್ನುವುದೇ
“ಉದಯವಾಣಿ’ ಕಾಳಜಿ.