Advertisement
ಸ್ವಂತ ವೆಚ್ಚದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ತವರಿಗೆ ತೆರಳಲು ಬೇರೆ ರಾಜ್ಯಗಳ ವಲಸೆ ಕಾರ್ಮಿಕರಿಗೆ ಸಾವಿರಾರು ರೂ. ಬೇಕು. ಲಾಕ್‌ಡೌನ್‌ನಿಂದ ಕೆಲಸ ಇಲ್ಲದ ಕಾರಣ ಅವರ ಬಳಿ ಅಷ್ಟೊಂದು ಮೊತ್ತವೂ ಇಲ್ಲ. ಹೀಗಾಗಿ, ಹಣ ಕೊಟ್ಟು ಕಳುಹಿಸಿ ಅಥವಾ ನೀವೇ ಸಾರಿಗೆ ವ್ಯವಸ್ಥೆ ಮಾಡುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ. ಆದರೆ, ಕಾರ್ಮಿಕ ಇಲಾಖೆ ಅಧಿಕಾರಿಗಳು ಸರ್ಕಾರ ನೀವು ತವರಿಗೆ ಹೋಗಲು ಅವಕಾಶ ಕೊಟ್ಟಿದೆ. ಉಳಿದ ವ್ಯವಸ್ಥೆ ನೀವೇ ಮಾಡಿಕೊಳ್ಳುವಂತೆ ಕೈ ಚೆಲ್ಲಿದ್ದಾರೆ.
ತೊಂದರೆಯಾಗುವ ಆತಂಕವೂ ಕಾಡುತ್ತಿದೆ. ಬೆಂಗಳೂರಿನಲ್ಲಿ 52 ಸಾವಿರ, ರಾಜ್ಯದ ಇತರೆಡೆ 13,972 ವಲಸೆ ಕಾರ್ಮಿಕರು ಆಶ್ರಯ ಪಡೆದಿದ್ದು, ಅವರಲ್ಲಿ ಬಹುತೇಕರು ಪಶ್ಚಿಮ ಬಂಗಾಳ, ಬಿಹಾರ, ತ್ರಿಪುರ, ಉತ್ತರ ಪ್ರದೇಶದವರಾಗಿದ್ದಾರೆ. ಬೆಂಗಳೂರು ಸೇರಿ ಪ್ರಮುಖ ನಗರಗಳಿಂದ ತವರಿಗೆ ಸ್ವಂತ ಸಾರಿಗೆ ವ್ಯವಸ್ಥೆಯಲ್ಲಿ ಹೋಗಲು ಕನಿಷ್ಠ ಹತ್ತರಿಂದ ಹದಿನೈದು ಸಾವಿರ ರೂ. ಬೇಕಾಗುತ್ತದೆ. ಅಕ್ಕ ಪಕ್ಕದ ಆಂಧ್ರಪ್ರದೇಶ ಮತ್ತು ತಮಿಳುನಾಡಿವರು ಅಂತರ ಜಿಲ್ಲೆಯ ವ್ಯವಸ್ಥೆಯಲ್ಲೇ ಗಡಿವರೆಗೂ ತಲುಪಿಸಿ, ಅಲ್ಲಿಂದ ತರಕಾರಿ ಟೆಂಪೋ, ಆಹಾರಧಾನ್ಯ ಸಾಗಣೆ ಲಾರಿ, ಸರಕು ಸಾಗಣೆ ವಾಹನಗಳಲ್ಲಿ ತವರು ಸೇರಿಕೊಂಡಿದ್ದಾರೆ. ಆದರೆ, ದೂರದ ಪ್ರದೇಶದವರು ಹಣದ ಮುಗ್ಗಟ್ಟಿನಿಂದ ತೊಂದರೆಗೆ ಸಿಲುಕಿದ್ದಾರೆ. ಕಾರ್ಮಿಕ ಇಲಾಖೆಯು ಶುಕ್ರವಾರದವರೆಗೆ ರಾಜ್ಯಾದ್ಯಂತ 15 ಸಾವಿರ ಅಂತರ ಜಿಲ್ಲೆ ವಲಸೆ ಕಾರ್ಮಿಕರನ್ನು ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ತವರಿಗೆ ಕಳುಹಿಸಿದೆ. ಈಗ ಉಳಿದಿರುವುದು ಹೊರರಾಜ್ಯದ ವಲಸೆ ಕಾರ್ಮಿಕರು ಮಾತ್ರ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.
Related Articles
ಹೊರ ರಾಜ್ಯದ ವಲಸೆ ಕಾರ್ಮಿಕರಿಗೆ ಹಣ ಇಲ್ಲದೆ ಟ್ಯಾಕ್ಸಿ ಸೇರಿ ಸ್ವಂತ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ಸರ್ಕಾರದ ತೀರ್ಮಾನ, ನಮ್ಮದು ಪಾಲನೆಯಷ್ಟೇ ಎಂದು ಸಮಜಾಯಿಷಿ ನೀಡುತ್ತಾರೆ. ಈ ಮಧ್ಯೆ ವಲಸೆ ಕಾರ್ಮಿಕರು ತವರಿಗೆ ಹೋಗಲು ದಾಖಲಾತಿ ಸರಿಪಡಿಸಿಕೊಂಡು ನೋಡಲ್ ಅಧಿಕಾರಿ ಸಂಪರ್ಕಿಸಲು ಸರಿಯಾದ ಮಾರ್ಗದರ್ಶನ ನೀಡುತ್ತಿಲ್ಲ. ಭಾಷೆಯ ಸಮಸ್ಯೆಯಿಂದ ವಲಸಿಗರಿಗೆ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಲು ಆಗುತ್ತಿಲ್ಲ ಎಂದು ಕಾರ್ಮಿಕರು ಅವಲತ್ತುಕೊಳ್ಳುತ್ತಾರೆ.
Advertisement
ಸ್ವಂತ ವೆಚ್ಚದಲ್ಲಿ ತವರಿಗೆ ಹೋಗಿ ಎಂದು ಹೇಳುವುದು ಸರಿ ಅಲ್ಲ. ಮಾಸಿಕ ವೇತನ ಪಡೆಯುವವರೇ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿರುವಾಗ, ವಲಸೆಕಾರ್ಮಿಕರ ಬಳಿ ಹಣ ಎಲ್ಲಿಂದ ಬರಬೇಕು? ಕೇಂದ್ರ ಸರ್ಕಾರ ಉಚಿತ ರೈಲು ವ್ಯವಸ್ಥೆ ಮಾಡಬೇಕು. ಇಲ್ಲವೇ ರಾಜ್ಯ ಸರ್ಕಾರವೇ ಸಾರಿಗೆ ವೆಚ್ಚ ಭರಿಸಬೇಕು.
● ಮೀನಾಕ್ಷಿ ಸುಂದರಂ, ಸಿಐಟಿಯು ಪ್ರಧಾನ ಕಾರ್ಯದರ್ಶಿ ●ಎಸ್. ಲಕ್ಷ್ಮಿನಾರಾಯಣ