Advertisement

JK Polls: ಪಿಡಿಪಿ ಧೂಳೀಪಟವೇ ಇಂಡಿಯಾಗೆ ವರವಾಯ್ತು!

11:19 PM Oct 08, 2024 | Team Udayavani |

10 ವರ್ಷಗಳ ಬಳಿಕ ನಡೆದ ಜಮ್ಮು-ಕಾಶ್ಮೀರ ಚುನಾವಣೆ ಯಲ್ಲಿ ನಿರೀಕ್ಷೆಯಂತೆಯೇ ಕಾಂಗ್ರೆಸ್‌ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷಗಳ ಮೈತ್ರಿಕೂಟ ಗೆಲುವು ಸಾಧಿಸಿ, ಅಧಿ ಕಾರಕ್ಕೆ ಏರಲು ಸಜ್ಜಾಗಿದೆ. ವಿಶೇಷವೆಂದರೆ, ಮೆಹಬೂಬಾ ಮುಫ್ತಿ ಅವರ ಪಿಡಿಪಿ ಕಳೆದುಕೊಂಡ ಎಲ್ಲ ಮತಗಳೂ ಈ ಬಾರಿ ಇಂಡಿಯಾ ಒಕ್ಕೂಟದ ಬುಟ್ಟಿಗೆ ಬಿದ್ದಿವೆ.

Advertisement

ಸಂವಿಧಾನದ ವಿಶೇಷ ಸ್ಥಾನಮಾನ ರದ್ದು ಮಾಡಿದ, ರಾಜ್ಯ ಸ್ಥಾನಮಾನ ಹಿಂಪಡೆದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜನರಿಗಿದ್ದ ಆಕ್ರೋಶವನ್ನೇ ಅಸ್ತ್ರವಾಗಿಸಿಕೊಂಡು, ಕಾಶ್ಮೀರ ವಲ ಯದಲ್ಲಿ ಮತಬೇಟೆ ನಡೆಸುವಲ್ಲಿ ಇಂಡಿಯಾ ಮೈತ್ರಿಕೂಟ ಯಶಸ್ವಿಯಾಯಿತು.

ಕಾಂಗ್ರೆಸ್‌ಗೆ ಹಿನ್ನಡೆ: ಜಮ್ಮು-ಕಾಶ್ಮೀರಕ್ಕಾಗಿ ಕಾಂಗ್ರೆಸ್‌ ಗ್ಯಾರಂಟಿಗಳನ್ನು ನೀಡಿದ್ದರೂ, ಅದು ದೊಡ್ಡ ಮಟ್ಟಿಗೆ ಫ‌ಲ ನೀಡಿಲ್ಲ. ಹೇಳಿಕೇಳಿ ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಪ್ರಭಾವಳಿಯೇ ಹೆಚ್ಚು. ಹೀಗಾಗಿ ಹಿಂದಿನ ಚುನಾವಣೆ ಯಲ್ಲಿ 12 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದ ಕಾಂಗ್ರೆಸ್‌ ಈಗ ಕೇವಲ 6 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಂಡಿದೆ. ನ್ಯಾಷನಲ್‌ ಕಾನ್ಫರೆನ್ಸ್‌ ಜತೆಗೆ ಮೈತ್ರಿ ಮಾಡಿರುವ ಏಕೈಕ ಕಾರಣದಿಂದ ಕಾಂಗ್ರೆಸ್‌ ಈಗ ಕಾಶ್ಮೀರದಲ್ಲಿ ಅಧಿಕಾರ ಪಡೆಯುತ್ತಿದೆ. ನ್ಯಾಷನಲ್‌ ಕಾನ್ಫರೆನ್ಸ್‌ ಏಕಾಂಗಿಯಾಗಿ ಕಾಶ್ಮೀರ ವಲಯದಲ್ಲಿ 42 ಕ್ಷೇತ್ರಗಳಲ್ಲಿ ಗೆದ್ದದ್ದು ಸಾಧನೆಯಾಗಿದೆ.

ಸಾಮರ್ಥ್ಯ ಹೆಚ್ಚಿಸಿಕೊಂಡ ಬಿಜೆಪಿ: ಈ ಬಾರಿ ಬಿಜೆಪಿ ಕಳೆದ ಬಾರಿಗಿಂತ 4 ಸ್ಥಾನ ಹೆಚ್ಚು ಗಳಿಸಿಕೊಂಡಿದೆ. 2014ರ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ಗೆದ್ದಿದ್ದ ಪಕ್ಷ ಈ ಬಾರಿ 29ಕ್ಕೆ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ. ಜಮ್ಮು ವಿಭಾಗದ 11 ಕ್ಷೇತ್ರಗಳ ಪೈಕಿ 10ರಲ್ಲಿ ಬಿಜೆಪಿ ಗೆದ್ದದ್ದು ಗಮ­ನಾರ್ಹ. ಆದರೆ, ಬಿಜೆಪಿಯ ಜಮ್ಮು-ಕಾಶ್ಮೀರ ರಾಜ್ಯಾಧ್ಯಕ್ಷ ರವೀಂದ್ರ ರೈನಾ ಸೋತಿದ್ದು, ಪಕ್ಷಕ್ಕೆ ಆಘಾತ ತಂದೊಡ್ಡಿದೆ. ರಜೌರಿ ಮತ್ತು ಪೂಂಛ… ಜಿಲ್ಲೆಯ ಪೀರ್‌ ಪಂಜಾಲ್‌ ವ್ಯಾಪ್ತಿಯಲ್ಲಿ ಬಿಜೆಪಿ ಪ್ರಭಾವ ಬೀರಲು ಸಾಧ್ಯವಾಗಿಲ್ಲ. ಆದರೆ, ಕಾಶ್ಮೀರ ವಲಯದಲ್ಲಿ ಬಿಜೆಪಿ ಹೆಚ್ಚಿನ ಮತಗಳಿಕೆಗೆ ವಿಫ‌ಲವಾಗಿದೆ. ಹಿಂದಿನ ಚುನಾವಣೆಯಲ್ಲಿ ಪಿಡಿಪಿ ಜತೆಗೆ ಮೈತ್ರಿ ಮಾಡಿ ಸರ್ಕಾರ ರಚನೆ ಮಾಡಿದ್ದು, 370ನೇ ವಿಧಿ ರದ್ದು, ರಾಜ್ಯದ ಸ್ಥಾನಮಾನ ವಾಪಸ್‌ ಪಡೆದಿದ್ದು  ಬಿಜೆಪಿಗೆ ಪ್ರತಿಕೂಲವಾಗಿ ಪರಿಣಮಿಸಿತು.

ಪಿಡಿಪಿ ಧೂಳೀಪಟ: ಬಿಜೆಪಿ ಜತೆಗೆ 2014ರಲ್ಲಿ ಮೈತ್ರಿ ಮಾಡಿದ್ದು ಒಂದೆಡೆಯಾದರೆ, ಆ ಪಕ್ಷದ ಪ್ರಮುಖ ನಾಯಕ ದಿ.ಮುಫ್ತಿ ಮೊಹಮ್ಮದ್‌ ಸಯೀದ್‌ ಅವರ ಅನುಪಸ್ಥಿತಿ ಪಕ್ಷಕ್ಕೆ ಕಾಡಿದೆ. ಇದರ ಜತೆಗೆ ಇಂಡಿಯಾ ಒಕ್ಕೂಟದ ಜತೆಗೆ ಸೇರದೇ ಇದ್ದದ್ದೂ ಪಿಡಿಪಿ ಹಿನ್ನಡೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 1999ರಲ್ಲಿ ಪಕ್ಷ ಸಂಸ್ಥಾಪನೆಯಾದ ಬಳಿಕದ ಕನಿಷ್ಠ ಸಾಧನೆ ಇದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next