Advertisement

ಶಿಥಿಲವಾಗಿರುವ ಕುಂಬ್ರಹಳ್ಳಿ ಸರ್ಕಾರಿ ಶಾಲಾ ಕಟ್ಟಡ

09:57 PM May 25, 2019 | Team Udayavani |

ಸಕಲೇಶಪುರ: ತಾಲೂಕಿನ ಯಸಳೂರು ಹೋಬಳಿಯ ಕುಂಬ್ರಹಳ್ಳಿ, ಹೆಸರು ಕೇಳಿದೊಡನೆ ಎಲ್ಲರಿಗೂ ನೆನಪಾಗುವುದು ಪಕ್ಷಾತೀತ ಸುಶಿಕ್ಷಿತ ರಾಜಕಾರಣಿ ಮಾಜಿ ಶಾಸಕ ದಿವಂಗತ ಬಿ.ಬಿ. ಶಿವಪ್ಪನವರು. ಆದರೆ ಇಂತಹ ಸುಶಿಕ್ಷಿತರ ಊರಿನಲ್ಲಿ ಇಂದು ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗುವ ಪರಿಸ್ಥಿತಿ ಬಂದೊದಗಿರುವುದು ವಿಪರ್ಯಾಸವಾಗಿದೆ.

Advertisement

ಬಡ ಮಕ್ಕಳ ವ್ಯಾಸಂಗ: ಸುಮಾರು 350 ಜನಸಂಖ್ಯೆ ಇರುವ ಈ ಊರಿಗೆ ಹೊಂದಿಕೊಂಡಂತೆ ಹೂವಿನಳ್ಳಿ, ಕೋಡ್ರಳ್ಳಿ, ಕೊತ್ತನಹಳ್ಳಿ, ಚಿಕ್ಕಲ್ಲೂರು ಗ್ರಾಮಗಳಿದ್ದು ಈ ಎಲ್ಲಾ ಊರುಗಳಲ್ಲಿ, ಬಹುತೇಕ ಬಡವರು ಹಾಗೂ ಮಧ್ಯಮವರ್ಗದ ಜನರೇ ವಾಸಿಸುತ್ತಿದ್ದಾರೆ.

ಆರ್ಥಿಕವಾಗಿ ಸಬಲರಾಗಿರುವ ಪೋಷಕರು ತಮ್ಮ ಮಕ್ಕಳನ್ನು ದೂರದ ಊರುಗಳಾದ ಹೊಸಕೋಟೆ, ಶುಕ್ರವಾರಸಂತೆ, ಕೊಡ್ಲಿಪೇಟೆ, ಹೆತ್ತೂರಿನ ಶಾಲೆಗಳಿಗೆ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಿದ್ದಾರೆ. ದುಬಾರಿ ಶಾಲಾ ವಾಹನದ ವೆಚ್ಚವನ್ನು ಭರಿಸಲು ಆಗದ ಈ 5 ಊರಿನ ಹಲವು ಬಡ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಕುಂಬ್ರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನೇ ಆಶ್ರಯಿಸಿದ್ದಾರೆ.

ಕುಂಬ್ರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 7 ಪ್ರತ್ಯೇಕ ಕೊಠಡಿಗಳಿದ್ದು, ಸುಮಾರು 48 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯು ಉತ್ತಮ ಶಿಕ್ಷಕರನ್ನು ಹೊಂದಿದ್ದು, ಹೋಬಳಿಯ ಎರಡನೇ ಅತಿ ಹೆಚ್ಚು ಮಕ್ಕಳಿರುವ ಸರ್ಕಾರಿ ಶಾಲೆಯಾಗಿರುವುದು ಸುತ್ತಮುತ್ತಲಿನ ಊರಿನ ಜನರಿಗೆ ಹೆಮ್ಮೆಯಾಗಿದೆ.

ಕುಸಿಯುತ್ತಿದೆ ಶಾಲೆ: ಕಳೆದ ವರ್ಷ ಸುರಿದ ಅಧಿಕ ಮಳೆ ಹಾಗೂ ಹತ್ತಿರದಲ್ಲೇ ಹರಿಯುವ ಹೇಮಾವತಿಯ ಹಿನ್ನೀರಿನ ಪರಿಣಾಮ, ಮಣ್ಣಿನ ಗೋಡೆಯಿಂದ ನಿರ್ಮಿಸಿದ ಈ ಹಳೆ ಶಾಲೆಯ ಕಟ್ಟಡಗಳು ಅಧಿಕ ಶೀತದಿಂದ ಕುಸಿಯಲಾರಂಬಿಸಿದೆ. ಈ ಶಾಲೆಯ ದುಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆಯೆಂದರೆ ಪ್ರಾಣಕ್ಕೆ ಕುತ್ತು ತರಬಹುದಾದ ಈ ಕೊಠಡಿಗಳಿಂದ ಮಕ್ಕಳನ್ನು ರಕ್ಷಿಸಲು, ಎಲ್ಲಾ ತರಗತಿಯ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಪಾಠ ಮಾಡುತ್ತಿದ್ದಾರೆ.

Advertisement

ಶಾಲೆ ಮುಚ್ಚುವ ಭೀತಿ: ಚಿಕ್ಕಲ್ಲೂರಿನಲ್ಲಿ ಇದ್ದ ಸರ್ಕಾರಿ ಶಾಲೆಯೂ ಮುಚ್ಚಿದ್ದು, ಕುಂಬ್ರಹಳ್ಳಿಯ ಈ ಶಾಲೆಯೂ ಮುಚ್ಚಿದರೆ, ಸುತ್ತಲಿನ 5 ಊರಿನ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಕಡು ಬಡತನವಿದ್ದರೂ ತಮ್ಮ ಕಷ್ಟಗಳನ್ನು ಲೆಕ್ಕಿಸದೇ, ಮಕ್ಕಳನ್ನು ಶಾಲೆಗೆ ಕಳುಹಿಸಿ ಅವರ ಭವಿಷ್ಯ ರೂಪಿಸಲು ಹೊರಟ ಪೋಷಕರಿಗೆ ಇಂದು ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಆ ಮಕ್ಕಳ ಶೈಕ್ಷಣಿಕ ಭವಿಷ್ಯ ಪ್ರಾಣ ಎರಡೂ ಅಪಾಯದಲ್ಲಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ದುರಸ್ತಿಗೆ ಶಾಸಕರಾದ ಕುಮಾರಸ್ವಾಮಿಯವರು 4.5 ಲಕ್ಷ ರೂ. ಬಿಡುಗಡೆ ಮಾಡಿದ್ದು ಹಾಗೂ ತಾಲೂಕು ಪಂಚಾಯಿತಿಯ ಉಪಾಧ್ಯಕ್ಷ ಕೃಷ್ಣೇಗೌಡರು ತಾಲೂಕು ಪಂಚಾಯಿತಿಯಿಂದ 2 ಲಕ್ಷ ರೂ. ಬಿಡುಗಡೆ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ.

ಶಾಲೆಯ 7 ಕೊಠಡಿಗಳು ದುರಸ್ತಿ ಮಾಡಲಾಗದಷ್ಟು ಹದಗೆಟ್ಟಿದ್ದು, ಎಲ್ಲಾ ಕೊಠಡಿಗಳನ್ನು ಹೊಸದಾಗಿಯೇ ನಿರ್ಮಿಸಬೇಕಾಗಿದೆ. ಶಾಸಕರ ಅನುದಾನ ಸೇರಿದಂತೆ ಇತರರು ಕೊಡಲು ಉದ್ದೇಶಿಸಿರುವ ಧನಸಹಾಯವು, ಒಂದು ಕೊಠಡಿಯ ನಿರ್ಮಾಣಕ್ಕೂ ಸಾಕಾಗುವುದಿಲ್ಲ. ಇದರಿಂದ ಮುಂದೇನು ಮಾಡಬೇಕೆಂಬುದು ಯಕ್ಷಪ್ರಶ್ನೆಯಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು, ರಾಜಕಾರಣಿಗಳು ಜನಪ್ರತಿನಿಧಿಗಳು ಶೀಘ್ರದಲ್ಲಿ ಇತ್ತ ಗಮನಹರಿಸಿ, ಬಡಮಕ್ಕಳ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳದೆ, ಅವರಿಗೆ ದಾರಿದೀಪವಾಗಬೇಕೆಂದು ಕುಂಬ್ರಹಳ್ಳಿ ಸುತ್ತಮುತ್ತಲಿನ ಊರಿನ ಪೋಷಕರು ವಿನಯಪೂರ್ವಕವಾಗಿ ಮನವಿ ಮಾಡುತ್ತಿದ್ದಾರೆ.

ಶಾಲೆಗೆ ನೂತನ ಕಟ್ಟಡ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ನೀತಿ ಸಂಹಿತೆ ಮುಗಿದ ನಂತರ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಸುಮಾರು 50ಲಕ್ಷ ರೂ.ಬಿಡುಗಡೆಯಾಗಬಹುದು.
-ಶಿವಾನಂದ್‌, ಕ್ಷೇತ್ರ ಶಿಕ್ಷಣಾಧಿಕಾರಿ

ಶಾಲಾ ಕಟ್ಟಡವನ್ನು ಹೊಸದಾಗಿ ಕಟ್ಟಲು ಶಿಕ್ಷಣ ಇಲಾಖೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಹಾಗೂ ದಾನಿಗಳು ಸಹ ಶಾಲೆಯ ಅಭಿವೃದ್ಧಿಗೆ ಸಹಾಯ ಹಸ್ತ ಚಾಚಬೇಕು.
-ಕಿರಣ್‌, ಕುರುಭತ್ತೂರು ಗ್ರಾಪಂ ಮಾಜಿ ಅಧ್ಯಕ್ಷ

* ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next