ಕಾಲೇಜಿಗೆ ದಿನಾ ಯೂನಿಫಾರಂನಲ್ಲೇ ಹೋಗಿ ಬೇಜಾರಾಗಿರುವ ನಮಗೆ ಯಾವಾಗ ಕಲರ್ ಡ್ರೆಸ್ ಹಾಕಲು ಅವಕಾಶ ಸಿಗುತ್ತದೆ ಎಂದು ಕಾಯುತ್ತೇವೆ. “”ದಿನಾ ಒಂದೇ ಡ್ರೆಸ್ ಹಾಕಿ ಬೋರ್ ಆಗ್ತಿದೆ. ಇದೇ ಯೂನಿಫಾರಂನಲ್ಲಿ ಎಷ್ಟೂಂತ ನಾವು ಸ್ಟೈಲ್ ಮಾಡೋದು. ಒಂದು ದಿನಾನೂ ಕಲರ್ ಡ್ರೆಸ್ ಹಾಕೋ ಚಾನ್ಸ್ ಇಲ್ವಲ್ಲ” ಅಂತೆಲ್ಲ ನಾನು ಸೇರಿದಂತೆ ನನ್ನ ಎಲ್ಲ ಗೆಳತಿಯರು ಆಗಾಗ ಗೊಣಗುತ್ತಿರುತ್ತಾರೆ. ಇದು ಸಹಜ. ದಿನಾ ಯೂನಿಫಾರಂ ಹಾಕಿಕೊಂಡು ಹೋಗುವ ನಮಗೆಲ್ಲ ಕಲರ್ ಡ್ರೆಸ್ ಹಾಕೋಕೆ ಚಾನ್ಸ್ ಸಿಗೋದು ಅಂದರೆ ಅದು ಕಾಲೇಜ್ ಡೇಗೆ ಮಾತ್ರ. ಕಾಲೇಜ್ ಡೇ ಬಂತೆಂದರೆ ಅದೊಂದು ನಮಗೆ ಹಬ್ಬವೇ ಸರಿ. ಗೆಳತಿಯರಲ್ಲೆೆಲ್ಲ, “”ನೀನು ಕಾಲೇಜ್‌ಡೇ ಯಾವ ಡ್ರೆಸ್ ಹಾಕೋತೀಯಾ, ಸಾರಿನಾ? ಚೂಡಿಯಾ?” ಎಂದು ಮಾತುಕತೆ ಶುರುವಾಗುತ್ತದೆ. ಕಾಲೇಜ್ ಡೇ ಎಂದರೆ ಎಲ್ಲಿದ್ದ ಸಂಭ್ರಮ-ಸಡಗರ. ಜತೆಗೆ ಅದಕ್ಕೆ ತಯಾರಿಯೂ ಜೋರಾಗಿಯೇ ಇರುತ್ತದೆ. ವಾರದ ಮೊದಲೇ ಡ್ರೆಸ್ ಖರೀದಿ, ಅದಕ್ಕೆ ಸರಿಯಾದ ಮ್ಯಾಚಿಂಗ್, ಜುವೆಲ್ಲರಿ, ಚಪ್ಪಲಿ ಖರೀದಿ- ಹೀಗೆ ಒಂದೇ ಎರಡೇ!
ಪರೀಕ್ಷಾ ಸಮಯದಲ್ಲಿ ಬೇಗ ಏಳದೇ ಇರುವ ನಾವೆಲ್ಲ ಅಂದು ಮಾತ್ರ ಬೆಳಿಗ್ಗೆ ಬೇಗ ಎದ್ದು ನಮ್ಮ ಮೇಕಪ್ ಶುರು ಮಾಡುತ್ತೇವೆ. ಬೆಳಗ್ಗಿನಿಂದಲೇ ಡ್ರೆಸ್ಸಿಂಗ್ ನಡೆಯುತ್ತದೆ. ಹೊಸ ಡ್ರೆಸ್ ಹಾಕಿ ಕನ್ನಡಿ ಮುಂದೆ ನಿಂತು ಹಿಂದೆ-ಮುಂದೆ ನೋಡಿ ಮುಗಿಯೋದೇ ಇಲ್ಲ. ಕಾಲೇಜಿಗೂ ಅಂದು ಒಂದು ಹೊಸ ರೀತಿಯ ಕಳೆ ಬಂದಿರುತ್ತದೆ. ದಿನಾ ಯೂನಿಫಾರಂನಲ್ಲಿ ಓಡಾಡುವ ವಿದ್ಯಾರ್ಥಿಗಳ ಕಾಲೇಜು ಕ್ಯಾಂಪಸ್ ಆ ದಿನ ಬಣ್ಣ ಬಣ್ಣದ ರಂಗಿನಿಂದ ಕಂಗೊಳಿಸುತ್ತದೆ. ಒಬ್ಬೊಬ್ಬರದ್ದು ಒಂದೊಂದು ಹೊಸ ಹೊಸ ವಿನ್ಯಾಸದ ದಿರಿಸುಗಳು.
ಹುಡುಗಿಯರು ಫುಲ್ ಉದ್ದುದ ಡ್ರೆಸ್ ಹಾಕಿ ಕಾರಿಡಾರ್‌ನಲ್ಲಿ ಸುತ್ತುವಾಗ ಹುಡುಗರೆಲ್ಲ ಅವರವರೊಳಗೆ “”ಕಾರಿಡಾರ್‌ನ ಕಸವೆಲ್ಲ ಗುಡಿಸಿ ಕ್ಲೀನ್ ಆಗುತ್ತಿದೆ” ಎಂದು ಮೆಲ್ಲಗೆ ಪಿಸುಗುಟ್ಟುತ್ತಿದ್ದರು. ಹುಡುಗಿಯರಿಗಿಂತ ನಾವೇನು ಕಮ್ಮಿ ಇಲ್ಲವೆಂಬಂತೆ ಹುಡುಗರು ಪಂಚೆ-ಜುಬ್ಟಾ ತೊಟ್ಟು , ಹೊಸ ಹೊಸ ಹೇರ್ ಸ್ಟೈಲ್‌ನಲ್ಲಿ ಮಿನುಗುತ್ತಾರೆ.
ನಮ್ಮ ಕಾಲೇಜಿನಲ್ಲಿ ನಮಗೆ ಮೊಬೈಲ್ ತರುವ ಅವಕಾಶ ಇಲ್ಲ. ಆದರೆ, ಕಾಲೇಜ್ ಡೇ ದಿನ ಎಲ್ಲರ ಕೈಯಲ್ಲೂ ಒಂದೊಂದು ಮೊಬೈಲ…. ಅಂದು ಕ್ಲಿಕ್ಕಿಸಿದಷ್ಟು ಮುಗಿಯದ ಸೆಲ್ಫಿಗಳು. ಹಾಕಿದಷ್ಟು ಮುಗಿಯದ ಸ್ಟೇಟಸ್‌ಗಳು. ಅಬ್ಟಾ … ಜತೆಗೆ ಎಷ್ಟೊಂದು ಲೈಕ್‌ಗಳು, ಕಮೆಂಟ್‌ಗಳು!
ಇನ್ನು ಕಾಲೇಜ್ ಡೇ ಅಂದಾಗ ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲದೆ ಅದು ಪೂರ್ತಿಗೊಳ್ಳುತ್ತದೆಯೆ? ಖಂಡಿತ ಇಲ್ಲ. ಸಭಾ ಕಾರ್ಯಕ್ರಮ ಮುಗಿದು ಯಾವಾಗ ಸಾಂಸ್ಕೃತಿಕ ಕಾರ್ಯಕ್ರಮ ಶುರುವಾಗುತ್ತದೆ ಎಂಬ ಕಾತರ ಎಲ್ಲರಲ್ಲೂ. ಯಾಕೆಂದರೆ, ಗೆಳೆಯರೆಲ್ಲರ ಕಲಾಪ್ರತಿಭೆಯನ್ನು ನೋಡಲು ನಮ್ಮ ಕಣ್ಣುಗಳು ಹಾತೊರೆಯುತ್ತಿರುತ್ತದೆ. ವಿವಿಧ ರೀತಿಯ ಡ್ಯಾನ್ಸ್‌ಗಳು, ಹಾಡುಗಳು, ಸ್ಕಿಟ್‌ಗಳು, ನಾಟಕಗಳು – ಇವೆಲ್ಲದರ ಮಜಾನೆ ಬೇರೆ ಅಲ್ವೆ !
ಇಷ್ಟೆಲ್ಲ ಸಂಭ್ರಮ ಮಾತ್ರ ಕ್ಷಣಮಾತ್ರದಲ್ಲಿ ಮುಗಿದು ಮರುದಿನದಿಂದ ಅದೇ ಯೂನಿಫಾರಂ, ಪಾಠಗಳು, ಪರೀಕ್ಷೆಗಳು ಶುರು. ಆದರೆ ಕಾಲೇಜ… ಡೇಯ ಆ ಮಧುರ ಕ್ಷಣ ವರ್ಷಪೂರ್ತಿ ಮನಸಲ್ಲೇ ಅಚ್ಚೊತ್ತಿ ಕುಳಿತುಬಿಡುತ್ತದೆ.
ತೇಜಸ್ವಿನಿ
ದ್ವಿತೀಯ ಎಂಸಿಜೆ, ಶ್ರೀ ರಾಮಕುಂಜೇಶ್ವರ ಕಾಲೇಜು