ಬೆಂಗಳೂರು: ಆಡಳಿತ ವಿರೋಧಿ ಅಲೆ, ಪಾಟೀದಾರ ಸಮುದಾಯದ ಸವಾಲು ಎದುರಿಸಿ ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುತ್ತಿದ್ದಂತೆ,ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಬಿಜೆಪಿಯ ಕನಸು ಇನ್ನಷ್ಟು ಚಿಗುರಿದ್ದು, ಹೊಸ ಕಾರ್ಯ ತಂತ್ರಗಳೊಂದಿಗೆ ಚುನಾವಣೆ ಎದುರಿಸಲು ಸಿದ್ಧವಾಗುತ್ತಿದೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದರೊಂದಿಗೆ ಆ ಎರಡು ರಾಜ್ಯಗಳ ಮೇಲೆ ಗಮನ ಕೇಂದ್ರೀಕರಿಸಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶೀಘ್ರವೇ ಕರ್ನಾಟಕಕ್ಕೆ ಬರಲಿದ್ದಾರೆ. ಅವರ ನೇತೃತ್ವದಲ್ಲಿ
ರಾಜ್ಯದಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಯೋಜನೆ ರೂಪಿಸಲು ರಾಜ್ಯ ನಾಯಕರು ಸನ್ನದಟಛಿರಾಗಿದ್ದಾರೆ.
ಈ ನಿಟ್ಟಿನಲ್ಲಿ ಪಕ್ಷ ಗೆಲ್ಲುವ ಸಾಮರ್ಥ್ಯ ಹೊಂದಿಲ್ಲದೇ ಇರುವ ವಿಧಾನಸಭಾ ಕ್ಷೇತ್ರಗಳಲ್ಲಿ ಅನ್ಯ ಪಕ್ಷಗಳ ಶಾಸಕರನ್ನು ಕರೆತಂದು ಕಣಕ್ಕಿಳಿಸಲು ಮುಂದಾಗಿರುವ ಬಿಜೆಪಿ, ಈಗಾಗಲೇ ಶಾಸಕರ ಪಟ್ಟಿಯೊಂದಿಗೆ ಸಿದಟಛಿವಾಗಿದೆ. ತಕ್ಷಣದಿಂದಲೇ ಆ ಶಾಸಕರನ್ನು ಸಂಪರ್ಕಿಸಿ ಟಿಕೆಟ್ ನೀಡುವ ಭರವಸೆಯೊಂದಿಗೆ ಪಕ್ಷಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಇನ್ನೊಂದೆಡೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದರೆ ಅನ್ಯ ಪಕ್ಷಗಳತ್ತ ಮುಖ ಮಾಡಲು ಯೋಚನೆ ಮಾಡುತ್ತಿದ್ದ ಕೆಲವು ಅಸಮಾಧಾನಿತ ಮುಖಂಡರಿಗೂ ಗುಜರಾತ್ ಚುನಾವಣೆ ಎಚ್ಚರಿಕೆಯ ಸೂಚನೆ ನೀಡಿದ್ದು, ಇದು ಕೂಡ ಬಿಜೆಪಿಯಿಂದ ಪಕ್ಷಾಂತರ ವಾಗುವವರನ್ನು ತಡೆಹಿಡಿಯ ಬಹುದು ಎಂದು ಲೆಕ್ಕ ಹಾಕಿರುವ ಪಕ್ಷದ ನಾಯಕರು, ಅಂಥವರಿಗೆ ಟಿಕೆಟ್ ಸಿಗದಿದ್ದರೆ ಪರ್ಯಾಯ ಅಧಿಕಾರದ ವ್ಯವಸ್ಥೆ ಮಾಡುವ ಬಗ್ಗೆಯೂ ಯೋಚಿಸಲಾರಂಭಿಸಿದೆ. ಇನ್ನೊಂದೆಡೆ ಹಾಲಿ ಶಾಸಕರಲ್ಲಿ ಬಹುತೇಕ ಮಂದಿ ಹಾಗೂ ಸುಮಾರು 20ರಿಂದ 25 ಆಕಾಂಕ್ಷಿಗಳನ್ನು ಹೊರತುಪಡಿಸಿ ಉಳಿದ ಯಾರಿಗೂ ಟಿಕೆಟ್ ಖಾತರಿಯಾಗಿಲ್ಲ. ಹೀಗಾಗಿ ಅಭ್ಯರ್ಥಿಗಳ ಪಟ್ಟಿ ಘೋಷಿಸದಿದ್ದರೂ ಯಾರು ಅಭ್ಯರ್ಥಿಗಳಾಗುತ್ತಾರೋ ಅಂಥವರಿಗೆ ಸೂಚನೆ ನೀಡಿ ಎಂಬ ಕೋರಿಕೆ ರಾಜ್ಯಾದ್ಯಂತ ಅಭ್ಯರ್ಥಿ ಆಕಾಂಕ್ಷಿಗಳಿಂದ ಬರುತ್ತಿದೆ. ಇದೀಗ ಗುಜರಾತ್ ಚುನಾವಣೆ ಫಲಿತಾಂಶ ಪ್ರಕಟವಾಗಿರುವುದರಿಂದ ಈ ಕೋರಿಕೆ ಇನ್ನಷ್ಟು ತೀವ್ರಗೊಳ್ಳಲಿದ್ದು, ಈ ಬಗ್ಗೆಯೂ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಕ್ಷದ ಹಿರಿಯ ಪದಾಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ಎಲ್ಲವೂ ಶಾ ಆಗಮನದ ನಂತರ: ಸದ್ಯ ಬಿಜೆಪಿ ಈ ಕುರಿತು ಸಿದಟಛಿತೆ ನಡೆಸುತ್ತಿದ್ದರೂ ಅನುಷ್ಠಾನ ಮಾತ್ರ ಅಮಿತ್ ಶಾ ಅವರು ರಾಜ್ಯಕ್ಕೆ ಬಂದ ಬಳಿಕ. ಈ ಮಾಸಾಂತ್ಯ ಅಥವಾ ಜನವರಿ ಮೊದಲ ವಾರ ಶಾ ಅವರು ರಾಜ್ಯಕ್ಕೆ ಬರುವ ನಿರೀಕ್ಷೆಯಿದ್ದು, ಅವರೊಂದಿಗೆ ಚರ್ಚಿಸಿದ ಮೇಲೆ ಚುನಾವಣಾ ಸಿದ್ಧತೆಗಳಿಗೆ ಸಂಬಂಧಿಸಿದ ನಿರ್ಧಾರ ಗಳನ್ನು ಅಂತಿಮಗೊಳಿಸಲಾಗುತ್ತದೆ. ಮುಂದಿನ ಜ.28ರಂದು ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಮಾರೋಪವಿದ್ದು, ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಜತೆಗೆ ಅಮಿತ್ ಶಾ ಕೂಡ ಬರುವ ನಿರೀಕ್ಷೆಯಿದ್ದು, ಸಾಧ್ಯವಾದರೆ ಆ ಕಾರ್ಯಕ್ರಮದಲ್ಲೇ ಅನ್ಯ ಪಕ್ಷಗಳಿಂದ ಬರುವ ಶಾಸಕರನ್ನು ಸೇರಿಸಿಕೊಳ್ಳಲು ಪ್ರಯತ್ನಿಸ ಲಾಗುವುದು.ಅದು ಸಾಧ್ಯವಾಗದೇ ಇದ್ದರೆ ಮತ್ತೆ ಶಾ ನೇತೃತ್ವದಲ್ಲಿ ಅವರನ್ನು ಪಕ್ಷಕ್ಕೆ ಬರಮಾಡಿ ಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಗುಜರಾತ್‌ನಿಂದ ಮಾಹಿತಿ: ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಹಿಡಿದರೂ ಅದಕ್ಕೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಪ್ರಭಾವವೇ ಕಾರಣ ಹೊರತು ಅಲ್ಲಿನ ಸರ್ಕಾರವಲ್ಲ ಎಂಬುದನ್ನು ಪಕ್ಷ ಗಳಿಸಿದ ಸ್ಥಾನಗಳು ಹೇಳುತ್ತವೆ. ಮೇಲಾಗಿ ಈ ಸಾಧನೆ ತೃಪ್ತಿದಾಯಕವೂ ಅಲ್ಲ. ಹೀಗಾಗಿ ಗುಜರಾತ್ ನಲ್ಲಿ 150 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಹುಸಿಯಾಗಲು ಕಾರಣವೇನು ಎಂಬ ಬಗ್ಗೆ ಅಲ್ಲಿಂದ ಮಾಹಿತಿ ತರಿಸಿಕೊಳ್ಳಲು ನಿರ್ಧರಿಸಲಾಗಿದ್ದು, ಸೋಮವಾರವೇ ಪಕ್ಷದ ರಾಜ್ಯ ಕಚೇರಿಯಿಂದ ಗುಜರಾತ್ ಬಿಜೆಪಿ ಕಚೇರಿಗೆ ವಿವರ ಕೋರಲಾಗಿದೆ. ಗುಜರಾತ್ ಸೋಲಿಗೆ ಆಡಳಿತ ವಿರೋಧಿ ಅಲೆಗಿಂತ ಇತರೆ ಕಾರಣಗಳು ಇದೆ ಎಂದು ವಿಶ್ಲೇಷಿಸಿರುವ ರಾಜ್ಯದ ಬಿಜೆಪಿ ನಾಯಕರು, ಅಲ್ಲಿಂದ ಮಾಹಿತಿ ಬಂದ ಬಳಿಕ ಆಗಿರುವ ಲೋಪಗಳನ್ನು ಪಟ್ಟಿ ಮಾಡಿ ಮತ್ತು ರಾಜ್ಯದ ರಾಜಕೀಯ ಪರಿಸ್ಥಿತಿಗೆ ತಕ್ಕಂತೆ ಅದನ್ನು ಬದಲಾವಣೆ ಮಾಡಿ “ಮಿಷನ್-150 ಪ್ಲಸ್’ ಸಾಧಿಸಲು ಹೊಸ ರೀತಿಯ ಕಾರ್ಯತಂತ್ರ ಗಳನ್ನು ಸಿದ್ಧಪಡಿಸಲು ತೀರ್ಮಾನಿಸಿದ್ದಾರೆ.
ಲಿಂಗಾಯತ ಧರ್ಮ: ಎಚ್ಚರಿಕೆ ಹೆಜ್ಜೆ ಗುಜರಾತ್‌ನಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದ್ದರಿಂದ ಅದು ಬಿಜೆಪಿ ಮೇಲೆ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಬಿಜೆಪಿ ನಿರ್ಧರಿಸಿದೆ. ವೀರಶೈವ-ಲಿಂಗಾಯತ ವಿಚಾರಕ್ಕೆ ಸಂಬಂಧಿಸಿದಂತೆ ಅಖೀಲ ಭಾರತ ವೀರಶೈವ ಮಹಾಸಭಾ ಮತ್ತು ತುಮಕೂರಿನ ಸಿದ್ಧಗಂಗಾ ಶ್ರೀಗಳು ತೆಗೆದುಕೊಳ್ಳುವ ನಿರ್ಧಾರಗಳಿಗೆ ಪಕ್ಷ ಬದ್ಧವಾಗಿರುತ್ತದೆ ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಈ ವಿಚಾರ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಸಿದ್ದರಾಮಯ್ಯ ಅವರ ಈ ಹೇಳಿಕೆಯ ಉದ್ದೇಶ ಜನರಿಗೆ ಗೊತ್ತಿದೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
– ಪ್ರದೀಪ್ ಕುಮಾರ್ ಎಂ.