ಬೆಂಗಳೂರು: ಚೆನ್ನಾಗಿ ವಿದ್ಯಾಭ್ಯಾಸ ಮಾಡಿರುವವರೇ ಈಗ ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇಂತವರಿಗೆ ವಿದ್ಯೆ ಉಂಟು ಆದರೆ ಸಂಸ್ಕಾರವಿಲ್ಲ. ಅಸಂಸ್ಕೃತವಾದ ವಿದ್ಯೆ ಸಮಾಜಕ್ಕೆ ಮಾರಕ ಎಂದು ಅದಮಾರು ಮಠ ಎಜುಕೇಷನ್ ಕೌನಿಲ್ಸ್ ಅಧ್ಯಕ್ಷ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪೂರ್ಣ ಪ್ರಜ್ಞ ಎಜುಕೇಷನ್ ಟ್ರಸ್ಟ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯೆ ಕಲಿಯುವ ಹಂತದಲ್ಲಿ ಮಕ್ಕಳಿಗೆ ಶಿಕ್ಷೆ ನೀಡದಿದ್ದರೆ ದಾರಿ ತಪ್ಪುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಕ್ಕಳಿಗೆ ವಿದ್ಯೆ ಜತೆಗೆ ಸಂಸ್ಕೃತಿಯನ್ನು ನೀಡಬೇಕು. ಹಾಗಾಗಿ ಟ್ರಸ್ಟ್ 1 ರಿಂದ 10ನೇ ತರಗತಿವರೆಗೆ ಶಿಕ್ಷಣ ನೀಡುವ ಸಲುವಾಗಿ ರಾಜ್ಯದ ಹಲವೆಡೆ 31 ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದೆ. ಜೀವನದಲ್ಲಿ ಏನಾದರೂ ಮಾಡಬೇಕಾದರೆ ಅಗ್ತಯ ಅಧ್ಯಯನ ಮಾಡಬೇಕು. ಜತೆಗೆ ಸಮಾಜದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಸಮಾಜಕ್ಕೆ ಭಾರವಾಗದೆ ಕೃತಜ್ಞಾಪೂರಕವಾಗಿ ಜೀವಿಸಬೇಕು ಎಂದು ಹೇಳಿದರು.
ಭಾರತ ರತ್ನ ಸಿ.ಎನ್.ಆರ್.ರಾವ್ ಮಾತನಾಡಿ, ಸಮಾಜದಲ್ಲಿ ಹಣ ಹೊಂದಿರುವವನು ಸಿರಿವಂತನಲ್ಲ, ಶಿಕ್ಷಣ ಪಡೆದು ಜ್ಞಾನವಂತನಾಗಿರುವವನು ಮಾತ್ರ ಶ್ರೀಮಂತ. ಜೀವನದಲ್ಲಿ ಶೈಕ್ಷಣಿಕವಾಗಿ ಅನೇಕ ಘಟ್ಟಗಳನ್ನು ಎದುರಿಸಿ ಮುಂದೆ ಸಾಗುತ್ತೇವೆ. ಅದರಲ್ಲಿ ಸಿಗುವ ಎಲ್ಲಾ ಪ್ರಾಧ್ಯಾಪಕರಲ್ಲಿ ಶಾಲಾ ಶಿಕ್ಷಕರು ಉತ್ತಮರು. ಇವರು ಮಕ್ಕಳ ಮುಂದಿನ ಶಿಕ್ಷಣಕ್ಕೆ ಭದ್ರ ಬುನಾದಿಯನ್ನು ಹಾಕಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡುವವರು ಎಂದು ಅಭಿಪ್ರಾಯಪಟ್ಟರು.
ನಗರ ವಿಜ್ಞಾನ, ತಂತ್ರಜ್ಞಾನ, ಬ್ಯಾಂಕಿಂಗ್ ಮುಂತಾದ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದಂತೆ ಶಿಕ್ಷಣ ಕ್ಷೇತ್ರದಲ್ಲೂ ಗಮನಾರ್ಹ ಅಭಿವೃದ್ಧಿ ಹೊಂದುತ್ತಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಫಸ್ಟ್ ಡೇ ಪೋಸ್ಟಲ್ ಕವರ್‌ನ್ನು ಪೋಸ್ಟ್ ಸೂಪರ್‌ಡೆಂಟ್ ಚಂದ್ರಶೇಖರ್ ಬಿಡುಗಡೆ ಮಾಡಿದರು. ಗೀತಾಸಾರ ಮತ್ತು ಸ್ಮರಣ ಸಂಚಿಕೆಯನ್ನು ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಲೋಕಾರ್ಪಣೆ ಮಾಡಿದರು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಇಂದುಮತಿ ರಾವ್, ಅದಮಾರು ಮಠ ಎಜುಕೇಷನ್ ಕೌನ್ಸಿಲ್‌ನ ಕಾರ್ಯದರ್ಶಿ ಕೆ.ಶ್ರೀಹರಿ, ಟ್ರಸ್ಟ್ ಕಾರ್ಯದರ್ಶಿ ಜಿ.ಎನ್.ವೆಂಕಟೇಶ್, ಶಾಲೆಯ ಮುಖ್ಯಸ್ಥೆ ಲಲಿತಾ, ಶಾಲೆಯ ಪ್ರಾಶುಂಪಾಲ ನಾಗರಾಜು ಉಪಸ್ಥಿತರಿದ್ದರು.