ಚಿಕ್ಕಬಳ್ಳಾಪುರ: ಕೋವಿಡ್-19 ಬಳಿಕ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭಗೊಂಡ ಅನಂತರ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ತಿಳಿಯಲು ಶಿಕ್ಷಣ ಇಲಾಖೆ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ್ದ ಮೌಲ್ಯಾಂಕನ ಪರೀಕ್ಷೆಯಲ್ಲಿ ಗಂಡು ಮಕ್ಕಳಗಿಂತ ಹೆಣ್ಣು ಮಕ್ಕಳೇ ಕಲಿಕಾ ಪ್ರಗತಿಯಲ್ಲಿ ಸ್ಟ್ರಾಂಗ್ ಇರುವುದು ತಿಳಿದು ಬಂದಿದೆ.
ಪೋಷಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿ ರಾಜ್ಯದ ಉಚ್ಚ ನ್ಯಾಯಾಲಯದ ಗಮನ ಕೂಡ ಸೆಳೆದಿದ್ದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ನಡೆಸಿದ್ದ ಮೌಲ್ಯಾಂಕನ ಪರೀಕ್ಷೆಯ ಫಲಿತಾಂಶವನ್ನು ಕ್ರೋಡೀಕರಿಸಿರುವ ಶಿಕ್ಷಣ ಇಲಾಖೆ, 5ನೇ ತರಗತಿಗಿಂತ 8ನೇ ತರಗತಿ ವಿದ್ಯಾರ್ಥಿಗಳು ಕಲಿಕಾ ಪ್ರಗತಿಯಲ್ಲಿ ಸ್ವಲ್ಪ ಹಿನ್ನಡೆ ಇರುವುದನ್ನು ಖಚಿಪಡಿಸಿಕೊಂಡಿದೆ.
2022-23ನೇ ಸಾಲಿನ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕ ಪರೀಕ್ಷೆ ನಡೆಸಿದ್ದು 5ನೇ ತರಗತಿಯ 56,157 ಶಾಲೆಗಳ ಬರೋಬ್ಬರಿ 9,59,734 ಮಂದಿ ವಿದ್ಯಾರ್ಥಿಗಳು ಹಾಗೂ 8ನೇ ತರಗತಿಯ ಒಟ್ಟು 22,638 ಶಾಲೆಗಳ ಒಟ್ಟು 9,43,919 ವಿದ್ಯಾರ್ಥಿಗಳು ಸಹಿತ ಒಟ್ಟು 19,03,653 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಪ್ರಮುಖವಾಗಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ, ಕಲಿಕಾ ನ್ಯೂನತೆಗಳು, ಕಲಿಕಾ ಪ್ರಗತಿ, ಯಾವ ವಿಷಯದ ಕಲಿಕೆಯಲ್ಲಿ ಎಷ್ಟು ಹಿನ್ನಡೆ ಇದ್ದಾರೆ ಎಂಬುದನ್ನು ತಿಳಿಯುವುದರ ಜತೆಗೆ ವಿವಿಧ ಆಯಾಮಗಳ ಮೂಲಕ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಅಳೆಯುವ ದೃಷ್ಟಿಯಿಂದ ಅದರಲ್ಲೂ ಕೋವಿಡ್ ಪರಿಣಾಮ ಶಾಲೆಗಳು ಒಂದೆರಡು ವರ್ಷ ಸಂಪೂರ್ಣ ಬಾಗಿಲು ಮುಚ್ಚಿದ್ದರ ಪರಿಣಾಮ ಬಳಿಕ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ತಿಳಿಯುವ ಉದ್ದೇಶದಿಂದ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ನುರಿತ ಸಂಪನ್ಮೂಲ ಶಿಕ್ಷಕರಿಂದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಮೌಖಿಕ ಹಾಗೂಲಿಖಿತ 40 ಸೇರಿ ಒಟ್ಟು 50 ಅಂಕಗಳಿಗೆ ಮೌಲ್ಯಾಂಕನ ಪರೀಕ್ಷೆಯನ್ನು ಕಳೆದ ಮಾರ್ಚ್, ಎಪ್ರಿಲ್ ತಿಂಗಳಲ್ಲಿ ನಡೆಸಿತ್ತು. ಮೌಲ್ಯಂಕನ ಪರೀಕ್ಷೆ ಬಳಿಕ ತರಗತಿವಾರು, ಲಿಂಗವಾರು ವಿದ್ಯಾರ್ಥಿಗಳ ಕಲಿಕಾ ಸಾಧನೆಯನ್ನು ವಿಶ್ಲೇಷಿಸಲಾಗಿದೆ.
ಕಲಿಕಾ ಪ್ರಗತಿಯಲ್ಲಿ ನಗರಕ್ಕಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮುಂದಿದ್ದಾರೆ. 5ನೇ ತರಗತಿಯಲ್ಲಿ ನಗರ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಶೇ.76ರಷ್ಟಿದ್ದರೆ ಗ್ರಾಮೀಣ ವಿದ್ಯಾರ್ಥಿಗಳ ಪ್ರಗತಿ ಶೇ.80ರಷ್ಟಿದೆ. 8ನೇ ತರಗತಿಯಲ್ಲಿ ನಗರ ವಿದ್ಯಾರ್ಥಿಗಳು ಪ್ರಗತಿ ಶೇ.76ರಷ್ಟಿದ್ದರೆ, ಗ್ರಾಮೀಣ ವಿದ್ಯಾರ್ಥಿಗಳ ಪ್ರಗತಿ ಶೇ.78ರಷ್ಟಿದೆ. ಇನ್ನೂ ಮೌಲ್ಯಾಂಕನವನ್ನು ಮಾಧ್ಯಮವಾರು, ವಿಷಯವಾರು, ಭಾಷೆಯವಾರು, ಶಾಲಾ ಆಡಳಿತವಾರು, ಸಾಮಾಜಿಕ ವರ್ಗವಾರು, ಸ್ಥಾನಿಕವಾರು ವಿದ್ಯಾರ್ಥಿಗಳ ಕಲಿಕಾ ಸಾಧನೆಯನ್ನು ಗುರುತಿಸಿದ್ದು, ಎಲ್ಲ ವಿಭಾಗಗಳಲ್ಲಿ ಬಾಲಕರಿಗಿಂತ ಬಾಲಕಿಯರೇ ಹೆಚ್ಚು ಕಲಿಕಾ ಪ್ರಗತಿ ಸಾಧಿಸಿರುವುದು ಮೌಲ್ಯಾಂಕ ಪರೀಕ್ಷೆಯಲ್ಲಿ ಗೊತ್ತಾಗಿದೆ.
-ಕಾಗತಿ ನಾಗರಾಜಪ್ಪ