ಆಳಂದ: ಆಹಾರ ಮಾನವರ ಮೂಲ ಅಗತ್ಯವಾಗಿದ್ದು, ಪ್ರತಿಯೊಬ್ಬರಿಗೂ ಆಹಾರ ದೊರೆಯುವುದನ್ನು ಖಾತ್ರಿ ಮಾಡಿಕೊಳ್ಳುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ ಎಂದು ಕೃಷಿ ವಿಜ್ಞಾನಿ ಡಾ| ಶ್ರೀನಿವಾಸ ವಿ. ಹೂಗಾರ ಹೇಳಿದರು.
ತಾಲೂಕಿನ ಸುಂಟನೂರ ಗ್ರಾಮದ ಸಮೀಪವಿರುವ ಪ್ರಗತಿಪರ ರೈತ ಗುಂಡಪ್ಪ ಧೂಳಗೊಂಡ ಪಟ್ಟಣ ಅವರ ತೋಟದಲ್ಲಿ “ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ವಿಶ್ವ ಆಹಾರ ದಿನಾಚರಣೆ ಪ್ರಯುಕ್ತ ಪ್ರಗತಿಪರ ರೈತ ಮತ್ತು ಕೃಷಿ ವಿಜ್ಞಾನಿಗೆ ಸತ್ಕಾರ, ರೈತರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಸೇವಿಸುವ ಆಹಾರ ಶೇ.97ರಷ್ಟು ವಿಷಪೂರಿತವಾಗಿದೆ. ಇದರಿಂದ ಅನೇಕ ಕಾಯಿಲೆಗಳು ಉಂಟಾಗುತ್ತಿವೆ. ಶುಚಿಯಾದ, ಸತ್ವಯುತ, ಸಮತೋಲಿತವಾದ ಆಹಾರದ ಸೇವನೆಯಿಂದ ದೇಹ ಆರೋಗ್ಯ ಪೂರ್ಣವಾಗಿರಲು ಸಾಧ್ಯವಾಗುತ್ತದೆ ಎಂದರು.
ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಪ್ರತಿದಿನವೂ 224 ಕೋಟಿ ರೂ. ಮೌಲ್ಯದ ಆಹಾರ ವ್ಯರ್ಥವಾಗುತ್ತಿದೆ. ಒಟ್ಟು ಜನಸಂಖ್ಯೆಯ ಶೇ.14.8ರಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಅವಶ್ಯಕತೆಯಷ್ಟೆ ಆಹಾರ ಬಳಸಿ ಎಂದು ಹೇಳಿದರು.
ಪ್ರಗತಿಪರ ರೈತ ಗುಂಡಪ್ಪ ಧೂಳಗೊಂಡ ಮಾತನಾಡಿ, ನಿರಂತರವಾಗಿ ಹೊಲದ ಕೆಲಸದಲ್ಲಿ ತೊಡಗಬೇಕು. ಸಂಪೂರ್ಣ ಕೃಷಿ ಮೇಲೆಯೇ ಅವಲಂಬಿತವಾಗಿರದೇ, ರೇಷ್ಮೆ, ಕುರಿ, ಕೋಳಿ, ಜೇನು ಸಾಕಾಣಿಕೆ, ಪಶು ಸಂಗೋಪನೆ, ಎರೆಗುಳು ಗೊಬ್ಬರ ತಯಾರಿಕೆ, ಸಾವಯುವ ಬೇಸಾಯ ಸೇರಿದಂತೆ ಸಮಗ್ರ ಕೃಷಿ ಪದ್ಧತಿ ಅನುಸರಿಸಬೇಕು ಎಂದು ಸಲಹೆ ನೀಡಿದರು. ನನ್ನ 3.22 ಎಕರೆಯಲ್ಲಿ ಪ್ರತಿವರ್ಷ ಕನಿಷ್ಟ 7 ಲಕ್ಷ ರೂ. ನಿವ್ಹಳ ಲಾಭ ಪಡೆಯುತ್ತೇನೆ ಎಂದು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ ರೈತ ಗೀತೆ ಪ್ರಸ್ತುತ ಪಡಿಸಿದರು. ಪ್ರಮುಖರಾದ ಎಚ್.ಬಿ.ಪಾಟೀಲ, ದೇವೇಂದ್ರಪ್ಪ ಗಣಮುಖೀ, ಪರಮೇಶ್ವರ ದೇಸಾಯಿ, ಬಸವರಾಜ ಎಸ್.ಪುರಾಣೆ, ಶರಣಬಸಪ್ಪ ಮಾಲಿಬಿರಾದಾರ ದೇಗಾಂವ, ಅಂಬಾರಾಯ ಕಡ್ಲಾ, ಚಂದ್ರಕಾಂತ ಯಲಗೊಂಡ, ಶರಣಬಸಪ್ಪ ಹಡಪದ, ದೇವೇಂದ್ರಪ್ಪ ಹಡಪದ, ಬಸವರಾಜ ನಾಟೀಕಾರ, ಅಶೋಕ ಮಂಗೊಂಡೆ, ನೀಲಕಂಠ ಪೊಲೀಸ್ ಪಾಟೀಲ, ಶಶಿಕಲಾ ಜಿ. ಧೂಳಗೊಂಡ ಮತ್ತಿತರರು ಭಾಗವಹಿಸಿದ್ದರು.