Advertisement

ಆ್ಯಂಬುಲೆನ್ಸ್‌ ಚಾಲಕರ ‌ “ಲಂಚಾವತಾರಕ್ಕೆ ಲೋಕಾ ಬ್ರೇಕ್‌!

06:40 AM Aug 16, 2017 | Team Udayavani |

ಬೆಂಗಳೂರು: ಆಗಾಗ್ಗೆ ಕೇಳಿ ಬರುವ ಸರ್ಕಾರಿ ಆ್ಯಂಬುಲೆನ್ಸ್‌ ಚಾಲಕರ “ಲಂಚಾವತಾರ’ಕ್ಕೆ ಲೋಕಾಯುಕ್ತ ಸಂಸ್ಥೆಯ ನಿರ್ದೇಶನದಂತೆ ಬ್ರೇಕ್‌ ಹಾಕಲು ಮುಂದಾಗಿರುವ ಆರೋಗ್ಯ ಇಲಾಖೆ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ.

Advertisement

ಆ್ಯಂಬುಲೆನ್ಸ್‌ ಚಾಲಕನೊಬ್ಬ ಗರ್ಭಿಣಿಯೊಬ್ಬರಿಂದ ಡೀಸೆಲ್‌ ವೆಚ್ಚವೆಂದು ಲಂಚ ಸ್ವೀಕರಿಸಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿ, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಈ ರೀತಿಯ ಘಟನೆಗಳು ಮರುಕಳಿಸದಂತೆ ಗಮನಹರಿಸಬೇಕು. ಜತೆಗೆ “ಜನನಿ ಸುರಕ್ಷಾ
ಯೋಜನೆ’ ಜಾರಿಗೊಳಿಸುವ ಬಗ್ಗೆ ಎಲ್ಲ ಆರೋಗ್ಯಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿ ಹಲವರಿಗೆ ನೋಟಿಸ್‌ ಜಾರಿಗೊಳಿಸಿದ್ದರು.

ನೋಟಿಸ್‌ ತಲುಪಿದ ತಕ್ಷಣ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ (ಆಗಸ್ಟ್‌ 7)ರಂದು ಸುತ್ತೋಲೆ ಹೊರಡಿಸಿದ್ದು, ಎಲ್ಲಾ ಜಿಲ್ಲಾ
ಆರೋಗ್ಯಾಧಿಕಾರಿಗಳು, ಜಿಲ್ಲಾ ಶಸ್ತ್ರಉಚಿಕಿತ್ಸಕರು, ಆಡಳಿತ ವೈದ್ಯಾಧಿಕಾರಿಗಳಿಗೆ ಗರ್ಭಿಣಿ ಸಿOಉà, ನವಜಾತ ಶಿಶು, ತಾಯಿಗೆ ಆಸ್ಪತ್ರೆಯಿಂದ ಮನೆಗೆ, ಅಥವಾ ಮೇಲ್ದರ್ಜೆ ಆಸ್ಪತ್ರೆಗಳಿಗೆ ರವಾನಿಸಲು ಸಂಪೂರ್ಣವಾಗಿ ಉಚಿತ ಆ್ಯಂಬುಲೆನ್ಸ್‌ ಸೇವೆ ಒದಗಿಸಬೇಕು ಎಂಬ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ. ಈ ಸೇವೆಗೆ ಡೀಸೆಲ್‌ ವೆಚ್ಚ ಭರಿಸಲು “ಜನನಿ ಸುರಕ್ಷಾ ಯೋಜನೆ’ಯ ಅನುದಾನ ಬಳಸಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.

ಪ್ರಕರಣವೇನು?: ಹಾವೇರಿ ಜಿಲ್ಲೆ ರಾಣೆ ಬೆನ್ನೂರು ತಾಲೂಕಿನ ಅಂಕಸಪುರ ತಾಂಡಾದ ಗರ್ಭಿಣಿ ಮಹಿಳೆ 2015ರ ಜುಲೈ 7ರಂದು ಹೆರಿಗೆ ನೋವಿನಿಂದ ರಾಣೆಬೆನ್ನೂರು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೈದ್ಯ ಸಂತೋಷ್‌ ಕುಮಾರ್‌, ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡಿದ್ದರು. ಆದರೆ, ಗರ್ಭಿಣಿ ಮಹಿಳೆಯರಿಗಿರುವ ಆ್ಯಂಬುಲೆನ್ಸ್‌ ಉಚಿತ ಸೇವೆಯ ಬಗ್ಗೆ ಮಾಹಿತಿ ನೀಡಿರಲಿಲ್ಲ.ಬಳಿಕ ಬಂದ ಆ್ಯಂಬುಲೆನ್ಸ್‌ ಚಾಲಕ ಮಂಜುನಾಥ ಪಾರ್ವತೇರ, ಡೀಸೆಲ್‌ ಖರ್ಚು ಎಂದು ಹೇಳಿ 800 ರೂ. ಪಡೆದುಕೊಂಡಿದ್ದ. ಈ ಕುರಿತು ಸಾಕ್ರಿ ಬಾಯಿ ಸಂಬಂಧಿ ಧನರಾಜ್‌ ಹನುಮಂತಪ್ಪ ಲಮಾಣಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರು ಪರಿಶೀಲಿಸಿದ್ದ ಲೋಕಾಯುಕ್ತರು, ಈ ಬಗ್ಗೆ ತನಿಖೆ ನಡೆಸುವಂತೆ ದಾವಣಗೆರ  ಲೋಕಾಯುಕ್ತ ಪೊಲೀಸ್‌ ಎಸ್ಪಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಪೊಲೀಸರು, ಚಾಲಕ ಮಹಿಳೆಯಿಂದ 800 ರೂ. ಪಡೆದಿದ್ದಾರೆ. ಡಾ.ಶಾಂತಾ, ರಾಣೆಬನ್ನೂರು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ (ಸದ್ಯ ಅಮಾನತಿನಲ್ಲಿದ್ದಾರೆ) ಡಾ.ಜಯಾನಂದ್‌,(ಆರ್‌ಸಿಎಚ್‌) ಡಾ.ಮಹೇಶ್‌(ಡಿಎಚ್‌ಒ), ಡಾ.ಸಂತೋಷ್‌ ಕುಮಾರ್‌, ಆ್ಯಂಬುಲೆನ್ಸ್‌ ಚಾಲಕ ಮಂಜುನಾಥ ಪಾರ್ವತೇರ ಕರ್ತವ್ಯ ಲೋಪ ಎಸಗಿದ್ದಾರೆಂದು ಲೋಕಾಯುಕ್ತರಿಗೆ ವರದಿ ಸಲ್ಲಿಸಿದ್ದರು.

Advertisement

800 ರೂ ಹಣ ವಾಪಸ್‌ ನೀಡಿ!: ರಾಣೆ ಬೆನ್ನೂರು ಆಸ್ಪತ್ರೆಯಿಂದ ಹಾವೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲು ಗರ್ಭಿಣಿ ಮಹಿಳೆ ಸಾಕ್ರಿಬಾಯಿ ಎಂಬುವರಿಂದ 800 ರೂ. ಪಡೆದುಕೊಂಡಿದ್ದ ಆ್ಯಂಬುಲೆನ್ಸ್‌ ಚಾಲಕ ಮಂಜುನಾಥ ಪಾರ್ವತೇರನಿಂದ, ಮುಂದಿನ 8 ವಾರಗಳಲ್ಲಿ ಸಾಕ್ರಿ ಬಾಯಿ ಅವರಿಗೆ 800 ರೂ.ಗಳನ್ನು ಆಕೆಯ ಬ್ಯಾಂಕ್‌ ಅಕೌಂಟ್‌ ಅಥವಾ ಆಕೆ ಯನ್ನು ನೇರವಾಗಿ ಭೇಟಿ ಮಾಡಿ ಹಣ ವಾಪಸ್‌
ಕೊಡಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿ ಗಳಿಗೆ ಲೋಕಾಯುಕ್ತರು ಆದೇಶಿಸಿದ್ದಾರೆ.

ಆ್ಯಂಬುಲೆನ್ಸ್‌ ಚಾಲಕರು ನಿಯಮಬಾಹಿರವಾಗಿ ಹಣ ಪಡೆದುಕೊಳ್ಳುವ ಆರೋಪಗಳ ಬಗ್ಗೆ ಪರಿಶೀಲನೆ ಹಾಗೂ ಜನನಿ ಸುರಕ್ಷಾ ಯೋಜನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸುವಂತೆ ನೀಡಿದ್ದ ಆದೇಶವನ್ನು ಆರೋಗ್ಯ ಇಲಾಖೆ ಪಾಲಿಸಲು ಮುಂದಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಖುದ್ದು ಭೇಟಿ ನೀಡಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
– ನ್ಯಾ.ಪಿ.ವಿಶ್ವನಾಥ ಶೆಟ್ಟಿ, ಲೋಕಾಯುಕ್ತರು

– ಮಂಜುನಾಥ ಲಘಮೇನಹಳ್ಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next