Advertisement

ಬೆಂಗಳೂರಿನ ಕನಸುಗಾರ

12:00 PM Nov 13, 2018 | |

ರಾಜಧಾನಿಯ ಹೆಗ್ಗುರುತುಗಳಲ್ಲಿ ಒಂದಾಗಿರುವ “ನಮ್ಮ ಮೆಟ್ರೋ’ ರೈಲು ಯೋಜನೆಗೆ ಅನಂತ ಕುಮಾರ್‌ ಅವರು ಕೇಂದ್ರ ನಗರಾರಭಿವೃದ್ಧಿ  ಸಚಿವರಾಗಿದ್ದಾಗ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಸ್ಮರಣೀಯ. ಬೆಂಗಳೂರಿನ ಭವಿಷ್ಯದ ಬೆಳವಣಿಗೆ ಹಾಗೂ ಸವಾಲುಗಳ ಬಗ್ಗೆ ಸ್ಪಷ್ಟ  ಕಲ್ಪನೆಯಿದ್ದ ಅನಂತಕುಮಾರ್‌ ಅವರು ಅದಕ್ಕೆ ಪೂರಕ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ತಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನ ಕೈಗೊಳ್ಳುತ್ತಿದ್ದರು.

Advertisement

ಅವರ  ದೂರದರ್ಶಿತ್ವಕ್ಕೆ ಸಾಕ್ಷಿಯಾಗಿ ಮೆಟ್ರೋ ರೈಲು ನಮ್ಮ ಮುಂದಿದೆ. ನಗರದ ಜ್ವಲಂತ ಸಮಸ್ಯೆಗಳಲ್ಲಿ ಸಂಚಾರ ದಟ್ಟಣೆಯೂ ಪ್ರಮುಖವಾದುದು ಎಂಬುದರ ಅರಿವಿದ್ದ ಅನಂತಕುಮಾರ್‌ ಅವರು ದೇಶದ ಇತರೆ ಮೆಟ್ರೋ ನಗರಗಳ ಮಾದರಿಯಲ್ಲಿ ಬೆಂಗಳೂರಿನಲ್ಲೂ ಮೆಟ್ರೋ ರೈಲು ವ್ಯವಸ್ಥೆ ಕಲ್ಪಿಸುವ  ಕನಸು ಕಂಡಿದ್ದರು. ಅದಕ್ಕೆ ಪೂರಕವಾಗಿ ತೆರೆಮರೆಯಲ್ಲೇ ನಿರಂತರ ಪ್ರಯತ್ನ ನಡೆಸಿದ್ದರು. 

ಅವರ ಶ್ರಮದ ಫ‌ಲವಾಗಿ ಅಟಲ್‌ ಬಿಹಾರಿ ವಾಜಪೇಯಿ  ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 2003ರಲ್ಲಿ ಕೇಂದ್ರ ಸರ್ಕಾರವು ನಮ್ಮ ಮೆಟ್ರೋ ಯೋಜನೆಗೆ ಅನುಮೋದನೆ ನೀಡಿತ್ತು. ಆ ಮೂಲದ ದೇಶದ  ಮೂರನೇ ಮೆಟ್ರೋ ಯೋಜನೆ ಎಂಬ ಹೆಗ್ಗಳಿಕೆಗೆ “ನಮ್ಮ ಮೆಟ್ರೋ’ ಪಾತ್ರವಾಯಿತು. ಮೊದಲ ಹಂತದ ಮೆಟ್ರೋ ಕಾಮಗಾರಿಯಡಿ 42 ಕಿ.ಮೀ. ಉದ್ದದ  ಹಸಿರು, ನೇರಳೆ ಮೆಟ್ರೋ ಮಾರ್ಗ ನಿರ್ಮಾಣವಾಗಿದ್ದು, ನಿತ್ಯ 2.50 ಲಕ್ಷಕ್ಕೂ ಹೆಚ್ಚು ಜನ ಬಳಸುತ್ತಿದ್ದಾರೆ.

ಪ್ರಯಾಣಿಕರ ಒತ್ತಡದ ಹಿನ್ನೆಲೆಯಲ್ಲಿ ಹೆಚ್ಚುವರಿ  ಬೋಗಿಗಳ ಅಳವಡಿಕೆ ಕಾರ್ಯವೂ ನಿರಂತರವಾಗಿ ಮುಂದುವರಿದಿದೆ. ಸುಮಾರು 240 ಚ.ಕಿ.ಮೀ. ವ್ಯಾಪ್ತಿಯಿದ್ದ ಬೆಂಗಳೂರು ಮಹಾನಗರ ಪಾಲಿಕೆಯು  800 ಚದರ ಕಿ.ಮೀ. ವಿಸ್ತರಣೆಯಾಗಿ ಬಿಬಿಎಂಪಿ ರಚನೆಯಾಗುವ ಮೊದಲೇ ಮೆಟ್ರೋ ಅಗತ್ಯವನ್ನು ಮನಗಂಡಿದ್ದ ಅನಂತಕುಮಾರ್‌ ಅವರು ಅದನ್ನು  ನಗರಕ್ಕೆ ದೊರಕಿಸಿಕೊಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದು, ಅವರ ಕೊಡುಗೆ ಸದಾ ಸ್ಮರಣೀಯ. 

ಸಬ್‌ಅರ್ಬನ್‌ ರೈಲು ಯೋಜನೆಗೂ ಚಾಲನೆ: ಅನಂತ್‌ಕುಮಾರ್‌ ಅವರ ದೂರದರ್ಶಿತ್ವದ ಮತ್ತೂಂದು ಮಹತ್ವಾಕಾಂಕ್ಷಿ ಯೋಜನೆ ಸಬ್‌ ಅರ್ಬನ್‌ ರೈಲು. ಅವರು ಬೆಂಗಳೂರು ದಕ್ಷಿಣ ಲೋಕಸಭಾ  ಕ್ಷೇತ್ರದಿಂದ ಪ್ರಥಮ ಬಾರಿ ಆಯ್ಕೆಯಾದ 1996ರಿಂದ ನಿರಂತರವಾಗಿ ಈ ಯೋಜನೆ ಪರ ಪ್ರಸ್ತಾಪಿಸುತ್ತಾ ಬಂದಿದ್ದಾರೆ.

Advertisement

 ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು, ವಾಹನ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಅನಂತ ಕುಮಾರ್‌  ಅವರು ನೀಡಿದ ಕೊಡುಗೆಗಳಲ್ಲಿ ಸಬ್‌ಅರ್ಬನ್‌ ರೈಲು ಯೋಜನೆಯೂ ಪ್ರಮುಖವಾದುದು. 

ವಿಸ್ತಾರವಾಗಿರುವ ನಗರದ ಪ್ರಮುಖ ಪ್ರದೇಶಗಳು ಹಾಗೂ  ನಗರಕ್ಕೆ ಹೊಂದಿಕೊಂಡ ಉಪನಗರಗಳ ನಡುವೆ ಸುಗಮ ಹಾಗೂ ತ್ವರಿತ ಸಮೂಹ ಸಾರಿಗೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ 1996ರಲ್ಲಿ ಮೊದಲ ಬಾರಿಗೆ  ಅನಂತಕುಮಾರ್‌ ಅವರು ಸಬ್‌ ಅರ್ಬನ್‌ ರೈಲು ಯೋಜನೆ ಬಗ್ಗೆ ಪ್ರಸ್ತಾಪಿಸಿದರು.

90ರ ದಶಕದಲ್ಲೇ ಈ ಯೋಜನೆ ಪ್ರಸ್ತಾಪವಾದಾಗ ಅದರ ಅಗತ್ಯದ  ಬಗ್ಗೆಯೇ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಬರೋಬ್ಬರಿ ಎರಡು ವರ್ಷಗಳ ಬಳಿಕ ಇದು ಕಾರ್ಯಗತವಾಗುತ್ತಿದೆ. 2018-19ನೇ ಸಾಲಿನ  ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರಿಗೆ ಸಬ್‌ಅರ್ಬನ್‌ ರೈಲು ಯೋಜನೆ ಘೋಷಣೆಯಾಗಿದೆ.

ಒಟ್ಟು 17,000 ಕೋಟಿ ರೂ. ಮೊತ್ತದ ಯೋಜನೆಯನ್ನು  ಕಾರ್ಯಗತಗೊಳಿಸುವ ವಾಗ್ಧಾನವನ್ನು ಕೇಂದ್ರ ಸರ್ಕಾರ ನೀಡಿದೆ. ಇದು ಬೆಂಗಳೂರಿನ ಬಗೆಗೆ ಅನಂತಕುಮಾರ್‌ ಅವರಿಗಿದ್ದ ಪ್ರೀತಿ, ಅದರ ಬೆಳವಣಿಗೆ  ಬಗೆಗಿನ ನಿಖರ ಕಲ್ಪನೆ ಹಾಗೂ ವಾಸ್ತವಿಕ ಪರಿಹಾರೋಪಾಯ ಬಗೆಗಿನ ವಸ್ತುನಿಷ್ಠತೆಯನ್ನು ತೋರಿಸುತ್ತದೆ.

* ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next