Advertisement

ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ

10:03 AM Dec 30, 2019 | Lakshmi GovindaRaj |

ಹೊನ್ನಾವರ/ಉಡುಪಿ: ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಅತಿವೃಷ್ಟಿಯಿಂದ ತೀರಾ ಹದಗೆಟ್ಟಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಮಂಕಿಯಲ್ಲಿ ರಾಮಕ್ಷತ್ರಿಯ ಸಮಾಜದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಸುಧಾರಣೆಗೆ ಹಲವಾರು ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.

Advertisement

ಬಜೆಟ್‌ ಅಧಿವೇಶನ ಕುರಿತು ಪ್ರತಿಕ್ರಿಯಿಸಿದ ಅವರು, ಮುಂದಿನ ಬಜೆಟ್‌ ಅ ಧಿವೇಶನ ಹಾಗೂ ರಾಜ್ಯಪಾಲರ ಭಾಷಣದ ದಿನಾಂಕ ಕುರಿತು ಸೋಮವಾರ ಘೋಷಣೆ ಮಾಡಲಾಗುವುದು. ಸಚಿವ ಸಂಪುಟ ಸಭೆಯಲ್ಲಿ ಸಚಿವರು ಹಾಗೂ ಸ್ಪೀಕರ್‌ ಜೊತೆ ಚರ್ಚಿಸಿ, ದಿನಾಂಕ ಅಂತಿಮಗೊಳಿಸಲಾಗುವುದು. ಬಜೆಟ್‌ ಅಧಿವೇಶನದಲ್ಲಿ ಅಭಿವೃದ್ಧಿ ಕಾರ್ಯ, ರೈತರು ಹಾಗೂ ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಮೂಲಕ ರಾಜ್ಯವನ್ನು ಮಾದರಿ ಯ ನ್ನಾಗಿ ಮಾಡಲಾಗು ವುದು ಎಂದರು.

ಕೈಗಾ ಸುತ್ತಮುತ್ತಲಿನ ಜನರ ಆರೋಗ್ಯ ಕುರಿತು ಕೇಂದ್ರ ಸರಕಾರದ ಗಮನ ಸೆಳೆಯಲಾಗುವುದು. ಇ¨ ‌ಕ್ಕಾಗಿ ಸರಕಾರದಿಂದ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಸರಕಾರದ ಓಬಿಸಿ ಪಟ್ಟಿಯಲ್ಲಿ ಕ್ಷತ್ರಿಯ ಸಮಾಜದ ಹೆಸರು ಬಿಟ್ಟು ಹೋಗಿದ್ದು, ಇದನ್ನು ಸೇರಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದರು.

ಸರಕಾರದ ಸೌಲಭ್ಯವನ್ನು ಜನಸಾಮಾನ್ಯರಿಗೆ ತಲುಪಿಸಿ: ಬಳಿಕ, ಕೋಟದಲ್ಲಿ ನಡೆದ ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡೋತ್ಸವ, ಸಾಂಸ್ಕೃತಿಕ ಸ್ಪರ್ಧೆಗಳ ಹೊಳಪು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ಥಳೀಯ ಸಂಸ್ಥೆಗಳು ತಳಮಟ್ಟದಿಂದ ಬಲಗೊಳ್ಳಬೇಕು. ಚುನಾಯಿತ ಸದಸ್ಯರು ಗ್ರಾಮದ ಅಭಿವೃದ್ಧಿ ಕಾರ್ಯಗಳ ಕಡೆ ಗಮನ ಹರಿಸಬೇಕು. ಸುಧಾರಣೆ, ದಕ್ಷತೆ, ಬದ್ಧತೆ ಫ‌ಲಿತಾಂಶಾಧಾರಿತ ಅನುಷ್ಠಾನಕ್ಕೆ ಆದ್ಯತೆ ನೀಡಿ, ಕೆಲಸ ಮಾಡಿದಾಗ ಮಾತ್ರ ಅಧಿಕಾರ ವಿಕೇಂದ್ರಿಕರಣ ಸಮರ್ಪಕವಾಗಿ ನಡೆಯುತ್ತದೆ ಎಂದರು.

ರಾಜ್ಯ ಪಂಚಾಯತ್‌ ರಾಜ್‌ ವ್ಯವಸ್ಥೆ, ದೇಶದಲ್ಲಿಯೇ ಸದೃಢವಾಗಿ ಬೆಳೆದಿರುವ ಪಂಚಾಯತ್‌ ರಾಜ್‌ ವ್ಯವಸ್ಥೆಗಳಲ್ಲಿ ಒಂದಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಪಡಿಸಲು ಅಗತ್ಯವಿರುವ ಕ್ರಮವನ್ನು ಸರಕಾರ ತೆಗೆದುಕೊಳ್ಳಲಿದೆ ಎಂದರು.

Advertisement

ಮೇಲ್ವರ್ಗದವರಿಗೂ ಶೇ.10 ಮೀಸಲಾತಿ ರಾಜ್ಯದಲ್ಲೂ ಜಾರಿ: ಬಿಎಸ್‌ವೈ ಭರವಸೆ
ಕುಂದಾಪುರ: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗಾಗಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಶೇ.10ರ ಮೀಸಲಾತಿಯನ್ನು ದೇಶದ ಬಿಹಾರ, ಉ.ಪ್ರದೇಶ, ತೆಲಂಗಾಣ ಸಹಿತ ಹಲವು ರಾಜ್ಯಗಳಲ್ಲಿ ಜಾರಿಗೊಳಿಸಲಾಗಿದ್ದು, ಅಲ್ಲಿನ ಸರಕಾರಿ ಆದೇಶವನ್ನು ತರಿಸಿ ಅಧ್ಯಯನ ನಡೆಸಿ ರಾಜ್ಯದಲ್ಲಿಯೂ ಮೀಸಲಾತಿ ಜಾರಿಗೊಳಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಯಡಿಯೂರಪ್ಪ ಭರವಸೆ ನೀಡಿದರು.

ಕೋಟೇಶ್ವರದ ವರದರಾಜ ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿನ ಡಾ| ವಿ.ಎಸ್‌.ಆಚಾರ್ಯ ಸಭಾಂಗಣದಲ್ಲಿ, ಶೆಟ್ಟಿಪಾಲು ಗೋವಿಂದ ಚಾತ್ರ ವೇದಿಕೆಯಲ್ಲಿ ಶನಿವಾರ ಆಯೋಜನೆಗೊಂಡ 10ನೇ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೂ ಧರ್ಮದ ಧಾರ್ಮಿಕ ಪರಿಪಾಲನೆಗೆ ಸಹಕಾರ ನೀಡಿ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬ್ರಾಹ್ಮಣ ಸಮುದಾಯದಿಂದ ಸಮಾಜಕ್ಕೆ ಸಾಕಷ್ಟು ಕೊಡುಗೆಗಳು ಸಂದಿವೆ. ಸಾಹಿತ್ಯ, ಕಲೆ, ಶಿಕ್ಷಣ ಸಹಿತ ಬೇರೆ, ಬೇರೆ ಕ್ಷೇತ್ರಗಳಲ್ಲಿ ಉಲ್ಲೇಖನೀಯ ಕೊಡುಗೆಗಳಿವೆ. ಸನಾತನ ಪರಂಪರೆ, ವೇದ, ಉಪನಿಷತ್‌, ದೇಗುಲಗಳ ರಕ್ಷಣೆಯ ಜತೆಯಲ್ಲಿ ಹಿಂದೂ ಸಮಾಜದ ಜಾಗೃತಿಯಲ್ಲಿ ಬ್ರಾಹ್ಮಣ ಸಮುದಾಯದ ಕೊಡುಗೆ ಅಪಾರವಾದುದು ಎಂದವರು ಹೇಳಿದರು.

ನಃ ಭೂತೋ: ಸಮ್ಮೇಳನ: ವಿಧಾನಸಭಾ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಕೋಟೇಶ್ವರದ ಈ ಮಹಾಸಮ್ಮೇಳನ ನಃ ಭೂತೋ: ಎನ್ನುವ ರೀತಿಯಲ್ಲಿ ಆಯೋಜನೆಗೊಂಡಿದೆ. ಇಂತಹ ಸಮ್ಮೇಳನಗಳು ಕಾಲ ಕಾಲಕ್ಕೆ ನಡೆಯುವುದರಿಂದ ಶಿಕ್ಷಣ, ಸಾಹಿತ್ಯ, ಆರೋಗ್ಯ, ಉದ್ಯೋಗ ಕ್ಷೇತ್ರಗಳಲ್ಲಿನ ಸ್ವಾವಲಂಬನೆಗೆ ಅವಕಾಶವಾಗುತ್ತದೆ. ಭಗವದ್ಗೀತೆ, ಗೋವು, ರಾಮಮಂದಿರ ವಿಚಾರದಲ್ಲಿ ಭಾರತೀಯರ ನಂಬಿಕೆಗಳನ್ನು ಘಾಸಿಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ. ಕೀಳುಮಟ್ಟದ, ಸ್ವಾರ್ಥ ಹಾಗೂ ಅಗ್ಗದ ಪ್ರಚಾರಕ್ಕಾಗಿ ಆಡುವ ಇಂತಹ ಮಾತುಗಳನ್ನು ನೋಡಿ ಸುಮ್ಮನೆ ಕುಳಿತುಕೊಳ್ಳುವ ಅಸಹಾಯಕರು ನಾವಲ್ಲ ಎಂದು ಎಚ್ಚರಿಸಿದ ಅವರು, ಬ್ರಾಹ್ಮಣ ಮಹಾಮಂಡಳಿಗೆ ಇನ್ನಷ್ಟು ಹೆಚ್ಚಿನ ಅನುದಾನ ನೀಡುವ ಮೂಲಕ ಶಕ್ತಿ ತುಂಬುವಂತೆ ಮುಖ್ಯಮಂತ್ರಿಗೆ ವಿನಂತಿಸಿದರು.

ಮೇಲುಕೋಟೆಯ ಸಂಸ್ಕೃತ ವಿ.ವಿ.ಯಲ್ಲಿದ್ದ ಅಮೂಲ್ಯ ತಾಳೆಗರಿಗಳನ್ನು ರಾಜಕೀಯ ಕಾರಣಗಳಿಂದಾಗಿ ಮೈಸೂರು ವಿ.ವಿ.ಗೆ ತರಲಾಗಿದೆ. ಆದರೆ ಈ ತಾಳೆಗರಿಗಳನ್ನು ಸಂರಕ್ಷಣೆ ಮಾಡುವ ಕೆಲಸ ಆಗುತ್ತಿಲ್ಲ. ಸಂರಕ್ಷಣೆಗಾಗಿ ಬೇಡಿಕೆ ಇಟ್ಟಿರುವ ಮಠ – ಮಂದಿರಗಳಿಗೆ ಅದನ್ನು ಹಸ್ತಾಂತರಿಸಲು ತೀರ್ಮಾನ ಕೈಗೊಳ್ಳಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಸರಕಾರವನ್ನು ಒತ್ತಾಯಿಸಿದರು.

5 ಕೋಟಿ ರೂ. ಬಿಡುಗಡೆ: ಬೆಂಗಳೂರಿನಲ್ಲಿ ಬ್ರಾಹ್ಮಣ ಮಹಾಸಭಾ ವತಿಯಿಂದ ನಿರ್ಮಾಣವಾಗಲಿರುವ ಸಭಾಭವನಕ್ಕೆ ಮೊದಲ ಕಂತಿನಲ್ಲಿ 5 ಕೋ.ರೂ. ಬಿಡುಗಡೆ ಮಾಡಲಾಗುವುದು. ಬ್ರಾಹ್ಮಣ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಸೂಚಿಸಲಾಗುವುದು. ಈ ಮಹಾಸಮ್ಮೇಳನದಲ್ಲಿ ಪ್ರಸ್ತಾಪಿಸಿರುವ ಬೇಡಿಕೆಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಕರಾವಳಿಯ ಪ್ರಥಮ ಸಮ್ಮೇಳನ:
ಕೋಟೇಶ್ವರದಲ್ಲಿ ನಡೆಯುತ್ತಿರುವ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನ 10ನೇಯದ್ದಾಗಿದ್ದು, 2016ರಲ್ಲಿ ಬೆಳಗಾವಿಯಲ್ಲಿ 9ನೇ ಸಮ್ಮೇಳನ ಆಯೋಜನೆಗೊಂಡಿದ್ದರೆ, ಅದಕ್ಕೂ ಮೊದಲು 7 ಬಾರಿ ಬೆಂಗಳೂರಿನಲ್ಲಿ ಹಾಗೂ 1 ಸಲ ಹುಬ್ಬಳ್ಳಿಯಲ್ಲಿ ಈ ಮಹಾಸಮ್ಮೇಳನ ನಡೆದಿತ್ತು. ರಾಜ್ಯದೆಲ್ಲೆಡೆಯಿಂದ ಅಂದಾಜು 30 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ಶರಾವತಿ ಅಭಯಾರಣ್ಯ ಯೋಜನೆ ಅವೈಜ್ಞಾನಿಕವಾಗಿದೆ. ಈ ವ್ಯಾಪ್ತಿಯಲ್ಲಿ ಹೊನ್ನಾವರ, ಭಟ್ಕಳ ಸೇರಿ ಕೆಲ ತಾಲೂಕುಗಳು ಬರುತ್ತವೆ. ಇದು ಜಾರಿಯಾಗುವುದರಿಂದ ಸ್ಥಳೀಯರಿಗೆ ತೊಂದರೆ ಆಗಲಿದ್ದು, ಇದನ್ನು ಕೈಬಿಡಬೇಕು.
-ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಸ್ವರ್ಣವಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next