Advertisement
ಈ ರಸ್ತೆ ಅಭಿವೃದ್ಧಿಗೆ 2011ರಲ್ಲಿ ಸಾಲಿಗ್ರಾಮ ಪ.ಪಂ. ಅನುದಾನ ಬಿಡುಗಡೆ ಮಾಡಿತ್ತು. ಆಗ ಹೊಳ್ಳರು ತನ್ನ ಪಟ್ಟಾ ಸ್ಥಳವನ್ನು ರಸ್ತೆ ನಿರ್ಮಾಣಕ್ಕಾಗಿ ಬಿಟ್ಟುಕೊಟ್ಟಿದ್ದರು. ಆದರೆ ಶೇ.75 ಮಾತ್ರ ಕಾಮಗಾರಿ ನಡೆಸ ಲಾಯಿತು. ಇದರಿಂದಾಗಿ ಕಾಳಿಂಗ ಹೊಳ್ಳರ ಮನೆ ಹಾಗೂ ಹತ್ತಿರದ ಹಲವು ಮನೆ ಗಳಿಗೆ ಸಂಪರ್ಕ ಸಾಧ್ಯವಾಗಲಿಲ್ಲ. ಹೀಗಾಗಿ ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆ ಯಾಗುತಿತ್ತು. ದ್ವಿಚಕ್ರ ವಾಹನ ಕೂಡ ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ.ಈ ಕುರಿತು ಕಾಳಿಂಗ ಹೊಳ್ಳರು 2011ರಿಂದ ಜಿಲ್ಲಾಧಿಕಾರಿ, ಎ.ಸಿ.ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರು. ಪ್ರಯೋಜನವಾಗದಿದ್ದಾಗ ತಹಶೀಲ್ದಾರ್, ಲೋಕಾಯುಕ್ತ, ಎ.ಸಿ.ಬಿ.ಗೂ ದೂರು ನೀಡಿದ್ದರು. ಅನಂತರ ಕೊನೆಗೆ ಪ್ರಧಾನಿ ಅವರಿಗೆ ಪತ್ರ ಬರೆದರು. ಹೊಳ್ಳರ ಈ ಹೋರಾಟ ಕುರಿತು ಉದಯವಾಣಿ ಹಲವು ಬಾರಿ ವರದಿ ಮಾಡಿತ್ತು.
ಪ್ರಧಾನಿಯವರಿಗೆ ಮೊದಲ ಬಾರಿ ಮನವಿ ಸಲ್ಲಿಸಿದಾಗ ಪರಿಶೀಲಿಸುವಂತೆ ಜಿಲ್ಲಾಡಳಿತ ಹಾಗೂ ಸ್ಥಳೀಯಾಡಳಿತಕ್ಕೆ ಸೂಚನೆ ಬಂದಿತ್ತು. ಅದರಂತೆ ಸ್ಥಳೀಯಾಡಳಿತ ಪರಿಶೀಲಿಸಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಬೇಸರಗೊಂಡ ಹೊಳ್ಳರು ಮತ್ತೆ ಪ್ರಧಾನಿಗೆ ಪತ್ರ ಬರೆದರು. ಆಗ ಸಮಸ್ಯೆಯನ್ನು ಗಂಭೀರವಾಗಿ ಪರಿಶೀಲಿಸುವಂತೆ ಮತ್ತೂಮ್ಮೆ ಆದೇಶ ಬಂತು. ಅನಂತರ ಹೊಳ್ಳರು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಭೇಟಿ ಮಾಡಿ ಪ್ರಧಾನಿ ಕಾರ್ಯಾಲಯದಿಂದ ಬಂದ ಪತ್ರವನ್ನು ತೋರಿಸಿದರು. ತತ್‌ಕ್ಷಣ ಕಾರ್ಯಪ್ರವೃತ್ತರಾದ ವಿ.ಪ. ಸದಸ್ಯರು 1.50ಲಕ್ಷ ರೂ. ಅನುದಾನ ನೀಡಿ ರಸ್ತೆ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಇದೀಗ ಹೊಳ್ಳರ ಮನೆಯ ತನಕ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ ಸ್ವಲ್ಪ ಕಾಮಗಾರಿ ಬಾಕಿ ಇದ್ದು ಹೆಚ್ಚುವರಿ ಅನುದಾನ ನೀಡುವ ಭರವಸೆ ಕೂಡ ಕೇಳಿ ಬಂದಿದೆ.